ಪುತ್ತೂರು: ಸೇನೆಯಲ್ಲಿ ಸೇರಲಿಚ್ಛಿಸುವವರಿಗೆ ದೇಶಸೇವೆ ಮಾಡುವ ಹುಮ್ಮಸ್ಸು ಇರಬೇಕು. ಮಾನಸಿಕ, ಶಾರೀರಿಕ ದೃಢತೆ ಇದ್ದರೆ ಈಗ ಸೇನೆಗೆ ಸೇರಲು ಬೇಕಾದಷ್ಟು ಅವಕಾಶಗಳಿವೆ. ಪದವಿ ಮುಗಿಸಿದ ನಂತರವೂ, ತಾಂತ್ರಿಕ, ವೈದ್ಯಕೀಯ ಪದವಿ ಪಡೆದವರಿಗೂ ಸೇನೆಯಲ್ಲಿ ಸೇರಿ ದೇಶಸೇವೆ ಮಾಡಬಹುದು. ಉತ್ತಮ ತರಬೇತಿಯ ಜೊತೆಗೆ ಶಿಕ್ಷಣ ಮುಂದುವರೆಸಲೂ ಇಲ್ಲಿ ಅವಕಾಶವಿದೆ. ಪ್ರಯತ್ನ ಪಡಿ; ಸಮಾಜ ಸೇವೆ ಮಾಡಿ; ಮಾತಾಪಿತರ ಸೇವೆ ಮಾಡಿ. ಭಾರತ ಮಾತೆಗೆ ಜಯವಾಗಲಿ. ಎಲ್ಲರಿಗೂ ಶುಭವಾಗಲಿ ಎಂದು ಕ್ಯಾಪ್ಟನ್ ದಾಸಪ್ಪ ಪೂಜಾರಿ ನಿವೃತ್ತ ಯೋಧ ಇವರು ಹೇಳಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನಿವೃತ್ತ ವೀರ ಯೋಧರಿಗೆ ನಡೆಸಿದ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಸೇನೆಯಲ್ಲಿ ಕೆಲಸ ಮಾಡುವುದು ಉದ್ಯೋಗ ಅಲ್ಲ; ಇದು ದೇಶ ಸೇವೆ. ಇದರಲ್ಲಿ ಜಾತಿ ಧರ್ಮ ಭೇದ ಇಲ್ಲ. ಮೀಸಲಾತಿ ಬೇಡ; ಇದರಲ್ಲಿ ಶಿಸ್ತು ಮುಖ್ಯ. ಅಂಬಿಕಾ ಸಂಸ್ಥೆ ಸೈನಿಕರನ್ನು ಗೌರವಿಸುವ ಉತ್ತಮ ಸಂಸ್ಕೃತಿ ಹೊಂದಿರುವುದು ಅಭಿನಂದನಾರ್ಹ ಎಂದು ಅಸ್ಸಾಂ, ರಾಜಸ್ಥಾನ, ಕಲ್ಕತ್ತಾ ಮುಂತಾದ ಕಡೆ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲೂ ಪಾಲ್ಗೊಂಡ ವೀರ ಯೋಧ ಇಂದು ಅಂಬಿಕಾದಿಂದ ಸನ್ಮಾನಿಸಲ್ಪಟ್ಟ ಹವಾಲ್ದಾರ್ ದಯಾನಂದ ನೀರ್ಪಾಡಿ ಇವರು ವಿದ್ಯಾರ್ಥಿಗಳಿಗೆ ಯೋಧರ ಬಗ್ಗೆ ಅಭಿಮಾನ ಮೂಡಿಸುವ ನುಡಿಗಳನ್ನಾಡಿದರು ಹಾಗೂ ಈ ಗೌರವ ನಮಗಲ್ಲ ದೇಶದ ವೀರ ಸೇನೆಗೆ, ಭಾರತಾಂಬೆಗೆ ಅರ್ಪಿತವಾಗಿದೆ ಎಂದು ತಿಳಿಯುತ್ತೇನೆ ಎಂದರು.
ಪುತ್ತೂರಿನ ನ್ಯಾಯಾಲಯದ ಎದುರಿನಲ್ಲೇ ಅಮರ್ ಜವಾನ್ ಜ್ಯೋತಿ ಇರುವುದು. ನಮ್ಮ ದೇಶಕ್ಕೆ ಸೈನಿಕರೇ ಆಸ್ತಿ. ಆದರೆ ನಮ್ಮ ಸೈನಿಕರಿಗೆ ನಮ್ಮ ದೇಶವೇ ಆಸ್ತಿ. ದೇಶಕ್ಕಾಗಿ ಪ್ರಾಣಾರ್ಪಣೆಗೆ ಸಿದ್ಧರಾದವರನ್ನು ಗೌರವಿಸುವಂತಹ ಸುಸಂಸ್ಕೃತಿ ಪುತ್ತೂರಿನ ಹೆಮ್ಮೆಯ ವಿದ್ಯಾಸಂಸ್ಥೆ ಅಂಬಿಕಾದ್ದಾಗಿದೆ. ಸಾಕಷ್ಟು ಯೋಧರನ್ನು ಈ ಸಂಸ್ಥೆ ದೇಶಕ್ಕಾಗಿ ಕೊಟ್ಟಿದೆ. ಅಭಿನಂದನೆಗಳು ಎಂದು ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷರಾದ ಮನೋಹರ ಕೆ.ವಿ. ಅವರು ನಿವೃತ್ತ ಸೈನಿಕರಾದ ದಾಸಪ್ಪ ಪೂಜಾರಿ ಹಾಗೂ ದಯಾನಂದ ನೀರ್ಪಾಡಿ ಇವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ವಿದ್ಯಾಲಯಕ್ಕೆ ಶುಭ ಹಾರೈಸಿದರು.
