|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಮರದ ಪಾಠ ಆತ್ಮನಿರ್ಭರತೆಗೆ ಒತ್ತು ನೀಡುವಂತಾಗಲಿ

ಸಮರದ ಪಾಠ ಆತ್ಮನಿರ್ಭರತೆಗೆ ಒತ್ತು ನೀಡುವಂತಾಗಲಿ



ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲಿ:

ಸಾಮಾನ್ಯವಾಗಿ ಯಾವುದೇ ಘಟನೆ ನಡೆದಾಗ ಮೊದಲಿಗೆ ನಾವು ದಿಗ್ಭ್ಹ್ರಮೆಗೊಳ್ಳುತ್ತೇವೆ ಹಾಗೂ ಹೇಗೆ ಪ್ರತಿಕ್ರಿಯಿಸಬೇಕೆಂಬ ಗೊಂದಲಕ್ಕೆ ಒಳಗಾಗುತ್ತೇವೆ. ನಂತರ ಸಹಜವಾಗಿ ಅದರ ಪರಿಣಾಮಗಳು ತೆರೆದುಕೊಳ್ಳುತ್ತದೆ. ಕೋವಿಡ್ ಆಕ್ರಮಿಸಿಕೊಂಡಾಗ ಅಸಹಾಯಕತೆ ಹಾಗೂ ಎದುರಿಸುವುದು ಹೇಗೆ ಎಂಬ ಗೊಂದಲದ ಸ್ಥಿತಿಯಲ್ಲಿದ್ದೆವು. ಕೋವಿಡ್ ಲಸಿಕೆ ಬಂದರೂ ಹೊಸ ತಳಿಯ ಸಾಂಕ್ರಾಮಿಕವು ಆರೋಗ್ಯ ಹಾಗೂ ಆರ್ಥಿಕ ವಲಯಗಳಲ್ಲಿ ಅನಿಶ್ಚಿತತೆಯನ್ನು ತಂದೊಡ್ಡಿದೆ.


ಪ್ರಗತಿಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕೆಂಬುದು ಎಲ್ಲರ ಧ್ಯೇಯವಾಗಿದ್ದರು ಕೂಡಾ ವಾಸ್ತವವಾಗಿ ಏಳು, ಬೀಳುಗಳು ಇದ್ದದ್ದೇ. ಬೆಳವಣಿಗೆಗೆ ಅಡೆತಡೆಗಳು ಬೇರೆ ಬೇರೆ ರೂಪದಲ್ಲಿ ಬರುತ್ತವೆ. ಇದೀಗ ರಷ್ಯಾ-ಉಕ್ರೇನ್ ಯುದ್ಧ ಇಂದು ವಿಶ್ವದಾದ್ಯಂತ ಆತಂಕದ ಕಂಪನ ಮೂಡಿಸಿದೆ. “ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲಿ” ಎಂಬಂತಾಗಿದೆ ನಮ್ಮ ಸ್ಥಿತಿ. ಕೋವಿಡ್ ಸಾಂಕ್ರಾಮಿಕದ ಕರಾಳತೆಯಿಂದ ಜರ್ಜರಿತವಾದ ಜಾಗತಿಕ ಆರ್ಥಿಕತೆಯು ಸಂಕ್ರಮಣ ಕಾಲದಲ್ಲಿರುವಾಗ ರಷ್ಯಾ-ಉಕ್ರೇನ್ ಯುದ್ಧ ಜಾಗತಿಕ ಆರ್ಥಿಕತೆಗೆ ಕಂಟಕವಾಗಿ ಪರಿಣಮಿಸಲಿದೆ. ಇದರೊಂದಿಗೆ ಉಂಟಾಗಬಹುದಾದ ಪ್ರತಿಕೂಲ ಪರಿಣಾಮಗಳನ್ನು ದೂರದೃಷ್ಟಿತ್ವದೊಂದಿಗೆ ಅವಲೋಕನ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಂಡಾಗ ಮಾತ್ರ ನಿಶ್ಚಿತ ಗುರಿಯೆಡೆಗೆ ನಮ್ಮ ಪಯಣ ಸಾಧ್ಯ.


