||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡಿನ ಕೇರಳೀಕರಣ: ಕನ್ನಡಿಗರನ್ನು ನುಂಗುತ್ತಿರುವ ಮಲಯಾಳದ ಹೆಬ್ಬಾವು

ಕಾಸರಗೋಡಿನ ಕೇರಳೀಕರಣ: ಕನ್ನಡಿಗರನ್ನು ನುಂಗುತ್ತಿರುವ ಮಲಯಾಳದ ಹೆಬ್ಬಾವುಸ್ವತಂತ್ರ ಭಾರತದಲ್ಲಿ, 1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾದದ್ದು ಅವೈಜ್ಞಾನಿಕವಾಗಿ, ಎಂದು ಕಾಸರಗೋಡಿನ ಬಗ್ಗೆ ಹೇಳಲೇ ಬೇಕಾಗಿದೆ. 'ಇದರ' ವಿರುದ್ದ 'ನ್ಯಾಯ' ಕ್ಕಾಗಿ ಕನ್ನಡಿಗರ ಹೋರಾಟ ಅಂದಿನಿಂದಲೇ ನಡೆದು ಬರುತ್ತಿದೆ.

ಮಂಗಳೂರು, ದಕ್ಷಿಣ ಕನ್ನಡದ ರಾಜಧಾನಿ ನಗರ. ಕಾಸರಗೋಡಿಗೆ ಕೇವಲ 50 ಕಿಲೋಮೀಟರ್ ದೂರ, ಅಷ್ಟೆ. ಅಂದು ಈ ಕಾಸರಗೋಡು ದಕ್ಷಿಣ ಕನ್ನಡದ್ದೇ ಭಾಗವಾಗಿತ್ತು. ಕೆ. ಯಂ. ಪಣಿಕ್ಕರರ ಅಭಿಪ್ರಾಯದಂತೆ, ಸಾಮಾನ್ಯ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ, 100 ಕಿಲೋಮೀಟರ್‌ಗೂ ಮಿಕ್ಕಿ ದೂರವಿರುವ ಕಣ್ಣಾನೂರಿಗೆ "ಆಡಳಿತ ಸೌಕರ್ಯ(?)"ಕ್ಕಾಗಿ, ಕನ್ನಡ ನಾಡಾದ ಕಾಸರಗೋಡನ್ನು ಕೇರಳಕ್ಕೆ ಕುಹಕದಿಂದ ಸೇರಿಸಲಾಯಿತು. ಇಲ್ಲಿಯ ಜನತೆ ತಮ್ಮ ಎಲ್ಲಾ ಆಗು - ಹೋಗುಗಳಿಗೆ, ವಿದ್ಯಾಭ್ಯಾಸ, ವಾಣಿಜ್ಯ, ಆರೋಗ್ಯ ಹಾಗೂ ಇನ್ನಿತರ ಕಾರಣಗಳಿಗೆ ಅಂದಿನಿಂದ (ಇಂದಿಗೂ ಕೂಡಾ) ಮಂಗಳೂರನ್ನೇ ಅವಲಂಬಿಸಿದ್ದಾರೆ. ಈ ಸತ್ಯವನ್ನು ಅನಂತರದ ಚುನಾವಣೆಗಳಲ್ಲಿ ಹಲವಾರು ಸಲ ಕನ್ನಡದ ಪರ ಹೋರಾಟಗಾರರೇ ಗೆದ್ದು ಬಂದು ಸಾಬೀತುಗೊಳಿಸಿದ್ದಾರೆ.  

ದಕ್ಷಿಣ ಕನ್ನಡದಲ್ಲಿ ಇದ್ದಂತೆ, ಇಂದಿಗೂ ಕೂಡಾ ಕನ್ನಡ, ತುಳು, ಮರಾಟಿ, ಕೊಂಕಣಿ, ಉರ್ದು ಮತ್ತು ಇಲ್ಲಿ ಆಡುವ ಮಲಯಾಳವನ್ನು ಕೂಡಾ ಇಲ್ಲಿ ಉಪಯೋಗಿಸುತ್ತಾರೆ.

ಜನರ ಅಭಿಪ್ರಾಯವನ್ನು ತಿಳಿಯಲು ಕೇಂದ್ರ ಸರಕಾರವು JUSTICE MAHAAJANA ಅವರನ್ನು ಇಲ್ಲಿಗೆ ಕಳುಹಿಸಿತ್ತು. ಚಂದ್ರಗಿರಿಯ ಉತ್ತರ ಭಾಗವು ಕರ್ಣಾಟಕಕ್ಕೇ ಸೇರಬೇಕಾದ್ದು ಎಂಬುದನ್ನು ಅವರೂ ಕೂಡಾ ಒಪ್ಪಿ ದಿಲ್ಲಿಯ ಪಾರ್ಲಿಮೆಂಟ್‌ಗೆ ವರದಿ ಸಲ್ಲಿಸಿದ್ದರು. 

ಅಲ್ಲದೆ, ಅಂದಿನ ಕೇರಳದ ಮುಖ್ಯಮಂತ್ರಿಗಳಾದ‌ E M S NAMBOODIRIPAAD ಅವರೂ ಈ ವರದಿಯನ್ನು ಒಪ್ಪಿಕೊಂಡಿದ್ದರು. ಆದರೆ, ಸದನದಲ್ಲಿ ಮಂಡಿಸಲ್ಪಟ್ಟ ಈ 'ವರದಿ'ಗೆ, ಕೇರಳದ ಅಸೆಂಬ್ಲಿಯಲ್ಲಿ ಮಲೆಯಾಳೀ ಶಾಸಕರೇ ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ 'ಇದ'ಕ್ಕೆ ಒಪ್ಪಿಗೆ ಸಿಗಲಿಲ್ಲ. 

ಇಷ್ಟಾದರೂ ಕೂಡಾ ಪಾರ್ಲಿಮೆಂಟ್‌ನಲ್ಲಿ ಈ ವರದಿಯನ್ನು ತಳ್ಳಿ ಹಾಕದೆ, ಕಡತಗಳಲ್ಲಿಟ್ಟು ಧೂಳು ಹಿಡಿಸುತ್ತಾ ಇಂದಿಗೂ ಇದೆ.

ಕೇರಳದವರ ಅಭಿಪ್ರಾಯ ಏನೇ ಇರಲಿ, ಸತ್ಯಕ್ಕಾಗಿ ನಮ್ಮ ಹೋರಾಟ ನಡೆಯುತ್ತಲೇ ಇದೆ.

ಇಂದಿನ ಕೇರಳದ ಮುಖ್ಯಮಂತ್ರಿಗಳು, "ಆರು ದಶಕಗಳಿಗಿಂತಲೂ ಹೆಚ್ಚಾದರೂ ಕೂಡಾ ಕಾಸರಗೋಡನ್ನು ಮಲೆಯಾಳೀಕರಿಸಲು ಯಾಕೆ ಸಾಧ್ಯ ಆಗಲಿಲ್ಲ?" ಎಂದು ತಮ್ಮದೇ ಧಾಟಿಯಲ್ಲಿ ಕೇಳುತ್ತಿದ್ದಾರೆ. ಮಾತ್ರವಲ್ಲದೆ, ಮಲೆಯಾಳವನ್ನು ಎಲ್ಲಾ ಕನ್ನಡ ಶಾಲೆಗಳಲ್ಲಿಯೂ, ಬಹುಜನ ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ, ಅವರ ಮೇಲೆ ಹೇರಲು ಒತ್ತಾಯಿಸುತ್ತಿದ್ದಾರೆ.

ನಮ್ಮ ಮಾತೃಭಾಷೆಯಲ್ಲಿಯೇ ನಮ್ಮ 'ಮಕ್ಕಳು ಎಳವೆಯಿಂದಲೇ ವಿದ್ಯಾಭ್ಯಾಸ ಮಾಡಬೇಕು' ಎಂದು ಗೌರವಾನ್ವಿತ ಪ್ರಧಾನಿಯವರು ಹಲವಾರು ಸಲ ತಮ್ಮ ಪ್ರಜೆಗಳಿಗೆ ತಿಳಿಸುತ್ತಲೇ ಇದ್ದಾರೆ.

