|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ನುಡಿ ತೇರನೆಳೆಯಲು ಸಜ್ಜಾಯ್ತು ಹೊಸ ತಂಡ: ಕಸಾಪ ಮಂಗಳೂರು ತಾಲೂಕು ಘಟಕದ ಪದಗ್ರಹಣ

ಕನ್ನಡ ನುಡಿ ತೇರನೆಳೆಯಲು ಸಜ್ಜಾಯ್ತು ಹೊಸ ತಂಡ: ಕಸಾಪ ಮಂಗಳೂರು ತಾಲೂಕು ಘಟಕದ ಪದಗ್ರಹಣ


ಮಂಗಳೂರು: ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶುಕ್ರವಾರ ಸಂಜೆ ನೆರವೇರಿತು.


ನಗರದ ಎಸ್‌ಡಿಎಂ ಕಾನೂನು ಕಾಲೇಜು ಸಭಾಭವನದಲ್ಲಿ ಸಂಜೆ 5 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ತಾಲೂಕು ಸಾಹಿತ್ಯ ಪರಿಷತ್‌ ಘಟಕವನ್ನು ದೀಪ ಬೆಳಗಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಸಂಸ್ಕೃತ ಭಾರತೀ ಅಖಿಲ ಭಾರತ ಶಿಕ್ಷಣ ಪ್ರಮುಖರಾದ ಡಾ. ಎಚ್‌.ಆರ್. ವಿಶ್ವಾಸ್ ಅವರು ಭಾಗವಹಿಸಿ 'ಸಾಹಿತ್ಯ ಮತ್ತು ಸಮಾಜ' ಎಬ ವಿಷಯದ ಬಗ್ಗೆ ವಿದ್ವತ್ಪೂರ್ಣವಾದ ಉಪನ್ಯಾಸ ನೀಡಿದರು.


ಸಾಹಿತ್ಯ ಅಂದರೇನು?

ಸಹಿತಸ್ಯ ಭಾವಃ ಸಾಹಿತ್ಯ. ಸರಳವಾಗಿ ಹೇಳಬೇಕೆಂದರೆ ಶಬ್ದ ಮತ್ತು ಅರ್ಥಗಳು ಸಮ್ಮಿಳಿತವಾಗಿರುವುದೇ ಸಾಹಿತ್ಯ.  ಶಬ್ದ ಮತ್ತು ಅರ್ಥಗಳ ಸಹ ಅವಸ್ಥಿತಿ- ಒಟ್ಟಿಗೆ ಇರುವಂಥದ್ದೇ ಸಾಹಿತ್ಯ. ಸಂಸ್ಕೃತದ ಮೇರುಕವಿ ಕಾಳಿದಾಸ ಹೇಳುವಂತೆ- ವಾಗರ್ಥಾಮಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ಥಯೇ ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ. ಇದು ರಘುವಂಶದ ಆರಂಭದ ಶ್ಲೋಕ.


ಶಬ್ದ ತನ್ನ ಅರ್ಥವನ್ನು ಬಿಟ್ಟು ಬೇರೆ ಯಾವುದೋ ಅರ್ಥವನ್ನು ಪಡೆದುಕೊಳ್ಳುವುದು ಸಾಹಿತ್ಯವಲ್ಲ.


ಗುರು ಅನ್ನುವ ಪದ ತುಂಬ ಗೌರವದಿಂದ ಬಳಸುವಂಥದ್ದು. ಆದರೆ ಇಂದಿನ ಭಾಷೆಯಲ್ಲಿ ಏನ್‌ ಗುರೂ ಅಂದರೆ ಬೇರೆಯೇ ಅರ್ಥವಾಗುತ್ತದೆ. ಕಾಲಪ್ರವಾಹದಲ್ಲಿ ಈ ರೀತಿ ಅರ್ಥ ಬದಲಾಗುವುದು ಸಾಹಿತ್ಯವಾಗದು.