ಜಾಗತಿಕ ದುರ್ಬಲತೆಯನ್ನು ಅನಾವರಣಗೊಳಿಸುತ್ತಿರುವ ಸಮರ:

ಭೌಗೋಳಿಕ-ರಾಜಕೀಯ ಸಮಸ್ಯೆ ಭುಗಿಲೊಡೆದು ರಷ್ಯಾ-ಯೂಕ್ರೇನ್ ಸಮರ ಮೂರನೇ ವಾರದಲ್ಲಿದೆ. ರಾಜಕೀಯ ಮೇಲಾಟದ ಈ ವಿಘಟನೆ ಆಧುನಿಕ ಜಗತ್ತಿನ ದುರ್ಬಲತೆಯನ್ನು ಹಂತ ಹಂತವಾಗಿ ಅನಾವರಣಗೊಳಿಸುತ್ತಿದೆ. ಆಹಾರದ ಅವಲಂಬನೆಯ ಸಂಕಷ್ಟಗಳು, ಶಕ್ತಿಯ ಮೂಲಗಳ ಪೂರೈಕೆಯ ವ್ಯತ್ಯಯ ಹಾಗೂ ಹಣದುಬ್ಬರದ ಒತ್ತಡ ಜಾಗತಿಕ ಮಟ್ಟದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ ಹಾಗೂ ಆತಂಕಗಳನ್ನು ಮೂಡಿಸಿದೆ.


ತೊಂಬತ್ತರ ದಶಕದಿಂದೀಚೆಗೆ ಹೆಚ್ಚಿನ ರಾಷ್ಟ್ರಗಳು ಉದಾರೀಕರಣ-ಖಾಸಗೀಕರಣ-ಜಾಗತೀಕರಣದ ಮಂತ್ರ ಪಠಿಸುತ್ತಾ ಬಂದಿದೆ. ಪರಿಣಾಮವಾಗಿ ರಾಷ್ಟ್ರಗಳು ಆತ್ಮನಿರ್ಭರತೆಯಿಂದ ಪರಸ್ಪರ ಅವಲಂಬನೆಯತ್ತ ವಾಲುತ್ತಾ ಬಂದಿದೆ. ಒಂದು ದೇಶವು ಆಹಾರ ಹಾಗೂ ಇತರ ಅಗತ್ಯ ವಸ್ತುಗಳ ಪೂರೈಕೆಗಾಗಿ ವಿದೇಶವನ್ನು ಅವಲಂಬಿತವಾದಾಗ ಜಾಗತಿಕ ಪೂರೈಕೆಯಲ್ಲಾಗುವ ಅಡಚಣೆಗಳು ಹೊಸ ಪೂರೈಕೆಗಾಗಿ ಪರದಾಡುವಂತೆ ಮಾಡುತ್ತದೆ.


ಅಸ್ಥಿರತೆಯ ಮೂಲ: ಆಹಾರ ಪೂರೈಕೆಯಲ್ಲಿ ಅವಲಂಬನೆ:

ಯುದ್ಧದಿಂದ ಪ್ರತಿಕೂಲ ಪರಿಣಾಮ ಬೀರುವ ಮತ್ತೊಂದು ಅಗತ್ಯ ಸರಕು ಗೋಧಿ. ರಷ್ಯಾ ಮತ್ತು ಉಕ್ರೇನ್ ಎರಡೂ ವಿಶ್ವದ ಅತಿದೊಡ್ಡ ಗೋಧಿ ಉತ್ಪಾದಕ ದೇಶಗಳಾಗಿವೆ. ಈ ಎರಡೂ ರಾಷ್ಟ್ರಗಳಲ್ಲಿ ಜಗತ್ತಿನ ಶೇ.೨೫ ರಷ್ಟು ಗೋಧಿ ಉತ್ಪಾದನೆ ಆಗುತ್ತಿದೆ. ಯುದ್ಧದ ಕಾರಣದಿಂದಾಗಿ ಜಾಗತಿಕ ಬೆಳೆ ಪೂರೈಕೆಯಲ್ಲಿ ಅಡ್ಡಿ ಹಾಗೂ ಆಹಾರದ ಬೆಲೆಗಳ ಏರಿಕೆಗೆ ಕಾರಣವಾಗಬಹುದು. ಈ ಸವಾಲನ್ನು ನಾವು ಜಾಗತಿಕ ದೃಷ್ಟಿಕೋನದಿಂದ ಸ್ವೀಕರಿಸಬೇಕಾಗಿದೆ. ನಮಗೆ ಅಗತ್ಯವಿರುವಷ್ಟು ಗೋಧಿಯನ್ನು ಉತ್ಪಾದನೆ ಮಾಡಿಕೊಳ್ಳುವ ಜೊತೆಗೆ ಬೇರೆ ರಾಷ್ಟ್ರಗಳಿಗೂ ರಪ್ತು ಮಾಡುವಷ್ಟರ ಮಟ್ಟಿಗೆ ಆತ್ಮನಿರ್ಭರತೆ ಸಾಧಿಸಬೇಕಿದೆ.


