ಕೃಷಿ ಮೇಳದಲ್ಲಿ "ಕೃಷಿ ಮತ್ತು ಅರೋಗ್ಯ" ವಿಚಾರಗೋಷ್ಠಿ
ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳದ ಕೊನೆಯ ದಿನವಾದ ಆದಿತ್ಯವಾರ ಸಂಜೆ ಶ್ರೀ ರಾಮಕೃಷ್ಣ ಪೂಂಜಾ ವೇದಿಕೆಯಲ್ಲಿ 'ಎಂ ಆರ್ ಪಿ ಎಲ್' ಪ್ರಾಯೋಜಿತ "ಕೃಷಿ ಮತ್ತು ಆರೋಗ್ಯ" ಕುರಿತು ವಿಚಾರಗೋಷ್ಠಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತಾಡಿದ ಕೆ ಎಂ ಸಿ ಆಸ್ಪತ್ರೆಯ ಅರ್ಬುದ ತಜ್ಞ ವೈದ್ಯ ಪ್ರಶಾಂತ್ ಭಟ್ ಅವರು, "ನಾವು ಸಾವಯವ ಗೊಬ್ಬರ ಬಳಸಿ ಕೃಷಿಯನ್ನು ಮಾಡುವ ಮೂಲಕ ಮಕ್ಕಳ ಅರೋಗ್ಯವನ್ನು ರಕ್ಷಿಸಬೇಕು. ವಿಷಕಾರಿ ಕೀಟನಾಶಕ ಬಳಸಿ ಉತ್ಪತ್ತಿ ಮಾಡಿರುವ ತರಕಾರಿ, ಹಣ್ಣುಗಳ ಸೇವನೆಯಿಂದ ಅರೋಗ್ಯ ಹದಗೆಡುತ್ತದೆ. ಸಾವಯವ ಗೊಬ್ಬರ ಬಳಕೆಯಿಂದ ಅರೋಗ್ಯ ರಕ್ಷಿಸಿಕೊಳ್ಳಬೇಕು. ಹೊರಗಡೆ ಸಿಗುವ ಜಂಕ್ ಫುಡ್ ಗಳನ್ನು ತಿನ್ನುವ ಬದಲು ಮನೆಯಲ್ಲೇ ಬೆಳೆದ ಆಹಾರ ವಸ್ತುಗಳನ್ನು ನಾವೇ ಅಡುಗೆ ತಯಾರಿಸಿ ಸೇವಿಸಬೇಕು. ಅಡುಗೆಯನ್ನು ಮಹಿಳೆಯರೇ ಮಾಡಬೇಕೆಂದಿಲ್ಲ ಗಂಡಸರು ಕೂಡ ಮಾಡಬಹುದು" ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಕೃಷಿ ಮೇಳದ ಸಂಚಾಲಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಮಾತಾಡುತ್ತಾ, "ದೇವನೂರು ಮಹಾದೇವ ಹೇಳಿದಂತೆ ಹೃದಯಕ್ಕೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ, ಭೂಮಿಗೆ ಬಿದ್ದ ಕೃಷಿಕನ ಬೆವರು ಎಂದಿಗೂ ವ್ಯರ್ಥವಾಗುವುದಿಲ್ಲ. ಕೋವಿಡ್ ನಲ್ಲಿ ಬರ್ಗರ್ ತಿಂದ ಯುವ ಸಮೂಹ ಮಾರಕ ರೋಗಕ್ಕೆ ಬಲಿಯಾಗಿದೆಯೇ ಹೊರತು ಕೃಷಿ ಗದ್ದೆಗಳಲ್ಲಿ ಕಷ್ಟಪಟ್ಟು ಬೆವರು ಹರಿಸಿ ದುಡಿಯುವ ರೈತರು ಉಸಿರುಗಟ್ಟಿ ಸತ್ತಿಲ್ಲ, ಹೃದಯಘಾತಕ್ಕೆ ತುತ್ತಾಗಿಲ್ಲ, ಆಮ್ಲಜನಕವಿಲ್ಲದೆ ಸತ್ತಿಲ್ಲ. ಯಾಕೆಂದರೆ ಕೃಷಿ ಮನುಷ್ಯನ ನಿಜವಾದ ಉಸಿರು. ಕೃಷಿ ಇರುವಲ್ಲಿ ಸಾವಿಲ್ಲ. ಕೃಷಿಯ ಜೊತೆಗೆ ಅರೋಗ್ಯ ಬೆಳೆದು ಬಂದಿದೆ. ಕೃಷಿಯನ್ನು ಅರಿಸಿಕೊಂಡರೆ ನಮ್ಮ ಅರೋಗ್ಯ ಸುಧಾರಿಸುತ್ತದೆ. ಭೂಮಿ ಆಕಾಶ ಜಲ ವಾಯು ಅಗ್ನಿ ಪಂಚಭೂತಗಳಲ್ಲಿರುವ ಮಣ್ಣು ಮನುಷ್ಯನ ಅವಿಭಾಜ್ಯ ಅಂಗ. ಮಣ್ಣು ಉಳಿದಲ್ಲಿ ಚರ್ಚು, ಮಸೀದಿ, ದೇವಸ್ಥಾನ, ವಾದ ವಿವಾದ, ಖರ್ಚು ವೆಚ್ಚ ಎಲ್ಲವೂ ಇದೆ. ಮಣ್ಣೇ ಇರದಿದ್ದರೆ ಇದಾವುದೂ ಇಲ್ಲ. ಕಣ್ಣಿಗೆ ಕಾಣದ ಆಕ್ಸಿಜನ್ ನಿಜವಾದ ದೇವರು. ಪ್ರಕೃತಿಯಲ್ಲಿ ದೇವರನ್ನು ಕಂಡಾಗ ನೆಮ್ಮದಿ ಸಿಗುತ್ತದೆ.
ನಾವು ಮನೆಯಲ್ಲಿ ಎಲ್ಲ ಸರಿಯಿದ್ದರೂ ಮನೆ ಪಕ್ಕದಲ್ಲಿ ಸಣ್ಣ ಕಿರಿಕಿರಿ ಇದ್ದರೂ ಮಾನಸಿಕವಾಗಿ ಸರಿಯಾಗಿರುವುದು ಸಾಧ್ಯವಿಲ್ಲ. ಎಲ್ಲ ಇದ್ದೂ ಆರ್ಥಿಕ ಸಮಸ್ಯೆ ಇದ್ದರೂ ಮಾನಸಿಕವಾಗಿ ನೆಮ್ಮದಿ ಇರಲು ಸಾಧ್ಯವಿಲ್ಲ.
ತುಳುನಾಡಿನ ಜನರಿಗೆ ವೃತ್ತಿಯ ಜೊತೆ ಕೃಷಿ ವೃತ್ತಿಯ ಇಂಚಿಂಚೂ ತಿಳಿದಿದೆ. ಪ್ರಕೃತಿಯಲ್ಲಿ ಸಿಗುವ ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಅನ್ನೋದನ್ನು ಪ್ರಕೃತಿಯೇ ನಿರ್ಧರಿಸುತ್ತದೆ. ಮೀನು ನಮ್ಮಲ್ಲಿ ಮಾಂಸಾಹಾರಿಯಾದರೆ ಪಶ್ಚಿಮ ಬಂಗಾಲದಲ್ಲಿ ಅದು ಶುದ್ಧ ಸಸ್ಯಾಹಾರಿ ಎಂದು ಕರೆಯಲ್ಪಡುತ್ತದೆ. ನಾವು ಸೇವಿಸುವ ಆಹಾರದ ಬಗ್ಗೆ ಚರ್ಚೆ ಮಾಡದೇ, ಆ ಧರ್ಮ ಈ ಧರ್ಮ ಎಂದು ಕಚ್ಚಾಡದೆ ಕೃಷಿಯೇ ಪರಮ ಧರ್ಮ, ಮಾನವೀಯತೆಯೇ ಜಾತಿ ಎಂದು ಬದುಕಬೇಕು. ಹಿಂದೆ ಪ್ರಕೃತಿ ದತ್ತವಾದ ಶುದ್ಧ ಗಾಳಿ ಸೇವಿಸಲು ಗದ್ದೆಗೆ ಕೆಲಸಕ್ಕೆ ಹೋಗುತ್ತಿದ್ದೆವು. ಈಗ ನಾಯಿ ಹಿಡಿದು ಹೈವೇಗಳಲ್ಲಿ ಕಲುಷಿತ ಗಾಳಿ ಸೇವಿಸುತ್ತ ವಾಕಿಂಗ್ ಮಾಡುತ್ತಿದ್ದೇವೆ. ಇದರಿಂದ ಸಾಂಕ್ರಾಮಿಕ ರೋಗಗಳ ಜೊತೆ ಮಾನಸಿಕ ಖಾಯಿಲೆ ನಮ್ಮನ್ನು ಅವರಿಸುತ್ತಿದೆ. ಕೋವಿಡ್ ಕಾಲದಲ್ಲಿ ನಾವು ಮತ್ತೆ ಪ್ರಕೃತಿ ಕಡೆಗೆ ಧಾವಿಸಿದ್ದೇವೆ.