ಇತ್ತ, ಕೇರಳ ಸರಕಾರವು, ನಮ್ಮ ಅಭಿಪ್ರಾಯವನ್ನು ಕಡೆಣಿಸಿ, ನಮ್ಮ ಮಾತೃಭಾಷೆ ಅಲ್ಲದ "ಮಲೆಯಾಳವನ್ನು ಎಲ್ಲಾ ಶಾಲೆಗಳಲ್ಲಿಯೂ ಕೂಡಾ ಕಲಿಸ ಬೇಕು" ಎಂಬ ಆದೇಶವನ್ನು ಇತ್ತಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಇಂದಿಗೂ ನಾವು ಸಿದ್ಧರಿಲ್ಲ.

ಮಾತ್ರವಲ್ಲದೆ, ನಮ್ಮ ಸಂಸ್ಕೃತಿ ಮತ್ತು ಆಚಾರ - ವಿಚಾರಗಳನ್ನೂ ಕೂಡಾ ತೆಂಕಣ ಕೇರಳದವರಂತೆ ಆಚರಿಸ ಬೇಕೆಂದು ಬಲವಂತ ಪಡಿಸುತ್ತಲೇ ಇದ್ದಾರೆ. 

"ಓಣಂ" ಎಂದು ದಕ್ಷಿಣ ಕೇರಳದವರು ಆಚರಿಸುವ ನಾಡ ಹಬ್ಬವನ್ನು  ಶಾಲೆಗಳಲ್ಲಿ "ಓಣ ಸದ್ಯ" ಎಂಬ ಭೋಜನವನ್ನು ಕೊಡಿಸಿ ಆಚರಿಸುತ್ತಿದ್ದಾರೆ. 'ಮಾವೇಲಿ' ಎಂಬ ವೇಷಧಾರಿ, ಡೊಳ್ಳು ಹೊಟ್ಟೆಯನ್ನು ಪ್ರದರ್ಶಿಸುತ್ತಾ, ಹೆಗಲಲ್ಲಿ ಗದೆಯನ್ನು ಇರಿಸಿಕೊಂಡು, ತಲೆಯ ಮೇಲೆ ಕಿರೀಟವನ್ನು ಇಟ್ಟು ಕೊಂಡು, ಮುಖಕ್ಕೆ ಬಣ್ಣ ಬಳಿದು, ಕಚ್ಚೆ ಹಾಕಿ ಈ ಹಬ್ಬದ ದಿನಗಳಲ್ಲಿ ಮಾರ್ಗಗಳಲ್ಲಿ ತಿರುಗುತ್ತಾ ಇರುತ್ತಾನೆ.

ಕನ್ನಡಿಗರ ಹಬ್ಬಗಳಾದ ಆಯುಧ ಪೂಜೆ, ವಿಜಯದಶಮೀ, ನವರಾತ್ರಿಯಲ್ಲಿ ನಾವು ಆಚರಿಸುವ, ನವಾನ್ನ ಭೋಜನವನ್ನು, ಶಾಲೆಗಳಲ್ಲಿ ಸರಸ್ವತೀ ಪೂಜೆಗಳನ್ನು ಇತ್ತೀಚೆಗೆ ಕಡೆಗಣಿಸ ಬೇಕಾಗಿ ಬಂದಿದೆ.

ಹೆಸರೇ ಸೂಚಿಸುವಂತೆ, 'ದೀಪಾವಳೀ' ಎಂಬ ದೀಪಗಳ ಹಬ್ಬವನ್ನು, ತಳಸೀ ಕಟ್ಟೆಯಲ್ಲಿ, ಮನೆ ಸುತ್ತಲೂ ದೀಪಗಳನ್ನು ಬೆಳಗಿಸಿ, ವಿಜೃಂಭಣೆಯಿಂದ ಆಚರಿಸುವುದು ಕಡಿಮೆಯಾಗಿದೆ. ಈ ದಿಗಳಲ್ಲಿ, ಬಲೀಂದ್ರ ಪೂಜೆ, ಗೋಪೂಜೆ, ಅಂಗಡಿ ಪೂಜೆ ಮೊದಲಾದ ದೈವಿಕ ಕಾರ್ಯಗಳು ನಮ್ಮ ನಾಡಿನಲ್ಲಿ ತಲೆ ತಲಾಂತರಗಳಿಂದ ನಡೆದು ಬರುತ್ತಿದೆ, ಬಂದಿದ್ದವು.  

