ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ, ಭಾರತೀಯ ಸಂಸ್ಕೃತಿ & ಲಲಿತಕಲೆಗಳ ಅಧ್ಯಯನ ಕೇಂದ್ರ ಉದ್ಘಾಟನೆ

Upayuktha
5 minute read
0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಇದರ ಒಂದು ಅಂಗ ಸಂಸ್ಥೆಯಾಗಿ ವಿವೇಕಾನಂದ ಕಾಲೇಜು 1965ರಿಂದ ಸಮಾಜಮುಖಿ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ವಿವೇಕಾನಂದ ಸ್ವಾಯತ್ತ ಸಂಸ್ಥೆಯಾಗಿ ಮುಂದಡಿಯಿತ್ತಿರುವ ಸಂದರ್ಭದಲ್ಲಿ ಒಂದು ಸಂಶೋಧನ ಕೇಂದ್ರದ ಅವಶ್ಯಕತೆಯನ್ನು ಮನಗಂಡು 12.10.2021ರಲ್ಲಿ ವಿವೇಕಾನಂದ ಸಂಶೋಧನ ಕೇಂದ್ರವನ್ನು ಆರಂಭಿಸಲಾಯಿತು. ಈ ಸಂಶೋಧನ ಕೇಂದ್ರವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.


 'ಸಮತ್ವ' ಸಂಶೋಧನ ಪತ್ರಿಕೆಯನ್ನು ಪ್ರಕಟಿಸಲು ಕಾರ್ಯಯೋಜನೆಯನ್ನು ರೂಪಿಸಿದೆ. ಅಲ್ಲದೆ ವಿದ್ಯಾರ್ಥಿಗಳೂ ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ ಮಾರ್ಗದರ್ಶನ ಕಾರ್ಯಕ್ರಮಗಳನ್ನು ನಡೆಸಿದೆ. ತನ್ನ ಕಾರ್ಯಯೋಜನೆಯನ್ನು ಇನ್ನಷ್ಟು ವಿಸ್ತರಿಸುವ ದೃಷ್ಟಿಯಿಂದ ಇನ್ನೆರಡು ಕೇಂದ್ರಗಳು ಇದರ ಅಡಿಯಲ್ಲಿ ಆರಂಭವಾಗುತ್ತಿವೆ. ಈ ಎರಡೂ ಕೇಂದ್ರಗಳು ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳನ್ನು ಪೋಷಿಸುವಲ್ಲಿ ಮುಂದಿನ ದಿನಗಳಲ್ಲಿ ಗಮನಾರ್ಹ ಕೊಡುಗೆಯನ್ನು ನೀಡುತ್ತವೆ ಎಂಬ ವಿಶ್ವಾಸ ನಮ್ಮೆಲ್ಲರದು.


ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರಗಳ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭ:


ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರಗಳ ಉದ್ಘಾಟನೆ ಮತ್ತು ಸನ್ಮಾನ ಸಮಾರಂಭವು ಪುತ್ತೂರಿನ ನೆಹರುನಗರದಲ್ಲಿರುವ ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಮಾ.12ರಂದು ಪೂರ್ವಾಹ್ನ 10 ಗಂಟೆಯಿಂದ ನಡೆಯಲಿದೆ. ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕಲಾವಿದರಾದ ಡಾ. ಪ್ರಭಾಕರ ಜೋಷಿ ಉದ್ಘಾಟಿಸಲಿರುವರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ, ಸಂಚಾಲಕರಾದ ಶ್ರೀ ಮುರಳಿಕೃಷ್ಣ ಹಾಗೂ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಪುತ್ರ, ರಂಗನಟರಾದ ಶ್ರೀ ಮೂರ್ತಿ ದೇರಾಜೆ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಕುರಿಯ ಗಣಪತಿ ಶಾಸ್ತ್ರಿ ಸಂಗೀತ ಗುರುಗಳು ಹಾಗೂ ಸುನಾದ ಸಂಗೀತ ಕಲಾಶಾಲೆಯ ಮುಖ್ಯಸ್ಥರಾದ ವಿದ್ವಾನ್ ಶ್ರೀ ಕಾಂಚನ ಈಶ್ವರ ಭಟ್ ಹಾಗೂ ಪುತ್ತೂರು ವೈಷ್ಣವಿ ನಾಟ್ಯಾಲಯ(ರಿ) ಇದರ ನೃತ್ಯಗುರುಗಳಾದ ವಿದುಷಿ ಶ್ರೀಮತಿ ಯೋಗೀಶ್ವರಿ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರದಲ್ಲಿ 'ಕೃಷ್ಣ ಸಂಧಾನ' ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.


