ಮಂಗಳೂರು: ನಾವು ಬೇರೆಯವರ ಮೇಲೆ ಅವಲಂಬಿತವಾಗಿರಬಾರದು. ನಮ್ಮ ಶಕ್ತಿ ನಮಗೆ ತಿಳಿದಿರಬೇಕು. ಹಾಗಾದರೆ ಮಾತ್ರ ನಾವು ಆತ್ಮವಿಶ್ವಾಸದಿಂದ ಇರಬಹುದು. ಜೀವನದಲ್ಲಿ ಎದುರಾಗುವ ಪರೀಕ್ಷೆಗಳಿಂದ ನಾವು ಪಾಠ ಕಲಿಯಬೇಕು, ಎಂದು ಬೆಂಗಳೂರಿನ ನಿಮ್ಹಾನ್ಸ್‌ನ ಜೀವನ ಕೌಶಲ ತರಬೇತುದಾರೆ ಪರ್ವೀನಾ ಯು ಟಿ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಭಾಗವಾಗಿ ಶುಕ್ರವಾರ ನಡೆದ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದ ಅವರು ಜೀವನ ಕೌಶಲ್ಯದ ಬಗ್ಗೆ ಅರಿವು ಮೂಡಿಸಿದರು. ಬಲೂನ್ ಗೇಮ್, ಪೇಪರ್ ಕ್ರಾಫ್ಟ್, ಪೇಪರ್ ವೇಷಭೂಷಣ, ಫ್ರೂಟ್ ಗೇಮ್ ಆಡಿಸುವ ಮೂಲಕ ಬದುಕಿನ ಏರಿಳಿತಗಳ ಬಗ್ಗೆ ಉದಾಹರಣೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಆನ್ಲೈನ್ ತರಗತಿಯಿಂದಾಗಿ ವಿದ್ಯಾರ್ಥಿಗಳನ್ನು ಇದುವರೆಗೆ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಲು ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮ ಅವರಲ್ಲಿ ಹೊಸ ಹುರುಪು ನೀಡಲಿದೆ ಎಂದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಸುರೇಶ್ ಸ್ವಾಗತಿಸಿ, ಡಾ.ಗಾಯತ್ರಿ ಎನ್ ವಂದಿಸಿದರು. ಕುಮಾರಿ ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್ ಸ್ವಯಂಸೇವಕರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