ಆಳ್ವಾಸ್‌ನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಒರಿಯೆಂಟೇಶನ್

Upayuktha
0

 

ಮೂಡುಬಿದಿರೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಸ್ತುತ ಕಾಲಘಟ್ಟಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಒದಗಿಸುವ ಮೂಲ ಉದ್ದೇಶದಿಂದ ಆಳ್ವಾಸ್‌ನಲ್ಲಿ ಹತ್ತು ಹಲವು ವೃತ್ತಿಪರ ಕೋರ್ಸಗಳನ್ನು ಅತ್ಯಂತ ಕಡಿಮೆ ಶುಲ್ಕಕ್ಕೆ ಆರಂಭಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.


ಆಳ್ವಾಸ್ ಕಾಲೇಜಿನ ಕುವೆಂಪು ಸಭಾಗಂಣದಲ್ಲಿ ಕಾಮರ್ಸ್ ಪ್ರೊಫೆಶನಲ್ ವಿಭಾಗದ ವತಿಯಿಂದ ನಡೆದ ಸಿಎ ಫೌಂಡೇಶನ್ ಕೋರ್ಸ್ ಒರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಒಟ್ಟು 1044 ಸಂಪ್ರದಾಯಿಕ ವಿಶ್ವವಿದ್ಯಾಲಯಗಳಿದ್ದು, 45000ಕ್ಕೂ ಅಧಿಕ ಕಾಲೇಜುಗಳಲ್ಲಿ 11,40,00,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಯುವಶಕ್ತಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಕೊಡುಗೆ ನೀಡಬೇಕಾದರೆ ವಿದ್ಯಾರ್ಥಿಗಳ ನೆಲೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದರು.


ವಿದ್ಯಾರ್ಥಿಗಳ ರೆಸ್ಯುಮ್‌ಗಳಿಗೆ ಬೇಡಿಕೆ ಬರುವುದು ಈಗಿನ ಸ್ಪರ್ಧಾತ್ಮಕ ಯುಗಕ್ಕೆ ಬೇಕಾದ ಕೌಶಲ್ಯಗಳು ಹಾಗೂ ಪೂರಕ ವಿದ್ಯಾಭ್ಯಾಸದ ಮಾಹಿತಿಯಿಂದೆ ಹೊರತು, ಕೇವಲ ಹೆಸರು ಹಾಗೂ ಇನ್ನಿತರ ಸಾಮಾನ್ಯ ಅಂಶಗಳನ್ನು ಒಳಗೊಂಡ ಸ್ವಪರಿಚಯದ ಮಾಹಿತಿಯಿಂದಲ್ಲ ಎಂದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ವಾಷಿಂಗ್ಟನ್ ಡಿಸಿಯ ಐಸಿಎಐ ಚಾಪ್ಟರ್‌ನ ಅಧ್ಯಕ್ಷ ಸಿಎ ಗೋಕುಲ್ ದಾಸ್ ಪೈ, ಯುವಜನತೆ ಭಾರತದ ಶಕ್ತಿ. ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದು ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ಇಂದಿನ ಅಮೇರಿಕದ ಪೋಷಕರು ತಮ್ಮ ಮಕ್ಕಳಿಗೆ ನೀವು ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಉದ್ಯೋಗ ಪಡೆಯಲು ಶ್ರಮಿಸಿರಿ, ಇಲ್ಲವಾದರೆ ಭಾರತೀಯರು ಬಂದು ನಿಮ್ಮ ಎಲ್ಲಾ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಎಂಬ ಜಾಗರೂಕತೆಯ ಮಾತನ್ನು ಹೇಳುತ್ತಿರುವುದು, ಅಮೇರಿಕದಲ್ಲಿ ಭಾರತೀಯರ ಪ್ರಾಬಲ್ಯವನ್ನು ತಿಳಿಸುತ್ತದೆ ಎಂದರು.


ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಟೆಂಟ್ ಮಂಗಳೂರು ಶಾಖೆಯ ನಿಕಟಪೂರ್ವ ಅಧ್ಯಕ್ಷ ಎಸ್‌ಎಸ್ ನಾಯಕ್ ಮಾತನಾಡಿ, ಹೇಗೇ ಪ್ರತಿದಿನ ಸರ‍್ಯ ಉದಯಿಸುತ್ತಾನೋ ಹಾಗೆಯೇ ವಿದ್ಯಾರ್ಥಿಗಳು ಪ್ರತಿದಿನ ಹೊಸ ಉತ್ಸಾಹದಿಂದ ಇರಬೇಕು. ಆಗ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲು ಸಾಧ್ಯ. ಸರಿಯಾದ ಪೂರ್ವ ತಯಾರಿ ಮತ್ತು ನಿರಂತರ ಅಭ್ಯಾಸದಿಂದ ಸಿಎ ಪರೀಕ್ಷೆಯನ್ನು ಎದುರಿಸಬಹುದು. ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂದರು.


ವಿಭಾಗದ ಹಿರಿಯ ವಿದ್ಯಾರ್ಥಿನಿ ಸಿಎ ಫೈನಲಿಸ್ಟ್ ಆರುಷಿ ವಿದ್ಯಾರ್ಥಿಗಳಿಗೆ ಸಿಎ ಪರೀಕ್ಷೆಯ ತಯಾರಿ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಮರ್ಸ್ ಪ್ರೊಫೆಷನಲ್ ಕಾಲೇಜಿನ ಸಿಎ ಫೌಂಡೇಷನ್ ವಿಭಾಗದ ಸಂಯೋಜಕ ಅನಂತಶಯನ ಅವರು ಬರೆದಿರುವ ಅಕೌಂಟಿಂಗ್ ಮಾಡ್ಯೂಲ್ 1 ಹಾಗೂ 2 ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಸಿಎ ಪ್ರಾಕ್ಟೀಸ್ ಗೆ ಅಗತ್ಯವಿರುವ ಸಂಪೂರ್ಣ ಪ್ರಾಯೋಗಿಕ ಪಠ್ಯಕ್ರಮ ಹಾಗೂ ಟ್ರೂ ಫಾಲ್ಸ್ ಪ್ರಶ್ನೆಗಳನ್ನು ಒಳಗೊಂಡಿದೆ.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕಾಮರ್ಸ್ ಪ್ರೊಫೆಶನಲ್ ವಿಭಾಗದ ಸಂಯೋಜಕ ಅಶೋಕ್ ಕೆ. ಜಿ, ಆಳ್ವಾಸ್ ಪದವಿ ಪೂರ್ವಕಾಲೇಜಿನ ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ ಉಪಸ್ಥಿತರಿದ್ದರು. ಉಪನ್ಯಾಸಕ ಅನಂತಶಯನ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೇಯಾ ವಂದಿಸಿ, ಪ್ರೇರಣಾ ಹೆಬ್ಬಾರ್ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Advt Slider:
To Top