ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ; ನಾನಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

Upayuktha
0


ಪುತ್ತೂರು:  ಹತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರನ ಊರಾದ ಪುತ್ತೂರಿನಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶಿವಾರ್ಪಣಂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾರ್ಚ್‌ 1ರಂದು ಮಂಗಳವಾರ ಜರಗಲಿದೆ.


ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಹಿಮಗಿರಿ ವೇದಿಕೆಯಲ್ಲಿ- ಧ್ಯಾನಮೂರ್ತಿ ಶಿವನ ಮುಂಭಾಗದಲ್ಲಿ ಮುಂಜಾನೆ 6:45ರಿಂದ ಮರುದಿನ ಮುಂಜಾನೆ ತನಕ ವಿವಿಧ ತಂಡಗಳಿಂದ ಭಜನೆ, ಕುಣಿತ ಭಜನೆ ನಿರಂತರವಾಗಿ ನಡೆಯಲಿದೆ.


ಶಾಲಾ ವಿದ್ಯಾರ್ಥಿಗಳಿಗಾಗಿ ಪೂರ್ವಾಹ್ನ 9:00 ಗಂಟೆಯಿಂದ ಭಗವಾನ್ ಶಿವನ ವಿವಿಧ ರೂಪಗಳ ಛದ್ಮವೇಷ ಸ್ಪರ್ಧೆ ಜರಗಲಿದೆ. 1ರಿಂದ 4ನೇ ತರಗತಿ ವರೆಗಿನ ಮಕ್ಕಳು ಹಾಗೂ 5ರಿಂದ 10ನೇ ತರಗತಿ ವರೆಗಿನ ಮಕ್ಕಳು - ಈ ರೀತಿ ಎರಡು ವರ್ಗಗಳಲ್ಲಿ ಈ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಬಾಲಶಿವ, ನಟರಾಜ, ತಾಂಡವಶಿವ, ಯೋಗಿ ಶಿವ, ರೌದ್ರಾವತಾರ ಶಿವ- ಇಷ್ಟು ವಿಭಾಗಗಳಲ್ಲಿ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ. ಇದರ ಪ್ರಾಯೋಜಕತ್ವವನ್ನು ಮುಳಿಯ ಫೌಂಡೇಶನ್‌, ನಿವೃತ್ತ ನೌಕರರ ಸಂಘ ಪುತ್ತೂರು ಮತ್ತು ದ ವೆಬ್ ಪೀಪಲ್‌ ವಹಿಸಿಕೊಂಡಿವೆ.


ಅಪರಾಹ್ನ 2 ಗಂಟೆ ಯಿಂದ 3:30ರ ವರೆಗೆ ಮಕ್ಕಳ ಯಕ್ಷಗಾನ ತಾಳಮದ್ದಳೆ- 'ಶಿವಭಕ್ತಿ ವೀರಮಣಿ' ನಡೆಯಲಿದೆ. ಶ್ರೀಮತಿ ಪದ್ಮಾ ಕೆ.ಆರ್ ಆಚಾರ್ಯ ಅವರ ನಿರ್ದೇಶನದಲ್ಲಿ ಧೀಶಕ್ತಿ ಬಾಲಿಕಾ ಯಕ್ಷ ಬಳಗದವರು ಇದನ್ನು ನಡೆಸಿಕೊಡಲಿದ್ದಾರೆ.


ಸಂಜೆ 3:30ರಿಂದ 6:30ರ ವರೆಗೆ ಸಂಸ್ಕಾರ ಭಾರತ ಪುತ್ತೂರು ಇವರ ಸಂಯೋಜನೆಯಲ್ಲಿ ಶಾಸ್ತೀಯ ಸಂಗೀತ ಕಾರ್ಯಕ್ರಮವಿದೆ.


ಸಂಜೆ 6:30ರಿಂದ 9:30ರ ವರೆಗೆ ಹಿಮಗಿರಿ ವೇದಿಕೆಯಲ್ಲಿ 'ಭರತನಾಟ್ಯ' ಕಾರ್ಯಕ್ರಮವಿದೆ. ಪುತ್ತೂರಿನ ಪ್ರತಿಷ್ಠಿತ ನಾಟ್ಯಶಾಲೆಗಳು ಈ ಕಾರ್ಯಕ್ರಮದಲ್ಲಿ ಸಹಕರಿಸಲಿವೆ.


ರಾತ್ರಿ 9:30ರಿಂದ 10:30ರ ವರೆಗೆ ವಸಂತ ಕಟ್ಟೆಯಲ್ಲಿ ಶ್ರೀ ದೇವರ ಮುಂದೆ 'ಅಷ್ಟಾವಧಾನ ಸೇವೆ' ಜರಗಲಿದೆ.


ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಭಕ್ತಾದಿಗಳು ಪಾಲ್ಗೊಂಡು, ವೀಕ್ಷಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಬೇಕೆಂದು ದೇವಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ತಂತ್ರಿಗಳು ಮತ್ತು ಅರ್ಚಕವೃಂದ, ಕಾರ್ಯನಿರ್ವಹಣಾಧಿಕಾರಿ ಮತ್ತು ನೌಕರವೃಂದ ಪ್ರಕಟಣೆಯಲ್ಲಿ ಕೋರಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top