ನುಡಿನಮನ: ಡಿ.ಕೆ. ಶ್ಯಾಮಸುಂದರ ರಾವ್: ಹಾರಿದ ಕಾಲದ ಹಕ್ಕಿ

Upayuktha
0


ಇವರು ಡಿಕೆಎಸ್. ಡಿಕೆಶಿ ಅಲ್ಲ. ಹಾಗಾಗಿ ಧೈರ್ಯವಾಗಿ ಒಡನಾಡಬಹುದಿತ್ತು. ಪುಸ್ತಕ ಪ್ರಾಧಿಕಾರದ ಮೊದಲ ಆಡಳಿತಾಧಿಕಾರಿ. ಶಾಸಕರ ಭವನದಲ್ಲಿ ಪುಸ್ತಕ ಮಳಿಗೆ ತೆರೆದು ಜನಪ್ರತಿನಿಧಿಗಳಿಗೆ ಅಕ್ಷರಶಃ ಅಕ್ಷರ ದಾಸೋಹ ನೀಡಿದ ಸಾಹಸಿ. 'ಇಂಗ್ಲಿಷ್ ಸಾಹಿತ್ಯ ಚರಿತ್ರೆ' ಎಂಬ ಆಕರಗ್ರಂಥವನ್ನು ಎಲ್. ಎಸ್. ಶೇಷಗಿರಿ ರಾವ್ ಅವರಿಂದ ಬರೆಸಿದವರು. ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಯಿತು. 'ತಟ್ಟು ಚಪ್ಪಾಳೆ ಪುಟ್ಟ ಮಗು' ಮೊದಲ ಪ್ರಕಟಣೆ. 1990ರಲ್ಲಿ. ಶಿವರಾಮ ಕಾರಂತರ ಮುನ್ನುಡಿ. ಕಪ್ಪು ಹಲಗೆ ಕಾರ್ಯಾಚರಣೆ ಯೋಜನೆಯಲ್ಲಿ ಸುಮಾರು 40000 ಪ್ರತಿಗಳ ಮಾರಾಟ. ಗುರುಬಲದಲ್ಲಿ, ದೈವದಲ್ಲಿ  ನಂಬಿಕೆ ನೆಟ್ಟಿದ್ದವರು. ಪ್ರಕಾಶಕರ ಸಂಘದ ಉಪಾಧ್ಯಕ್ಷರಾಗಿದ್ದರು.


ಅಳೆದು, ತೂಗಿ ತೊನೆವ ಮಾತು. ಖಡಕ್ ವ್ಯಾಪಾರಿ ಗುಣ. ಕಾಮಧೇನು ಪ್ರಕಾಶನ ಎಂಬುದು ಅವರ ಪಾಲಿಗೆ ಬೇಡಿದ ವರ ನೀಡಿದ ಭಾಗ್ಶೇಶ್ವರಿಯಾಯಿತು. ಮೂಲತಃ ತಿಪಟೂರಿನವರಾದ ಶ್ಯಾಮಸುಂದರ ರಾವ್ ಅವರ ಪಾಲಿಗೆ ಕಲ್ಪವೃಕ್ಷವಾಯಿತು! ಯಶಸ್ವೀ ಪ್ರಕಾಶಕ. ಆರಂಭದ ದಿಸೆ-ದೆಸೆ ಎಲ್ಲವೂ 'ನೀನು ಹೆಜ್ಜೆ ಇಟ್ಟಲ್ಲೆಲ್ಲ ಮರು ಮುದ್ರಣದಾರಂಭ' ಎಂಬಂತೆ. ಅಂದುಕೊಂಡಿದ್ದೆಲ್ಲವೂ ಸಾಧ್ಯವಾಯಿತು. ಹಣ ಹಣ ಝಣ ಝಣ. ಎಲ್ಲವನ್ನೂ ಪುಸ್ತಕೋದ್ಯಮದಲ್ಲೇ ಹೂಡಿದರು. ಕೆರೆಯ ನೀರನು ಕೆರೆಗೇ ಚೆಲ್ಲಿದರು. ಕ್ರಮೇಣ ಈ ಸಾಹಸಗಾಥೆಗೆ ತಡೆಯುಂಟಾಯಿತು. ವಿಧಿವಿಲಾಸದಲ್ಲಿ ವಿಪರೀತ ನಂಬಿಕೆಯಿಟ್ಟಿದ್ದ ರಾಯರ ಸೋಲಿನ ಪರ್ವ ಆರಂಭವಾಯಿತು.


ಈಗ ಎರಡು ವರ್ಷದ ಹಿಂದೆ ವಸುಂಧರಾ ಭೂಪತಿ ಅವರ ಮಗ ಅಭಿಮನ್ಯುವಿನ ಪರಿಣಯದಂದು ಕಂಡಿದ್ದರು. ಅದೇ ಕಡೆಯ ನೋಟ. ಅಪರಿಮಿತ ವಿಶ್ವಾಸದೊಂದಿಗೆ ಮಾತನಾಡಿದರು. ಜೊತೆಗಿದ್ದ ನಮ್ಮ ತಾಯಿಯ ಬಳಿ ನನ್ನ ಕುರಿತು, ಬರೆವಣಿಗೆಯ ಶೈಲಿ ಕುರಿತು ತುಂಬು ಔದಾರ್ಯದ ಮಾತುಗಳನ್ನು ಆಡಿದರು.


ಅವರ ಮೊದಲ ಪರಿಚಯ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರದ ಮೆಟ್ಟಿಲ ಮೇಲೆ. 31 ವರ್ಷದ ಹಿಂದೆ. ಅದಾಗ ತಾನೆ ಕಾರಂತರು 'ತಟ್ಟು ಚಪ್ಪಾಳೆ ಪುಟ್ಟ ಮಗು' ಕೃತಿಗೆ ಬರೆದ ಮುನ್ನುಡಿ ತೋರಿಸಿದರು. ಶಿವರಾಮ ಕಾರಂತರ ಪರಿಚಯ ಮತ್ತು ಒಂದಷ್ಟು ಒಡನಾಟವಿದ್ದುದರಿಂದ ಅಲ್ಲೇ ಕಾರಂತರ ಮುನ್ನುಡಿ ಓದಿ ಸಂಭ್ರಮಿಸಿ ಒಳಿತಾಗಲಿದೆ ಎಂದು ಶುಭನುಡಿದೆ.


ತಮ್ಮ ಪ್ರಕಾಶನದಿಂದ 300 ಪುಟಗಳಿಗೆ ಕಡಿಮೆಯಿಲ್ಲದ ನನ್ನ  ಕೃತಿಯೊಂದನ್ನು ಪ್ರಕಟಿಸಲು ಬಯಸಿದ್ದರು. ನಿಮ್ಮ ಬರೆವಣಿಗೆಯ ಲಾಲಿತ್ಯ, ಭಾಷಾ ಪ್ರಯೋಗ, ಅದರ ಸೊಗಡು ಬಲು ಇಷ್ಟವೆಂದರು. ನನ್ನ ಜಗಲಿ (ವಾಟ್ಸಪ್) ಲೇಖನಗಳ ಖಾಯಂ ಓದುಗ ತಾವೆಂದು ನುಡಿದರು. ