'ಎಂಥ ಬಿಸಿಲು ಮಾರ್ರೆ' ಅಕ್ಷರಶಃ ಇದು ಈಗ ಎಲ್ಲರ ಬಾಯಲ್ಲಿ ಕೇಳಿ ಬರುವ ಬಹುಪರಿಚಿತ ಮಾತು. ದಿನದಿಂದ ದಿನಕ್ಕೆ ಏರುತ್ತಿರುವ ಈ ಸುಡುಬಿಸಿಲಿಂದ ನಾವುನೀವೆಲ್ಲಾ ತತ್ತರಿಸಿ ಹೋಗಿದ್ದೇವೆ. ಬಿಸಿಲಿನ ತಾಪ ಏರುತ್ತಲೇ ಇದೆ. ಮಧ್ಯಾಹ್ನವಂತೂ ಕಣ್ಣು ಬಿಡಲಾರದಷ್ಟು ತೀಕ್ಷ್ಣ ಕಿರಣಗಳು ಸೂರ್ಯನಿಂದ ಭೂಮಿಯನ್ನು ತಲುಪುತ್ತಿದೆ. ಕಾದ ಕೆಂಡದಂತಿರುವ ಸೂರ್ಯ, ಈ ಪರಿಯಲ್ಲೇಕೆ ಮುನಿಸಿಕೊಂಡಿದ್ದಾನೆ ಎನ್ನುವುದು ಇಂದಿಗೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಸಾಮಾನ್ಯವಾಗಿ ಮಾರ್ಚ್- ಎಪ್ರಿಲ್ ನಲ್ಲಿ ಬಿಸಿಲಿನ ತಾಪ ಇರುತ್ತದೆ ಯಾದರೂ, ವರ್ಷದಿಂದ ವರ್ಷಕ್ಕೆ ಇದು ಏರಿಕೆಯಾಗುತ್ತಲೇ ಇದೆ.
ಅಯ್ಯೋ! ಈ ಬಿಸಿಲಿಗೆ ಹೇಗಪ್ಪಾ ಹೋಗುವುದು? ಎನ್ನುತ್ತಲೇ ಜನ ಮನೆಯಿಂದ ಹೊರಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಇದರ ಅರಿವಾಗುವುದು ಮಧ್ಯಾಹ್ನ ಊಟಕ್ಕೆ ಬಿಡುವ ವೇಳೆಗೆ. ಹಲವು ವಿದ್ಯಾರ್ಥಿಗಳು ಊಟಕ್ಕೆಂದು ಹಾಸ್ಟೆಲ್, ಪಿಜಿಗಳಿಗೆ ತೆರಳುತ್ತಾರೆ. ಆಗಲಂತೂ ಸೂರ್ಯ ನೆತ್ತಿಯ ಮೇಲಿರುತ್ತಾನೆ. ಈ ಉರಿಬಿಸಿಲಿನ ತಪ್ಪಿಸಿಕೊಂಡು ಊಟ ಮುಗಿಸಿ ಮತ್ತೆ ಕಾಲೇಜಿಗೆ ಬರುವ ವೇಳೆ ವಿದ್ಯಾರ್ಥಿಗಳು ಹೈರಾಣಾಗಿರುತ್ತಾರೆ. ಈ ಬಿಸಿಲ ಸಮಸ್ಯೆ ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ದಿನವಿಡೀ ಕೆಲಸಕಾರ್ಯಗಳಿಗೆಂದು ತೆರಳುವ ಪ್ರತಿಯೊಬ್ಬರಿಗೂ ಇದು ಅನುಭವಕ್ಕೆ ಬರುತ್ತದೆ. ಇನ್ನು ಬಿಸಿಲಿನ ತಾಪ ಏರಿಕೆಯಾದಂತೆ ಜನರಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿಟಮಿನ್ ಡಿ ನೀಡುವ ಮೂಲಕ ನಮಗೆ ಉಪಕಾರಿಯಾಗಿರುವ ಸೂರ್ಯನ ಕಿರಣಗಳು ತಾಪ ಹೆಚ್ಚಿದಂತೆ ಉಷ್ಣ ಕಿರಣಗಳಾಗಿ ಹಲವು ರೋಗಗಳ ಉಗಮಕ್ಕೂ ಕಾರಣವಾಗುತ್ತದೆ.
ಲಕಾರಣ ಮಾನವನೇ. ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ನಿಸರ್ಗವನ್ನು ನಗರೀಕರಣದ ಹೆಸರಿನಲ್ಲಿ ಬರಡು ಭೂಮಿಯನ್ನಾಗಿಸಿ ಅದೆಷ್ಟೋ ಜೀವಸಂಕುಲಗಳು ನಾಶವಾಗಲು ಕಾರಣನಾದ. ಆಧುನೀಕರಣವೆಂಬ ಬೃಹತ್ ಯೋಜನೆಯನ್ನಿಟ್ಟುಕೊಂಡು ಕಾಡನ್ನು ತ್ಯಜಿಸಿ, ಉದ್ಯೋಗದ ನಿಮಿತ್ತ ಪೇಟೆ ಪಟ್ಟಣಗಳಿಗೆ ತೆರಳಿದ. ಬರಡಾದ ಕೃಷಿ ಭೂಮಿಯಲ್ಲಿ ಕೈಗಾರಿಕೋದ್ಯಮಗಳ ಹಠಾತ್ ಬೆಳವಣಿಗೆಯು ಅಳಿದುಳಿದ ಹಸಿರಿನ ನಾಶಕ್ಕೂ ಕಾರಣವಾಯಿತು. ಪಕ್ಷಿಗಳ ಆಶ್ರಯ ತಾಣವಾಗಿದ್ದ, ನಮಗೆ ಹೇರಳವಾಗಿ ನೆರಳು ಕೊಡುತ್ತಿದ್ದ ಮರಗಳ ಮಾರಣ ಹೋಮ ನಡೆಸಿ ವಿಕೃತವಾಗಿ ವಿಜೃಂಭಿಸಿಯಾಯಿತು. ಹೀಗೆ ಒಂದಲ್ಲ- ಎರಡಲ್ಲ ಎಲ್ಲ ವಿಧದಲ್ಲೂ ಪ್ರಕೃತಿಗೆ ವಿರುದ್ಧವಾಗಿ ನಡೆದುದರ ಪರಿಣಾಮ ಇಂದು ನಾವು ನೀವೆಲ್ಲ ಅನುಭವಿಸುತ್ತಿದ್ದೇವೆ.
