|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಕ್ಷ ಪುರುಷೋತ್ತಮ ದೀಪಕ್ ರಾವ್ ಪೇಜಾವರ

ಯಕ್ಷ ಪುರುಷೋತ್ತಮ ದೀಪಕ್ ರಾವ್ ಪೇಜಾವರ



14.09.1980 ರಂದು ದಯಾನಂದ ರಾವ್ ಪೇಜಾವರ ಹಾಗೂ ದಿ ನಾಗರತ್ನ ರಾವ್ ದಂಪತಿಗಳ ಮಗನಾಗಿ ಮಣಿಪಾಲದಲ್ಲಿ ಜನನ.


ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುರತ್ಕಲ್ ಮಹಾಲಿಂಗೇಶ್ವರ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪೂರೈಸಿ, ಪೊಂಪೈ ಜೂನಿಯರ್ ಕಾಲೇಜು ಐಕಳದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಹಾಗೂ ಕಾರ್ಕಳದ ನಿಟ್ಟೆ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದು, ಐ.ಸಿ.ಎಫ್.ಎ.ಐ ನ್ಯಾಷನಲ್ ಕಾಲೇಜು ಮಂಗಳೂರಿನಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಿದರು. ಹಾಗೂ ಎಂಬಿಎ (ಫೈನಾನ್ಸ್ ಅಂಡ್ ಸರ್ವೀಸಸ್ ಮಾರ್ಕೆಟಿಂಗ್), ಎಂಕಾಂ ಹಾಗೂ ಬಿಎಡ್ ವಿದ್ಯಾರ್ಹತೆಯನ್ನು ಪಡೆದಿರುತ್ತಾರೆ.


ICFAI, MBA ಕಾಲೇಜಿನಲ್ಲಿ ಉಪನ್ಯಾಸಕನಾಗಿಯೂ, ಮೂರು ವರ್ಷಗಳ ಕಾಲ ಬೆಂಗಳೂರಿನ Northern Trust ಎಂಬ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಉದ್ಯೋಗ ಮಾಡಿ ನಂತರ ಮಿಲಾಗ್ರಿಸ್ ಕಾಲೇಜು ಮಂಗಳೂರು ಇಲ್ಲಿ ಬಿಬಿಎಂ ಡಿಪಾರ್ಟ್ಮೆಂಟ್ ನ HOD ಆಗಿ ಆರು ವರ್ಷ ಕೆಲಸ ಮಾಡಿರುವ ಇವರು ಸದ್ಯ ಬೆಹರೈನ್ ನಲ್ಲಿ ಅಕೌಂಟಿಂಗ್ ಉಪನ್ಯಾಸಕರಾಗಿದ್ದಾರೆ.


ಯಕ್ಷಗಾನದ ಹಿನ್ನೆಲೆ: ಎಂಟನೇ ವಯಸ್ಸಿಗೆ ಪ್ರಥಮ ನಾಟ್ಯಾಭ್ಯಾಸವನ್ನು ಪ್ರಾರಂಭಿಸಿದ ದೀಪಕ್ ರವರ ಪ್ರಥಮ ಗುರುಗಳು ಇವರ ಚಿಕ್ಕಪ್ಪ; ಖ್ಯಾತ ವೇಷಧಾರಿ ಶ್ರೀಯುತ ಸತ್ಯಾನಂದ ರಾವ್ ಪೇಜಾವರ. ನಂತರದ ನೃತ್ಯಾಭ್ಯಾಸವನ್ನು ಗುರುಗಳಾದ ಪಿ ವಿ ಪರಮೇಶ್ ಅವರಿಂದ ಕಲಿತರು.


ಒಂಬತ್ತನೇ ವಯಸ್ಸಿನಲ್ಲಿ ಸಸಿಹಿತ್ಲು ದೇವಸ್ಥಾನದಲ್ಲಿ ದೇವೇಂದ್ರ ಬಲ ಪಾತ್ರಕ್ಕೆ ಪ್ರಥಮ ವೇಷವನ್ನು ಮಾಡಿದರು. ಯಕ್ಷಗಾನ ರಂಗದಲ್ಲಿ ಒಟ್ಟು 39 ವರ್ಷಗಳಿಂದ  ಸಕ್ರಿಯರಾಗಿದ್ದಾರೆ.


