ಕವನ-ಕಥನ: ದಶರಥನ ಕೊನೆಯ ನೆನಪು

Upayuktha
0


ಯಾಕಾಗಿ ನೆನಪುಗಳು ಕಾಡುತಿವೆ ನನಗಿಂದು  

ಆ ಕಾಲದಲಿ ನಡೆದ ಅಹಿತಕರ ಘಟನೆಗಳ 

ಶೋಕಾಗ್ನಿ ದಹಿಸುತಿದೆ ಮನಸನೂ ಕಾಯವನು 

ಇಂದಿಗೂ ಸತತವಾಗಿ. 

ಆಕಾಶವೇ ಬಿರಿದು ಮಳೆ ಬರುವ ಆ ರಾತ್ರಿ  

ಏಕಾಂಗಿಯಾಗಿಯೇ ಬೇಟೆಯಾಡಲು ಹೊರಟು 

ಮಂಕು ಕವಿದವನಂತೆ ದುಡುಕಿಬಿಟ್ಟೆನೊ ಎಂಬ 

ಅಪರಾಧ ಅನವರತವು. 


ಯೌವನದ ಕಸುವಿನಲಿ ಕಲಿತ ಬಿಲ್ವಿದ್ಯೆಯಲಿ 

ಗರ್ವವನು ತಾಳುತ್ತ ಸಾಟಿ ಎನಗಿಲ್ಲೆನುತ

ಯಾವ ಅತಿಶಯವಿರುವ ಶಬ್ದವೇದಿಯ ಕಲಿತು 

ಬಿಂಕದಲಿ ನಡೆಯುತಿದ್ದೆ. 

ಕವಿದ ಕತ್ತಲೆಯಲ್ಲಿ ಸರಯು ನದಿ ತೀರದಲಿ 

ಅವಿತು ಹುಡುಕುತಲಿದ್ದೆ ಬೇಟೆಗಾಗಿಯೆ ನಾನು 

ಕಿವಿಗೆ ಕೇಳಿಸಿದಂಥ ಶಬ್ದಕ್ಕೆ ಗುರಿ ಇಟ್ಟು 

ಬಿಟ್ಟಿಹೆನು ಬಾಣವೊಂದ. 


ಗುರಿ ನಾಟಿದೊಡನೆಯೇ ಆರ್ತ ನಾದವು ಬರಲು

ಸರಸರನೆ ಓಡೋಡಿ ಹೋಗಿ ನೋಡಲು ಅಲ್ಲಿ 

ಥರಥರನೆ ನಡುಗುತ್ತ ಬಿದ್ದಿಹನು ಋಷಿ ಕುವರ 

ಸರಯು ನದಿ ತೀರದಲ್ಲಿ.

ಅರೆಜೀವವಾಗಿರುವ ಋಷಿ ಪುತ್ರನನು ನೋಡಿ

ಗರಬಡಿದ ತೆರದಲ್ಲಿ ನಾ ಮೂಕನಂತಾದೆ 

ಸರಿ ತಪ್ಪು ತಿಳಿಯದೇ ಯುವಕನೆದುರಿಗೆ ನಿಂತೆ

ಅಪರಾಧಿ ಭಾವದಿಂದ. 


ತಲೆಯ ಮೇಲಿನ ಜಟೆಯು ಬಿಚ್ಚಿಯೇ ಹೋಗಿತ್ತು

ಜಲವ ತುಂಬಿದ ಕೊಡವು ದೂರದಲಿ ಬಿದ್ದಿತ್ತು

ಜಲಧಾರೆಯಂತೆಯೇ ರಕ್ತ ಹೊರ ಚಿಮ್ಮಿತ್ತು 

ಋಷಿಯ ಮರ್ಮಸ್ಥಳದಲಿ.

ವಿಲವಿಲನೆ ಒದ್ದಾಡಿ ಹೊರಳಾಡುತಿದ್ದರೂ 

ಬಲವಾದ ಕೋಪಾಗ್ನಿ ಹೊರ ಬರುವ ಕಣ್ಗಳಿಗೆ 

ಬಲಿಯಾಗಿ ಹೋಗುವೆನೊ ಎಂದೆನಿಸಿದಾಗಲೇ 

ತನ್ನಳಲ ಋಷಿ ಹೇಳಿದ. 


ನಾನೇನು ಅಪರಾಧ ಮಾಡಿದೆನೊ ತಿಳಿದಿಲ್ಲ 

ಈ ನೋವು ನನ್ನನ್ನು ಘಾಸಿಗೊಳಿಸಿದೆಯಲ್ಲ.

ನೀನಿತ್ತ ಈ ಬಾಣ ಮೂರು ಜೀವಗಳನ್ನು 

ಬಲಿ ಪಡೆದು ವಿರಮಿಸುವುದು. 

ನನ್ನನ್ನೆ ನಂಬಿರುವ ಹೆತ್ತವರ ಪಾಡೇನು 

ಕಣ್ಣನ್ನೆ ಕಳಕೊಂಡ ಅವರಿಗಾಸರೆ ಏನು 

ಚೆನ್ನಾಗಿ ಅಡವಿಯಲಿ ಬದುಕುತಿದ್ದೆವು ನಾವು 

ಯಾರಿಗೂ ಹೊರೆಯಾಗದೆ. 


ಕಂದ ಮೂಲವ ತಿಂದು ಸಾಧನೆಯ ಮಾಡುತ್ತ 

ತಂದೆ ತಾಯಿಯ ಸೇವೆ ಕರ್ತವ್ಯವೆಂದರಿತು 

ಮುಂದೆ ಮೋಕ್ಷದ ದಾರಿ ಇದುವೆ ಎಂದರಿಯುತ್ತ 

ಸಾರ್ಥಕ್ಯ ಭಾವದಲ್ಲಿ. 