ಇತ್ತೀಚೆಗೆ, ಕಳ್ಳ - ಕಟುಕರ ಹಾವಳಿಯಿಂದ, ಗೋವುಗಳನ್ನು ಕಾಣುವುದೇ ವಿರಳವಾಗಿದೆ. ಮಾಂಸಕ್ಕಾಗಿ ಗೋವುಗಳನ್ನು ಅಪಹರಿಸಿ ಮಾರಾಟ ಮಾಡುವ ದಂಧೆ ಎಲ್ಲೆಲ್ಲೂ ಹಬ್ಬಿರುವುದೇ ಇದಕ್ಕೆ ಕಾರಣ. 

ಸಾಲದೆಂಬಂತೆ, ನಮ್ಮ ಸಂಸ್ಕೃತಿಯ ಬೇರುಗಳನ್ನೇ ನಾಶ ಪಡಿಸುವ ಉದ್ದೇಶದಿಂದ, ನಮ್ಮ ಊರಿನ ಎಲ್ಲಾ ಸ್ಥಳಗಳಲ್ಲೂ, ಮುಖ್ಯವಾಗಿ, ನಮ್ಮ ಅತ್ಯಂತ ಜನಪ್ರಿಯ ಸಂಸ್ಥೆಗಳ ಸೂಚನಾ ಫಲಕಗಳನ್ನು, ಕನ್ನಡವನ್ನು ದೂರ ಮಾಡಿ, ಮಲೆಯಾಳದಲ್ಲಿ ಅವರದೆ ಹೆಸರುಗಳನ್ನು ಸೃಷ್ಟಿ ಮಾಡಿ ಹಾಕಿ ಕೊಂಡಿರುತ್ತಾರೆ.

ಉದಾಹರಣೆಗಾಗಿ ಹೇಳುವುದಾದರೆ, ಕಾಸರಗೋಡಿನ ನಗರದ ಮಧ್ಯದಲ್ಲಿರುವ ಬಸ್ಸು ನಿಲ್ದಾಣದ ಶಿಖರದಲ್ಲಿ, "ತುಳುನಾಡು ಕಾಂಪ್ಲೆಕ್ಸ್" ಎಂದು ಮಲೆಯಾಳದಲ್ಲಿ ಬರೆದು ಆನಂದಿಸುತ್ತಿದ್ದಾರೆ. 

ನಮ್ಮ ಕರ್ಣಾಟಕ ಸಮಿತಿಯ ಅಧ್ಯಕ್ಷರು ಮತ್ತು ಇತರ ಕಾರ್ಯಕರ್ತರು ಎಲ್ಲರೂ ತುಳುವರೇ ಆಗಿದ್ದರೂ, ಇವರಂದು ಕೊಂಡಂತೆ‌ ಮಲೆಯಾಳವನ್ನು ಅವರಿಗೆ ಓದಲು ಬರುವುದೇ ಇಲ್ಲ. ಇನ್ನೊಂದು ಮುಖ್ಯ ವಿಚಾರ ಏನೆಂದರೆ, ತುಳು ಮಾತನಾಡುವವರು ತಮ್ಮೊಳಗೆ ಮಾತ್ರ ತುಳುವಿನಲ್ಲಿ ಮಾತನಾಡಿ ಕೊಳ್ಳುತ್ತಾರೆ. ಉಳಿದಂತೆ, ಅವರೆಲ್ಲರು ವ್ಯವಹರಿಸುವುದು ಅಚ್ಚ ಕನ್ನಡದಲ್ಲಿ. "ತುಳು ಭಾಷೆಗೆ ಅದರದ್ದೇ ಆದ ಲಿಪಿ ವ್ಯವಹಾರದಲ್ಲಿಲ್ಲ" ಎಂದು ನಮ್ಮ ಕೇರಳ ಬಂಧುಗಳಿಗೆ ಇನ್ನೂ ತಲೆಗೇ ಹೋದಂತಿಲ್ಲ.