ರಾಜವೇಷ, ಪುಂಡುವೇಷ, ಸ್ತ್ರೀವೇಷ, ಬಣ್ಣದ ವೇಷ, ನಾಟಕೀಯ ವೇಷ ಎಲ್ಲವನ್ನು ಮಾಡುತ್ತೇನೆ ಎಂದು ಪೇಜಾವರ ಅವರು ಹೇಳುತ್ತಾರೆ.


ರಂಗಕ್ಕೆ ಏರುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಮೊದಲು ಮಾಡಿ ಅನುಭವ ಇದ್ದ ಪಾತ್ರಗಳಾದರೆ, ಅದನ್ನು ಒಮ್ಮೆ ನೆನಪಿಸಿಕೊಳ್ಳುವೆ. ಹಿಂದಿನ ಪ್ರದರ್ಶನಗಿಂತ ಈ ಬಾರಿಯ ನಿರ್ವಹಣೆಯಲ್ಲಿ ಏನು ಇಂಪ್ರುವೈಸ್ ಮಾಡಬಹುದು ಎಂದು ಅನಲೈಸ್ ಮಾಡಿಕೊಂಡು ಸಾಧ್ಯ ಆದಲ್ಲಿ ಅದನ್ನು ಮಾಡುವೆ..

ಸಹ ಕಲಾವಿದರಲ್ಲಿ ಚರ್ಚಿಸುವೆ, ಜೊತೆಗೆ ಪಾತ್ರ ನಿರ್ವಹಣೆಗೆ ಧಕ್ಕೆ ತರಬಹುದಾದ ಕೆಲವೊಂದು ಅಂಶಗಳನ್ನು ಮೊದಲೇ ಯೋಚಿಸಿ ಅವುಗಳ ಬಗ್ಗೆ ಜಾಗೃತನಾಗಿಯೇ ರಂಗ ಏರುವೆ.

ಹೊಸ ಪಾತ್ರಗಳಾದರೆ, ಪ್ರಸಂಗ ಪುಸ್ತಕವನ್ನು ಒಮ್ಮೆ ಓದಿ, ಹಿರಿಯ, ಬಲ್ಲ ಕಲಾವಿದರೊಂದಿಗೆ ಆ ಪಾತ್ರಕ್ಕೆ ಬೇಕಾದುದನ್ನು ತಿಳಿದು ಆಮೇಲೆ ಅದನ್ನು ನನ್ನದೇ ರೀತಿಯಲ್ಲಿ ಚಿತ್ರಿಸುವ ಬಗ್ಗೆ ನನ್ನಿಂದಾದಷ್ಟು ಪ್ರಯತ್ನಿಸುವೆ.


ಗೋವಿಂದ ಭಟ್ ಸೂರಿಕುಮೇರು, ಸುಣ್ಣಂಬಳ ವಿಶ್ವೇಶ್ವರ ಭಟ್, ಪನೆಯಾಲ ರವಿರಾಜ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಉಜಿರೆ ಅಶೋಕ್ ಭಟ್, ಸುಬ್ರಾಯ ಹೊಳ್ಳರು, ಶ್ರೀಯುತ ಕೋಳ್ಯೂರು, ತೋಡಿಕಾನ ವಿಶ್ವನಾಥ ಗೌಡ, ಎಂ ಕೆ ರಮೇಶ್ ಆಚಾರ್ಯ, ಅಮ್ಮುಂಜೆ ಮೋಹನ್ ಕುಮಾರ್, ವಾಟೆಪಡ್ಪು ವಿಷ್ಣುಶರ್ಮ.

ಈಗಿನ ಯುವ ಕಲಾವಿದರಲ್ಲಿ  ಶಶಿಕಾಂತ ಶೆಟ್ಟಿ, ವಾಸುದೇವ ರಂಗಾ ಭಟ್, ವಾದಿರಾಜ ಕಲ್ಲೂರಾಯ, ಅಕ್ಷಯ ಮಾರ್ನಾಡು ಇವರ ನೆಚ್ಚಿನ ಕಲಾವಿದರು.


ನೆಚ್ಚಿನ ಪಾತ್ರಗಳು:-

ರಾಜ ವೇಷ:- ಅರ್ಜುನ, ರಕ್ತಬೀಜ, ಅತಿಕಾಯ, ತಾಮ್ರಧ್ವಜ, ವಾಲಿ, ಜಾಂಬವ.

ಪುಂಡುವೇಷ:- ಸುಧನ್ವ, ಕೃಷ್ಣ, ಧ‌ರ್ಮಾಂಗದ, ಬಬ್ರುವಾಹನ, ಶ್ವೇತಕುಮಾರ. ಸ್ತ್ರೀವೇಷ: ದಾಕ್ಷಾಯಿಣಿ, ಶಶಿಪ್ರಭೆ, ಮಾಯಾ ಶೂರ್ಪನಖಿ, ಮಾಯಾ ಪೂತನಿ, ಮೋಹಿನಿ, ಸುಭದ್ರೆ, ಸೀತೆ, ದ್ರೌಪದಿ. 


ಬಣ್ಣದ ವೇಷ:- ನರಕಾಸುರ, ಶುಂಭ. 


ನಾಟಕೀಯ ವೇಷ:- ದಾರಿಕಾಸುರ, ಕಂಸ, ಭಸ್ಮಾಸುರ, ಮೂಕಾಸುರ ಇತ್ಯಾದಿ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಇಂದಿನ ಸ್ಥಿತಿ ಗತಿಯ ಬಗ್ಗೆ ಸಂತೋಷವು ಇದೆ ದುಃಖವು ಇದೆ. ಅನೇಕಾನೇಕ ಯುವಕರು ಯಕ್ಷಗಾನದತ್ತ ಆಕರ್ಷಿತರಾಗಿ, ಕಲಿತು, ರಂಗದಲ್ಲಿ ಮಿಂಚುತ್ತಿರುವುದು ಸಂತೋಷದ ವಿಷಯ. ಯಕ್ಷಗಾನಕ್ಕೆ ಸಿಗುತ್ತಿರುವ ಮನ್ನಣೆ ಹೆಮ್ಮೆಯ ವಿಷಯ. ಹಿಮ್ಮೇಳ ಹಾಗು ಮುಮ್ಮೇಳಗಳಲ್ಲಿ ಹೆಚ್ಚಿನ ರೀತಿಯಲ್ಲಿ ಹೊಸತನದಿಂದ ಕೂಡಿದ ಪ್ರಯೋಗಗಳು ಕೂಡ ಸ್ವಾಗತಾರ್ಹ.

ಆದರೆ ಅದೆಲ್ಲದರ ಜೊತೆಗೆ ಯಕ್ಷಗಾನದ ಮೂಲ ಸ್ವರೂಪ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂಬುದು ದುಃಖಕರವಾದುದು. ಹಾಡುವ ಶೈಲಿಯಲ್ಲಿ, ಕುಣಿಯುವ ಪರಿಯಲ್ಲಿ ಏನೇನೋ ಬಂದು ಸೇರಿಕೊಂಡಿರುವುದು ಅನುಚಿತವಾದುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸುಮಾರು ೩೯ ವರುಷಗಳ ಕಾಲ ಯಕ್ಷಗಾನ ಕ್ಷೇತ್ರದ ಅನುಭವ ಇರುವ ನಾನು ಹಿಂದಿನ ಆಟಗಳಲ್ಲಿ ಇದ್ದ ವೈಭವ ಹಾಗು ಇಂದಿನ ಆಟಗಳ ಆಡಂಬರಗಳಲ್ಲಿ ಇರುವ ವ್ಯತ್ಯಾಸವನ್ನು ಚೆನ್ನಾಗಿ ಗ್ರಹಿಸಬಲ್ಲೆ. ಯೂಟ್ಯೂಬ್ ನೋಡಿ ಪಾತ್ರಕ್ಕೆ ತಯಾರಾಗುವ ಬದಲು ಪ್ರಸಂಗ ಪುಸ್ತಕವನ್ನು ಚೆನ್ನಾಗಿ ಓದಿ, ಹಿರಿಯರಿಂದ ಮಾರ್ಗದರ್ಶನ ಪಡೆದು ಪಾತ್ರ ಮಾಡಿದರೆ ಕಲಾವಿದರು ಇನ್ನೂ ಉತ್ಕೃಷ್ಟವಾದ ಪ್ರದರ್ಶನ ಕೊಡಲು ಸಮರ್ಥರಾಗುವರು ಎಂದು ಪೇಜಾವರ ಅವರು ಹೇಳುತ್ತಾರೆ.


ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಕಲೆಯ ಉಳಿವಿಗೆ ಕಲಾವಿದರ ಶ್ರಮ ಎಷ್ಟಿದೆಯೋ ಅಷ್ಟೇ  ಕೋಂಟ್ರೀಬ್ಯೂಶನ್ ಪ್ರೇಕ್ಷಕರದ್ದು ಇದೆ. ಈಗಿನ ಪ್ರೇಕ್ಷಕರಿಂದಾಗಿ ಯಕ್ಷಗಾನ ಬಹಳಷ್ಟು ಪ್ರಚಾರ ಪಡೆಯುತ್ತ ಇದೆ... ಫೇಸ್ಬುಕ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ತಾಣಗಳಲ್ಲಿ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಯಕ್ಷಗಾನದ ಕುರಿತಂತಾದ ಲೇಖನಗಳು, ವಿಮರ್ಶೆಗಳು, ಕಲಾವಿದರ ಚಿತ್ರಗಳು, ಕಲಾವಿದರ ಪರಿಚಯ ಲೇಖನಗಳು ಹರಿದಾಡುವುದರಿಂದ ಬಹಳಷ್ಟು ಉಪಕಾರವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ.


ಆದರೆ ಅಭಿಮಾನ ಇದೆ ಎಂದು ಕಿರುಬೆರಳನ್ನು ಬೆಳೆಸಿ ನಾಡು ಬೆರಳ ಎತ್ತರಕ್ಕೆ ಏರಿಸಲು ಸಾಧ್ಯವೇ. ಈಗಷ್ಟೇ ರಂಗ ಪ್ರವೇಶ ಮಾಡಿದ ಅಥವಾ ಒಂದೆರಡು ವರುಷ ಅನುಭವ ಇರುವ ಯುವ ಕಲಾವಿದರಿಗೆ ದಿನ ಒಂದಕ್ಕೆ ಹತ್ತಾರು ಬಿರುದುಗಳನ್ನು ಕೊಟ್ಟು ಅವರನ್ನು ಮೆರೆಸುವ ಅಭಿಮಾನ ಹೆಚ್ಚಾಗುತ್ತಿದೆ.. ಇದರಿಂದ ಆ ಕಲಾವಿದನ ಪ್ರಯತ್ನ, ಪ್ರಯೋಗಗಳು ಕುಂಠಿತವಾಗಬಹುದಾದ ಭಯ ಖಂಡಿತ ಇದೆ. ಹಾಗಾಗಿ ಪ್ರೇಕ್ಷಕರು ತಮ್ಮ ಅಭಿಮಾನ ಕಲಾವಿದನ ಬೆಳವಣಿಗೆಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕೇ ವಿನಃ ಮಾರಕವಾಗಕೂಡದು.