ದೇರಾಜೆ ಸೀತಾರಾಮಯ್ಯ ಯಕ್ಷಗಾನ ಆಧ್ಯಯನ ಕೇಂದ್ರ:


ಯಕ್ಷಗಾನ ಒಂದು ಸಂಕೀರ್ಣ ಕಲೆ. ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ, ಮಾತಿನ ಔಚಿತ್ಯಪೂರ್ಣ ಸಾಮರಸ್ಯವೇ ಯಕ್ಷಗಾನ. ಇದು ಸ್ವತಂತ್ರವಾದ ಶಾಸ್ತ್ರೀಯ ನೆಲೆಗಟ್ಟಿನಲ್ಲಿರುವ ಜಾನಪದ ಸೊಗಡಿರುವ ಕಲೆ. ಕ್ರಿ.ಶ. 12ನೆಯ ಶತಮಾನದಷ್ಟು ಪ್ರಾಚೀನತೆ ಈ ಕಲೆಗಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ.


ದೇರಾಜೆ ಸೀತಾರಾಮಯ್ಯ ಕನ್ನಡ ನಾಡಿನ ಶ್ರೇಷ್ಠ ಕಲಾವಿದ ಮತ್ತು ಸಾಹಿತಿಗಳಲ್ಲೊಬ್ಬರು. ಯಕ್ಷಗಾನ - ತಾಳಮದ್ದಳೆ ಕಲಾಲೋಕದಲ್ಲಿ ತಮ್ಮ ವಾಕ್ ವೈಖರಿ-ಧ್ವನಿ-ಅರ್ಥ-ರಸ ವಿಲಾಸದಿಂದ ಗಂಧರ್ವ ಲೋಕವನ್ನು ನಿರ್ಮಿಸಿದವರು. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಟೇಲ ಮನೆತನದ ಮಂಗಲ್ಪಾಡಿ ಕೃಷ್ಣಯ್ಯ-ಸುಬ್ಬಮ್ಮ ದಂಪತಿಗಳ ಪುತ್ರನಾಗಿ 17-11-1914ರಲ್ಲಿ ಜನಿಸಿದರು. ಇವರಿಗೆ ನಾಟಕದಲ್ಲಿಯೂ ಅಭಿರುಚಿಯಿತ್ತು. ಸ್ವತಃ ಆರಂಭಿಸಿದ ಚೊಕ್ಕಾಡಿ ಮೇಳಕ್ಕೆ 'ಶಾರದಾ ಪ್ರಸಾದಿತ ಯಕ್ಷಗಾನ ನಾಟಕ ಮಂಡಳಿ' ಎಂದು ನಾಮಕರಣ ಮಾಡಿದರು.


ತಾಳಮದ್ದಳೆ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಸವ್ಯಸಾಚಿಯಾಗಿ ಸೇವೆಯನ್ನು ಸಲ್ಲಿಸಿದ ದೇರಾಜೆಯವರು ಸಾಹಿತ್ಯಕ್ಕೆ ಅಚ್ಚಳಿಯದ ಕೃತಿಗಳನ್ನು ನೀಡಿದ್ದಾರೆ. ಶ್ರೀರಾಮಚರಿತಾಮೃತಂ', ಶ್ರೀಮನ್ಮಹಾಭಾರತ ಕಥಾಮೃತಂ, ರಾಮರಾಜ್ಯದರೂವಾರಿ, ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯ ಪೂರ್ವರಂಗ ಮುಂತಾದ ಸಾಹಿತ್ಯ, ಧರ್ಮದಾಸಿ, ಕೃಷ್ಣ ಸುಧಾಮ ಇತ್ಯಾದಿ ನಾಟಕ, ವಿಚಾರ ವಲ್ಲರಿ, ಧರ್ಮದರ್ಶನ ಮೊದಲಾದ ವೈಚಾರಿಕ ಕೃತಿಗಳು, ಯಕ್ಷಗಾನ ವಿವೇಚನೆ ಪ್ರಬಂಧ, ಭೀಷ್ಮಾರ್ಜುನ, ಸುಭದ್ರಾರ್ಜುನ ಮುಂತಾದ ಯಕ್ಷಗಾನ ಪ್ರಸಂಗ ಕೃತಿಗಳನ್ನು ಪ್ರಕಟಿಸಿದ್ದಾರೆ.