ಯುದ್ಧದಿಂದಾಗಿ ಏರುತ್ತಿರುವ ಕಚ್ಚಾ ತೈಲ ದರ:

ರಷ್ಯಾದ ತೈಲೋತ್ಪನ್ನಗಳ ಮೇಲೆ ಹೇರಲಾದ ನಿಷೇಧ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇನ್ನಷ್ಟು ಏರಿಕೆಯಾಗುವ ಸಂಭವವಿದೆ. ಇದರಿಂದಾಗಿ ಮಂಗಳವಾರ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ ೧೨೪ ಅಮೇರಿಕನ್ ಡಾಲರ್ ಗೆ ಏರಿಕೆಯಾಗಿದೆ.


ಕಳೆದ ತಿಂಗಳ ಕೊನೆಯಲ್ಲಿ ಉಕ್ರೇನ್ ಮೇಲೆ ರಷ್ಯಾದ ಯುದ್ಧದ ನಂತರ, ಅಮೇರಿಕಾ ಮತ್ತು ಮಿತ್ರ ರಾಷ್ಟ್ರಗಳು ನಿರ್ಬಂಧಗಳನ್ನು ವಿಧಿಸಿದಾಗಿನಿಂದ ಕಚ್ಚಾ ತೈಲ ಬೆಲೆಗಳು ಶೇ.30ರಷ್ಟು ಏರಿಕೆಯಾಗಿದೆ

ಐರೋಪ್ಯ ಒಕ್ಕೂಟಕ್ಕೆ ರಷ್ಯಾದಿಂದಲೇ ಪ್ರಧಾನವಾಗಿ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯಾಗುತ್ತಿದೆ. ರಷ್ಯಾದಿಂದ ಜರ್ಮನಿಗೆ ಇರುವ ನಾರ್ಡ್ ಸ್ಟ್ರೀಮ್ ಅನಿಲ ಕೊಳವೆ ಸಂಪರ್ಕದ ಕಡಿತಗೊಳಿಸುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದೆ. ಒಂದು ವೇಳೆ ರಷ್ಯಾ ಪೂರೈಕೆ ಸ್ಥಗಿತಗೊಳಿಸಿದರೆ ತೈಲೋತ್ಪನ್ನಗಳಿಗೆ ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಲಿದೆ.


ಅಮೇರಿಕದ ತೈಲ ಆಮದುಗಳ ಪ್ರಮಾಣದಲ್ಲಿ ರಷ್ಯಾದ ತೈಲದ ಕಾಣಿಕೆ ಶೇ.5 ಕ್ಕಿಂತ ಕಡಿಮೆ. ಅಂದರೆ ಐರೋಪ್ಯ ರಾಷ್ಟ್ರಗಳ ಹಾಗೆ ಅಮೇರಿಕಾ ತೈಲದ ಅಗತ್ಯಗಳಿಗಾಗಿ ರಶ್ಯಾದ ಮೇಲೆ ಅವಲಂಬಿತವಾಗಿಲ್ಲ. ಆದರೂ ರಷ್ಯನ್ ತೈಲದ ಮೇಲೆ ಹೇರಿರುವ ನಿಷೇಧವು ಅಮೇರಿಕಾದಲ್ಲಿನ ಬೆಲೆಗಳ ಮೇಲೆ ಕೂಡ ಗರಿಷ್ಠ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆತ್ಮನಿರ್ಭರತೆಯ ದೃಷ್ಟಿಯಿಂದ ಭಾರತವು ನವೀಕರಿಸಬಹುದಾದ ಇಂಧನ ಮೂಲಗಳ ವಲಯದಲ್ಲಿ ಹೆಚ್ಚು ಸಕ್ರಿಯವಾಗಿದೆ.


