ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿಕ್ಷಕ- ರಕ್ಷಕ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆಯಿತು.
ಶಿಕ್ಷಕ- ರಕ್ಷಕ ಸಂಘದ ನೂತನ ಕಾರ್ಯಾಧ್ಯಕ್ಷರಾಗಿ ಎಂ. ಪುರುಷೋತ್ತಮ ಭಟ್ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅನುಪಮಾ ಅನಂತಮೂರ್ತಿ, ಸುರೇಶ್ ಆಚಾರ್ಯ ಹಾಗೂ ಉಷಾ ಆಯ್ಕೆಯಾದರು. ಸಹ ಕಾರ್ಯದರ್ಶಿಯಾಗಿ ಎಡ್ವರ್ಡ್ ಲೋಬೋ, ಸಾಮಾನ್ಯ ಸದಸ್ಯರಾಗಿ ಯೋಗೀಶ್ ಸುವರ್ಣ, ಜಿ. ಕರುಪ್ಪಣ್ಣನ್, ಗಂಗಾಧರ ಎಸ್ ಎನ್, ಶಿವರಾಮ ಕೆ, ರೇಣುಕಾ ಮತ್ತು ಶೇಷಪ್ಪ ಅವರು ಆಯ್ಕೆಯಾದರು.
ಶಿಕ್ಷಕರ ವತಿಯಿಂದ ಪ್ರಾಂಶುಪಾಲೆ ಡಾ. ಅನಸೂಯ ರೈ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಡಾ. ಉಷಾ ಕೆ ಎಂ ಹಾಗೂ ಡಾ. ಲತಾ ಪಂಡಿತ್, ಕಾರ್ಯದರ್ಶಿಯಾಗಿ ಅರುಣಾ ಕುಮಾರಿ, ಖಜಾಂಜಿಯಾಗಿ ಡಾ. ಇಂದಿರಾ ಕೆ, ಪದನಿಮಿತ್ತ ಸದಸ್ಯರಾಗಿ ಡಾ. ಕುಮಾರ ಸುಬ್ರಹ್ಮಣ್ಯ ಭಟ್, ಡಾ. ಸುರೇಶ್, ಡಾ. ಹರೀಶ್ ಎ, ಸಾಮಾನ್ಯ ಸದಸ್ಯರಾಗಿ ಡಾ. ಜಯರಾಜ್ ಎನ್, ಡಾ. ಸುಧಾ ಎನ್ ವೈದ್ಯ ಹಾಗೂ ಡಾ. ಭಾರತೀ ಪಿಲಾರ್ ಆಯ್ಕೆಯಾದರು.
ಈವರೆಗೆ ಸಂಘದ ಕಾರ್ಯಾಧ್ಯಕ್ಷರಾಗಿದ್ದ ಹೇಮಲತಾ ಎನ್ ಮಾತನಾಡಿ, 150 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿರುವ ವಿದ್ಯಾಸಂಸ್ಥೆ ವಿದ್ಯಾದಾನದ ಮೂಲಕ ಸಮಾಜಕ್ಕೆ ಅಂತಃಸ್ಸತ್ವವಿರುವ ಪ್ರಜಾವರ್ಗವನ್ನು ಕೊಡುತ್ತಿದೆ, ಎಂದರಲ್ಲದೆ ಸಂಸ್ಥೆಗೆ ಸೇವೆ ಸಲ್ಲಿಸಲು ಸಾಧ್ಯವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರೂ ಆಗಿರುವ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರು ಕೋವಿಡ್ ಸಾಂಕ್ರಾಮಿಕದಿಂದ ಉಂಟಾದ ಸವಾಲಿನ ಸಂದರ್ಭದಲ್ಲಿ ಸಹಕರಿಸಿದ ಸಂಘದ ಹಿಂದಿನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಹೊಸ ಪದಾಧಿಕಾರಿಗಳಿಗೆ ಶುಭಕೋರಿದರು.
ನೂತನ ಕಾರ್ಯಾಧ್ಯಕ್ಷ ಎಂ. ಪುರುಷೋತ್ತಮ ಭಟ್, ರಕ್ಷಕರ ಪ್ರತಿನಿಧಿಯಾಗಿ, ಪ್ರಾಂಶುಪಾಲರ ಇಚ್ಛೆಗೆ ಪೂರಕವಾಗಿ ಕೆಲಸ ಮಾಡುವ ಭರವಸೆ ನೀಡದರು. ಈ ಮೊದಲು ವಿದ್ಯಾರ್ಥಿ ಸಂಘ ಸಹಾಧ್ಯಕ್ಷ ಡಾ. ಹರೀಶ್ ಎ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಅರುಣಾ ಕುಮಾರಿ ಎರಡು ವರ್ಷಗಳ ವಾರ್ಷಿಕ ವರದಿ ಮಂಡಿಸಿದರು. ಖಜಾಂಜಿ ಡಾ. ಇಂದಿರಾ ಕೆ ಆಯವ್ಯಯ ಮಂಡಿಸಿದರು. ರಕ್ಷಕರು ಮತ್ತು ಶಿಕ್ಷಕರ ನಡುವೆ ಸಂವಾದ ನಡೆಯಿತು.
ಹೊಸ ಸದಸ್ಯರ ಆಯ್ಕೆಯನ್ನು ವಿದ್ಯಾರ್ಥಿ ಕ್ಷೇಮಪಾಲಕ ಡಾ. ಕುಮಾರ ಸುಬ್ರಹಣ್ಯ ಭಟ್ ನಿರ್ವಹಿಸಿದರು. ಡಾ. ಸುರೇಶ್ ಧನ್ಯವಾದ ಸಮರ್ಪಿಸಿದರು. ಡಾ. ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ಪೂರ್ವತನ ಪ್ರಾಂಶುಪಾಲ ಡಾ. ಉದಯ್ ಕುಮಾರ್ ಎಂ ಎ ಸೇರಿದಂತೆ ಹಿರಿಯ-ಕಿರಿಯ ಪ್ರಾಧ್ಯಾಪಕರು ಸಭೆಯಲ್ಲಿ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