ಯಕ್ಷಗಾನ, ಪುರಾಣ, ಇತಿಹಾಸ, ತತ್ವಶಾಸ್ತçದ ಪಾಂಡಿತ್ಯವಿದ್ದ ದೇರಾಜೆ ಈ ನಾಡಿನ ನಿಜವಾದ ಕಲಾಪ್ರತಿಭೆ. ಇಂತಹ ಹಿರಿಯರ ಹೆಸರನ್ನು ಅಚ್ಚಳಿಯದೆ ಉಳಿಸುವ ದೃಷ್ಟಿಯಿಂದ ವಿವೇಕಾನಂದ ಕಾಲೇಜಿನಲ್ಲಿ ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದ ಮೂಲಕ ಸಮಕಾಲೀನ ಯಕ್ಷಗಾನದದಾಖಲೀಕರಣ, ಕಲಾವಿದರ ಪರಿಚಯ, ಯಕ್ಷಗಾನ ಸಾಹಿತ್ಯ, ಮುಖವರ್ಣಿಕೆ, ಪ್ರಸಾದನ, ಅರ್ಥಗಾರಿಕೆ, ನೃತ್ಯ, ಚಿತ್ರಕಲೆ, ಸಂಗೀತ, ಗೊಂಬೆಗಳ ನಿರ್ಮಾಣ, ಈ ಕ್ಷೇತ್ರದ ಸಾಧಕರ ಕುರಿತು ಪುಸ್ತಕ ಪ್ರಕಟಣೆ, ಸಾಕ್ಷ್ಯ ಚಿತ್ರ, ಹಳೆಯ ಯಕ್ಷಗಾನ ಕೃತಿಗಳ ಸಂಗ್ರಹ ಮುಂತಾದ ಚಟುವಟಿಕೆಗಳನ್ನು ನಡೆಸುವಉದ್ದೇಶ ಈ ಕೇಂದ್ರದ್ದಾಗಿದೆ. ಹಳೆಯ ಯಕ್ಷಗಾನ ಪ್ರಸಂಗಗಳನ್ನು ವಿದ್ಯಾರ್ಥಿಗಳಿಗೆ ಸಂಪ್ರದಾಯಿಕ ರೀತಿಯಲ್ಲಿ ಕಲಿಸಿ ರಂಗಪ್ರಯೋಗ ಮಾಡುವ ಉದ್ದೇಶವಿದೆ.


ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರ:


ಭರತಖಂಡವು ಕಲೆ, ಸಾಹಿತ್ಯ, ಸಂಗೀತ, ನೃತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಾಚೀನ ಕಾಲದಿಂದಲೂ ಉತ್ಕೃಷ್ಟತೆಗೆ ಹೆಸರು ಪಡೆದ ನಾಡು. ಸಂಸ್ಕೃತಿ ಪರವಾದ ಚಿಂತನೆ ಈ ಮಣ್ಣಿನಲ್ಲಿ ಸಹಜವಾಗಿದೆ. ಇದನ್ನೇ ಕನ್ನಡದ ಕವಿ ಶ್ರೀವಿಜಯ ಕನ್ನಡಿಗರ ಹಿರಿಮೆಯನ್ನು ಹೇಳುವ ಸಂದರ್ಭದಲ್ಲಿ “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್” ಎಂದು ಹೇಳಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಸಹಜವಾಗಿರುತ್ತದೆ. ಅದು ಅಭಿವ್ಯಕ್ತಿಗೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುವ ಹೊಣೆಗಾರಿಕೆ ಆಯಾಕಾಲಘಟ್ಟದ ಸಮಕಾಲೀನ ಸಮಾಜದ ಮೇಲಿದೆ. ಕಾಲ ಬದಲಾದಂತೆ ಮನುಷ್ಯನ ಜೀವನ ಶೈಲಿ ಆದ್ಯತೆಗಳು ಬದಲಾಗುತ್ತಿವೆ.


