ಪ್ರೀತಿಯೇ ಹಾಗೆ. ಬೇಕೆಂದಾಗ ಹುಟ್ಟುವುದಿಲ್ಲ, ಹುಟ್ಟಿದರೂ ಶಾಶ್ವತವಾಗಿರುವುದಿಲ್ಲ. ಕೆಲವು ಅದೃಷ್ಟವಂತರಿಗಷ್ಟೇ ಅದು ಒಲಿಯುತ್ತದೆ. ಇದು ಭಾವನೆಗಳ ಬಂಧ. ಪರಮಾತ್ಮ ಕೃಷ್ಣನಿಗೆ ರಾಧೆ ಸಿಗಲಿಲ್ಲವಾದರೂ ಆತನ ಮನಸ್ಸಲ್ಲಿದ್ದ ಪ್ರೀತಿ ರಾಧೆಗಷ್ಟೇ ಸೀಮಿತವಾಗಿತ್ತು. ಅದನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ.
ಇಂತಾ ಪ್ರೀತಿಗೆಂದೇ ಇರುವ ದಿನ ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ಸ್ ಡೇ. ಸಂತ ವೆಲೆಂಟೈನ್ ನ ನೆನಪಿನಲ್ಲಿ ವ್ಯಾಲೆಂಟೈನ್ಸ್ ದಿನವನ್ನು ಆಚರಿಸಲಾಗುತ್ತದೆ. ಆವನೂ ನಮ್ಮ ನಿಮ್ಮಂತೆ ರೋಮ್ ನ ಒಬ್ಬ ಸಾಮಾನ್ಯ ವ್ಯಕ್ತಿಯೇ. ಆಗ ರೋಮ್ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಜನೊಬ್ಬ ಯಾವುದೇ ಸೈನಿಕರು ಹಾಗೂ ಸರಕಾರಿ ನೌಕರರು ಮದುವೆಯಾಗಬಾರದು ಎಂದು ಕಠಿಣ ನೀತಿ ಜಾರಿಗೊಳಿಸಿದ್ದನಂತೆ. ಮದುವೆಯಾದರೆ ಅವರ ಶಕ್ತಿ ಯೋಚನಾಶಕ್ತಿ ಕಡಿಮೆಯಾಗುತ್ತದೆ ಎಂಬುದು ಅವನ ಭಾವನೆಯಾಗಿತ್ತು!
ಆದರೆ ರಾಜನ ಈ ನೀತಿ ಸಂತ ವ್ಯಾಲೆಂಟೈನ್ಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಸೈನಿಕರು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಗುಟ್ಟಾಗಿ ಅವರ ಮದುವೆ ಮಾಡಿಸುತ್ತಿದ್ದರಂತೆ. ವಿಷಯ ಅದೇಗೋ ರಾಜನ ಕಿವಿಗೂ ಬಿತ್ತು. ರಾಜ ಸಂತನನ್ನು ಆಸ್ಥಾನಕ್ಕೆ ಕರೆಸಿ ವಿಚಾರಿಸಿದಾಗ ಅವನು ಹೌದೆಂದು ಒಪ್ಪಿಕೊಳ್ಳುತ್ತಾನೆ. ಪ್ರೀತಿಸುವುದು ತಪ್ಪಲ್ಲ, ಪ್ರೀತಿಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಅದು ಅವರವರ ಮನಸ್ಸಿನ ಭಾವನೆಗಳಿಗೆ ಬಿಟ್ಟದ್ದು ಎಂದು ವಾದಿಸುತ್ತಾನೆ. ಇದರಿಂದ ಕೋಪಗೊಂಡ ರಾಜ ಸಂತ ವ್ಯಾಲೆಂಟೈನ್ಗೆ ಮರಣದಂಡನೆ ವಿಧಿಸುತ್ತಾನೆ. ಅವನ ಈ ಬಲಿದಾನದ ನೆನಪಿಗಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಲಾಗುತ್ತದೆ.
