ಶಿವೋಪಾಸನೆಗೆ ಶುಭ ರಾತ್ರಿಯೇ ಶಿವರಾತ್ರಿ

Upayuktha
0

ಶಿವ ಎಂದರೆ ಶುಭವನ್ನು ಕೊಡುವವನು. ಎಲ್ಲರ ಅಂತರಂಗದ ಉಪಾಸನೆಗೆ ಹಾಗೂ ಅಂತರಂಗದ ಸೌಂದರ್ಯಕ್ಕೆ  ಒಲಿಯುವವನು ಆಗಿದ್ದಾನೆ. ಶಿವ ಎಲ್ಲರ ಇಷ್ಟದ ದೇವ. ಈತನೇ ಮಹಾದೇವ. ಅಲ್ಪವನ್ನು ಕಲ್ಪವೆಂದು ಸ್ವೀಕರಿಸುವ ಶಿವನು ಸ್ವಯಂ ಮಹೇಶ. ಪರ್ವತ ರಾಜನ ಅಳಿಯ, ಕೊರಳ ಗೆಳೆಯ ಧನೇಶನಾದಂತಹ ಕುಬೇರ, ಮಗ ವಿಘ್ನನಿವಾರಕ ಗಣೇಶ, ಭಕ್ತಿಯಿಂದ ಬೇಡಿ ಬಂದವರಿಗೆ ಕೇಳಿದ್ದನ್ನು ಕೊಡುವ, ಅಖಂಡ ಐಶ್ವರ್ಯವಿದ್ದರೂ ಸ್ಮಶಾನವಾಸಿ, ಗಜಚರ್ಮಧರ, ಪತ್ನಿಗೆ ಅರ್ಧ ದೇಹ ನೀಡಿ ಅರ್ಧನಾರೀಶ್ವರನಾದವನು, ಯತಿಗಳನ್ನು ಮೀರಿದ ಪರಮಯತಿ, ಲಿಂಗರೂಪಿಯಾಗಿರುವವನು, ಈತನೇ ಪರಮಶಿವ.


ಶಿವನ ಪೂಜೆಗೆ ಜಾತಿ, ಮತ, ಕುಲ ಗೋತ್ರ, ಪುರುಷ, ಸ್ತ್ರೀ ಎಂಬ ಯಾವುದೇ ಭೇದವಿಲ್ಲ. ಯಾವುದೇ ಐಶ್ವರ್ಯ ಅಂತಸ್ತು ಆಡಂಬರವೂ ಬೇಕಿಲ್ಲ. ನೀರು, ತುಂಬೆ ಹೂವು, ಎಕ್ಕದ ಹೂವು, ಬಿಲ್ವಪತ್ರೆ ಇವುಗಳೊಂದಿಗೆ ಸುಮನಸ್ಸಿನ ಭಕ್ತಿ ಶ್ರದ್ಧೆ ಇದ್ದರೆ ಸಾಕು. ಇದರಿಂದ ಶೀಘ್ರವಾಗಿ ಒಲಿಯುವವನು ಮಹಾದೇವ ಶಿವ.ಮಹಾಕಾಲ, ವಿಶ್ವೇಶ್ವರ, ವೃಷಭವಾಹನ, ತ್ರಿಪುರಾಂತಕ, ಶಂಭೋಶಂಕರ, ಗಂಗಾಧರ, ಮೃತ್ಯುಂಜಯ, ದಯಾನಿಧಿ, ನೀಲಕಂಠ ಮುಂತಾದ ವಿಶೇಷಣಗಳಿಂದ ಆರಾಧಿಸಲ್ಪಡುವವನೇ ಶಿವ.  


ಶಿವನ ಆರಾಧನೆಗೆ ಬಿಲ್ವಪತ್ರೆ:

ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವೆಂದು ಹೇಳಲಾಗುತ್ತದೆ. ಶಿವನಿಗೆ ಬಿಲ್ವಪತ್ರೆ ಅರ್ಪಿಸಿ ಪೂಜಿಸಿದರೆ ಅಪಾರ ಪುಣ್ಯ ಸಿಗುತ್ತದೆಂದು ಪುರಾಣಗಳು ಸಾರುತ್ತವೆ. ಮೂರು ಎಲೆಗಳುಳ್ಳ ಬಿಲ್ವವನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಬಿಲ್ವದ ಬೇರು ತ್ರಿದೋಷಹರ, ಬಿಲ್ವದ ಫಲ ಸ್ನಿಗ್ಧ, ಸ್ರಾವಸ್ತಂಭಕ ಮತ್ತು ಅಗ್ನಿದೀಪಕವಾಗಿದೆ.


