ಬೆಂಗಳೂರು: ಹಿಜಾಬ್ ಅತ್ಯಗತ್ಯವಾದ ಧಾರ್ಮಿಕ ಆಚರಣೆಯಲ್ಲ, ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಲ್ಲ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಕರ್ನಾಟಕ ಸರಕಾರ ಹೊರಡಿಸಿದ ಆದೇಶ ಕಾನೂನುಬದ್ಧವಾಗಿದೆ ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೇಶಾದ್ಯಂತ ಗದ್ದಲ ಸೃಷ್ಟಿಸಿದ್ದ ಹಿಜಾಬ್ ಪ್ರಕರಣದ ಕುರಿತ ಎಲ್ಲ ರಿಟ್ ಅರ್ಜಿಗಳನ್ನು ಹೈಕೋರ್ಟಿನ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯ ಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಲೇಜೊಂದರಲ್ಲಿ ಕೇವಲ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಯತ್ನಿಸಿ ವಿವಾದದ ಕಿಡಿ ಹೊತ್ತಿಸಿದ್ದರು. ಅವರ ಪರವಾಗಿ ಕೆಲವು ಸಂಘಟನೆಗಳು ವಿವಾದವನ್ನು ರಾಜ್ಯಾದ್ಯಂತ ಹಬ್ಬಿಸಲು ಹವಣಿಸಿದ್ದವು.
ವಿವಾದದ ಕಿಡಿ ಹೊತ್ತಿಸಿದ್ದ ವಿದ್ಯಾರ್ಥಿನಿಯರೇ ಜನವರಿ 31ರಂದು ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಫೆಬ್ರವರಿ 3ರಂದು ಹೈಕೋರ್ಟಿನ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು. ಬಳಿಕ ಫೆ.9ರಂದು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ಯಾವುದೇ ಧಾರ್ಮಿಕ ಗುರುತು ಧರಿಸಿ ಕಾಲೇಜುಗಳಿಗೆ ತೆರಳದಂತೆ ಫೆ.11ರಂದು ಮಧ್ಯಂತರ ಆದೇಶ ನೀಡಲಾಗಿತ್ತು. ಬಳಿಕ 11 ದಿನಗಳ ಕಾಲ ವಾಗಳ ಮಂಡನೆ, ಆಲಿಕೆ ನಡೆದಿತ್ತು. ಅನಂತರ ತೀರ್ಪನ್ನು ಇಂದಿಗೆ ಕಾದಿರಿಸಲಾಗಿತ್ತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