ಸೂರ್ಯನಿಂದ ಬರುವ ಕಿರಣಗಳಿಂದ ರಕ್ಷಿಸಿಕೊಳ್ಳಲು ಮರಗಳು ನಮಗೆ ತುಂಬಾ ಸಹಾಯ ಮಾಡುತ್ತಿತ್ತು. ಇಂದಿಗೂ ಅಷ್ಟೇ ಮರದ ನೆರಳಿನ ಕಡೆಗೆ ನಾವು ಓಡುತ್ತೇವೆ. ಆದರೆ ಮರಗಳನ್ನೇ ಹುಡುಕುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಬಿಸಿಲ ಬೇಗೆಗೆ ಮಳೆಯ ಸಿಂಚನವಾದರೂ ಆಗಬಾರದೇ ಎಂದು ಮೋಡಗಳೆಡೆಗೆ ನೋಡಿದರೆ, ನಾವು ಬರುವ ಸಮಯವಿದಲ್ಲ ಎಂದು ಮೋಡಗಳೂ ಮುಖತಿರುಗಿಸಿ ಚಲಿಸುತ್ತವೆ. ಬಾಡಿಹೋದ ತರುಲತೆಗಳು ಹನಿ ನೀರಿಗಾಗಿ ಕಾತರಿಸಿವೆ. ಬಿಸಿಲ ಝಳದಿಂದ ತತ್ತರಿಸಿರುವ ನಾವು ಒಮ್ಮೆ ಬೇಸಿಗೆಕಾಲ ಮುಗಿದರೆ ಸಾಕೆಂದು ಪ್ರಾರ್ಥಿಸುವಂತಾಗಿದೆ.
ಕಾಲ ಇನ್ನೂ ಮಿಂಚಿಲ್ಲ. ನಮ್ಮ ತಪ್ಪುಗಳು ನಿಧಾನವಾಗಿ ನಮಗೆ ಅರಿವಾಗುತ್ತಿದೆ. ಇನ್ನಾದರೂ ನಾವು ಪರಿಸರಸ್ನೇಹಿ ಚಟುವಟಿಕೆಗಳತ್ತ ಮುಖ ಮಾಡಬೇಕಿದೆ. ಪ್ರಕೃತಿಯೊಂದಿಗಿನ ಒಡನಾಟ ಇನ್ನಷ್ಟು ಭದ್ರವಾಗಬೇಕಿದೆ. ಜುಳುಜುಳು ನಿನಾದದಿಂದ ಹರಿವ ಜಲರಾಶಿಯ ನಡುವೆ ಎತ್ತರೆತ್ತರಕ್ಕೆ ಬೆಳೆದು ನಿಂತ ವೃಕ್ಷಗಳು, ತಂಗಾಳಿಗೆ ತಲೆಯೊಡ್ಡುವ ಗಿಡಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳು, ಸ್ವೇಚ್ಛೆಯಿಂದ ಓಡಾಡುವ ಜೀವ ಸಂಕುಲಗಳು... ಹೀಗೆ ಒಟ್ಟಿನಲ್ಲಿ ಸಂಪತ್ಭರಿತವಾದ ಹಚ್ಚಹಸಿರಿನ ವನಸಿರಿಯು ಮರು ನಿರ್ಮಾಣವಾಗಬೇಕಾದ ಅನಿವಾರ್ಯತೆಯಿದೆ. ಸೂರ್ಯನಿಗೆ ಕೊಡೆ ಹಿಡಿಯುವ ಕೆಲಸ ಕೇವಲ ನಿಸರ್ಗದಿಂದ ಮಾತ್ರವೇ ಸಾಧ್ಯವಿದೆ. ಬಿಸಿಲ ಝಳಕ್ಕೆ ಸೂರ್ಯನನ್ನು ದೂಷಿಸುವ ಬದಲು ಅದಕ್ಕೆ ಪ್ರತ್ಯಕ್ಷವಾಗಿ ಕಾರಣೀಭೂತರಾದ ನಾವು ತಾಪವನ್ನು ಕಡಿಮೆಗೊಳಿಸಲು ಏನೆಲ್ಲ ಮಾಡಲು ಸಾಧ್ಯವಿದೆಯೋ ಅದರೆಡೆಗೆ ಚಿತ್ತ ಹರಿಸೋಣ.
-ಅನ್ನಪೂರ್ಣ ಯನ್.ಕೆ
ತೃತೀಯ ಬಿ.ಎಸ್ಸಿ
ವಿವೇಕಾನಂದ ಪದವಿ ಕಾಲೇಜು, ಪುತ್ತೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