ಕನ್ನಡಿಗರ ಒಗ್ಗಟ್ಟನ್ನು ಒಡೆಯುವ ಒಂದೇ ದುರುದ್ದೇಶದಿಂದ, ಒಂದು "ತುಳುವ ಸಂಘ" ವನ್ನು ಪ್ರಾರಂಭಿಸಿ, ವರ್ಷ ಒಂದು ಕಳೆಯಿತು. ಅದಕ್ಕೆ ನೇಮಕವಾದ ಅಧ್ಯಕ್ಷರು, ಒಂದೇ ವರ್ಷದಲ್ಲಿ ರಾಜೀನಾಮೆ ಸಲ್ಲಿಸಿದ್ದರು. ಯಾಕೆಂದರೆ, ಕೇರಳ ಸರಕಾರದವರು ಅದರ ಚಟುವಟಿಕೆಗಾಗಿ ಒಂದು ಹಿಡಿ ಕಾಸನ್ನೂ ಕೂಡಾ ಕೊಟ್ಟಿರಲಿಲ್ಲ. ಇವರು ಕನ್ನಡ ಮತ್ತು ಮಲೆಯಾಳ ಪತ್ರಿಕೆಗಳಲ್ಲಿ, ದೊಡ್ಡ ಹಣೆ ಬರಹದಲ್ಲಿ ಹೇಳಿಕೆ ಕೊಟ್ಟದ್ದು ಮಾತ್ರ ಎಂದು ಕನ್ನಡಿಗರಿಗೆ ಎಲ್ಲರಿಗೂ ತಿಳಿಯಿತು. 

ನಮ್ಮ ಕಾಸರಗೋಡಿನ ಬೇರೆ ಬೇರೆ ಸ್ಥಳಗಳ ಹೆಸರುಗಳನ್ನು ಮಲೆಯಾಳಕ್ಕೆ ಸಮೀಪಿಸುವಂತೆ ತಿದ್ದಿಕೊಂಡು, ಎಲ್ಲಾ ರಾಜ ಮಾರ್ಗಗಳು ಒಳನಾಡಿನ ಮಾರ್ಗಗಳಲ್ಲಿ, ಸೂಚನಾ ಫಲಕಗಳಲ್ಲಿ ಅವರದೇ ಹೆಸರುಗಳನ್ನು ಹಾಕುತ್ತಾ ಇದ್ದಾರೆ. ಕನ್ನಡಿಗರ ಪ್ರತಿಭಟನೆಯ ನಡುವೆಯೂ ಇದು ಮುಂದುವರಿಯುತ್ತಾ ಇದೆ.

ಉದಾಹರಣೆಗೆ ಹೇಳುವುದಾದರೆ, ಕಾಸರಗೋಡಿನ 'ಪಿಲಿಕುಂಜೆ' ಯನ್ನು 'ಪಿಲಿಕುನ್ನು' ಎಂದೂ, 'ನೆಲ್ಲಿಕುಂಜೆ' ಯನ್ನು 'ನೆಲ್ಲಿಕುನ್ನು' ಎಂದೂ, ಮಧೂರಿಗೆ ಸಮೀಪದ 'ಕೊರತಿ ಗುಳಿ' ಯನ್ನು 'ಕೊರತ್ತಿ ಕುಂಡು' ಎಂದೂ ಕನ್ನಡ ಅಕ್ಷರಗಳಲ್ಲಿ ಬರೆದಿದ್ದಾರೆ.

'ಎಡನೀರು ಮಠ' ಕ್ಕೆ ಹೋಗುವ ಮಾರ್ಗವನ್ನು 'ಎಡನೀರು ಮಡಂ' ಎಂದೂ, ಸುಪ್ರಸಿದ್ಧವಾದ 'ಬೇಕಲ ಕೋಟೆ' ಗೆ ಹೋಗುವ ಮಾರ್ಗವನ್ನು ' ಬಾಕಲ ಕೋಟ' ಎಂದೂ ಮಲೆಯಾಳದಲ್ಲೇ ಬರೆಯಲಾಗಿದೆ.