ಬಿಲ್ವವು ಮೂತ್ರರೋಗಗಳಿಗೆ, ಅಜೀರ್ಣ ಸಮಸ್ಯೆಗೆ, ಮಧುಮೇಹಕ್ಕೆ, ಯಕೃತ್ ಸಮಸ್ಯೆಗಳಿಗೆ ರಾಮಬಾಣ. ಹೀಗೆ ಬಿಲ್ವವು ಧಾರ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ಮಹತ್ವವನ್ನು ಪಡೆದಿದ್ದು ಶಿವಾರಾಧನೆಯಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದೆ.

 

ಶಿವನ ಆರಾಧನೆಗೆ ತುಂಬೆ ಹೂವು:

ತುಂಬೆ ಹೂವು ಶಿವನಿಗೆ ತುಂಬಾ ಪ್ರಿಯವಾದುದು ಎಂದು ಹೇಳಲಾಗಿದೆ. ಬಿಳಿ ಬಣ್ಣವು ಪಾವಿತ್ರ್ಯದ ಸಂಕೇತವಾಗಿದ್ದು ಈ ಹೂವುಗಳನ್ನು ಅರ್ಪಿಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ. ಸಂಸ್ಕೃತದಲ್ಲಿ ಇದನ್ನು ದ್ರೋಣಪುಷ್ಪಿ ಎಂದು ಕರೆಯುವರು. ಈ ಹೂವುಗಳು ಚಿಕ್ಕ ಗಾತ್ರದಲಿದ್ದು ತೊಟ್ಟುಗಳನ್ನು ಹೊಂದಿರುವುದಿಲ್ಲ. ಇದು ಅತ್ಯುತ್ತಮ ಔಷಧಿ ಸಸ್ಯವಾಗಿದ್ದು ಪಚನ ಶಕ್ತಿಯನ್ನು ಹೆಚ್ಚಿಸುವ ಗುಣಉಳ್ಳ ಸಸ್ಯ. ಇದನ್ನು ವಿಶೇಷವಾಗಿ ಕಾಮಾಲೆ, ತುರಿಕೆ, ಇಸುಬು ಮುಂತಾದ ರೋಗ ಉಪಶಮನಕ್ಕೆ ಬಳಸುತ್ತಾರೆ.


ಶಿವಾರಾಧನೆಗೆ ಬಿಳಿ ಎಕ್ಕದ ಹೂವು:

ಬಿಳಿ ಎಕ್ಕದ ಹೂವು ಶಿವಾರಾಧನೆಗೆ ಶ್ರೇಷ್ಟವಾದ ಹೂವು ಎಂದು ಹೇಳಲಾಗಿದೆ. ಸಂಸ್ಕೃತದಲ್ಲಿ ಇದನ್ನು ಅರ್ಕ ಎನ್ನಲಾಗುತ್ತದೆ. ಅರ್ಕ ಅಂದರೆ ಸೂರ್ಯ. ಅರ್ಕದ ತದ್ಭವವೇ ಎಕ್ಕ. ಎಕ್ಕದ ಎಲೆಗಳನ್ನು ಸೂರ್ಯ ಉಪಾಸನಾ ಪೂಜೆಯಲ್ಲಿ ಉಪಯೋಗಿಸುತ್ತಾರೆ. ಎಕ್ಕದ ಗಿಡ ಹಾಗೂ ಹೂವುಗಳು ತನುಮನಗಳಲ್ಲಿ ತೇಜಸ್ಸನ್ನು ಪ್ರಜ್ವಲಿಸುವ ಗುಣ ಹೊಂದಿವೆ. ಇದರ ಎಲ್ಲ ಅವಯವಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಅಸ್ತಮಾ, ಕಫ, ಜ್ವರ, ಆನೆಕಾಲು ರೋಗ, ತೊನ್ನುರೋಗ ಮುಂತಾದವುಗಳಿಗೆ ಉಪಯೋಗಿಸಲ್ಪಡುತ್ತಿದೆ.

