ಯಾಗ ಮಾಡಿ ಹರಸಿದ ಋತ್ವಿಜರಿಗೆ ಮೋದಿ ದಕ್ಷಿಣೆ- ಡಿಜಿಟಲ್ ಪಾವತಿ

Upayuktha
0

 ಬ್ರಹ್ಮಾರ್ಪಣ ಮಾಡಿದ ಬಳಿಕ ದಕ್ಷಿಣೆ ನೀಡಬೇಕು ಎಂಬ ಭಾವ ಪ್ರಧಾನಿಗೆ ಮೂಡಿದ ಕುರಿತು ಪುರೋಹಿತರಿಗೆ ಹರ್ಷಾಭಿಮಾನ



ಜಿತೇಂದ್ರ ಕುಂದೇಶ್ವರ ಮಂಗಳೂರು


ಮಹಾ ಮೃತ್ಯುಂಜಯ ಯಾಗ ಮಾಡಿ ಹರಸಿದ ಐವರು ಋತ್ವಿಜರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಕ್ಷಿಣೆ ಕಳುಹಿಸುವ ಮೂಲಕ ಸನಾತನ ಹಿಂದೂ ಶಾಸ್ತ್ರದ ಪರಂಪರೆ ಪಾಲಿಸಿದ್ದಾರೆ!


ತಮ್ಮ ಬಳಿಗೆ ಬಂದಿದ್ದ ಋತ್ವಿಜರ ಬಳಿ ಬ್ಯಾಂಕ್ ಖಾತೆ ವಿವರ ನೀಡುವಂತೆ ಮೋದಿ ಸೂಚಿಸಿದ್ದರು. ಜತೆಗೆ 

ಎರಡು ದಿನಗಳ ಹಿಂದೆ ಎಲ್ಲರ ಫೋನ್ ನಂಬರ್ ಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯ ದಿಂದ ಪಡೆಯಲಾಗಿತ್ತು.

ಫೆ.3ರಂದು ಸಂಜೆ 5.30 ರ ವೇಳೆಗೆ ಎನ್.ಡಿ. ಮೋದಿ ಎಸ್ಬಿಐ ಖಾತೆಯಿಂದ ಐದು ಮಂದಿ ಋತ್ವಿಜರ ಖಾತೆಗಳಿಗೆ ದಕ್ಷಿಣೆ ಸಂದಾಯವಾಗಿತ್ತು.

 ದಕ್ಷಿಣೆಯನ್ನು ಖಾತೆಗೆ ನೆಫ್ಟ್‌ ಮೂಲಕ  ಜಮೆ ಮಾಡಿ ಡಿಜಿಟಲ್ ಇಂಡಿಯಾ ಮಾದರಿ ಬಳಸಿದ್ದಾರೆ.

"ಪ್ರಧಾನಿ ಮೋದಿ ಅವರಿಂದ ಬ್ರಹ್ಮಾರ್ಪಣ ಮಾಡಿಸುವುದೇ ಪುಣ್ಯದ ಕೆಲಸ. ಪ್ರಧಾನಿ ಭೇಟಿ ಸಂದರ್ಭ ಋತ್ವಿಜರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಾವು ನಿಂತೇ ವಿಧಿ ವಿಧಾನ ಮಾಡಲು ನಿರ್ಧರಿಸಿದೆವು. ಬಳಿಕ ಪ್ರಧಾನಿ ಶಾಸ್ತ್ರೀಯ ವಿಧಾನಗಳನ್ನು ಮಾಡಲು ಅನುಮತಿ ನೀಡಿದರು.  

 ಕರ್ಮಾಂಗ ಮುಗಿದ ಬಳಿಕ ನಮ್ಮೆಲರ ಬ್ಯಾಂಕ್ ಖಾತೆಯ ವಿವರ ಕೇಳಿದರು. ನಾವು ಸಂಕೋಚ ತೋರಿದಾಗ ದೇನಾ ಹಿ ಹೈ ಎಂದು ಹೇಳಿದಾಗ ನಾವು ಸಂಗ್ರಹಿಸಿ ನೀಡಿದೆವು. ಇಂದು ನಮ್ಮ ಖಾತೆಗೆ ದಕ್ಷಿಣೆ ಹಾಕಿದ್ದಾರೆ. ಮೋದಿ ವ್ಯಕ್ತಿಯಲ್ಲ ಶಕ್ತಿ. ವಿಭೂತಿ ಪುರುಷರು" ಎಂದು ಪ್ರಧಾನ ಋತ್ವಿಜ ನಾಗೇಂದ್ರ ಭಾರಧ್ವಾಜ್ ಪ್ರತಿಕ್ರಿಯಿಸಿದ್ದಾರೆ.  


ಎಲ್ಲವನ್ನು ಗಮನಿಸುವ ಸೂಕ್ಷ್ಮ ದೃಷ್ಟಿ. 