ಚಾರಿತ್ರಿಕವಾದ, ಕೋಟೆಯ ಮುಂಭಾಗದಲ್ಲೇ, 'ಆಂಜನೇಯ ಗುಡಿ' ಬರೆಯಲಾಗಿದೆ.

ಇನ್ನು ಉಳಿದ ಎಷ್ಟೋ ಸ್ಥಳಗಳ ಹೆಸರುಗಳನ್ನು ಮತ್ತು ಮನುಷ್ಯರ ಹೆಸರುಗಳನ್ನು ಖುಶಿ ಕಂಡಂತೆ ಬರೆಯಲಾಗಿದೆ. 

ಉದಾಹರಣೆಯಾಗಿ, "ಲಲಿತಾ ಕೇಶವ ಕೃಷ್ಣ" ಎಂಬ ಹೆಸರನ್ನು SIMPLE HAIR KRISHNA ಎಂದು ಭಾಷಾಂತರಿಸಲಾಗಿದೆ. 

ಸರಕಾರಿ ಕಚೇರಿಗಳನ್ನು ಹೇಳುವಾಗ, ಕಾಸರಗೋಡು ನಗರ ಸಭೆಯ ಆಫೀಸ್ ಒಂದರಲ್ಲಿ ಮಾತ್ರ 'ಕನ್ನಡಿಗರ ಪ್ರತಿಭಟನೆ' ಗೆ ತಲೆಬಾಗಿ ಮಲೆಯಾಳದೊಂದಿಗೆ ಕನ್ನಡವನ್ನು ಬಳಸಿಕೊಳ್ಳಲಾಗಿದೆ. ಉಳಿದ ಎಲ್ಲಾ ಸರಕಾರಿ ಆಫೀಸುಗಳಲ್ಲಿ, ರಿಜಿಸ್ತ್ರಿ ಆಫೀಸ್ ಇರಲಿ, ತಾಲೂಕು ಆಫೀಸ್ ಇರಲಿ, ಗ್ರಾಮ ಕಚೇರಿಗಳೇ ಇರಲಿ,  ಕನ್ನಡಿಗರೇ ಅಧಿಕಾರಿಗಳಿರುವ ಎಷ್ಟೋ ಪಂಚಾಯತುಗಳಲ್ಲಿ ತೆಂಕಣ ಕೇರಳದಿಂದ ಬಂದ ಮಲೆಯಾಳೀ ನೌಕರರು ಕನ್ನಡದಲ್ಲಿ ಏನೂ ತಿಳಿದು ಕೊಳ್ಳಲಾರರು. ಆಫೀಸುಗಳ ಹೊರಗಡೆ, ಕನ್ನಡಿಗರ ಸಹಾಯಕ್ಕಾಗಿ ಒಬ್ಬ ಮಲೆಯಾಳಿ ಕುಳಿತಿರುತ್ತಾನೆ. ಕನ್ನಡಿಗರನ್ನು, ಆಫೀಸಿನಿಂದ ಅವನಲ್ಲಿಗೆ ಬೊಟ್ಟು ಮಾಡಿ, 'ಅಪೇಕ್ಷೆ' ಎಂಬ ಶಬ್ದವನ್ನು ಅವನಿಗೆ ತಿಳಿಸುವಂತೆ ಸಂಜ್ಞೆ ಮಾಡುತ್ತಾರೆ. ಅವನಲ್ಲಿಗೆ ಹೋದಾಗ ಅವನು ಮಲೆಯಾಳದಲ್ಲಿ ವಿಚಾರಿಸಿ, 'ಅಪೇಕ್ಷೆ' ಯನ್ನು ನಮಗೆ ಕೊಡುತ್ತಾನೆ. ಅದರ ಫೀಸನ್ನು ತನ್ನ ಜೋಳಿಗೆಯಲ್ಲಿ ತುಂಬಿಸಿ ಕೊಳ್ಳುತ್ತಾನೆ. ಇದು ಕೇರಳ ಸರಕಾರವು ಕನ್ನಡಿಗರ ಮೆಲೆ ಹೊರಿಸಿದ 'ಜಿಝಿಯಾ' ತೆರಿಗೆಯಲ್ಲವೇ?

ರೈಲ್ವೇ ಸ್ಟೇಷನ್‌ಗಳ ಹೆಸರುಗಳನ್ನು ' ಕಾಸರ'ಕೋ?'ಡಿ' ನಿಂದ ಹಿಡಿದು 'ಮಂಜೇಶ್ವರಂ' ವರೆಗೆ ಮಲೆಯಾಳದಲ್ಲೇ ಅವರಿಗೆ ಖುಶಿ ಕಂಡಂತೆ ಫಲಕಗಳಲ್ಲಿ ಬರೆದಿರುತ್ತಾರೆ. 

ಅದೇ ರೀತಿಯಲ್ಲಿ ಮಾರ್ಗಗಳಲ್ಲಿ ಓಡುವ ಬಸ್ಸುಗಳಲ್ಲಿ ಸೂಚನಾ ಫಲಕಗಳನ್ನು ಮಲೆಯಾಳದಲ್ಲೇ ಬರೆದಿರುತ್ತಾರೆ. ಕರ್ನಾಟಕಕ್ಕೆ ಹೋಗುವ ಕೆಲವೇ ಬಸ್ಸುಗಳಲ್ಲಿ, ಕನ್ನಡದಲ್ಲಿಯೂ ಬರೆಯ ಬೇಕಾಗಿ ಬರುತ್ತದೆ. ಪ್ರೈವೇಟ್ ಬಸ್ಸುಗಳಲ್ಲಿಯೂ ಕೂಡಾ ಇದೇ ಪರಿಸ್ಥಿತಿ ಕನ್ನಡಿಗರು ಎದುರಿಸ ಬೇಕಾಗಿ ಬರುತ್ತದೆ.

ಈ ದುರವಸ್ಥೆಯನ್ನು, ಮಲೆಯಾಳೀಕರಣದ ಕೆಡುಕನ್ನು ಸಹಿಸಲಾರದೆ ಸಾವಿರಾರು ಕನ್ನಡಿಗರು, ನೆರೆಯ ಕರ್ಣಾಟಕದ ಮಂಗಳೂರು, ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ ಮುಂತಾದ ಸ್ಥಳಗಳಿಗೆ ವಲಸೆ ಹೋಗಿರುತ್ತಾರೆ. ಈ ಪ್ರಕ್ರಿಯೆ ಹೀಗೆಯೇ ಮುಂದುವರಿಯುತ್ತಾ ಇದೆ.

ಮೇಲೆ ಹೇಳಿದ ವಿಷಯಗಳಲ್ಲದೆ, ಹಲವಾರು ಕನ್ನಡಿಗರು ಕೇರಳ ಸರಕಾರದ ಉದ್ಯೋಗದಲ್ಲಿದ್ದು 'ಅವುಗಳನ್ನೆಲ್ಲ' ಬಲವಂತವಾಗಿ 'ಅನುಭವಿಸ' ಬೇಕಾಗಿ ಬರುತ್ತದೆ. 

ಈ ಲೇಖನದಲ್ಲಿ ಹೇಳಿದ ಅನುಭವಗಳು, "TIP OF AN ICE BERG" ಅಂದರೆ, ಮಹಾ ಸಾಗರದಲ್ಲಿ ತೇಲುತ್ತಿರುವ ಬಹು ದೊಡ್ಡ ಹಿಮ ಪರ್ವತದ ತುತ್ತ ತುದಿ ಮಾತ್ರ. ಇದಕ್ಕಿಂತ ಎಷ್ಟೋ ಹೆಚ್ಚು ಈ ಕೇರಳೀಕರಣದ ಕಹಿ ಅನುಭವಗಳನ್ನು "ಸವಿದ"ವರು ಸಾವಿರಾರು ಮಂದಿ ಇರಬಹುದು, ಇದ್ದಿದ್ದಾರೆ.

~~~~~~

ಲೇಖಕರು - ಡಾ | ಕುಳಮರ್ವ ಗಣಪತಿ ಭಟ್ಟ, ವಿಶ್ರಾಂತ ದಂತ ವೈದ್ಯರು, 

ಸಹಾಯಕರು --  ಕೇಶವಕೃಷ್ಣ ಕುಳಮರ್ವ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿhit counter

0 Comments

Post a Comment

Post a Comment (0)

Previous Post Next Post