ಏನಿದು? ಪ್ರತಿಯೊಂದು ಔಷಧದ ವಿಷಯ ಬಂದಾಗಲೂ ಅದನ್ನು ಶ್ರೇಷ್ಠ ಎನ್ನುತ್ತಾರಲ್ಲ? ಎಂದು ನಿಮಗೆ ಅಚ್ಚರಿ ಆಗಬಹುದು. ಒಂದು ಔಷಧ ಶ್ರೇಷ್ಠ ಎಂದ ಕ್ಷಣಕ್ಕೆ ಇನ್ನೊಂದು ಔಷಧ ಕನಿಷ್ಠ ಎಂದು ಅರ್ಥವಲ್ಲ. ಪ್ರತಿಯೊಂದು ಔಷಧಕ್ಕೂ ಅದರದ್ದೇ ಆದ ಮಹತ್ವವಿದೆ, ಶ್ರೇಷ್ಠತೆ ಇದೆ. ಹಾಗಾದರೆ ಈ ಜೇಷ್ಠಮಧು ಯಾವ ವಿಷಯಕ್ಕೆ ಶ್ರೇಷ್ಠವಾಗಿದೆ? ನೋಡೋಣ.
ಆಯುರ್ವೇದದಲ್ಲಿ ಇದು ಬಹು ಉಪಯೋಗಿಯಾದ ಔಷಧ. Glycirrhiza glabra ಇದರ ರಾಸಾಯನಿಕ ಹೆಸರು.ಇದನ್ನು ಇದರಲ್ಲಿರುವ ಸಿಹಿ ರುಚಿಯ ಕಾರಣಕ್ಕೆ ಅತಿಮಧುರ ಎಂದು ಕರೆಯುತ್ತಾರೆ. ಶೀತಲ ಗುಣವುಳ್ಳ, ರುಚಿಕರ ಔಷಧವೆಂದರೆ ಇದುವೇ. ಚಕ್ಷುಷ್ಯ ಅಂದರೆ ಕಣ್ಣಿಗೆ ಹಿತಕಾರಿ. ಶರೀರಕ್ಕೆ ಬಲ ನೀಡುವುದು. ಚರ್ಮದ ವರ್ಣವನ್ನು ಹೆಚ್ಚಿಸುವುದು. ಅಂದರೆ ಕಪ್ಪು ಇದ್ದವರನ್ನು ಬೆಳ್ಳಗೆ ಮಾಡುತ್ತದೆ ಎಂದು ಅರ್ಥವಲ್ಲ. ಸ್ವಭಾವ ಸಹಜ ಚರ್ಮದ ವರ್ಣವನ್ನು ತೇಜೋಮಯ ಗೊಳಿಸುತ್ತದೆ ಅಥವಾ ಕಾಂತಿಯುತ ಆಗಿಸುತ್ತದೆ ಎಂದು ತಾತ್ಪರ್ಯ. ಸ್ಥಿಗ್ದ ಗುಣವುಳ್ಳ ಕಾರಣಕ್ಕೆ ಶರೀರದ ಶುಷ್ಕತೆಯನ್ನು ನಿವಾರಿಸುವುದು. ಶುಕ್ರ ಧಾತುವನ್ನು ಹೆಚ್ಚಿಸುವುದು. ಆದುದರಿಂದ ಪುರುಷತ್ವ ವರ್ಧಕ. ಕೇಶ್ಯ ಎಂದರೆ ಕೂದಲಿಗೆ ಹಿತಕಾರಿ. ಸ್ವರ್ಯ ಅಂದರೆ ಸ್ವರ ಮಾಧುರ್ಯವನ್ನು ಹೆಚ್ಚಿಸುವಂತ ಗುಣವಿದೆ. ಅಂದರೆ ಪ್ರಸಿದ್ಧ ಸಂಗೀತಗಾರರ ಸ್ವರದಂತೆ ನಮ್ಮ ಸ್ವರವನ್ನು ಬದಲಾವಣೆ ಮಾಡುತ್ತದೆ ಎಂಬ ಅರ್ಥವಲ್ಲ.
