ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತರು ಮತ್ತು ಅರ್ಚಕರು, ಸಹಾಯಕ ಅರ್ಚಕರಿಗೆ ಸರಕಾರಿ ಸವಲತ್ತುಗಳು, ಸರಕಾರಿ ಗುರುತಿನ ಚೀಟಿ, ಆರ್ಥಿಕ- ಸಾಮಾಜಿಕ ಭದ್ರತೆ, ಹಾಗೂ ಅವರ ಕ್ಷೇಮಾಭಿವೃದ್ಧಿಗಾಗಿ ನಿಗಮ-ಮಂಡಳಿಗಳನ್ನು ರಚಿಸುವಂತೆ ಕೋರಿ ಸಂಘದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಇಂದು (ಮಾ.3 ಗುರುವಾರ) ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ರಾಜೇಶ್ ನಾಯ್ಕ್, ಡಾ, ವೈ ಭರತ್ ಶೆಟ್ಟಿ, ಬಿಜೆಪಿ ಮುಖಂಡರಾದ ಜಗದೀಶ್ ಅಧಿಕಾರಿ ಮುಂತಾದ ಗಣ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಘಟಕ ಮಂಗಳೂರು, ಸದಸ್ಯರು ಈ ಗಣ್ಯರನ್ನು ಭೇಟಿ ಮಾಡಿ ಅರ್ಚಕರ ಹಾಗೂ ಪುರೋಹಿತರ, ಅಡುಗೆ ಕಾರ್ಮಿಕರ ಸಮಸ್ಯೆ ಬಗ್ಗೆ ತಿಳಿಸಿ ಮುಂದಿನ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚಿಸಿ ಸರಕಾರಿ ಸವಲತ್ತು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಒತ್ತಾಯಿಸಿ ಮನವಿ ಅರ್ಪಿಸಿದರು,
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಸರಕಾರಕ್ಕೆ ತಲುಪಿಸಲಾಯಿತು.
ಕೊರೊನಾ ಕಾಲದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಪುರೋಹಿತರು, ಅರ್ಚಕರು, ಸಹಾಯಕ ಅರ್ಚಕರು ಮತ್ತು ಅಡುಗೆ ವೃತ್ತಿಯವರ ಸಮಸ್ಯೆಗಳು ಮತ್ತು ಸವಾಲುಗಳು ಯಾವ ಮಟ್ಟಕ್ಕೆ ತಲುಪಿವೆ ಎಂಬುದು ಬೆಳಕಿಗೆ ಬಂತು. ಜೀವನೋಪಾಯಕ್ಕಾಗಿ ನಡೆಸುವ ಈ ವೃತ್ತಿಯಲ್ಲಿ ಯಾವುದೇ ಕೆಲಸದ ಅವಕಾಶಗಳು ಇಲ್ಲದೆ ದೈನಂದಿನ ಹೊಟ್ಟೆಪಾಡಿಗೆ ಸಂಕಷ್ಟ ಅನುಭವಿಸಿದವರು ಸಾವಿರಾರು ಮಂದಿ. ಈ ಹಿನ್ನೆಲೆಯಲ್ಲಿ ಈ ವೃತ್ತಿಯವರ ಕ್ಷೇಮಾಭಿವೃದ್ಧಿಯ ಧ್ಯೇಯೋದ್ದೇಶದಿಂದ ಸ್ಥಾಪನೆಗೊಂಡಿರುವ ಈ ಸಂಘಟನೆ ಇದುವರೆಗೆ ಅಸಂಘಟಿತ ಪುರೋಹಿತರ ಕಾರ್ಮಿಕರ ಕ್ಷೇಮಕ್ಕಾಗಿ ಹಲವಾರು ಬಾರಿ ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು ಹಾಗೂ ಕಂದಾಯ ಸಚಿವರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿದೆ.
