ಆಳ್ವಾಸ್ ವಿದ್ಯಾರ್ಥಿಗಳಿಂದ 'ಅಂಗಾಂಗ ದಾನ' ಜಾಗೃತಿ; 127 ಜನರಿಂದ ಅಂಗಾಂಗ ದಾನಕ್ಕೆ ಸಹಿ

Upayuktha
0

ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಕ್ತ ಆಯ್ಕೆಯ ವಿದ್ಯಾರ್ಥಿಗಳಿಂದ ಗುರುವಾರ ಅಂಗಾಂಗ ದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ವಿದ್ಯಾಗಿರಿಯ ಸುಂದರಿ ಆಳ್ವ ಕ್ಯಾಂಪಸ್‌ನ ಕುವೆಂಪು ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಪಿಆರ್ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ವಿಷಯವನ್ನು ಪ್ರಾಯೋಗಿಕವಾಗಿ ಕಲಿಸುವ ಹಿನ್ನಲೆಯಲ್ಲಿ ಈ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಲಾಲ್ ಗೋಯಲ್ ಮಾತನಾಡಿ, ಮಂದಿರ ಮಸೀದಿಗಳಲ್ಲಿ ನೀಡುವ ದಾನವು ಇನ್ನೊಂದು ಜೀವವನ್ನು ಉಳಿಸಲಾರದು. ಜನರಲ್ಲಿ ಅಂಗಾಂಗ ದಾನದ ಕುರಿತು ಬಹಳಷ್ಟು ಧಾರ್ಮಿಕವಾದ ಮೂಢನಂಬಿಕೆಗಳಿವೆ. ದೇಶದಲ್ಲಿ ತಮ್ಮದೇ ಕುಟುಂಬಿಕರಿಗೆ ಅಂಗಾಂಗಗಳನ್ನು ದಾನ ಮಾಡಲು ಜನರು ಹಿಂಜರಿಯುವುದು ಶೋಚನೀಯ. ಭಾರತದಲ್ಲಿ 0.05 ಮಿಲಿಯನ್ ಜನರು ಅಂಗಾಂಗ ವೈಫಲ್ಯಗಳಿಂದ ಸಾವನಪ್ಪುತ್ತಿದ್ದರೂ ದಾನಿಗಳ ಸಂಖ್ಯೆ ಕೇವಲ 0.1 ಪ್ರತಿಶತದಷ್ಟಿದೆ. ದಾನಿಗಳ ಅಂಗಾಂಗಳನ್ನು ಸಂಗ್ರಹಿಸಿಡುವ ಅತ್ಯಾಧುನಿಕ ವ್ಯವಸ್ಥೆಯ ಕೊರತೆಯೂ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿದೆ ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಕಾಲಕ್ಕೆ ಅನುಗುಣವಾದ ಶಿಕ್ಷಣ ಹಾಗೂ ಸಾಮಾಜಿಕ ಕಳಕಳಿಯ ಮನೋಧರ್ಮವನ್ನು ಬೆಳೆಸುವಲ್ಲಿ ಆಳ್ವಾಸ್ ಸದಾ ಮುಂಚೂಣಿಯಲ್ಲಿರುತ್ತದೆ. ಅಂಗಾಂಗ ದಾನದ ಅರಿವು ಪ್ರತಿಯೊಬ್ಬರಿಗೂ ಇರಬೇಕಾದ್ದು ಪ್ರಸ್ತುತ ಕಾಲಕ್ಕೆ ಅತೀ ಅಗತ್ಯ. ವಿಜ್ಞಾನ - ತಂತ್ರಜ್ಞಾನಗಳಲ್ಲಿ ಗಣನೀಯವಾಗಿ ಬೆಳೆಯುತ್ತಿರುವ ದೇಶಗಳು ಅಂಗಾಂಗ ದಾನದ ಕೊರತೆ ನೀಗಿಸುವಲ್ಲಿ ಹಿನ್ನಡೆಯಲ್ಲಿದೆ. ದಾನ ಮಾಡುವವನಿಗೆ ಬದ್ಧತೆ ಇದ್ದರೂ ಆತನ ಕುಟುಂಬದ ಸಹಕಾರವನ್ನು ಪರಿಗಣಿಸಬೇಕಿದೆ. ಸರಿಯಾದ ಜಾಗೃತಿ ಮತ್ತು ಅಂಗಾಂಗ ಸಂಗ್ರಹಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಇನ್ನೊಂದು ಜೀವದ ಉಳಿವಿಗೆ ಶ್ರಮಿಸಬೇಕು ಎಂದರು.


ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಂಗಾಂಗ ದಾನ ಮಾಡುವ ಸಂಕಲ್ಪ ಮಾಡಿದರು. ವಿವಿಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೊಟೊ ಕರ್ನಾಟಕ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಪದ್ಮರವರು ವಿದ್ಯಾರ್ಥಿಗಳಿಗೆ ಅಂಗಾಂಗ ದಾನ ಸಂಕಲ್ಪದ ಮಾಹಿತಿಯನ್ನು ನೀಡಿದರು. ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸೇರಿದಂತೆ 127 ಮಂದಿ ದಾನದ ಸಂಕಲ್ಪವನ್ನು ಸ್ವೀಕರಿಸಿದರು.


ವಿಭಾಗದ ವತಿಯಿಂದ ನಡೆಸಲಾಗಿದ್ದ, 'ಸೇವ್ ಲೈಫ್' ವಿಷಯ ಆಧರಿಸಿದ ಛಾಯಾಗ್ರಹಣ, ಡಿಜಿಟಲ್ ಪೋಸ್ಟರ್, ಚಿತ್ರಕಲೆ ಸ್ಪರ್ಧೆಗಳ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿಜೇತರಿಗೆ ಕ್ರಮವಾಗಿ ರೂ.1000 ಮತ್ತು ರೂ.750 ನಗದು ಬಹುಮಾನ ವಿತರಿಸಲಾಯಿತು.


ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮತ್ತು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ , ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಸೌಮ್ಯ ಸ್ವಾಗತಿಸಿ, ಜೆನಿಫರ್ ವಂದಿಸಿ, ಸಮನ್ ಅತಿಥಿಗಳನ್ನು ಪರಿಚಯಿಸಿ, ವಿನುತಾ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top