ಕರ್ಕಶತೆಯನ್ನು ನಿವಾರಿಸಿ ಇದ್ದ ಸ್ವರವನ್ನು ನುಣುಪಾಗಿಸುತ್ತದೆ ಎಂಬ ತಾತ್ಪರ್ಯ. ಪಿತ್ತ ದೋಷ, ವಾತ ದೋಷ, ರಕ್ತದೋಷವನ್ನು ನಿವಾರಿಸುತ್ತದೆ. ವ್ರಣ ಅಂದರೆ ಹುಣ್ಣನ್ನು ಮಾಯಿಸುವ ಗುಣವುಳ್ಳದ್ದು. ಶೋಥ ನಿವಾರಕ, ಬಾವನ್ನು ಕಡಿಮೆ ಮಾಡುವ ಗುಣವಿದೆ. ಶರೀರದಲ್ಲಿನ ವಿಷವನ್ನು ನಿವಾರಿಸುವುದು. ಛರ್ದಿ ಅಂದರೆ ವಾಂತಿಯನ್ನು ನಿಗ್ರಹಿಸುವುದು. ದೇಹದ ಹಾಗೂ ಮನಸ್ಸಿನ ಗ್ಲಾನಿಯನ್ನು ಶಮನಗೊಳಿಸುವ ಗುಣವಿದೆ. ಶರೀರದ ಕ್ಷೀಣತೆ ಯನ್ನು ನಿವಾರಿಸಿ ಪುಷ್ಟಿಗೊಳಿಸುವ ಸ್ವಭಾವ ಇದಕ್ಕಿದೆ.
ಉರಿ ಮೂತ್ರವನ್ನು ಶಮನಗೊಳಿಸುವ ಗುಣವಿದೆ. ಅಮ್ಲಪಿತ್ತ, ಅಂದರೆ ಸಾಮಾನ್ಯವಾಗಿ ನಾವು ಕರೆಯುವ ಎಸಿಡಿಟಿ ಕಡಿಮೆ ಮಾಡುತ್ತದೆ. ಜಠರದ ಹುಣ್ಣನ್ನು (ಅಲ್ಸರ್) ಗುಣಪಡಿಸುವುದು. ಚೀನಾ ದೇಶದಲ್ಲಿ ರೋಗ ನಿವಾರಣೆಗಾಗಿ, ರೋಗ ಬಾರದಂತೆ ತಡೆಗಟ್ಟಲು ಇದು ಪ್ರಸಿದ್ಧವಾಗಿದೆ.
ಆಯುರ್ವೇದದ ಸುಶ್ರುತ ಸಂಹಿತೆಯಲ್ಲಿ ಜೇಷ್ಠಮಧುವನ್ನು ಸರ್ವೋಪಘಾತ ಶಮನೀಯ. ಔಷಧಗಳಲ್ಲಿ ಅಂತರ್ಗತ ಮಾಡಿದ್ದಾರೆ. ಅಂದರೆ ಏಟು ಬಿದ್ದು ಉಂಟಾದ ಉರಿಯೂತ ನಿವಾರಣೆಯಲ್ಲಿ ಇದಕ್ಕೆ ಒಂದು ಸ್ಥಾನವಿದೆ. ಹೃದ್ರೋಗ ಮತ್ತು ಅಪಸ್ಮಾರದಲ್ಲಿ ಕೂಡ ಇದರ ಬಳಕೆ ಉಲ್ಲೇಖವಾಗಿದೆ.
ಜೇಷ್ಠಮಧುವಿನ ಬಳಕೆ ಹೇಗೆ?
ಒಂದರಿಂದ ಎರಡು ಚಮಚದಷ್ಟು ಇದರ ಚೂರ್ಣವನ್ನು ಜೇನು, ತುಪ್ಪ ಅಥವಾ ಹಾಲಿನೊಂದಿಗೆ ಹೊಟ್ಟೆಗೆ ಸೇವಿಸಬಹುದು. ಸಕ್ಕರೆ ಕಾಯಿಲೆ ಇದ್ದವರು ಜೇನನ್ನು ಸೇವಿಸಬಾರದು.
ಮುಂದು ಮುಷ್ಟಿಯಷ್ಟು ಇದರ ಕಷಾಯ ಚೂರ್ಣ, ಅಂದರೆ ದೊರಗಾದ ಚೂರ್ಣವನ್ನು ಎರಡರಿಂದ ಮೂರು ಗ್ಲಾಸಿನಷ್ಟು ಹಾಲಿನಲ್ಲಿ ಐದರಿಂದ ಹತ್ತು ನಿಮಿಷದಷ್ಟು ಹೊತ್ತು ಕುದಿಸಿ, ನಂತರ ಸೋಸಿ ಹೊಟ್ಟೆಗೆ ಸೇವಿಸಬಹುದು. ಇದನ್ನು ಜೇಷ್ಠಮಧು ಕ್ಷೀರಪಾಕ ಎನ್ನುತ್ತೇವೆ.
ಜೇಷ್ಠ ಮಧುವಿನ ದೊರಗಾದ ಕಷಾಯ ಚೂರ್ಣಕ್ಕೆ, ನಾಲ್ಕು ಪಟ್ಟು ನೀರು ಸೇರಿಸಿ, ಕುದಿಸಿ, ಕಾಲು ಭಾಗಕ್ಕೆ ಬತ್ತಿಸಬೇಕು. ನಂತರ ಸೋಸಿ, ಉಗುರು ಬೆಚ್ಚಗೆ ಉಳಿಸಬೇಕು. ಇದನ್ನು ಮುಚ್ಚಿದ ಕಣ್ಣಿನ ರೆಪ್ಪೆಗಳ ಮೇಲೆ 4 ಇಂಚು ಎತ್ತರದಿಂದ ಸಪೂರವಾದ ಧಾರೆಯ ರೂಪದಲ್ಲಿ ಎರೆಯಬೇಕು.
ಕಣ್ಣಿಗೆ ಏಟು ಬಿದ್ದು ಆದಂತಹ ಬಾವು, ಉರಿಯೂತ, ಕೆಂಗಣ್ಣು ಇತ್ಯಾದಿ ಸಂದರ್ಭಗಳಲ್ಲಿ ಇದು ಪ್ರಥಮ ಚಿಕಿತ್ಸೆ, ತುರ್ತು ಚಿಕಿತ್ಸೆ. ಇದಕ್ಕೆ ಸೇಕ ಚಿಕಿತ್ಸೆ ಎಂದು ಆಯುರ್ವೇದದಲ್ಲಿ ಹೇಳುತ್ತಾರೆ. ಕಣ್ಣಿಗೆ ಸಂಬಂಧಿಸಿದ ವಿಶೇಷ ಚಿಕಿತ್ಸೆಗಳಲ್ಲಿ ಇದರ ಉಲ್ಲೇಖವಿದೆ. ಹೆಚ್ಚಿನ ಆಯುರ್ವೇದ ಗ್ರಂಥಗಳು ಇದರ ಪ್ರಶಂಸೆಯನ್ನು ಮಾಡಿವೆ.
ಚರ್ಮದಲ್ಲಿ ಬಾವು ಕಂಡುಬಂದ ಸಂದರ್ಭದಲ್ಲಿ ಜೇಷ್ಠಮಧುವನ್ನು ನೀರಿನಲ್ಲಿ ಕಲಸಿ, ಎಳ್ಳು ಮತ್ತು ಹಾಲನ್ನು ಬೆರೆಸಿ, ಅರೆದ ನಂತರ ಬಾವು ಇರುವ ಜಾಗಕ್ಕೆ ಲೇಪಿಸಿದರೆ ಬಾವು ಕಡಿಮೆಯಾಗುವುದು.
-ಆರ್.ಪಿ.ಬಂಗಾರಡ್ಕ. M. S. (Ayu)
ಆಯುರ್ವೇದ ತಜ್ಞ ವೈದ್ಯರು
ಪ್ರಸಾದಿನೀ ಆಯುರ್ನಿಕೇತನ
ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್,
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ.
rpbangaradka@gmail.com
mob:8904474122
website:www.prasadini.com
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