ಇವರ ಕಲಾಸೇವೆಗೆ ಅವಕಾಶಗಳನ್ನು ಕೊಟ್ಟ ಯಕ್ಷಗಾನ ಮಂಡಳಿಗಳು ಹಾಗೂ ಮೇಳಗಳು:-

ಗಣೇಶಪುರ ಯಕ್ಷಗಾನ ಮಂಡಳಿ ಕಾಟಿಪಳ್ಳ, ಸದಾಶಿವ ಮಹಾಗಣಪತಿ ಯಕ್ಷಗಾನ ಮಂಡಳಿ ಸುರತ್ಕಲ್, ಹವ್ಯಾಸಿ ಯಕ್ಷಗಾನ ಬಳಗ ಕದ್ರಿ, ಮೋಹಿನಿ ಕಲಾ ಸಂಪದ ಕಿನ್ನಿಗೋಳಿ, ಮುಂಡ್ಕೂರು ಮೇಳ, ಸಸಿಹಿತ್ಲು ಭಗವತಿ ಮೇಳ, ಬಪ್ಪನಾಡು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಯಕ್ಷ ಮಂಜೂಷಾ.


ಸಂದ ಬಿರುದುಗಳು:- ಯಕ್ಷ ಪ್ರದೀಪ, ಯಕ್ಷ ಸೂಡ, ಯಕ್ಷ ಪುರುಷೋತ್ತಮ, ಯಕ್ಷ ನಿಧಿ, ಯಕ್ಷ ಮಣಿ, ಯಕ್ಷ ಕಲಾರಾಧಕ.


ಸಂದ ಪ್ರಶಸ್ತಿಗಳು:- ಉತ್ತಮ ರಾಜವೇಷ ಮೂರು ಬಾರಿ ಕಾಂತಾವರದಲ್ಲಿ, ಉತ್ತಮ ಪುಂಡುವೇಷ ಎರಡು ಬಾರಿ ಒಮ್ಮೆ ಬಂಗಾರದ ಪದಕ, ಉತ್ತಮ ಸ್ತ್ರೀವೇಷ ಬಂಗಾರದ ಪದಕ, ಉತ್ತಮ ನಾಯಕ ಪ್ರಶಸ್ತಿ.


ಭಾರತದ ಬಹುತೇಕ ರಾಜ್ಯಗಳಲ್ಲಿ ಹಾಗೂ ಹೊರದೇಶಗಳಾದ ಅಮೆರಿಕ, ಕುವೈಟ್, ಬಹರೈನ್, ದುಬೈ, ಮಸ್ಕತ್ ಇತ್ಯಾದಿ ದೇಶಗಳಲ್ಲಿ ಇವರು ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ.

ಓದುವುದು, ಪೇಂಟಿಂಗ್, ಸಿಂಗಿಂಗ್, ಕುಕಿಂಗ್, ಚಲನ ಚಿತ್ರಗಳನ್ನು ನೋಡುವುದು, ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನು ಕೇಳುವುದು ಇವರ ಹವ್ಯಾಸಗಳು.


೨೦೧೫ ರಿಂದ ಭಾರತ ದೇಶದಿಂದ ಹೊರಗೆ ಇದ್ದೇನೆ ಅಷ್ಟೇ ಬಿಟ್ರೆ ಯಕ್ಷಗಾನದಿಂದ ನಾನು ಖಂಡಿತ ದೂರ ಆಗಿಲ್ಲ. ಪ್ರದರ್ಶನಗಳು ಕೊಡುವುದು ಕಡಿಮೆ ಆಗಿದೆ ಬಿಟ್ರೆ ಯಕ್ಷಗಾನದಲ್ಲಿ ನನ್ನನ್ನು ನಾನು ಹಲವಾರು ರೀತಿಯಲ್ಲಿ ತೊಡಗಿಸಿಕೊಂಡಿದ್ದೇನೆ.

ಬಹರೇನ್ ನ ಕನ್ನಡ ಸಂಘದ ಯಕ್ಷಗಾನ ತಂಡಕ್ಕೆ ನಿರ್ದೇಶಕನಾಗಿ, ಅನೇಕ ಮಕ್ಕಳಿಗೆ ನಾಟ್ಯ ಅಭ್ಯಸಿಸಿ, ಮಕ್ಕಳ ತಂಡದಿಂದಲೇ ಬಬ್ರುವಾಹನ ಕಾಳಗ ಎಂಬ ಪ್ರದರ್ಶನ ಮಾಡಿಸಿದ್ದೇನೆ ಎಂದು ಹೇಳುತ್ತಾರೆ ಪೇಜಾವರರು.


