ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ. ರಂಗದಲ್ಲಿ ಸದಾ ಹೊಸತನ್ನು ನೀಡುವ ಅವರ ಅರ್ಥಗಾರಿಕೆ, ಕುಣಿತ ನೋಡಲು ಬಹಳ ಸುಂದರ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಜಲವಳ್ಳಿಯ ಕಲ್ಯಾಣಿ ವೆಂಕಟೇಶ ರಾವ್ ಹಾಗೂ ಜಲವಳ್ಳಿ ವೆಂಕಟೇಶ ರಾವ್ ಇವರ ಮಗನಾಗಿ ೧೨.೦೭.೧೯೭೪ ರಂದು ಜನನ. ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ. ತಂದೆಯವರೇ ಇವರ ಮಾನಸ ಗುರುಗಳು ಹಾಗೂ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಹೇಳುತ್ತಾರೆ ಜಲವಳ್ಳಿ.
ಕೃಷ್ಣಾರ್ಜುನ ಕಾಳಗ, ಗಧಾಯುದ್ಧ, ಭಸ್ಮಾಸುರ,ಭದ್ರಸೇನ, ಸುಧನ್ವ, ಕೀಚಕ ವಧೆ, ಮಾಗಧ ವಧೆ, ಪವಿತ್ರ ಪದ್ಮಿನಿ, ಶಿವರಂಜನಿ ಇವರ ನೆಚ್ಚಿನ ಪ್ರಸಂಗಗಳು. ಅರ್ಜುನ, ಕೌರವ, ಕೀಚಕ, ಮಾಗಧ, ಕಂಸ, ಭಸ್ಮಾಸುರ, ಭದ್ರಸೇನ ಇವರ ನೆಚ್ಚಿನ ವೇಷಗಳು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ ತುಂಬಾ ಯೋಚಿಸುತ್ತೇನೆ. ಎದುರು ಪಾತ್ರಧಾರಿ ಯಾರು ಎನ್ನುವುದರ ಮೇಲೆ ಸಿದ್ಧತೆ ಮಾಡಿಕೊಳ್ಳುತ್ತೇನೆ. ಹಿರಿಯ ಕಲಾವಿದರನ್ನು ಕೇಳಿ ತಿಳಿದುಕೊಳ್ಳುತ್ತೇನೆ ಎಂದು ಜಲವಳ್ಳಿಯವರು ಹೇಳುತ್ತಾರೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನಕ್ಕೆ ಇಂದು ಒಳ್ಳೆಯ ಸ್ಥಿತಿ ಇದೆ. ಎರಡು ವರ್ಷದ ಕೋವಿಡ್ ಸಮಸ್ಯೆ ಅಲ್ಲದೆ ಇದ್ರೆ ಕಲಾವಿದರ ಬದುಕು ಬಂಗಾರ ಆಗ್ತಿತ್ತು, ಎಲ್ಲಾ ಕಲಾವಿದರಿಗೂ ಬೇಸಗೆ ಮಳೆಗಾಲ ಎಂಬ ಭೇದವಿಲ್ಲದೇ ಕಾರ್ಯಕ್ರಮ ಸಿಗ್ತಾ ಇತ್ತು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಇಂದು ಪ್ರೇಕ್ಷಕರು ಬಹಳ ಪ್ರಬುದ್ಧರು, ವಿದ್ಯಾವಂತರು ಯಕ್ಷಗಾನದತ್ತ ಬಂದಿರುವುದು ಒಳ್ಳೆಯ ಬೆಳವಣಿಗೆ. ಎಲ್ಲೋ ಕೆಲವರು ಮಾತ್ರ ತಮ್ಮ ಮೆಚ್ಚಿನ ಕಲಾವಿದನನ್ನು ಮಾತ್ರ ಹೊಗಳುವುದು, ಜಾಲತಾಣಗಳಲ್ಲಿ ಅವರ ಪೋಸ್ಟ್ ಗಳನ್ನು ಮಾತ್ರ ಹಾಕಿ ವಿಜೃಂಭಿಸುವುದು ಮಾಡ್ತಾ ಇದ್ದಾರೆ.