ಇದರ ನಡುವೆಯೂ ತನ್ನ ಮೂಲ ಸೊಗಡು ಮತ್ತು ಜೀವಸೆಲೆಯನ್ನು ಉಳಿಸಿಕೊಂಡು ಬೆಳೆಯುತ್ತಿರುವ ಭಾರತೀಯ ಸಂಸ್ಕೃತಿ ಲಲಿತ ಕಲೆಗಳ ಬಗೆಗೆ ಅಧ್ಯಯನ ಮಾಡುವ ಅಗತ್ಯವಿದೆ. ಈ ಉದ್ದೇಶದಿಂದ ವಿವೇಕಾನಂದ ಸಂಶೋಧನ ಕೇಂದ್ರದ ಅಡಿಯಲ್ಲಿ ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಈ ಸಾಂಸ್ಕೃತಿಕ ಜೀವಂತಿಕೆಯನ್ನು ಉಳಿಸಿ ಬೆಳೆಸುವ, ಸಂಸ್ಕೃತಿ ಪರವಾದ ಚಿಂತನೆಗಳನ್ನು ಎಲ್ಲೆಡೆ ಪಸರಿಸುವ, ಲಲಿತ ಕಲೆಗಳ ಬಗೆಗೆ ಕಾರ್ಯಾಗಾರ, ಗೋಷ್ಠಿ, ಕಲಾವಿದರ ಸಂದರ್ಶನ, ದಾಖಲೀಕರಣ ಮುಂತಾದ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿ ನಡೆಸುವ ಉದ್ದೇಶವು ಈ ಅಧ್ಯಯನ ಕೇಂದ್ರದ ಪ್ರಮುಖ ಉದ್ದೇಶವಾಗಿದೆ.


ಸನ್ಮಾನಿತರ ಪರಿಚಯ:


ಶ್ರೀ ಕುರಿಯ ಗಣಪತಿ ಶಾಸ್ತ್ರಿ: ಕುರಿಯ ಮನೆತನಕ್ಕೆ ಸೇರಿದ ಕುರಿಯ ಗಣಪತಿ ಶಾಸ್ತ್ರಿಗಳು ಯಕ್ಷಗಾನ ಕ್ಷೇತ್ರದಲ್ಲಿ ಮೇರು ಕಲಾವಿದರಾಗಿ ಭಾಗವತರಾಗಿ ಮಿಂಚಿದ್ದಾರೆ. ಇವರ ತಂದೆ ಕುರಿಯ ಶ್ರೀರಾಮ ಶಾಸ್ತ್ರಿ. ತಾಯಿ ಶ್ರೀಮತಿ ಗಂಗಮ್ಮ. ಕುರಿಯ ವಿಠಲ ಶಾಸ್ತ್ರಿಗಳಿಂದ ನಾಟ್ಯವನ್ನು ಕಲಿತರು. ಅಲ್ಲದೆ ಪಾರೆಕೋಡಿ ಕೃಷ್ಣಭಟ್ಟ, ಬಾಯಾರು ಸುಬ್ರಾಯ ಭಟ್ಟ ಹಾಗೂ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮಾರ್ಗದರ್ಶನದಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದರು. ಬಳಿಕ ಕರಾವಳಿಯ ಪ್ರಸಿದ್ಧ ಯಕ್ಷಗಾನ ಸಂಘಟನೆ ಕಟೀಲು ಮೇಳದಲ್ಲಿ ಮೂರೂವರೆ ದಶಕಗಳ ಕಾಲ ಭಾಗವತರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.


ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಕುರಿಯ ಗಣಪತಿ ಶಾಸ್ತ್ರಿಗಳು ಕಾಲೇಜಿನ ಯಕ್ಷರಂಜಿನಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಶ್ರೀಯುತರು ಯಕ್ಷಗಾನಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಾಡಿನ ಹಲವು ಸಂಘಟನೆಗಳು ಇವರಿಗೆ ಹಲವು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿವೆ.