ಕರ್ನಾಟಕದಾದ್ಯಂತ ಪ್ರತೀ ಜಿಲ್ಲೆಯ ಜಿಲ್ಲಾಧಿಕಾರಿಗಳು, ಸಚಿವರು, ಶಾಸಕರುಗಳನ್ನು ಭೇಟಿ ಮಾಡಿ ವೃತ್ತಿನಿರತ ಅಸಂಘಟಿತ ಪುರೋಹಿತರು, ಅರ್ಚಕರು, ಸಹಾಯಕ ಅರ್ಚಕರುಗಳಿಗೆ ಸಿಗಬೇಕಾದಂತಹ ಸಾಮಾಜಿಕ ಭದ್ರತೆಯೊಂದಿಗೆ ಪ್ರಕೃತಿ ವಿಕೋಪದಂತಹ ಸಮಸ್ಯೆಗಳು ಎದುರಾದಾಗಾಗಿರಬಹುದಾದ ಕಷ್ಟ ನಷ್ಟಗಳು, ಅನಾರೋಗ್ಯ, ಆಪತ್ತು, ವಿಪತ್ತುಗಳಿಗೆ ಸರಕಾರಿ ಸವಲತ್ತುಗಳು ಸಿಗುವಂತೆ ಸರಕಾರಕ್ಕೆ ಮನದಟ್ಟು ಮಾಡಲು ಪ್ರಯತ್ನಿಸಲಾಗಿದೆ.
ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಗೊಂಡ 'ಕರ್ನಾಟಕ ರಾಜ್ಯ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ದ ಮೂಲಕ ಎಲ್ಲ ಅಸಂಘಟಿತ ಪುರೋಹಿತ ಕಾರ್ಮಿರನ್ನು ಸಂಘಟಿಸಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಜ್ಯಾದ್ಯಂತ ಕನಿಷ್ಠ 40ರಿಂದ 50 ಸಾವಿರ ಅಸಂಘಟಿತ ಪುರೋಹಿತ ಕಾರ್ಮಿಕರಿದ್ದು, ಈಗಾಗಲೇ 10ರಿಂದ 12 ಸಾವಿರ ಸದಸ್ಯತ್ವ ನೋಂದಣಿ ನಡೆದಿದೆ. ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವ ಹೊಂದುವಿಕೆ, ಅಸಂಘಟಿತ ಪುರೋಹಿತರನ್ನು ಕಾರ್ಮಿಕ ವರ್ಗಕ್ಕೆ ಸೇರ್ಪಡಿಸುವಿಕೆ, ನಿಗಮ ಮಂಡಳಿ ನಿರ್ಮಾಣ ಮಾಡಿ ಸರಕಾರ ಆರೋಗ್ಯ ಸವಲತ್ತು, ಮಾಸಿಕ ಭತ್ಯೆ, ಗೌರವ ಮಾಸಾಶನ ಮುಂತಾದ ಇತರ ಸವಲತ್ತುಗಳನ್ನು ಒದಗಿಸಿಕೊಡುವಂತೆ ಇಂದು ಜನಪ್ರತಿನಿಧಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಮನವಿ ಮಾಡಲಾಗಿದೆ.
ಜಿಲ್ಲಾದ್ಯಂತ ಅರ್ಚಕರ ಭವನ ನಿರ್ಮಾಣ, ವೇದಾಧ್ಯಯನ- ಪೌರೋಹಿತ್ಯ- ಜ್ಯೋತಿಷ್ಯ ಅಧ್ಯಯನ ಶಿಬಿರ ನಡೆಸಿ ಸರಕಾರಿ ಅಂಗೀಕೃತ ಪ್ರಮಾಣಪತ್ರ, ಭಗವದ್ಗೀತಾ ಅಭಿಯಾನ, ವಸತಿ ಯೋಜನೆಗಳಿಗೆ ಸರಕಾರಿ ಮಾನ್ಯತೆ ಒದಗಿಸಿ ಕೊಡಲು ಮುಂದಿ ಅಧಿವೇಶನದಲ್ಲಿ ಪ್ರಸ್ತಾವನೆ ಮಂಡಿಸಿ ಅಂಗೀಕರಿಸಿ ರಾಜ್ಯದ ಎಲ್ಲೆಡೆ ಇರುವ ಅಸಂಘಟಿತ ಅರ್ಚಕ ಪುರೋಹಿತರಿಗೆ ಅನುಕೂಲ ಒದಗಿಸಿಕೊಡಬೇಕೆಂದು ಎಲ್ಲ ಸದಸ್ಯರ ಪರವಾಗಿ ಮನವಿ ಮಾಡಲಾಗಿದೆ.
ದ.ಕ ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರಕಾಶ್ ವಿ. ಹೊಳ್ಳ ಮತ್ತು ಕಾರ್ಯದರ್ಶಿ ಸುಬ್ರಹ್ಮಣ್ಯ ವಿ. ಮಯ್ಯ, ಸಂಘಟನಾ ಕಾರ್ಯದರ್ಶಿ ಸೂರ್ಯನಾರಾಯಣ ಐತಾಳ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