ಪುತ್ತೂರು: ಫೆಬ್ರವರಿ 14ಕ್ಕೆ ಹಲವು ಇತಿಹಾಸಗಳಿವೆ. ಭಾರತವನ್ನು ವಿಶ್ವಗುರುವಾಗಿ ಪರಿಚಯಿಸಿದ ಸ್ವಾಮಿ ವಿವೇಕಾನಂದರು, ಮದ್ರಾಸಿನಲ್ಲಿ ಭಾರತದ ಭವಿಷ್ಯದ ಕುರಿತು ಮಾತನಾಡಿ, ಇಂದಿಗೆ 125 ವರ್ಷಗಳೇ ಸಂದಿವೆ. 2019ರಲ್ಲಿ ಪುಲ್ವಾಮದಲ್ಲಿ ನಡೆದ, ದೇಶವೇ ಕಂಡರಿಯದ ಆತ್ಮಾಹುತಿ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಇಲ್ಲಿನ ವಿವೇಕಾನಂದ ಪದವಿ ಮಹಾವಿದ್ಯಾಲಯದ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಮಂಜುನಾಥ್ ಜೋಡುಕಲ್ಲು ಹೇಳಿದರು.
ಅವರು ಕಾಲೇಜಿನ ಎನ್‌ಸಿಸಿ ಘಟಕದ ಆಶ್ರಯದಲ್ಲಿ 'ಪುಲ್ವಾಮ ದಾಳಿ ವೀರ ಯೋಧರ ಸ್ಮರಣೆ' ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಸೋಮವಾರ ಮಾತನಾಡಿದರು.
ವಿದ್ಯಾವಂತರೇ ಪುಲ್ವಾಮ ದಾಳಿಯಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ವಿಪರ್ಯಾಸ. ಇಂತಹ ದಾಳಿಗೆ ಮೂಲ ಕಾರಣವೇ ಮತಾಂಧತೆ ಹಾಗೂ ಮೂಡನಂಬಿಕೆ. ರಾಷ್ಟ್ರಕ್ಕಾಗಿ ದುಡಿದು ಮಡಿದವರ ಸ್ಮರಣೆಯ ಮೂಲಕ ಯುವಕರಲ್ಲಿ ರಾಷ್ಟ್ರೀಯ ಚಿಂತನೆಯನ್ನು ಮೂಡಿಸುವ ಕಾರ್ಯವಾಗಬೇಕು. ಗಡಿಯಲ್ಲಿ ಯೋಧರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ರಾಷ್ಟ್ರದ ಹಿತಚಿಂತನೆಯ ಮೂಲಕ ದೇಶ ಸೇವೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಹವಾಮಾನವನ್ನು ಲೆಕ್ಕಿಸದೇ ಯೋಧರು ದೇಶವನ್ನು ಕಾಯುತ್ತಿದ್ದಾರೆ. ರಾಷ್ಟ್ರದ ರಕ್ಷಣೆಗೆ ನಿಂತವರನ್ನು ಸಾರ್ವಜನಿಕರು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಮೈಗೂಡಿಸುವ ಕಾರ್ಯವನ್ನು ಇಂತಹ ಕಾರ್ಯಕ್ರಮಗಳ ಮೂಲಕ ಮಾಡಬೇಕು ಎಂದು ತಿಳಿಸಿ, ಹುತಾತ್ಮ ಯೋಧರನ್ನು ಸ್ಮರಿಸಿದರು.
ಈ ಸಂದರ್ಭ ಹುತಾತ್ಮ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆ. ಭಾಮಿ ಅತುಲ್ ಶೆಣೈ ಉಪಸ್ಥಿತರಿದ್ದರು. ದ್ವಿತೀಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ವಂದಿಸಿ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಮನಿಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