-ಡಾ. ಆರ್. ಪಿ. ಬಂಗಾರಡ್ಕ
ಕೆಲವೇ ವರ್ಷಗಳ ಹಿಂದೆ ಆಕೆಗೆ ಥಟ್ಟನೆ ಎದುರಾದ ಪ್ರಶ್ನೆ- "ಕರುಳಿನಲ್ಲಿರುವ ಸೂಕ್ಷ್ಮಾಣುಗಳಲ್ಲಿನ ಏರುಪೇರುಗಳು ಹಾಗೂ ಆಸ್ತಮಾಕ್ಕೀಡಾಗುವ ಸಾಧ್ಯತೆಗೂ ಏನಾದರೂ ಸಂಬಂಧಗಳು ಇವೆಯೇ?" ಆಕೆ.ಪಿ.ಎಚ್.ಡಿ. ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ಶಾನಾನ್.
ಆಕೆ ಮಾಡಲು ತೀರ್ಮಾನಿಸಿದ್ದು ಒಂದು ಸಣ್ಣ ಪ್ರಯೋಗ. ಇಲಿಗಳಲ್ಲಿ 2 ಗುಂಪುಗಳನ್ನು ಮಾಡಿ,
ಒಂದು ಗುಂಪಿಗೆ ಹುಟ್ಟಿದಾಗಿನಿಂದ ಅವುಗಳು ಪ್ರಬುದ್ಧರಾಗುವ ತನಕ ಆಂಟಿಬಯೋಟಿಕ್ ಗಳನ್ನು ಸರಾಗವಾಗಿ ಕೊಟ್ಟಳು. ಇನ್ನೊಂದು ಗುಂಪಿನ ಇಲಿಗಳಿಗೆ ಅವುಗಳ ಮೂರನೇ ತಿಂಗಳು ಕಳೆದ ನಂತರ ಆಂಟಿಬಯೋಟಿಕ್ ಗಳನ್ನು ಆರಂಭಿಸಿದಳು. ಇಲಿಗಳಲ್ಲಿ ಅಸ್ತಮಾ ತಪಾಸಣೆ ನಡೆಸಿದಾಗ, ಫಲಿತಾಂಶವು ಪ್ರತಿಯೊಬ್ಬರನ್ನು ಆಶ್ಚರ್ಯಚಕಿತ ಗೊಳಿಸುವಂತೆ ಇತ್ತು. ಹುಟ್ಟಿದ ಕೆಲವು ವಾರಗಳ ನಂತರ ಆಂಟಿಬಯೋಟಿಕ್ ಸೇವಿಸಿದ ಇಲಿಗಳಿಗಿಂತ, ಹುಟ್ಟಿದ ತಕ್ಷಣ ಆಂಟಿಬಯೋಟಿಕ್ ಸೇವಿಸಿದ ಇಲಿಗಳಲ್ಲಿ ಅಸ್ತಮಾದ ತೀವ್ರತೆ ಅತ್ಯಂತ ಹೆಚ್ಚಾಗಿತ್ತು. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, ಅವಳು ಇಲಿಗಳಲ್ಲಿ ಇರುವ ಬಗೆಬಗೆಯ ರೋಗನಿರೋಧಕ ಕೋಶಗಳನ್ನು ಅಭ್ಯಸಿಸಿದಳು. ಆ ಕೋಶಗಳು ಹೊಲಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಲ್ಲಿ ಅಧಿಕವಾಗಿ ಕಂಡುಬರುವಂಥದ್ದು ಆಗಿದ್ದವು. ಆದರೆ ಆರಂಭದಲ್ಲಿ ಆಂಟಿಬಯೋಟಿಕ್ ಸೇವನೆಗೆ ಒಳಗಾದ ಇಲಿಗಳ ಕರುಳಿನ ಭಾಗದಲ್ಲಿ ರೆಗ್ಯುಲೇಟರಿ "ಟಿ" ಕೋಶಗಳು ಅತ್ಯಲ್ಪ ಸಂಖ್ಯೆಯಲ್ಲಿ ಕಂಡುಬಂದವು. ಆಕೆ ಆಂಟಿಬಯೋಟಿಕ್ ಗಳನ್ನು