ಲೋಹ ಮಾರುಕಟ್ಟೆಯ ತಲ್ಲಣ:

ಜಾಗತಿಕ ಮಾರುಕಟ್ಟೆಯಲ್ಲಿ ಲೋಹಗಳ ವ್ಯಾಪಾರದ ವಹಿವಾಟು ತುಸು ಹೆಚ್ಚೇ ಇದೆ. ನೈಸರ್ಗಿಕ ಸಂಪನ್ಮೂಲ ಕೊರತೆ ಇರುವ ದೇಶಗಳ ಅಭಿವೃದ್ಧಿಯಲ್ಲಿ ಅಗತ್ಯ ಲೋಹಗಳ ಆಮದು ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಅಲ್ಯೂಮಿನಿಯ, ನಿಕ್ಕಲ್, ಬೆಳ್ಳಿ, ಚಿನ್ನಗಳ ರಪ್ತಿನಲ್ಲಿ ರಷ್ಯಾದ ಪಾಲು ಶೇ 5ರ ಆಸುಪಾಸಿನಲ್ಲಿದೆ. ಈಗಿನ ಬಿಕ್ಕಟ್ಟು ಇವುಗಳ ಪೂರೈಕೆಯಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ. ಪಲ್ಲಡಿಯಂ ನ ಜಾಗತಿಕ ಉತ್ಪಾದನೆಯಲ್ಲಿ ಶೇ ೪೦ರಷ್ಟು ರಷ್ಯಾದಿಂದ ಬರುತ್ತದೆ. ಪಲ್ಲಡಿಯಂ ಲೋಹ ಕಾರುಗಳ ಬಹಳ ಮುಖ್ಯ ಅಂಶವಾದ ವೇಗವರ್ದಕಗಳ ತಯಾರಿಕೆಯಲ್ಲಿ ಬಹಳ ನಿರ್ಣಾಯಕವಾಗಿದೆ. ಜಾಗತಿಕ ವಾಹನ ಉದ್ಯಮಿಗಳು ಈ ಮೂಲ ಲೋಹವನ್ನು ಪಡೆಯಲಾಗದಿದ್ದರೆ ಉದ್ಯಮವು ದೊಡ್ಡ ಆಘಾತಕ್ಕೆ ಒಳಗಾಗುತ್ತದೆ.


ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಎಲೆಕ್ಟ್ರಾನಿಕ್ಸ್ ವಸ್ತ್ಗಳ ಬೇಡಿಕೆಯ ಪರಿಣಾಮವಾಗಿ  ವಾಹನ ತಯಾರಕರು ಮೈಕ್ರೋಚಿಪ್ ಗಳ ಪೂರೈಕೆಯಲ್ಲಿ ಕೊರತೆಯನ್ನು ಎದುರಿಸಬೇಕಾಯಿತು.


ನಿಕ್ಕಲ್ ಕೊರತೆಯು EV ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಅಪಾಯವೂ ಇದೆ. ಒಂದು ಉದ್ಯಮವು ವಿಸ್ತರಿಸಿಕೊಳ್ಳಲು ಹಾಗ್ ಕಡಿಮೆ ಸಮಯದಲ್ಲಿ ಜಾಗತಿಕ ಪ್ರಸ್ತುತತೆಗೆ ಬರಲು ಸಂಪನ್ಮೂಲಗಳ ಲಭ್ಯತೆಯು ಬಹಳ ಮುಖ್ಯವಾಗಿದೆ. ಜಾಗತಿಕವಾಗಿ ಅವಲಂಬನೆಯ ಮಟ್ಟ ಹೆಚ್ಚಾಗುತ್ತಿರುವ  ಈ ಸಂದರ್ಭದಲ್ಲಿ ಪೂರೈಕೆ ಸರಪಳಿಯಲ್ಲಿ ಆಗುತ್ತಿರುವ ಅಡಚಣೆಗಳು ಉತ್ಪಾದನಾ ಹಾಗೂ ಪೂರೈಕೆಯ ಸಮಸ್ಯೆಗಳನ್ನು ವಿಸ್ತರಿಸುವುದರೊಂದಿಗೆ ಆರ್ಥಿಕ ಅಸ್ಥಿರತೆಗೆ ನಾಂದಿಯಾಗಲಿದೆ.