ವಿದ್ವಾನ್ ಕಾಂಚನ ಈಶ್ವರ ಭಟ್: ಆಕಾಶವಾಣಿಯ 'ಎ' ಶ್ರೇಣಿ ಕಲಾವಿದರಾಗಿರುವ ವಿದ್ವಾನ್ ಕಾಂಚನ ಈಶ್ವರ ಭಟ್ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣತಿಯನ್ನು ಪಡೆದ ಕಲಾವಿದರು. ಕಳೆದ ಮೂವತ್ತು ವರ್ಷಗಳಿಂದ ಸುನಾದ ಸಂಗೀತ ಕಲಾ ಶಾಲೆಯನ್ನು ನಡೆಸುತ್ತಿರುವ ಇವರು ಖ್ಯಾತ ಸಂಗೀತ ಕಲಾವಿದರಾದ ಡಾ.ಎಂ. ಬಾಲಮುರಳಿಕೃಷ್ಣ, ಟಿ.ವಿ. ಶಂಕರನಾರಾಯಣನ್, ಟಿ.ಎನ್. ಶೇಷಗೋಪಾಲನ್, ಒ.ಎಸ್. ತ್ಯಾಗರಾಜನ್, ಸಂಜಯ್ ಸುಬ್ರಮಣಿಯನ್, ಟಿ. ಎಂ.ಕೃಷ್ಣ, ಉನ್ನಿಕೃಷ್ಣನ್, ಲಾಲ್ಗುಡಿ ಜಿಜೆಆರ್ ಕೃಷ್ಣನ್ ಮುಂತಾದವರಿಗೆ ಪಕ್ಕವಾದ್ಯದಲ್ಲಿ ಸಹಕರಿಸಿದ ಹಿರಿಮೆ ಇವರದು. ವಿದ್ವಾನ್ ಕಾಂಚನ ವಿ. ಸುಬ್ಬರತ್ನಂ ಇವರಿಂದ ಶಾಸ್ತ್ರಿಯ ಸಂಗೀತವನ್ನು ಮತ್ತು ವಿದ್ವಾನ್ ಪಿ.ಜಿ. ಲಕ್ಷ್ಮಿನಾರಾಯಣ್ ಇವರಿಂದ ಮೃದಂಗವನ್ನು ಅಭ್ಯಾಸ ಮಾಡಿದ್ದಾರೆ.


ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದಿರುವ ಶ್ರೀಯುತರು ಪುತ್ತೂರಿನಲ್ಲಿ ಮಾತ್ರವಲ್ಲ, ಕೊಯಿಲ, ಕಲ್ಮಡ್ಕ ಮುಂತಾದ ಕಡೆಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಶ್ರೀಯುತರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವಿಶೇಷ ಕಲಾಚೇತನ, ಕಲಾನಿಧಿ, ಕಲಾದೀಪ್ತಿ ಮುಂತಾದ ಗೌರವಗಳಿಗೆ ಭಾಜನರಾಗಿದ್ದಾರೆ. ಸಂಸ್ಥೆಯ 25ನೆಯ ವರ್ಷದ ಸಲುವಾಗಿ 'ಸುನಾದರಜತಕಲರವ' ಕಾರ್ಯಕ್ರಮವನ್ನು ನಡೆಸಿರುವ ಇವರು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ 'ಸುನಾದ ಗೃಹ ಸಂಗಮ' ಮತ್ತು 'ಸುನಾದಯುವದನಿ' ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.


ಶ್ರೀಮತಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್: ವೈಷ್ಣವಿ ನಾಟ್ಯಾಲಯ (ರಿ) ಪುತ್ತೂರು ಇದರ ಸ್ಥಾಪಕರು ಹಾಗೂ ನೃತ್ಯಗುರುಗಳಾಗಿರುವ ಶ್ರೀಮತಿ ವಿದುಷಿ ಯೋಗೀಶ್ವರಿ ಇವರು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಎಂಬುದು ಹೆಮ್ಮೆಯ ವಿಷಯ. ಪುತ್ತೂರು, ಬೆಳ್ಳಾರೆ, ವಿಟ್ಲ, ಬದಿಯಡ್ಕಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸುತ್ತಿರುವ ಇವರು ಭರತನಾಟ್ಯದಲ್ಲಿ ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದಾರೆ. ಕೇರಳದ ಗುರುವಾಯೂರು, ಕಾಸರಗೋಡು, ಉಡುಪಿ ಮುಂತಾದ ಕಡೆಗಳಲ್ಲಿ ತಮ್ಮ ಶಿಷ್ಯರ ಜೊತೆಯಲ್ಲಿ ಪ್ರದರ್ಶನ ನೀಡಿದ್ದಾರೆ. ತಮ್ಮ ಸಂಸ್ಥೆಯ ದಶಮಾನೋತ್ಸವದ ಸಂದರ್ಭದಲ್ಲಿ ‘ನಾಟ್ಯಾಂಜಲಿ' ಹೆಸರಿನ ಸಂಚಿಕೆಯನ್ನು ಪ್ರಕಟಿಸಿರುವುದು ಹೆಮ್ಮೆಯ ಸಂಗತಿ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
To Top