ಒಂದು ಕ್ಷಣದಿ ನೀನು ಸಾತ್ವಿಕರ ಬದುಕನ್ನು

ಚಿಂದಿಯಾಗಿಸಿ ಬಿಟ್ಟೆ ಇದು ಯಾವ ಧರ್ಮವೋ 

ಎಂದೆಂದು ಪರಪೀಡೆ ಮಾಡದಿದ್ದರು ನಮಗೆ 

ವಿಧಿಯಾಟ ಅರಿಯದಾಯ್ತು. 


ಮರಣ ಸನಿಹದಲಿರುವೆ ಹೇ ಮಹಾ ರಾಜನೇ

ಹೊರಟಿರುವೆ ನಾನೀಗ ಯಮನ ಆ ಅರಮನೆಗೆ 

ನರ ನಾಡಿ ಎಲ್ಲವೂ ಸೆಳೆತಕ್ಕೆ ಒಳಗಾಗಿ 

ಬದುಕನ್ನೆ ಕಸಿಯುತ್ತಿವೆ.

ಶರವನ್ನು ಸೆಳೆದುಬಿಡು ಸಹಿಸಲಾರೆನು ನೋವ 

ಧರೆಯ ಮೇಲಿನ ಬದುಕು ಮುಗಿಯುತ್ತ ಬಂದಿಹುದು 

ನೀ ಹೊರಡು ಆಶ್ರಮಕ್ಕೆ.


ಸನಿಹದಲಿ ಇರುವುದೇ ಕುರುಡು ವೃದ್ಧರ ಧಾಮ

ತನುವ ದಾಹವ ಕಳೆಯೆ ನೀರು ತರುವವನಿದ್ದೆ 

ಮನದಲ್ಲಿ ಕಾಡುತಿದೆ ಹೆತ್ತವರ ವೇದನೆಯು 

ಅವರಿಗಿನ್ಯಾರಾಸರೆ.

ಎನಿತು ತಡ ಮಾಡದೆಯೆ ನೀರನ್ನು ಕೊಂಡೊಯ್ಯು 

ನನಗಿಂದು ಬಂದಂಥ ಮರಣವನು ತಿಳಿಹೇಳು

ಮುನಿ ಶಾಪ ತಟ್ಟುವಲಿ ಶರಣಾಗು ಪಾದಕ್ಕೆ 

ಎಂದು ಋಷಿ ಅಸುನೀಗಿದ.   


ಅತ್ತ ಕಾಯುತ್ತಿದ್ದ ಅಂಧ ದಂಪತಿಗಳೋ

ಎತ್ತ ಹೋದನು ಸುತನು ಎಂದು ಕಳವಳಗೊಂಡು 

ಚಿತ್ತಚಾಂಚಲ್ಯದಲಿ ಬಾಯಾರಿ ಕುಳಿತಿರಲು ನೀರು ಕುಡಿಸಲು ಹೋದೆನು.

ಸತ್ಯ ಘಟನೆಯ ಕೇಳಿ ಕುಸಿಯುತಿರೆ ದಂಪತಿಯು

ಮತ್ತೆ ನಾ ಭಯಗೊಂಡೆ ಶಪಿಸಿಬಿಡುವರೆನ್ನುತ

ಸತ್ತು ಹೋಗಿಹ ಸುತನ ನೆನೆನೆನೆದು ಗೋಳಿಡುವ ಪರಿ ಘೋರವಾಗಿದ್ದಿತು.


ಕಾಟವನು ಕೊಡುವಂಥ ಯಾವುದೇ ಜೀವಿಯನು

ಬೇಟೆಯಾಡಿದರದುವೆ ಚಕ್ರವರ್ತಿಯ ಧರ್ಮ 

ತೀಟೆ ತೀರಿಸಲೆಂದೆ ಜೀವಿಗಳ ವಧಿಸಿದರೆ 

ಅದರ ಫಲ ಉಣಲೆಬೇಕು. 

ಒಟ್ಟಿಗಿರಬೇಕಾದ ಮಗನಿಂದ ಬೇರ್ಪಡಿಸಿ 

ಕೆಟ್ಟ ಮರಣವು ನಮಗೆ ಬರುವಂತೆ ಮಾಡಿರುವೆ 

ದುಷ್ಟನೇ ನಿನ್ನ ಕೊನೆಗಾಲವೂ ಇಂತಿರಲಿ 

ಎಂದು ಋಷಿ ಶಪಿಸಿದ್ದನು.  

 

ಮತಿ ಮರೆತ ಆ ಘಟನೆ ಋಷಿ ಶಾಪದಿಂದಾಗಿ 

ಅತಿ ಸನಿಹದಲ್ಲಿಯೇ ಬಾಯ್ದೆರೆದು ನಿಂದಿಹುದು 

ಸತಿಗಂದು ಕೊಟ್ಟಿರುವ ವರ ಶಾಪವಾಗಿಹುದು 

ಅವಸಾನ ಸೂಚನೆ ಇದು. 

ಸುತರು ಎಲ್ಲರು ಕೂಡ ರಾಜ್ಯವನು ತೊರೆದಿಹರು 

ಇತಿ ಮಿತಿಯ ಅರಿತಿಹೆನು ಈ ಬದುಕು ಸಾಕಾಗಿ 

ಗತಿಸಿ ಹೋಗುವ ಮುನ್ನ ರಾಮನನೆ ನೆನೆಯುತ್ತ ಕಾಯವನು ಬಿಡಬೇಕಿದೆ. 

************

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter
Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top