ಭಾರತೀಯ ವಜ್ರ ಉದ್ಯಮವು ಹೊಳಪನ್ನು ಕಳೆದುಕೊಳ್ಳಬಹುದು:

ಅಲ್ರೋಸಾ ರಷ್ಯಾದ ಪ್ರಮುಖ ವಜ್ರ ಗಣಿಗಾರಿಕೆ ಮತ್ತು ವಿತರಣಾ ಕಂಪನಿಯಾಗಿದ್ದು, ರಷ್ಯಾದ ವಜ್ರ ಉತ್ಪಾದನೆಯ 95% ಮತ್ತು ಜಾಗತಿಕ ವಜ್ರದ ಹೊರತೆಗೆಯುವಿಕೆಯ 27% ನಷ್ಟಿದೆ. 2020 ರಲ್ಲಿ, ALROSA ಗ್ರೂಪ್ ಸರಿಸುಮಾರು 30 ಮಿಲಿಯನ್ ಕ್ಯಾರೆಟ್ ವಜ್ರಗಳನ್ನು ಉತ್ಪಾದಿಸಿತು, ಅದು ಆ ವರ್ಷ ವಿಶ್ವದ ಅತಿದೊಡ್ಡ ವಜ್ರ ಉತ್ಪಾದಕ ಕಂಪೆನಿಯಾಯಿತು.


ಅಲ್ರೋಸಾದ ಒಟ್ಟು ಕಚ್ಚಾ ವಜ್ರದ ಉತ್ಪಾದನೆಯ ಸುಮಾರು 10 ಪ್ರತಿಶತವನ್ನು ಭಾರತವು ನೇರವಾಗಿ ಆಮದು ಮಾಡಿಕೊಳ್ಳುತ್ತದೆ. ಆದಾಗ್ಯೂ, ಹೆಚ್ಚಿನ ರಷ್ಯಾದ ವಜ್ರಗಳು ವ್ಯಾಪಾರ ಕೇಂದ್ರಗಳ ಮೂಲಕ ಹಾದು ಬಂದು ನಂತರ ಕತ್ತರಿಸಲು ಮತ್ತು ಹೊಳಪು ಮಾಡಲು ಭಾರತಕ್ಕೆ ಬರುತ್ತದೆ. ಪ್ರಪಂಚದ ತೊಂಬತ್ತರಷ್ಟು ವಜ್ರಗಳನ್ನು ಭಾರತದಲ್ಲಿ ಕತ್ತರಿಸಿ ಪಾಲಿಶ್ ಮಾಡಲಾಗುತ್ತದೆ ಮತ್ತು ಈ ಉದ್ಯಮದ ಹೃದಯಭಾಗದಲ್ಲಿ ಸೂರತ್ ನಗರವಿದೆ. ಪ್ರಸ್ತುತ ಸೂರತ್‌ನಲ್ಲಿ ಸುಮಾರು 7,000 ವಜ್ರ ತಯಾರಿಕಾ ಘಟಕಗಳಲ್ಲಿ ಅರ್ಧ ಅಥವಾ 5,000 ಸಣ್ಣ, ಮಧ್ಯಮ ಮತ್ತು ದೊಡ್ಡ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ರಷ್ಯಾ-ಉಕ್ರೇನ್ ಯುದ್ಧವು ಮುಖ್ಯವಾಗಿ ಸೂರತ್ ಮತ್ತು ಸುತ್ತಮುತ್ತಲಿನ ಭಾರತೀಯ ವಜ್ರದ ವ್ಯಾಪಾರದ ಮೇಲೆ "ಪರಿಣಾಮ ಬೀರಬಹುದು.


ಬೇಡಿಕೆ-ಪೂರೈಕೆ ಅಂತರ

ಗಮನಾರ್ಹ ಬೇಡಿಕೆ-ಪೂರೈಕೆ ಅಂತರಗಳಿರಬಹುದು. ಒಂದು ದೇಶವು ಜಾಗತಿಕ ಸಂಪನ್ಮೂಲದ 4-5% ಅನ್ನು ಉತ್ಪಾದಿಸುತ್ತದೆ ಮತ್ತು ಯುದ್ಧ ಅಥವಾ ನಿರ್ಬಂಧಗಳಿಂದ ಇದ್ದಕ್ಕಿದ್ದಂತೆ ಮಾರುಕಟ್ಟೆಯಿಂದ ಹೊರಬಂದರೆ, ಆಗ ಇದ್ದಕ್ಕಿದ್ದಂತೆ ಕೊರತೆ ಉಂಟಾಗುತ್ತದೆ ಮತ್ತು ಬಳಕೆದಾರರ ದೇಶಗಳಿಂದ ಆವಿಷ್ಕಾರವಾಗುತ್ತದೆ. ಉದಾಹರಣೆಗೆ ಚೀನಾ ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲು ಇತರ ದೇಶಗಳ ಮೇಲೆ ಅವಲಂಬಿತವಾಗಿದೆ ಮತ್ತು ಇದು ಅತಿದೊಡ್ಡ ಉಕ್ಕಿನ ಉತ್ಪಾದಕವಾಗಿದೆ. ಚೀನಾ ಎಲ್ಲವನ್ನೂ ಹೊರಗಿನಿಂದ ತಂದು ಉಕ್ಕನ್ನು ಉತ್ಪಾದಿಸುತ್ತದೆ. ಅದೇ ರೀತಿ ವಿದೇಶಿ ಮೂಲದ ಮೇಲೆ ಅವಲಂಬಿತವಾದ ಅನೇಕ ದೇಶಗಳು ಮತ್ತು ಉತ್ಪಾದನೆಗಳಿವೆ. 