ಇದರಿಂದ ಯಕ್ಷಗಾನಕ್ಕೆ, ಕಲಾವಿದರಿಗೆ ಯಾವ ತೊಂದರೆಯೂ ಇಲ್ಲ. ಇವರು ಮಿತಿಮೀರಿ ಹೊಗಳಿದ ಕಲಾವಿದ ಮಾತ್ರ ಬೆಳವಣಿಗೆ ಕಾಣುವುದೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಇದೊಂದು ಕೆಟ್ಟ ಬೆಳವಣಿಗೆ ಬಿಟ್ಟರೆ, ಉಳಿದಂತೆ ಪ್ರೇಕ್ಷಕರು ಪ್ರಬುದ್ಧರು.
ಯಕ್ಷಗಾನದ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
ಎರಡು ಕಡೆ ಯಕ್ಷಗಾನ ಶಾಲೆ ನಡೆಸುತ್ತಿದ್ದೇನೆ. “ಜಲವಳ್ಳಿ ಪ್ರಶಸ್ತಿ” ತಂದೆಯವರ ನೆನಪಿಗೆ ನೀಡುತ್ತಿದ್ದೇನೆ. ಇನ್ನೂ ಹಲವು ಯೋಜನೆಗಳು ಇದೆ.
ಶ್ರೀ ಕ್ಷೇತ್ರ ಗುಂಡಬಾಳ ಮೇಳ, ಶ್ರೀ ಗೋಳಿಗರಡಿ ಮೇಳ, ಶ್ರೀ ಕಮಲಶಿಲೆ ಮೇಳ, ಶ್ರೀ ಪೆರ್ಡೂರು ಮೇಳ, ಶ್ರೀ ಸಾಲಿಗ್ರಾಮ ಮೇಳ, ೮ ವರ್ಷ ಸ್ವಂತ ಕಲಾತಂಡ, ೨ ವರ್ಷ ಸ್ವಂತ ಡೇರೆ ಮೇಳ ಮಾಡಿ ಯಕ್ಷಗಾನ ತಿರುಗಾಟ ಮಾಡಿದ ಅನುಭವ ಜಲವಳ್ಳಿಯವರದ್ದು.
ಹಳೆಯ ಕಲಾವಿದರ ಅಭಿನಯ, ಮಾತುಗಾರಿಕೆ ನೋಡುವುದು ಹಾಗೂ ಕೇಳುವುದು, ಪುಸ್ತಕ ಓದುವುದು, ಟಿವಿ ನೋಡುವುದು ಇವರ ಹವ್ಯಾಸವಾಗಿದೆ.
ಮಣೂರು ಮಯ್ಯ ಪ್ರತಿಷ್ಠಾನದ ಜಲವಳ್ಳಿ 25 ಅದ್ದೂರಿ ಸನ್ಮಾನ ಬೆಂಗಳೂರು, ಕರ್ನಾಟಕ ಸಂಘ ಮುಂಬಯಿ, ಹೈದರಾಬಾದ್, ಉಡುಪಿ, ಮಂಗಳೂರು ಹೀಗೆ ಹಲವು ಕಡೆಗಳಲ್ಲಿ ಸಾವಿರಾರು ಸನ್ಮಾನ. ಯಕ್ಷ ಕಲಾಧರ ಪ್ರಶಸ್ತಿ, ಯಕ್ಷರಾಜ ಪ್ರಶಸ್ತಿ ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಯಕ್ಷಗಾನ ಸಾಧನೆ ಗುರುತಿಸಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
೨೨.೦೬.೨೦೦೭ ರಂದು ಜಾಹ್ನವಿ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ಕಲಾಧರ ಹಾಗೂ ಗಾನಶ್ರೀ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photo by: Praveen Perdooru, Dheeraj udupa uppinakudru, S.G Bhahwat click, Sumanth Photography.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
8971275651
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