ಸೈನಿಕರನ್ನು ಸನ್ಮಾನಿಸುವ ಈ ಕಾರ್ಯಕ್ರಮವನ್ನು ಆಯೋಜಿಸುವುದು ಸೇನೆಯಲ್ಲಿ ಸೇವೆ ಸಲ್ಲಿಸಿದಷ್ಟೇ ಶ್ರೇಷ್ಠ ಕಾರ್ಯ. ಅದೆಷ್ಟೋ ಸೈನಿಕರನ್ನು ತಮ್ಮ ಸಂಸ್ಥೆಯಲ್ಲಿ ತಯಾರು ಮಾಡುವ ನಟ್ಟೋಜರಿಗೆ ಅಭಿನಂದನೆಗಳು ಎಂದು ಸಾರ್ಜೆಂಟ್ ರಾಮಚಂದ್ರ ಪುಚೇರಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಸ್ತು, ಶಿಕ್ಷಣ, ಶಿಕ್ಷೆ ಇರುವ ವಿದ್ಯಾಲಯ ಅಂಬಿಕಾ. ವಿದ್ಯಾರ್ಥಿಗಳ ಜೀವನ ಶಿಸ್ತು- ಶಿಕ್ಷಣದ ಪಥದಲ್ಲಿ ಮುಂದೆ ಸಾಗಲಿ. ಅಂಬಿಕಾ ವಿದ್ಯಾದೇಗುಲ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಶಿಕ್ಷಣ ಕೊಡುವ ಸಂಸ್ಥೆ. ಎಲ್ಲರಿಗೂ ಶುಭವಾಗಲಿ ಎಂದು ಸುಬೇದಾರ್ ರಮೇಶ್ ಬಾಬು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷರಾದ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸುವ ಸಂಕಲ್ಪವನ್ನು ಅಂಬಿಕಾ ಮಾಡಿದೆ. ಸೈನಿಕರು ಅಂಬಿಕಾದ ಆಸ್ತಿ. ದೇಶ ರಕ್ಷಣೆಯ ಮಹತ್ತರ ಹೊಣೆ ಹೊತ್ತು ಹೆಂಡತಿ ಮಕ್ಕಳಿಗಿಂತ ಹೆಚ್ಚಾಗಿ ದೇಶವನ್ನು ಪ್ರೀತಿಸುವ ಸೈನಿಕರನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಈ ದಿವ್ಯ ಚೇತನಗಳನ್ನು ಇಂದಿಲ್ಲಿ ನ್ಯಾಯದೇವತೆ - ಬಾರ್ ಕೌನ್ಸಿಲ್‌ನ ಅಧ್ಯಕ್ಷರ ಕೈಯಲ್ಲಿ ಸನ್ಮಾನಿಸಿದ ಹೆಮ್ಮೆ ನಮ್ಮದಾಗಿದೆ. ಈ ಸೈನಿಕರ ಪಾದ ಸ್ಪರ್ಶದಿಂದ ಇಂದು ಈ ನೆಲ ಪಾವನವಾಯಿತು ಎಂದು ಅಭಿಮಾನದ ನುಡಿಗಳನ್ನಾಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಸುರೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಸನ್ಮಾನಿತ ಸೈನಿಕರ ಕುಟುಂಬದವರು, ವಿದ್ಯಾರ್ಥಿಗಳು, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯರು ಅತಿಥಿಗಳನ್ನು ಸ್ವಾಗತಿಸಿದರು. ವೀರಯೋಧರನ್ನು ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಕಾಲೇಜಿಗೆ ಕರೆತಂದು ಆರತಿ ಬೆಳಗಿ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಆದಿತ್ಯ ಹೆಬ್ಬಾರರು ವಂದನಾರ್ಪಣೆಗೈದರು. ವಿದ್ಯಾರ್ಥಿಗಳಾದ ವೈಷ್ಣವಿ, ವಿಧಾತ್ರಿ, ಶಮಿತಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಗ್ರೀಷ್ಮ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿಮೋಹನ ಸಹಕರಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