ಮಂಗಳೂರು: ಮಹಾ ಶಿವರಾತ್ರಿಯ ಪ್ರಯುಕ್ತ ನಾಟ್ಯವಿದುಷಿ ಅಯನಾ ಪೆರ್ಲ ಅವರಿಂದ 'ಕದಿರೆಯ ಕಲಾವಿದರು' ಸಂಸ್ಥೆಯ ಆಶ್ರಯದಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಾಡಾದ 'ಶಿವೋಹಮ್' ಎಂಬ ವಿಶೇಷ ಭರತನಾಟ್ಯ ಕಾರ್ಯಕ್ರಮ ಜನಮನ ರಂಜಿಸಿತು.
ಪಂಚಭೂತನಾಥೇಶ್ವರನಾದ ಪರಶಿವನನ್ನು ಸ್ತುತಿಸುವ ಪಂಚಭೂತ ಅಲರಿಪುವಿನೊಂದಿಗೆ (ನೃತ್ಯ ಸಂಯೋಜನೆ: ವಿದುಷಿ ಶ್ರೀಲತಾ ನಾಗರಾಜ್) ನೃತ್ಯವನ್ನು ಆರಂಭಿಸಿದ ಅಯನಾ ಬಳಿಕ ಶ್ರೀ ಆದಿ ಶಂಕರಾಚಾರ್ಯ ವಿರಚಿತ 'ಅರ್ಧನಾರೀಶ್ವರ ಅಷ್ಟಕಮ್' ಗೆ ಅಭಿನಯಿಸಿದರು. ಆದಿ ತಾಳದಲ್ಲಿರುವ ಇದು ಮೇಘ ರಾಗದಲ್ಲಿದೆ. ಪ್ರಸಿದ್ಧ ಕಲಾವಿದೆ ರಮಾ ವೈದ್ಯನಾಥನ್ ಇದಕ್ಕೆ ನೃತ್ಯ ಸಂಯೋಜಿಸಿದ್ದು, ಕ್ಲಿಷ್ಟಕರವಾದರೂ ಮನೋಹರವಾಗಿದೆ.
ಅನಂತರ ಸ್ಕಂದ ಪುರಾಣದಿಂದ ಆಯ್ದ ಶ್ಲೋಕ 'ಶಿವೋಹಮ್' ಕೈಗೆತ್ತಿಕೊಂಡು ಅಯನಾ ಪೆರ್ಲ ಮನೋಜ್ಞವಾಗಿ ಅಭಿನಯಿಸಿದರು. ಚಾರುಕೇಶಿ ರಾಗದಲ್ಲಿರುವ ಇದು ಆದಿ ತಾಳದಲ್ಲಿದ್ದು ದೀರ್ಘವಾಗಿದೆ.
ಶಿವರಾತ್ರಿಯ ಪ್ರಯುಕ್ತ ಮಹಾ ಶಿವನ ಕುರಿತು ಸಂಯೋಜಿಸಿರುವ ಈ ವಿಶೇಷ ನೃತ್ಯ ಕಾರ್ಯಕ್ರಮ ಬಹುಜನರನ್ನು ರಂಜಿಸಿತು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕುಸುಮಾ ದೇವಾಡಿಗ ಕಲಾವಿದೆಯನ್ನು ಗೌರವಿಸಿದರು. 'ಕದಿರೆಯ ಕಲಾವಿದರು' ಬಳಗದ ನಿರಂಜನ್ ಕೆ. ಸಾಲಿಯಾನ್, ಸುಧಾಕರ ರಾವ್ ಪೇಜಾವರ, ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post Views: 356