ಸ್ಥಳೀಯ ಕಚ್ಚಾವಸ್ತುಗಳ ಪೂರೈಕೆಯಿಲ್ಲದೆ ಹಾಗೂ ಸ್ಥಳೀಯ ಮಾರುಕಟ್ಟೆಯಿಲ್ಲದ (ಫ಼ೂಟ್ ಲೂಸ್) ಉದ್ಯಮಗಳು ಸಂಕಷ್ಟಕ್ಕೀಡಾಗಿ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.


ಹಣದುಬ್ಬರದಿಂದ ನಲುಗಲಿದೆಯಾ ಆರ್ಥಿಕತೆ?

ಸಂಪನ್ಮೂಲ ಉತ್ಪಾದಿಸುವ ದೇಶಗಳ ಭೌಗೋಳಿಕತೆಯಲ್ಲಿ ಅಡಚಣೆಗಳು ಉಂಟಾದಾಗ ಮೌಲ್ಯವರ್ಧನೆಯ ದೇಶಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಭಾರತವು ತುಲನಾತ್ಮಕವಾಗಿ ಉತ್ತಮ ಸ್ಥಾನದಲ್ಲಿದೆ ಎಂಬುದು ಒಳ್ಳೆಯ ಸುದ್ದಿ. ಕಬ್ಬಿಣದ ಅದಿರು, ಕಲ್ಲಿದ್ದಲು, ಉಕ್ಕು ಉತ್ಪಾದಿಸಲು ನಾವು ಇತ್ತೀಚಿನ ವರ್ಷಗಳಲ್ಲಿ ಬಹಳ ಪ್ರಯತ್ನಿಸುತ್ತಿದ್ದೇವೆ.


ಕಚ್ಚಾ ವಸ್ತುಗಳ ಪೂರೈಕೆಯಲ್ಲಾಗುವ ಅದಚಣೆಗಳು ಉತ್ಪಾದನೆಯ ಸ್ಥಗಿತದ ಬೆದರಿಕೆಗೆ ಒಳಗಾಗುತ್ತದೆ ಹಾಗೂ ಅನಗತ್ಯ ದಾಸ್ತಾನು ಚಟುವಟಿಕೆಗಳು ಕೃತಕ ಕೊರತ್ಯನ್ನು ಸೃಷ್ಟಿಸಿ ಹಣದುಬ್ಬರಕ್ಕೆ ಒತ್ತು ನೀಡುತ್ತದೆ.

ಹಣದುಬ್ಬರದ ಹೊರಹೊಮ್ಮುವಿಕೆಯು ಸಂಪನ್ಮೂಲ ಸರಬರಾಜು ಮಾಡುವ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸಂಪನ್ಮೂಲ ಹಸಿದ ರಾಷ್ಟ್ರಗಳ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಫ್ತು ಮಾಡುವ ದೇಶಗಳು ಲಾಭ ಪಡೆಯುತ್ತವೆ ಮತ್ತು ಆಮದು ಮಾಡುವ ದೇಶಗಳು ಕಳೆದುಕೊಳ್ಳುವ ಅಂತ್ಯದಲ್ಲಿವೆ. ಜಾಗತೀಕರಣವು ಪ್ರಪಂಚದ ರಾಷ್ಟ್ರಗಳನ್ನು ಸ್ವಾತಂತ್ರ್ಯದಿಂದ ಪರಸ್ಪರ ಅವಲಂಬನೆಯತ್ತ ಸಾಗುವಂತೆ ಮಾಡಿದೆ ಹಾಗೂ ಇಂತಹ ಸನ್ನಿವೇಶಗಳಲ್ಲಿ ದೇಶಗಳ ಪರಾವಲಂಬನೆಯು ಅತಂತ್ರ ಹಾಗೂ ಕ್ಲಿಷ್ಟಕರ ಸ್ಥಿತಿಗೆ ತಂದೊಡ್ಡುವುದನ್ನ್ ಕಾಣಬಹುದು.


