ಉಜಿರೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ 3ನೇ ರಾಜ್ಯ ಅಧಿವೇಶಕ್ಕೆ ಚಾಲನೆ

Upayuktha
0

 

ಸಾಹಿತ್ಯ ಜನಸಮೂಹವನ್ನು ಏಕಸೂತ್ರದಿ ಪೋಣಿಸುವದಾರ: ಡಾ. ಡಿ.ವೀರೇಂದ್ರ ಹೆಗ್ಗಡೆ


ಉಜಿರೆ, ಮಾ.19: ಜನಸಮೂಹವನ್ನು ಭಾಷೆಯ ಆಧಾರದಲ್ಲಿ ವಿಘಟಿಸದೆ, ಜನರನ್ನು ಅಖಂಡ ಭಾರತದ ಪರಿಕಲ್ಪನೆಯಡಿಯಲ್ಲಿ ಒಗ್ಗೂಡಿಸುವ ಅದಮ್ಯ ಶಕ್ತಿ ಸಾಹಿತ್ಯಕ್ಕಿದೆ, ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.


ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಕರ್ನಾಟಕ ಅಖಿಲ ಭಾರತ ಸಾಹಿತ್ಯ ಪರಿಷದ್‌ನ 3ನೇ ರಾಜ್ಯ ಅಧಿವೇಶನ 'ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ'ವನ್ನು ಉದ್ಘಾಟಿಸಿ ಮಾತನಾಡಿದರು.


ದೇಶ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಯಾದಾಗ ಜನರಲ್ಲಿ ರಾಷ್ಟ್ರೀಯ ಐಕ್ಯತೆಯ ಚಿಂತನೆ ಮಾಸಿ ಹೋಗುವುದೆಂಬ ವಾದವಿತ್ತು. ಆದರೆ ಸಾಹಿತ್ಯ ಜನಮಾನಸದಲ್ಲಿ ರಾಷ್ಟ್ರೀಯ ಚಿಂತನೆ ಮೂಡಿಸಿ ಸಂಘಟಿತರಾಗುವಂತೆ ಪ್ರೇರಕಶಕ್ತಿಯಾಗಿ ಕಾರ್ಯನಿರ್ವಹಿಸಿದೆ. ಹಾಗಾಗಿ ಸಾಹಿತ್ಯ ಜನರನ್ನು ಏಕಸೂತ್ರದಿ ಪೋಣಿಸುವ ದಾರ ಎಂದು ಅಭಿಪ್ರಾಯಪಟ್ಟರು.

ಯುವ ಸಮಾಜ ವೈಯಕ್ತಿಕ ಆಸಕ್ತಿಯಿಂದ ಸಾಹಿತ್ಯದ ಅಧ್ಯಯನ ನಡೆಸಬೇಕು. ಅದರ ಮುಖೇನ ದೇಶದ ಸಂಸ್ಕೃತಿ, ವೈವಿಧ್ಯತೆ, ಸಮಗ್ರ ಚಿಂತನೆಯನ್ನು ಅರ್ಥೈಸಿಕೊಳ್ಳಬೇಕು. ಈ ರೀತಿಯ ಸಾಹಿತ್ಯ ಅಧಿವೇಶನದ ಮೂಲಕ ಯುವಕರಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಸಾಧ್ಯ ಎಂದರು.


ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ, ಹರಿಪ್ರಕಾಶ್‌ ಕೋಣೆಮನೆ ಅಧಿವೇಶನದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತ್ಯದ ಮೂಲಕ ಸಂಸ್ಕೃತಿ, ಸಂಸ್ಕೃತಿಯ ಮೂಲಕ ದೇಶದ ಉನ್ನತಿ ಸಾಧ್ಯವಾಗುತ್ತದೆ. ಇವುಗಳನ್ನು ಒಂದೇ ಸಾಲಿನಲ್ಲಿ ಜೋಡಿಸುವ ಮತ್ತು ಕೇವಲ ಒಂದೇ ಭಾಷೆಗೆ ಸೀಮಿತವಾಗಿಸದೇ ಸಮಷ್ಠಿಯ ಹಿತಕ್ಕಾಗಿ ಸೃಷ್ಟಿಯಾಗುವ ಎಲ್ಲ ಭಾಷೆಯ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಸಾಹಿತ್ಯ ಪರಿಷದ್ ಮಾಡುತ್ತಿದೆ ಎಂದು ತಿಳಿಸಿದರು.


ಸಮ್ಮೇಳನದ ಅಧ್ಯಕ್ಷ ಡಾ. ನಾ. ಮೊಗಸಾಲೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಾಹಿತ್ಯ ರಾಷ್ಟ್ರೀಯತೆಯ ಮೂಲಸ್ವರೂಪವನ್ನು ಅರ್ಥೈಸುವ ಕಾರ್ಯವನ್ನು ಮಾಡಬೇಕು. ಭಾರತೀಯತೆ, ಧರ್ಮ ಮತ್ತು ಸಂವಿಧಾನದ ವ್ಯತ್ಯಾಸಗಳನ್ನು ತಿಳಿಯುವಲ್ಲಿ ಸಮಾಜ ಎಡವಿರುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಹಾಗಾಗಿ ಭಾರತೀಯತೆಯ ಪ್ರಜ್ಞೆಯನ್ನು ಸೃಷ್ಟಿಸುವ ಸಾಹಿತ್ಯ ಕೃಷಿ ನಡೆಯಲಿ ಎಂದರು.


ಇತಿಹಾಸದಲ್ಲಿರುವ ಸ್ವರಾಜ್ಯ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಯು ಹುಸಿ ಆದರ್ಶವಲ್ಲ. ಅದು ತೆರೆದ ವಾಸ್ತವ ಎಂಬುದನ್ನು ಮನಗಾಣಬೇಕು. ಈ ಅಧಿವೇಶನವು ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಬೇಕಾದ ಶ್ರೇಷ್ಠ ಸಾಹಿತ್ಯ ಸಂದೇಶವನ್ನು ಸಾರುವ ಮತ್ತು ಬಹುತ್ವದೊಂದಿಗೆ ಏಕತ್ವವನ್ನು ಪರಿಕಲ್ಪಿಸಿಕೊಳ್ಳುವ ಬದ್ಧತೆಯೊಂದಿಗೆ ಸಂಪನ್ನಗೊಳ್ಳಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ, ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಮತ್ತು ಸದಸ್ಯರು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಡಾ. ನಂದಿನಿ ಅಧಿವೇಶನ ಗೀತೆಯನ್ನು ಹಾಡಿದರು. ಸ್ವಾಗತ ಸಮಿತಿಯ ಸಂಚಾಲಕ ಡಾ. ಮಾಧವ ಎಂ.ಕೆ ಸ್ವಾಗತಿಸಿ, ರಾಜ್ಯಅಧಿವೇಶನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಶಾಂತರಾಮ್ ಶೆಟ್ಟಿ ವಂದನಾರ್ಪಣೆ ನೆರವೇರಿಸಿದರು. ಭ.ರಾ ವಿಜಯ್‌ ಕುಮಾರ್‌ ಕಾರ್ಯಕ್ರಮ ನಿರ್ವಹಣೆ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top