ಎಲ್ಲಿ ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ, ಯಾವ ಅಧಿಕಾರ ಪಡೆದರೂ ನಮ್ಮವರು, ನಮ್ಮತನ ಇರೋದು ಊರಲ್ಲಿ ಮಾತ್ರ, ಕೃಷಿಯಲ್ಲಿ ಮಾತ್ರ. ಕೋವಿಡ್ ಸಮಯದಲ್ಲಿ ನಾವು ಒಂದು ಗಂಟೆ ಆಕ್ಸಿಜನ್ ಪಡೆಯಲು ಸಾವಿರಾರು ರೂಪಾಯಿ ಬೆಲೆ ತೆತ್ತಿದ್ದೇವೆ. ಈ ಮೂಲಕ ಪ್ರಕೃತಿಯ ಬೆಲೆ ಅರಿತಿದ್ದೇವೆ. ಕೋಮು ಸಾಮರಸ್ಯ ನೋಡಲು ಕೃಷಿಕರ ಮನೆಗೆ ಹೋಗಬೇಕು. ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಅಲ್ಲಿ ಒಬ್ಬರಿಗೆ ಇನ್ನೊಬ್ಬರು ಸಹಾಯ ಮಾಡುತ್ತಾ ಜಾತಿ ಧರ್ಮದ ಹಂಗಿಲ್ಲದೆ ಬದುಕುತ್ತಾರೆ. ಕವಿ ದೇವನೂರು ಮಹಾದೇವ ಅವರು ಹೇಳಿದಂತೆ ಬೇಸಾಯ ಎಂದರೆ ನಾ ಸಾಯ, ನೀ ಸಾಯ, ಮನೆಮಂದಿ ಯಾರೂ ಸಾಯ. ಅದರರ್ಥ ಬೇಸಾಯದಿಂದ ಯಾರೂ ಸಾಯುವುದಿಲ್ಲ. ಕೋಟಿಗಟ್ಟಲೆ ಹಣವಿದ್ದರೂ ಪ್ರಕೃತಿಯಲ್ಲಿ ಇಂಗಾಲದ ಪ್ರಮಾಣ ಜಾಸ್ತಿಯಾದರೆ ಬದುಕಲು ಸಾಧ್ಯವಿಲ್ಲ. ಜಾತಿ ಧರ್ಮ ಯಾವುದೇ ಇರಲಿ ಇರುವ ಭೂಮಿ ಒಂದೇ. ನಾವು ಪ್ರಕೃತಿಯನ್ನು ಧಿಕ್ಕರಿಸಿ ಸಾವಿನ ಮಂಟಪಕ್ಕೆ ಕರೆಯದೆ ಕಾಲಿಡಬಾರದು" ಎಂದರು.
ಮಹಿಮ್ ಹೆಗ್ಡೆ, ಸುಮಿತ್ರಾ ವಿ. ಶೆಟ್ಟಿ, ಪ್ರಮೀಳಾ ಡಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