ನಲುಗಲಿದೆಯೇ ನಮ್ಮ ಆರ್ಥಿಕತೆ?

ತೈಲ ಆಮದುಗಳ ಮೂಲಕ ತನ್ನ ಶಕ್ತಿಯ ಅಗತ್ಯತೆಗಳನ್ನು ಭಾರತ ಪೂರೈಸಿಕೊಳ್ಳುತ್ತಿದೆ. ಶೇ. 80ರಷ್ಟು ತೈಲ ಆಮದು ಮಾಡಿಕೊಳ್ಳುವ ಭಾರತ ಬಿಕ್ಕಟ್ಟಿಗೆ ಸಿಲುಕಲಿದೆ. ಮತ್ತು ಯುದ್ಧ ಪರಿಣಾಮ ಹಾಗೂ ತೈಲ ಬೆಲೆಗಳು ಹೆಚ್ಚು ಬಾಧಿಸಲಿವೆ. ಬಿಕ್ಕಟ್ಟಿಗೆ ಸಿಲುಕುವ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿರಬಹುದು. ಹೆಚ್ಚುತ್ತಿರುವ ಇಂಧನ ಬೆಲೆ ಆರ್ಥಿಕ ಸ್ಥಿತಿಗೆ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ.


ಇಂಡಿಯಾ ಟುಡೇ ವರದಿಯ ಪ್ರಕಾರ, ಕಚ್ಚಾ ತೈಲ ಸಂಬಂಧಿತ ಉತ್ಪನ್ನಗಳು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ದಲ್ಲಿ ಶೇಕಡಾ 9 ರಷ್ಟು ಪಾಲನ್ನು ಹೊಂದಿವೆ. ಏರುತ್ತಿರುವ ತೈಲ ಬೆಲೆಗಳು ದೇಶದ WPI ಹಣದುಬ್ಬರವನ್ನು ಸುಮಾರು 0.9 ಪ್ರತಿಶತದಷ್ಟು ಹೆಚ್ಚಿಸಬಹುದು.


ಕ್ಷಣಕ್ಷಣಕ್ಕೂ ಉಲ್ಬಣಗೊಳ್ಳುತ್ತಿರುವ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಭಾರ ಭಾರತದ ಜನಸಾಮಾನ್ಯರ ಮೇಲೆ ಬೀಳುವುದರಲ್ಲಿ ಅನುಮಾನವೇ ಇಲ್ಲ. ಕಳೆದ ನವಂಬರ್ ನಂತರ ಪೆಟ್ರೋಲ್, ಡೀಸಿಲ್ ಬೆಲೆ ತಟಸ್ಥವಾಗಿತ್ತು. ಆದರೆ ಈಗ ಯುದ್ಧದ ಪರಿಣಾಮವಾಗಿ ತೈಲೋತ್ಪನ್ನಗಳ ಪೂರೈಕೆಯ ಅಡಚಣೆಯಿಂದಾಗಿ ವಾಹನ ಸವಾರರ ಜೇಬಿಗಂತೂ ತಕ್ಷಣದಿಂದಲೇ ಕತ್ತರಿ ಬೀಳುವ ಸಾಧ್ಯತೆಗಳು ನಿಚ್ಚಳ. ಸರಕು ಸಾಗಣೆ ವೆಚ್ಚ ಗಗನಕ್ಕೇರುತ್ತದೆ. ಪರಿಣಾಮ ಆಹಾರ ಪದಾರ್ಥಗಳೂ ತುಟ್ಟಿಯಾಗಲಿವೆ.


ಭವಿಷ್ಯದಲ್ಲಿ ಜಗತ್ತಿನ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂಬುದನ್ನು ಷೇರು ಮಾರುಕಟ್ಟೆ ಮತ್ತು ಏರುತ್ತಿರುವ ಕಚ್ಚಾತೈಲಗಳ ಬೆಲೆಗಳಿಂದ ಸ್ಪಷ್ಟವಾಗುತ್ತಿದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟು ಹಣಕಾಸು, ವಿನಿಮಯ ದರ, ತೈಲ ಬೆಲೆಗಳ ಮೇಲೆ ಅಲ್ಪಾವಧಿ ಆದರೆ ಗಂಭೀರ ಸ್ವರೂಪದ ಪರಿಣಾಮಗಳನ್ನು ಬೀರುತ್ತಿದೆ.


