ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಸಂತರ ಬಗ್ಗೆ ಕೇವಲವಾಗಿ ಮಾತನಾಡಿ ಅವಹೇಳನ ಮಾಡಿದ್ದು, ತಕ್ಷಣ ಅವರು ಕ್ಷಮೆಯಾಚಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಮುಸಲ್ಮಾನರ ಓಲೈಕೆಗಾಗಿ ಹಿಂದೂ ಸಂತರ ವಿರುದ್ಧ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ತನ್ನ ಸರಕಾರದ ಅವಧಿಯಲ್ಲಿ ಸಿದ್ಧರಾಮಯ್ಯ ಅವರು ಹಿಂದುಗಳಿಗೆ ಮಾಡಿದ ಅನ್ಯಾಯವನ್ನು ಹಿಂದೂ ಸಮಾಜ ಮರೆತಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಸಲ್ಮಾನ ವಿಧ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡರೆ ತಪ್ಪೇನು, ಹಿಂದೂ ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆ ಎತ್ತಿದ ಸಿದ್ಧರಾಮಯನವರಿಗೆ ಮರೆವಿನ ಕಾಯಿಲೆಯಿದೆಯೇ? ಮುಸಲ್ಮಾನ ಮಹಿಳೆಯರಿಗೆ ಬುರ್ಖಾ ಹಾಕುವುದಕ್ಕೆ ವಿರೋಧವಲ್ಲ, ತರಗತಿಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಸಮವಸ್ತ್ರ ಪಾಲಿಸಬೇಕು ಎನ್ನುವುದು ನ್ಯಾಯಾಲಯವೂ ಹೇಳಿದೆ. ಒಬ್ಬ ಜನಪ್ರತಿನಿಧಿಯಾಗಿ ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸಿದ್ಧರಾಮಯ್ಯನವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಸಿದ್ಧರಾಮಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹಿಂದೂ ಸಮುದಾಯದ ವಿರುದ್ಧ ಕಿಡಿ ಕಾರುತ್ತಲೇ ಇದ್ದರು. ಮಠ ಮಂದಿರಗಳಿಗೆ ಸಿದ್ಧರಾಮಯ್ಯ ಹಾಗೂ ಕಾಂಗ್ರೇಸ್ ಎಸಗಿದ ಅನಾಚಾರಗಳು ತಿಳಿದಿದೆ. ಸದ್ಯ ಮತ್ತದೇ ಕಾರ್ಯಕ್ಕೆ ಕೈ ಹಾಕಿ ಸಂತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಿದ್ಧರಾಮಯ್ಯ ಕ್ಷಮೆ ಕೇಳಬೇಕು ಎಂದು ಶಾಸಕ ಕಾಮತ್ ಆಗ್ರಹಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