 

ಶಿವಾರಾಧನೆಯಲ್ಲಿ ರುದ್ರಾಕ್ಷಿ.


ರುದ್ರನ ಅಕ್ಷವೇ ರುದ್ರಾಕ್ಷಿ. ಅಂದರೆ ಶಿವನ ಕಣ್ಣು ಎಂದು. ಪುರಾಣಗಳ ಪ್ರಕಾರ ರುದ್ರಾಕ್ಷಿಯು  ಮನುಷ್ಯರ ನಾದ ಲಹರಿಗಳನ್ನು ದೇವತೆಗಳ ಪ್ರಕಾಶ ಲಹರಿಗಳಿಗೆ ರೂಪಾಂತರಗೊಳಿಸುತ್ತದೆ. ಇದರಿಂದಾಗಿ ಮಾನವನು ದೇವತೆಗಳ ಲಹರಿಗಳನ್ನು ಗ್ರಹಿಸಬಲ್ಲನು. ರುದ್ರಾಕ್ಷಿಯು ಸ್ವತಃ ಲಹರಿಗಳನ್ನು ಗ್ರಹಣ ಮಾಡುತ್ತದೆ. ರುದ್ರಾಕ್ಷಿಗಳಲ್ಲಿ ಒಂದು ಮುಖದಿಂದ ಹಿಡಿದು ಇಪ್ಪತ್ತೊಂದು ಮುಖಗಳನ್ನು ಹೊಂದಿರುವುದು ಸಿಗುತ್ತವೆ. 

 

ಇನ್ನು ಶಿವಾರಾಧನೆಗೆ ಹಲವಾರು ವ್ರತಗಳನ್ನು ಹೇಳಲಾಗಿದೆ. ಅವುಗಳಲ್ಲಿ ಮಹಾಶಿವರಾತ್ರಿ ಉಪವಾಸ, ಪ್ರದೋಷ ವ್ರತ, ಶ್ರಾವಣ ಸೋಮವಾರ ವ್ರತ ಪ್ರಮುಖವಾದವುಗಳು. 

   

ಹೀಗೆ ಸಕಲ ಚರಾಚರ ಜಗತ್ತಿಗೆ, ಸೃಷ್ಟಿ ಸ್ಥಿತಿ ಲಯಗಳಿಗೆ ಹೇತುಭೂತನಾದ ಪರಶಿವನ ಆರಾಧನೆಯು ಈ ಭರತ ವರ್ಷದಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ. ವೇದೋಪನಿಷತ್, ಮಹಾಕಾವ್ಯಗಳಲ್ಲಿ, ಸ್ಮ್ರತಿ ಪುರಾಣಗಳಲ್ಲಿ, ಸಂಗೀತ ನಾಟ್ಯಶಿಲ್ಪಾದಿ ಕಲೆಗಳಲ್ಲಿ, ಚಿತ್ರಗಳಲ್ಲೂ ಶಿವಭಕ್ತಿ ಮೇಳೈಸುತ್ತಿವೆ. ಹೀಗೆ ಶಿವಾರಾಧನೆಯಲ್ಲಿ ತಮ್ಮನ್ನು ತಾವು ಭಕ್ತರು ತೊಡಗಿಸಿಕೊಳ್ಳುತ್ತಿದ್ದಾರೆ.  ಶಿವಾರಾಧನೆಯು ಪ್ರಪಂಚದಾದ್ಯಂತ ವಿಶೇಷವಾಗಿ ಶಿವರಾತ್ರಿಯೆಂದು ನಡೆಯುತ್ತದೆ.

 

-ಡಾ. ಪ್ರಸನ್ನಕುಮಾರ್ ಐತಾಳ್.

ಸಂಸ್ಕೃತ ಉಪನ್ಯಾಸಕರು

ಎಸ್.ಡಿ.ಎಂ ಕಾಲೇಜು, ಉಜಿರೆ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top