ಮುಂದೇನು? ಸಂಕಷ್ಟಗಳನ್ನು ಸವಾಲನ್ನಾಗಿ ಸ್ವೀಕರಿಸುವ ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ಮಂಥನೆಗಳು ನಡೆಯಬೇಕು. ಕೋವಿಡ್ ಬಿಕ್ಕಟ್ಟು ನಮಗೆ ಸ್ಥಳೀಯ ಉತ್ಪಾದನೆಯ, ಸ್ಥಳೀಯ ಮಾರುಕಟ್ಟೆ ಮತ್ತು ಪೂರೈಕೆಸರಪಣಿಯ ಮಹತ್ವವನ್ನು ಕಲಿಸಿತು. ಸಂಕಷ್ಟದ ಕಾಲದಲ್ಲಿನ ನಮ್ಮ ಎಲ್ಲಾ ಬೇಡಿಕೆಗಳನ್ನು ಸ್ಥಳೀಯವಾಗಿ ಪೂರೈಸುವ ಮೂಲಕ ಭಾರತ ತನ್ನ ಸ್ವಾವಲಂಬೀ ಸಾಧನೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಈಗ ಸ್ಥಳೀಯ ಉತ್ಪನ್ನಗಳ ಬಗ್ಗೆ ಆಸಕ್ತಿ ವಹಿಸಿ ಈ ಉತ್ಪನ್ನಗಳನ್ನು ಜಾಗತಿಕಗೊಳಿಸಲು ಪ್ರಯತ್ನಿಸಬೇಕು. ಸ್ವಾವಲಂಬನೆಯ ಮಂತ್ರ ದೇಶವನ್ನು ಜಾಗತಿಕ ಪೂರೈಕೆ ಸರಪಳಿಯ ಸ್ಪರ್ಧೆಗೆ ಸಜ್ಜುಗೊಳಿಸುತ್ತದೆ ಎಂಬುದನ್ನು ನಾವು ಮನಗಾಣಬೇಕು ಹಾಗೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಸ್ವಾವಲಂಬನೆಯು ದೇಶವನ್ನು ಜಾಗತಿಕ ಪೂರೈಕೆ ಸರಪಳಿಯ ಸ್ಪರ್ಧೆಗೆ ಸಜ್ಜುಗೊಳಿಸುತ್ತದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದರೊಂದಿಗೆ ಉತ್ಕೃಷ್ಟ ಗುಣಮಟ್ಟದ ವಸ್ತುಗಳ ಉತ್ಪಾದನೆಗೂ ಆದ್ಯತೆ ನೀಡಬೇಕಾಗಿದೆ. ಮಾನ್ಯ ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ನಾವೆಲ್ಲರೂ ದನಿಗೂಡಿಸಿ  ಮುಂದಡಿಯಿಡಬೇಕಾದುದು ನಮ್ಮ ಧರ್ಮ.


ಆದಷ್ಟು ಬೇಗ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಂಡು ವಿಶ್ವ ಶಾಂತಿ ಸ್ಥಾಪನೆಯಾಗಲಿ ಎಂಬುದೇ ನಮ್ಮ ಹಾರೈಕೆ. ಇದರೊಂದಿಗೆ “ಗಟ್ಟಿತನ ಗರಡಿಫಲ” ಎಂಬಂತೆ ನಮ್ಮ ಹಿಡಿತಕ್ಕೆ ಸಿಗದೆ ಜಾಗತಿಕವಾಗಿ ಕಂಡುಬರುವ ಆತಂಕಗಳಿಗೆ ನಾವು ಬಲಿಬೀಳದಂತಾಗಲು, ನಮ್ಮ ಸ್ವಾಲಂಬಿತನವನ್ನು ಗಟ್ಟಿಗೊಳಿಸಬೇಕಾಗಿದೆ. ಆತ್ಮ ನಿರ್ಭರ ಭಾರತದ ಕನಸು ನನಸಾಗಬೇಕಾಗಿದೆ. ಸ್ವದೇಶಿ ಉತ್ಪಾದನೆ ಹಾಗೂ ಉತ್ಪಾದಕತೆಗೆ ಒತ್ತು ನೀಡುವ ಮೂಲಕ ಪ್ರಗತಿಪರ ಹೆಜ್ಜೆಗಳಿಗೆ ಸಾಕ್ಷಿಯಾಗೋಣ. 



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم