ಪುತ್ತೂರು: ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ ಫೆ.12 ಶನಿವಾರ ಪರ್ಲಡ್ಕದ ಡಾ.ಶಿವರಾಮ ಕಾರಂತ ಬಾಲವನದ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಕ.ಸಾ.ಪ. ತಾಲೂಕು ಘಟಕದ ನೂತನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯುವಜನತೆಯಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದರ ಜತೆಗೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಘಟಕಕ್ಕೆ ಸ್ವಂತ ಕಟ್ಟಡ, ನವಸಾಹಿತಿಗಳನ್ನು ಘಟಕಕ್ಕೆ ಸ್ವಾಗತಿಸಿ ವೇದಿಕೆ ಕಲ್ಪಿಸುವುದು, ತಾಲೂಕಿನ ಹಿರಿಯ ಸಾಹಿತಿಗಳಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದು, ಕೃತಿಗಳ ಪುನರ್ ಅನಾವರಣ, ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳುವುದು ಮುಂತಾದ ಸುಮಾರು 13 ಯೋಜನೆಗಳ ಪಟ್ಟಿಯನ್ನು ಈ ಸಂದರ್ಭದಲ್ಲಿ ಅವರು ಮುಂದಿಟ್ಟರು.
ಫೆ.12 ರಂದು ಮಧ್ಯಾಹ್ನ 3.30 ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ, ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಸಮಾರಂಭ ಉದ್ಘಾಟಿಸಲಿದ್ದು, ಶಾಸಕ ಸಂಜೀವ ಮಠಂದೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸುವರು. ಪುತ್ತೂರು ಸಹಾಯಕ ಆಯುಕ್ತ ಗಿರೀಶ ನಂದನ್ ಅವರು ವಿದ್ಯಾರ್ಥಿನಿ ದೀಪ್ತಿ ಬಿ. ಬರೆದ “ಹೊಂಗನಸು” ಕವನ ಸಂಕಲನ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಎಸ್.ಜಿ.ಕೃಷ್ಣ ಅವರು ಬರೆದ “ದೇವರು ಇಲ್ಲೇ ಇದ್ದಾನೆ” ಕೃತಿಯನ್ನು ಅನಾವರಣಗೊಳಿಸುವರು. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಘಟಕದ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಹಿರಿಯ ಸಾಹಿತಿ ವಿ.ಬಿ.ಅರ್ತಿಕಜೆ, ಕೋಶಾಧ್ಯಕ್ಷ ಡಾ. ಹರ್ಷಕುಮಾರ್ ರೈ ಮಾಡಾವು ಉಪಸ್ಥಿತರಿದ್ದರು.