ಬಾಯಿಯ ಮೂಲಕವೇ ಇಲಿಗಳಿಗೆ ತಿನ್ನಿಸಿದ್ದಳು. ಹಾಗೆಂದು ಔಷಧಗಳು ರಕ್ತಕ್ಕೆ ಕೂಡ ಸೇರುವಂತಹದ್ದು ಆಗಿರಲಿಲ್ಲ. ಕೇವಲ ಕರುಳಿನ ಭಾಗಕ್ಕಷ್ಟೇ ಸೀಮಿತವಾಗಿತ್ತು. ಅಂದರೆ ಯಾವುದೋ ರೀತಿಯಲ್ಲಿ ಕರುಳಿನಲ್ಲಿನ ಸೂಕ್ಷ್ಮಾಣುಗಳ ನಾಶವು, ಶ್ವಾಸಕೋಶದಲ್ಲಿ ಉಂಟಾಗುವ ನಿರೋಧಕ ವ್ಯವಸ್ಥೆಯಲ್ಲಿ ಅವ್ಯವಸ್ಥೆಯ ಫಲಶ್ರುತಿಯ ಕಾಯಿಲೆ ಆಗಿ ಮಾರ್ಪಟ್ಟಿತು. ಇದು ಆಕೆಯ ವಿಶ್ಲೇಷಣೆ ಮತ್ತು ಅದರಲ್ಲಿ ಒಂದು ಅರ್ಥ ಮತ್ತು ತಾರ್ಕಿಕತೆ ಇದೆ. ಇಲಿಗಳಲ್ಲಿ ಕಂಡುಬರುವ ರೆಗುಲೇಟರಿ 'ಟಿ 'ಕೋಶಗಳ ಪ್ರಮಾಣದಲ್ಲಿ ಉಂಟಾಗುವ ಬದಲಾವಣೆಯ ಪರಿಣಾಮವು, ಮಾನವರಲ್ಲೂ ಕೂಡ ಇಂತಹದ್ದೇ ಪರಿಣಾಮದ ಒಳ ಸಂಬಂಧವನ್ನು ಹೊಂದಿದೆ.
ಕ್ಲೇರ್ ಎನ್ನುವ ಅಧ್ಯಯನಶೀಲ ವಿಜ್ಞಾನಿ ಇದೇ ಸಂದರ್ಭದಲ್ಲಿ ಆಕೆಯ ಸಂಶೋಧನೆಗಳ ಕುರಿತು ಆಸಕ್ತಿತಳೆದ. ಅಷ್ಟೇ ಅಲ್ಲ, ಮನುಷ್ಯರಲ್ಲಿ ಇದೇ ಪ್ರಯೋಗವನ್ನು ಮಾಡಿ, ಫಲಿತಾಂಶವನ್ನು ಬಹಿರಂಗಗೊಳಿಸಿದ. ಕೆನಡಾದಲ್ಲಿನ ಮಕ್ಕಳ ಮಲದ ಮಾದರಿಗಳನ್ನು ಸಂಗ್ರಹಿಸುವುದಕ್ಕೆ 2009 ನೇ ಇಸವಿಯಿಂದ ತೊಡಗಿಕೊಂಡ. 3500 ಮಕ್ಕಳ ಮಲದ ಮಾದರಿಗಳನ್ನು, ಹುಟ್ಟಿದಂದಿನಿಂದ ಅವರ ಐದು ವರ್ಷಗಳ ತನಕ ಸಂಗ್ರಹಿಸಿ, ಶೇಖರಿಸಿ ಅವುಗಳನ್ನು ಅಧ್ಯಯನಕ್ಕೆ ಒಳಗಾಗಿಸುವ ಹರಸಾಹಸಕ್ಕೆ ಕೈ ಹಾಕಿದ. ಈ ಮಾದರಿಗಳಲ್ಲಿನ ಸೂಕ್ಷ್ಮಾಣು ಪ್ರಪಂಚವನ್ನು ಕಲೆಹಾಕಿ, ಅವುಗಳನ್ನು ಶ್ರೇಣೀಕರಣಗೊಳಿಸಿ, ಪರಿಶೀಲಿಸಿದಾಗ ನಿಜಕ್ಕೂ ಆಶ್ಚರ್ಯ ಕಾದಿತ್ತು. ಮುಂದಿನ ದಿನಗಳಲ್ಲಿ ಅಸ್ತಮಾಕ್ಕೆ ಈಡಾಗಬಹುದಾದ ಮೂರು ತಿಂಗಳ ಶಿಶುಗಳಲ್ಲಿ ನಾಲ್ಕು ವಿಧದ ಉಪಕಾರಕ ಬ್ಯಾಕ್ಟೀರಿಯಾಗಳು ಕಂಡುಬರಲಿಲ್ಲ. ಇದೇ ರೀತಿಯಲ್ಲಿ, ಹಲವು ಅಧ್ಯಯನಗಳು ಶಿಶುವಿನ ಆರಂಭದ ಕೆಲವು ತಿಂಗಳುಗಳಲ್ಲಿ ತಮ್ಮ ಕರುಳಿನಲ್ಲಿ ಹೊಂದಿರುವ ಸೂಕ್ಷ್ಮಾಣುಗಳ ವೈವಿಧ್ಯವು, ಮುಂದಿನ ಬದುಕಿನಲ್ಲಿ ಅನುಭವಿಸುವ ಶ್ವಾಸಕೋಶದ ದೀರ್ಘಾವಧಿಯ ನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಗಳೊಂದಿಗೆ ಹತ್ತಿರದ ಸಂಬಂಧ ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಇಂತಹ ಪರಿಣಾಮಗಳು ಕೇವಲ ಕರುಳಿನಲ್ಲಿ ಮಲದಲ್ಲಿ ಉಪಸ್ಥಿತಿ ಹೊಂದಿರುವ ಬ್ಯಾಕ್ಟೀರಿಯಾಗಳಿಂದ ಮಾತ್ರವಲ್ಲ, ಅವುಗಳು ಉತ್ಪತ್ತಿಮಾಡುವ ಕೆಲವೊಂದು ರಾಸಾಯನಿಕಗಳನ್ನು ಕೂಡ ಅವಲಂಬಿಸಿವೆ. ಉದಾಹರಣೆಗೆ, ಎಸಿಟೇಟ್ ಅಂಶ. ಇದು ತಿರುಳಿನಲ್ಲಿನ ಬ್ಯಾಕ್ಟೀರಿಯಾಗಳಿಂದ ಉತ್ಪತ್ತಿಯಾದದ್ದು, ಶಿಶುಗಳ ಮೂತ್ರದಲ್ಲಿ ಕೂಡ ಪತ್ತೆಯಾಯಿತು. ಬ್ಯಾಕ್ಟೀರಿಯಾಗಳಿಂದ ಉತ್ಪತ್ತಿಯಾದ ದ್ರವ್ಯಗಳು ದೇಹದ ನಾನಾ ಭಾಗಗಳಿಗೆ ತಲುಪುತ್ತವೆ ಎಂಬುದಕ್ಕೆ ಕೂಡ ಇದು ಸಾಕ್ಷ್ಯ ಒದಗಿಸಿತು.
ಇನ್ನೂ ಕುತೂಹಲದ ಪ್ರಯೋಗವೊಂದನ್ನು ಕ್ಲೇರ್ ಮಾಡಿದ. ಉಪಕಾರಕ ಸೂಕ್ಷ್ಮಾಣುಗಳು ಇಲ್ಲದ ಶಿಶುಗಳ ಮಲವನ್ನು ಒಂದು ಗುಂಪಿನ ಇಲಿಗಳಿಗೆ ವರ್ಗಾಯಿಸಿದ. ಆಶ್ಚರ್ಯವೆಂದರೆ, ಆ ಇಲಿಗಳು ಕೂಡ ಮುಂದಿನ ದಿನಗಳಲ್ಲಿ ಉಸಿರಾಟದ ತೊಂದರೆಯನ್ನು ಅನುಭವಿಸಿದವು!!! ಉಪಕಾರಕ ಸೂಕ್ಷ್ಮಾಣುಗಳು ಇರುವ ಮಲವನ್ನು ಸ್ವೀಕರಿಸಿ ದಂತಹ ಇಲಿಗಳು ಮುಂದಿನ ದಿನಗಳಲ್ಲಿ ಶ್ವಾಸಕೋಶದ ತೊಂದರೆಯನ್ನು ಅಷ್ಟಾಗಿ ಅನುಭವಿಸಲಿಲ್ಲ ಮತ್ತು ಅಲರ್ಜಿ ಅಸ್ತಮಾಕ್ಕೆ ಸಂಬಂಧಿಸಿದ ರಕ್ತದಲ್ಲಿ ಕಂಡುಬರುವ ಗುರುತಿನ ಅಂಶಗಳು ಅವುಗಳಲ್ಲಿ ಕಂಡುಬರಲಿಲ್ಲ. ಇದೊಂದು ವಿಶಿಷ್ಟವಾದ ಮತ್ತು ಸೂಕ್ಷ್ಮವಾದ ಗಮನಿಸುವಿಕೆಯ ಅಧ್ಯಯನ.
ಹೀಗಿದ್ದರೂ, ಇಂದು ಇದನ್ನು ಮಾನವನಲ್ಲಿನ ಅಸ್ತಮಕ್ಕೆ ತಡೆಗಟ್ಟುವ ಒಂದು ಚಿಕಿತ್ಸಾ ಕ್ರಮವಾಗಿ ನಿರ್ಧರಿಸಿಲ್ಲ. ಆದರೂ ಈ ಅಧ್ಯಯನಗಳು ಕನ್ನಡಿ ಹಿಡಿದ ಅಂಶಗಳಿಗೆ ಗಮನ ಕೊಟ್ಟಲ್ಲಿ ಅಸ್ತಮಾ ಎಂಬುದು ಸಾಂಕ್ರಾಮಿಕವಾಗದಂತೆ ಒಂದು ಮಾರ್ಗವನ್ನು ಜನಾಂಗವು ಕಂಡುಕೊಳ್ಳಬಹುದು.
ಬಹುಶಃ, ಮೂರು ತಿಂಗಳ ಶಿಶುವಿನ ಕರುಳಿನಲ್ಲಿನ ಸೂಕ್ಷ್ಮಾಣು ಜೀವಿಗಳು, ಮುಂದಿನ ದಿನಗಳಲ್ಲಿ ಆ ಮಗುವಿನ ಶಾಲಾ ದಿನಗಳಲ್ಲಿ ಅಲರ್ಜಿಯಿಂದ ಉಂಟಾಗಬಹುದಾದ ಅಸ್ತಮಾವನ್ನು ಸೃಷ್ಟಿಸಬಹುದು ಎಂಬುದು ಸಂಬಂಧವಿಲ್ಲದ ಎರಡು ಧ್ರುವಗಳಂತೆ ಕಂಡರೂ, ಆಯುರ್ವೇದದ ಪ್ರಾಚೀನ ದೃಷ್ಟಿಕೋನ ಹಾಗೂ ಆಧುನಿಕ ಗಮನಶೀಲ ಅಧ್ಯಯನಗಳು ಈ ಕುರಿತಾಗಿ ಸ್ಪಷ್ಟೀಕರಿಸುತ್ತಿವೆ.
ಇನ್ನೊಂದು ಪ್ರಾಮುಖ್ಯವಾದ ಅಧ್ಯಯನ. 5000 ಮಕ್ಕಳ ಬೃಹತ್ ಅಧ್ಯಯನವು ಮತ್ತೊಂದು ಸಂದೇಶವನ್ನು ನೀಡುತ್ತದೆ. ವಿಟಮಿನ್ ಡಿ ಕೊರತೆ ಇರುವ ಶಿಶುಗಳಲ್ಲಿ, ಆಹಾರದ ಅಲರ್ಜಿ ಮತ್ತು ಅಲರ್ಜಿ ಅಸ್ತಮಾ ಉಂಟಾಗುವ ಅಪಾಯವು ಅತ್ಯಂತ ಹೆಚ್ಚು. ಈಗಾಗಲೇ ತಿಳಿದಿರುವಂತೆ, ವಿಟಮಿನ್ ಡಿ ಅಂಶವು ಅದ್ಭುತವಾದ Antiinflammatory ಅಂದರೆ ಉರಿಯೂತ ನಿವಾರಕ. ಅಷ್ಟೇ ಅಲ್ಲ, ಅಲರ್ಜಿ ಲಕ್ಷಣಗಳನ್ನು ಅಭಿವ್ಯಕ್ತಗೊಳಿಸುವ ದೇಹದ ರೋಗನಿರೋಧಕ ಪ್ರತಿಕ್ರಿಯಾತ್ಮಕ ಕ್ರಿಯೆಗೆ (allergic reactions) ಕಾರಣವಾದ ಕೋಶಗಳನ್ನು ದಮನಗೊಳಿಸುವಂತದ್ದು.
ಇನ್ನೂ ಒಂದು ಹೆಜ್ಜೆ ಮುಂದುವರಿದರೆ, ಕರುಳಿನಲ್ಲಿನ ಸೂಕ್ಷ್ಮಾಣುಗಳು ಮತ್ತು ನಿರೋಧಕ ವ್ಯವಸ್ಥೆಯ ಪ್ರತಿಕ್ರಿಯಾತ್ಮಕ ಕೋಶಗಳ ನಡುವಿನ ಸಂವಹನದ ಮಧ್ಯವರ್ತಿಯಾಗಿ ವಿಟಮಿನ್ "ಡಿ" ಇದೆ! ಎಂದು ತರ್ಕಿಸಲಾಗಿದೆ. ಆದಕಾರಣ, ಶಿಶುಗಳನ್ನು ಮುಂಜಾನೆಯ ಮತ್ತು ಮುಸ್ಸಂಜೆಯ ಸೂರ್ಯ ರಶ್ಮಿಗೆ ಒಡ್ಡುವುದು, ಅತ್ಯಂತ ಪ್ರಯೋಜನಕಾರಿ. ಇದಕ್ಕೆ "ಸೂರ್ಯ ಸ್ನಾನ" ಮಾಡಿಸುವುದು ಎಂಬುದು ರೂಢಿಯ ಮಾತು. ಏಕೆಂದರೆ ಎಳೆಬಿಸಿಲು ಚರ್ಮದ ಮೇಲೆ ಬಿದ್ದಾಗ ಅದು ಅಲ್ಲಿ 'ವಿಟಮಿನ್ ಡಿ' ಉತ್ಪಾದಿಸಲು ಸಮರ್ಥ. ಇಂತಹ ಒಂದು ಸರಳ ಪ್ರಾಕೃತಿಕ ಸಂಗತಿ, ಮುಂದಕ್ಕೆ ಕಾಯಿಲೆಗಳನ್ನು ತಡೆಗಟ್ಟಬಹುದು ಎಂಬುದು ನಮ್ಮೆಲ್ಲರಿಂದ ಅವಗಣನೆಗೆ ಒಳಗಾದ ವಿಷಯ. ಆದಕಾರಣ ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಲು ಬಿಡುವುದು, ದನ ಇತ್ಯಾದಿ ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ತರುವುದು, ಸೂರ್ಯನ ಬಿಸಿಲಿಗೆ ಹಿಡಿಯುವುದು ಇತ್ಯಾದಿಗಳೆಲ್ಲವೂ ಮುಂದಿನ ದಿನಗಳ ಅಗತ್ಯ ಚಿಕಿತ್ಸಾ ವಿಧಾನಗಳಾಗಿ ಸ್ವೀಕೃತವಾಗಬಹುದು! ಅಲ್ಲವೇ?
ಆಯುರ್ವೇದದಲ್ಲಿ ಜೀರ್ಣಾಂಗವ್ಯೂಹಕ್ಕೆ "ಮಹಾ ಸ್ರೋತಸ್" ಎಂಬ ಹೆಸರು ಅನ್ವರ್ಥವಾಗಿದೆ. ಇದು "ಮಹಾ", ಅಂದರೆ ತನ್ನ ಕಾರ್ಯವ್ಯಾಪ್ತಿಯಲ್ಲಿ ಅತ್ಯಂತ ದೊಡ್ಡದು, ಸಂಕೀರ್ಣವಾದದ್ದು. ಏಕೆಂದರೆ ದೇಹದ ಒಳಗಿನ ಎಲ್ಲಾ ಮಾರ್ಗಗಳಲ್ಲೂ ಈ ಜೀರ್ಣ ಮಾರ್ಗವು, ಪೋಷಣೆ ಹಾಗೂ ಕಾಯಿಲೆಯ ದೃಷ್ಟಿಯಿಂದಲೂ ಅತ್ಯಂತ ಪ್ರಾಮುಖ್ಯವಾದದ್ದು. ಆಯುರ್ವೇದದ ಪ್ರಕಾರ ಇದು ವಾತ, ಪಿತ್ತ, ಕಫ ಇತ್ಯಾದಿ ದೋಷಗಳ ಉಗಮಸ್ಥಾನ. ಕರುಳಿನ ಕೊನೆಯ ಭಾಗಕ್ಕೆ ಗುದದ್ವಾರದ ಮೂಲಕ ಔಷಧ ಪ್ರಯೋಗಿಸಿ ಮಾಡುವ ಚಿಕಿತ್ಸೆಗೆ ಬಸ್ತಿ ಚಿಕಿತ್ಸೆ ಎನ್ನುತ್ತಾರೆ. ಆ ಸಂದರ್ಭದಲ್ಲಿ ಕರುಳಿನ ಕೊನೆಯ ಭಾಗವನ್ನು ಮರದ ಬೇರಿಗೂ, ದೇಹದ ಇತರ ಅಂಗಾಂಗಗಳನ್ನು ವೃಕ್ಷದ ಭಾಗಗಳಿಗೂ ಹೋಲಿಕೆ ಮಾಡಲಾಗಿದೆ. ಅಂದರೆ ಬೇರಿಗೆ ಹಾಕಿದ ನೀರು ಯಾವ ರೀತಿ ವೃಕ್ಷದ ಎಲ್ಲಾ ಭಾಗಗಳಿಗೂ ತಲುಪುವುದೋ, ಅದೇ ರೀತಿಯಲ್ಲಿ ಕರುಳಿನ ಕೊನೆಯ ಭಾಗಕ್ಕೆ ಪ್ರಯೋಗವಾದ ಔಷಧವು ದೇಹದಲ್ಲಿ ಸರ್ವತ್ರ ವ್ಯಾಪಿಸುವುದು. ಆ ಮೂಲಕ ನಿರೀಕ್ಷಿತ ಪರಿಣಾಮವನ್ನು ಬೀರುವುದು.
ಅಂದರೆ, ಈ ಜೀರ್ಣಾಂಗವ್ಯೂಹ ಮತ್ತು ದೇಹದ ಇತರ ವ್ಯವಸ್ಥೆಗಳ ನಡುವಿನ ಅಂತಸ್ಸಂಬಂಧ ಯಾವ ರೀತಿ ಇಂದು ವೈಜ್ಞಾನಿಕವಾಗಿ ಅಧ್ಯಯನಗಳ ಮೂಲಕ ದೃಢೀಕರಣ ಗೊಳ್ಳುತ್ತಿರುವುದೋ, ಅದನ್ನೇ ಆಯುರ್ವೇದದಲ್ಲಿ ಪ್ರಾಚೀನರು ಹೇಳಿದ್ದರು ಎಂಬ ಒಂದು ಅಂಶ ಇಲ್ಲಿ ಗಮನಾರ್ಹ. ಆಯುರ್ವೇದದ ಮೂಲ ಸಿದ್ಧಾಂತಗಳಿಗೆ ಈ ಎಲ್ಲಾ ಪ್ರಯೋಗಗಳು ಬೆಳಕನ್ನು ಚೆಲ್ಲುವ ಮಗ್ಗುಲುಗಳು ಅಷ್ಟೆ.
-ಡಾ.ಆರ್.ಪಿ.ಬಂಗಾರಡ್ಕ. M. S. (Ayu)
ಆಯುರ್ವೇದ ತಜ್ಞ ವೈದ್ಯರು
ಪ್ರಸಾದಿನೀ ಆಯುರ್ನಿಕೇತನ , ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ.
rpbangaradka@gmail.com
mob:8904474122
website:www.prasadini.com
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