ಹೊರಗಿನ ರೂಪ ಯಾವುದೇ ಇರಬಹುದು, ಗದ್ಯ, ಪದ್ಯ, ಚಂಪೂ ಕಾವ್ಯ, ಹಳಗನ್ನಡದ ಗದ್ಯ ಯಾವುದೇ ಇರಬಹುದು. ಅದರ ಪರಿಮಾಣ ದೊಡ್ಡದಿರಬಹುದು ಅಥವಾ ಸಣ್ಣದಿರಬಹುದು. ಒಟ್ಟಿನಲ್ಲಿ ಶಬ್ದ ಮತ್ತು ಅರ್ಥ ಒಟ್ಟಿಗಿರುವುದು ಸಾಹಿತ್ಯ. ಇಂಥದೊಂದು ಸಾಹಿತ್ಯ ನಮಗೆ ಯಾವತ್ತೂ ಬೇಕು.


ಸಾಹಿತ್ಯ ಸಂಗೀತ ವಿಹೀನಃ ಪಶು ಸಮಾನ. ನಮ್ಮ ಪಶುತ್ವವನ್ನು ಕಳೆದುಕೊಂಡು ಕೊನೇ ಪಕ್ಷ ಮನುಷ್ಯತ್ವವನ್ನಾದರೂ ಪಡೆದುಕೊಳ್ಳಬೇಕಾದರೆ ಸಾಹಿತ್ಯ ಬೇಕು.


ಪುರಾತನವಾದದ್ದೇ ಸರ್ವಶ್ರೇಷ್ಠವೆಂದು ಪರಿಗಣಿಸಬೇಕಿಲ್ಲ. ಅದೇ ರೀತಿ ಹೊಸದಾಗಿರುವುದು ಶ್ರೇಷ್ಠವಲ್ಲ ಎಂಬ ಪೂರ್ವಗ್ರಹೀತ ಮನಸ್ಥಿತಿಯೂ ಬೇಕಾಗಿಲ್ಲ. ಸತ್ವ ಎಷ್ಟಿದೆ, ವಾಗರ್ಥಗಳ ಸಂಬಂಧ ಎಷ್ಟಿದೆ ಎಂಬುದೇ ಸಾಹಿತ್ಯದ ಸಹಿತತ್ವದ ಪ್ರಮಾಣವಾಗುತ್ತದೆ.


ಸ್ವಾಂತಃ ಸುಖಾಯ- ಅಂತರಂಗದ ಸುಖಕ್ಕಾಗಿ ಸಾಹಿತ್ಯ ಬೇಕು. ಲೋಕದ ಮಾನ್ಯತೆಗಾಗಿ ಸಾಹಿತ್ಯ ಅಲ್ಲ. ಕಾವ್ಯದ ವ್ಯಾಸಂಗ ಕೂಡ ಸ್ವಾಂತ ಸುಖಕ್ಕಾಗಿ. ಇಂತಹ ಸಾಹಿತ್ಯ ಮತ್ತು ಸಮಾಜಕ್ಕೆ ಏನು ಸಂಬಂಧ?


ಸಂವೇದನಶೀಲರನ್ನಾಗಿ ಮಾಡುವುದು ಸಾಹಿತ್ಯ. ಸಂವೇದನಾರಹಿತವಾಗಿರುವುದು ಮನುಷ್ಯತ್ವ ಅಲ್ಲ. ಆದ್ದರಿಂದ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದು ಸಾಹಿತ್ಯ. ಹೀಗಾಗಿ ಸಮಾಜಕ್ಕೆ ಸಾಹಿತ್ಯ ಬೇಕು. ಸಮಾಜದ ಆರೋಗ್ಯಕ್ಕೆ ಸಾಹಿತ್ಯ ಬೇಕು.


ವಾಲ್ಮೀಕಿಯ ಅಂತರಂಗದಲ್ಲಿ ಉಂಟಾದ ಸಂವೇದನೆ- ಶೋಕವೇ ಶ್ಲೋಕವಾಯಿತು. ರಾಮಾಯಣ ಮಹಾಕಾವ್ಯದ ಸೃಷ್ಟಿಗೆ ಮೂಲವಾಯಿತು. ದಿನಗಳೆದಂತೆ ಮನುಷ್ಯರಲ್ಲಿ ಸಂವೇದನೆ ಕಡಿಮೆಯಾಗುತ್ತಿದೆ.