ಬೇಸರದ ಸಂಗತಿಯೆಂದರೆ ಈಗ ಪೊಳ್ಳು ಪ್ರೀತಿಯನ್ನೇ ನಾವು ಎಲ್ಲೆಡೆ ಕಾಣುತ್ತೇವೆ. ಅದೆಷ್ಟೋ ಮಂದಿ ಪ್ರೀತಿಸಿ ಮೋಸ ಹೋಗಿರುತ್ತಾರೆ ಅಥವಾ ಕೇವಲ ಕ್ಷಣಿಕ ಸುಖಕ್ಕೋಸ್ಕರ ಪ್ರೀತಿಸುತ್ತಾರೆ. ಪ್ರೀತಿಯೆಂದರೆ ನಿಷ್ಕಲ್ಮಶ ಮನಸ್ಸಿನ ಭಾವನೆಗಳ ಬಂಧ. ಆಗ ಮಾತ್ರ ಅದು ಶಾಶ್ವತವಾಗಿ ಉಳಿಯಲು ಸಾಧ್ಯ. ಯಾವುದೇ ಆಸ್ತಿ ಅಂತಸ್ತು ನೋಡಿ ಪ್ರೀತಿ ಮಾಡಿದರೆ ಅದು ಶಾಶ್ವತವಾಗಿ ಉಳಿಯದು. ಕೆಲವೊಮ್ಮೆ ಯುವ ಹೃದಯಗಳ 'ಪ್ರೀತಿ' ಕ್ಷಣಿಕ ಆಕರ್ಷಣೆಯಾಗಿರುತ್ತದೆಯೇ ಹೊರತು ಅಲ್ಲಿ ಬದ್ಧತೆಯಿರುವುದಿಲ್ಲ.
ಅದೆಷ್ಟೋ ಬಾರಿ ಭಗ್ನ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಇಲ್ಲವೇ ಸಿಗದ ತನ್ನ ಪ್ರೇಮಿಯನ್ನೇ ಕೊಂದು ಬಿಡುವ ಹುಚ್ಚು ನಿರ್ಧಾರ ಮಾಡುತ್ತಾರೆ. ಪ್ರೀತಿ ಮನಸ್ಸುಗಳ ವಿಷಯ, ಇಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ. ತಾನು ಪ್ರೀತಿಸುವವರು ಎಲ್ಲೇ ಇದ್ದರೂ ಚೆನ್ನಾಗಿರಲಿ ಎನ್ನುವುದೇ ನಿಜವಾದ ಪ್ರೀತಿ.
ಪ್ರೀತಿಯ ಅಮಲಲ್ಲಿ ಗುರಿ ಮರೆತರೆ ಹೇಗೆ..!? ಪ್ರೀತಿಯ ಬೆನ್ನುಬೀಳುವ ಮುನ್ನ ನಮ್ಮ ಗುರಿಯ ಹಿಂದೆ ಸಾಗೋಣ. ಆಗ ಸಹಜವಾಗಿಯೇ ಇತರರು ನಮ್ಮ ಹಿಂದೆ ಬರುವಂತಾಗುತ್ತದೆ. ಪ್ರೀತಿಸುವವರು ನೋವುಣ್ಣಲೂ ಸಿದ್ಧರಾಗಿರಬೇಕು! ಸಿಗದ ಪ್ರೀತಿಗೆ ಕೊರಗಿ ನಮ್ಮನ್ನು ಪ್ರೀತಿಸುವವರನ್ನು ಮರೆಯಲು ಸಾಧ್ಯವೇ… ಅವರಿಗಾಗಿಯಾದರೂ ನಾವು ಬದುಕಲೇಬೇಕು. ಅದು ನಮ್ಮ ಕರ್ತವ್ಯವೂ ಹೌದು. ಪ್ರೀತಿಸೋಣ, ಆದರೆ ಪ್ರೀತಿಗೆ ಬಲಿಯಾಗದಿರೋಣ.
✍ ಪ್ರಜ್ವಲ್ ಸಿ
ದ್ವಿತೀಯ ಬಿಎ, ಪತ್ರಿಕೋದ್ಯಮ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