ದೀಪಕ್ ರಾವ್ ಪೇಜಾವರ ಇವರು ಶ್ವೇತ ರಾವ್ (ಬಯೋ ಕೆಮಿಸ್ಟ್ರಿ ಉಪನ್ಯಾಸಕಿ) ಇವರನ್ನು ವಿವಾಹವಾಗಿ ಮಗ ಮಹಸ್ವಿನ್ ರಾವ್ ಪೇಜಾವರ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಯಕ್ಷಗಾನದಲ್ಲಿ ಏನಾದರು ಹೊಸ ಪ್ರಯೋಗ ಮಾಡಬೇಕು ಎಂದು ಹಂಬಲಿಸಿದ್ದ ನಾನು ಕಳೆದ ಬಾರಿ ಏಕ ವ್ಯಕ್ತಿ ಯಕ್ಷಗಾನವನ್ನು ಮಾಡಿ ಪೂರೈಸಿದ್ದೇನೆ. ಒಂದು ಪ್ರಸಂಗದ ಒಂಬತ್ತು ಪಾತ್ರಗಳನ್ನು ಒಬ್ಬನೇ ನಿರ್ವಹಿಸಿ ಯಕ್ಷಗಾನದಲ್ಲಿ ಒಂದು ಹೊಸ ದಾಖಲೆಯ ಪ್ರಯೋಗಕ್ಕೆ ಕೈ ಹಾಕಿದ್ದೇನೆ. ಇನ್ನು ಇಂತಹ ಪ್ರಯೋಗಳ ಬಗ್ಗೆ ಚಿಂತನೆ ನಡೆಯುತ್ತಾ ಇದೆ. ಮಿತ್ರರಾದ, ಕಿರಣ್ ಉಪಾಧ್ಯಾಯ, ಸುಧಾಕರ್ ಜೈನ್, ವಿಧುಷಿ ಸುಮಂಗಲ ರತ್ನಾಕರ್, ಮಿತ್ರ ಕಾರ್ತಿಕ್ ಕೊರ್ಡೆಲ್ ಇವರೆಲ್ಲ ನನ್ನ ಸಂಪನ್ಮೂಲ ವ್ಯಕ್ತಿಗಳು ಎಂದರೆ ತಪ್ಪಾಗದು. ಮುಂದೆ ದೇವರು ಅನುಗ್ರಹಿಸಿದರೆ ಭಾರತಕ್ಕೆ ಬಂದು ನೆಲೆಗೊಳ್ಳುವ ಕಾಲಕ್ಕೆ ಒಂದು ಸಣ್ಣ ಮಟ್ಟದ ಅಕಾಡೆಮಿ ತೆರೆದು ಯಕ್ಷಗಾನ ಆಸಕ್ತರಿಗೆ ಅವಕಾಶ ಮಾಡಿ ಕೊಡಬೇಕು ಎಂಬ ಮಹದಾಸೆ ಒಂದನ್ನು ಇಟ್ಟುಕೊಂಡಿದ್ದೇನೆ. ಇದಕ್ಕೆ ನನ್ನ ಶ್ರೀಮತಿ ಶ್ವೇತಾ ರಾವ್ ಇವರ ಸಂಪೂರ್ಣ ಸಹಕಾರ ಇದೆ.. ಯಕ್ಷಗಾನ ಕ್ಷೇತ್ರದಲ್ಲಿ ನಾನು ಇನ್ನಷ್ಟು ಸಾಧಿಸಬೇಕು ಎಂಬ ಅವಳ ಆಸೆಯನ್ನು ನಾನು ನಿರಾಸೆಗೊಳಿಸಲಾರೆ ಎಂದು ದೀಪಕ್ ರಾವ್ ಪೇಜಾವರರು ಹೇಳುತ್ತಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post