*****

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಅವರು ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ತಾಲೂಕು ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀ ಮೋಹನ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು.

ಆರಂಭದಲ್ಲಿ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಅವರು, ಕನ್ನಡ ನಾಡಿನಲ್ಲೇ ಕನ್ನಡಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿ ಯಾಕೆ ಬಂದಿದೆ ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಅತ್ಯಂತ ವೈವಿಧ್ಯಮಯ ಸಾಹಿತ್ಯ, ಸಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿರುವ ಕನ್ನಡವನ್ನು ಎಲ್ಲರೂ ಪ್ರೀತಿಸಬೇಕು. ಅನ್ಯ ಭಾಷೆಗಳನ್ನು ಕಲಿಯುವ ಜತೆಗೆ ಕನ್ನಡವನ್ನು ಉಳಿಸುವ ಮಹತ್ತರ ಹೊಣೆಗಾರಿಕೆಯನ್ನು ಸಾಮೂಹಿಕವಾಗಿ ಹೊತ್ತುಕೊಳ್ಳಬೇಕು ಎಂದರು.


ತಾಲೂಕು ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ ಸೇರಿದಂತೆ ಕನ್ನಡ ರಥವನ್ನೆಳೆಯುವಲ್ಲಿ ಮಹತ್ವದ ಸೇವೆ ಸಲ್ಲಿಸಿದ ಹಲವರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.


ಗಣೇಶ್ ಪ್ರಸಾದ್‌ ಜೀ ಧನ್ಯವಾದ ಸಮರ್ಪಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಡಾ. ಮಂಜುನಾಥ್ ಎಸ್. ರೇವಣಕರ್‌: 

ಮೂಲತಃ ಎಂಜಿನಿಯರಿಂಗ್ ವೃತ್ತಿಯಲ್ಲಿದ್ದುಕೊಂಡು ಇಸ್ರೋದಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಸೂರಜ್ ಡೆವಲಪರ್ಸ್‌ ಎಂಬ ನಿರ್ಮಾಣ ಉದ್ಯಮ ಸಂಸ್ಥೆಯನ್ನು ಆರಂಭಿಸಿ, ಅನಂತರ ಸೂರಜ್‌ ಎಜುಕೇಶನಲ್ ಇಸ್ಟಿಟ್ಯೂಶನ್ಸ್‌ ಅಂಡ್‌ ಚಾರಿಟೇಬಲ್ ಟ್ರಸ್ಟ್‌ ಅಡಿಯಲ್ಲಿ ಸೂರಜ್ ಇಂಟರ್‌ನ್ಯಾಷನಲ್‌ ಸ್ಕೂಲ್‌ ಹೆಸರಿನ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಸಮಾಜ ಸೇವೆ ನಡೆಸುತ್ತಿರುವ ಡಾ. ಮಂಜುನಾಥ್ ಎಸ್. ರೇವಣಕರ್‌ ಅವರು ಇದೀಗ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ನಿಯೋಜನೆಗೊಂಡು ಕನ್ನಡದ ನುಡಿತೇರನ್ನು ಎಳೆಯಲು ಸಜ್ಜಾಗಿದ್ದಾರೆ.


ಪದಗ್ರಹಣ ಸಮಾರಂಭದಲ್ಲಿ ಅವರ ಮಾತುಗಳು ಅವರದೇ ಧ್ವನಿಯಲ್ಲಿ.


ಸಭಾ ಕಾರ್ಯಕ್ರಮದ ಬಳಿಕ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡವು 'ಹಚ್ಚೇವು ಕನ್ನಡದ ದೀಪ' ನೃತ್ಯರೂಪಕವನ್ನು ಪ್ರಸ್ತುತಪಡಿಸಿತು. ಅನಂತರ ಸುರತ್ಕಲ್‌ನ ನಾಟ್ಯಾಂಜಲಿ ತಂಡದವರು ದಶಾವತಾರ ನೃತ್ಯ ರೂಪಕವನ್ನು ಮನೋಜ್ಞವಾಗಿ ಪ್ರಸ್ತುಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




hit counter

0 Comments

Post a Comment

Post a Comment (0)

Previous Post Next Post