ಕ್ಷಣಾರ್ಧದಲ್ಲಿ ನಮ್ಮ ಮನಸ್ಸು ಅರಿಯುವ ಸಾಮರ್ಥ್ಯ ಇದೆ. ಪ್ರಧಾನಿ ಅವರು,  ನಮ್ಮನ್ನು ವೈದಿಕ ದಿರಿಸಿನಲ್ಲಿ ಕಂಡ ತಕ್ಷಣ ತಮ್ಮ ಪಾದುಕೆಗಳನ್ನು ತೆಗದಿರಿಸಿದರು. ಪೂಜೆ ಮಾಡುವಾಗ ಭಕ್ತಿ ಭಾವದಲ್ಲಿ ತಲ್ಲೀನರಾಗುವ ಮೋದಿಜಿ ಅವರನ್ನು ಬೇಟಿ ಮಾಡುವುದೇ ಪುಣ್ಯ. ಯಜಮಾನ ಸ್ಥಾನದಲ್ಲಿ ಕುಳಿತು ಕರ್ಮಾಂಗ ಗ್ರಹಣ ಮಾಡಿದ ರೀತಿ ಅದ್ಭುತ. ಬ್ರಹ್ಮಾರ್ಪಣ ಮಾಡಿದ ಬಳಿಕ ದಕ್ಷಿಣೆ ನೀಡಬೇಕು ಎಂಬ ಭಾವನೆ ಮೂಡಿರುವುದು ಖುಷಿಯ ವಿಚಾರ. ಇಂತಹ ಅದ್ಭುತ ವ್ಯಕ್ತಿಯನ್ನು ಜೀವಮಾನದಲ್ಲಿ ನೋಡುವುದೇ ಭಾಗ್ಯ. ಅವರಿಗೆ ಮಂತ್ರಾಕ್ಷತೆ ಹಾಕುವುದೇ ಮಹಾ ಪುಣ್ಯ. ಅವರ ವೈಯಕ್ತಿಕ ಖಾತೆಯಿಂದ ನಮಗೆ ದಕ್ಷಿಣೆ ಸಿಕ್ಕಿರುವುದು ನಮ್ಮ ಬದುಕಿನಲ್ಲಿ ಮರೆಯಲಾರದ ಕ್ಷಣ ಎಂದು ಋತ್ವಿಜರು ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣೆ ಎಷ್ಟು ಕೊಟ್ಟರು ಎನ್ನುವುದು ಮುಖ್ಯವಲ್ಲ. ಆ ವಿವರ ಹೇಳಬಾರದು ಎಂಬ ಸೂಚನೆಯೂ ಇದೆ. ಒಂದು ರೂಪಾಯಿಯೇ ಹಾಕಲಿ, ಎಷ್ಟೇ ಆಗಲಿ ನಮಗದು ಬೆಲೆ ಕಟ್ಟಲಾಗದ್ದು ಎಂದು ಋತ್ವಿಜ ಗಣೇಶ ನಾವಡ ಪ್ರತಿಕ್ರಿಯಿಸಿದ್ದಾರೆ.


ಕಲಶ ಪ್ರೋಕ್ಷಣೆ ಮಾಡಿದ್ದರು!

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ 108 ಋತ್ವಿಜರಿಂದ ಮಹಾ ಮೃತ್ಯುಂಜಯ ಯಾಗ ನಡೆದಿತ್ತು. ಇದರ ಪುಣ್ಯ ಕಲಶೋದಕವನ್ನು ನಾಗೇಂದ್ರ ಭಾರಧ್ವಾಜ್‌ ಪ್ರಧಾನಿ ಮೋದಿಯವರಿಗೆ ಪ್ರಕೋಕ್ಷಣೆ ಮಾಡಿ, ರಕ್ಷೆ ಕಟ್ಟಿ ಹರಸಿ ಬಂದಿದ್ದರು. 

 

ದಕ್ಷಿಣೆ ಪಡೆದ ಪುರೋಹಿತರು:

_ನಾಗೇಂದ್ರ ಭಾರಧ್ವಾಜ್ ಕಟ್ಲ ಸುರತ್ಕಲ್, ಗಣೇಶ್ ನಾವಡ ಕಾವೂರು,ವೀರವೆಂಕಟ ನರಸಿಂಹ ಹಂದೆ ಕುಂಬಳೆ, ಪ್ರಸಾದ್ ಭಟ್ ನಂದಳಿಕೆ, ಶ್ರೀಹರಿ ಉಪಾಧ್ಯಾಯ ವಾಮಂಜೂರು._


ತಂಡದಲ್ಲಿ ಶೈವ, ವೈಷ್ಣವ ಸಂಪ್ರದಾಯದ ಪುರೋಹಿತರಿದ್ದರು. ಸಂಪ್ರದಾಯ ಯಾವುದಾದರೂ ನಮಗೆ ವೇದ, ವಿಧಿವಿಧಾನ ತಿಳಿದವರಷ್ಟೇ ಮುಖ್ಯ ಎನ್ನುವುದು ಋತ್ವಿಜರ ಅಭಿಪ್ರಾಯ.


ಯಾರೂ ನಂಬಿರಲಿಲ್ಲ!

ನಾವು ಪ್ರಧಾನ ಮಂತ್ರಿಗೆ ಹರಸಿ ಬಂದಿರುವ ಕುರಿತು ನಮ್ಮ ಆಪ್ತರ ಬಳಿ ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಬಹುಷಃ ಸಂತೋಷ್‌ ಜಿ ಅವರಿಗೆ ಪ್ರಸಾದ ಕೊಟ್ಟು ಬಂದಿರಬಹುದು ಎಂದೇ ಆಡಿಕೊಳ್ಳುತ್ತಿದ್ದರು. ಎರಡು ದಿನಗಳ ಬಳಿಕ ಪ್ರಧಾನಿ ಕಾರ್ಯಾಲಯದಿಂದ ಬಂದ ಫೋಟೊವನ್ನು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ಜಾಲತಾಣದಲ್ಲಿ ಹಂಚಿಕೊಂಡ ಬಳಿಕ, ಪತ್ರಿಕೆಗಳಲ್ಲಿ ಬಂದ ಬಳಿಕವೇ ಜನರು ನಂಬಿದರು!

ಸಂಪರ್ಕ: 

kundeshwara@gmail.com

9945666324

(ಕೃಪೆ: ವಿಶ್ವವಾಣಿ)


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Advt Slider:
To Top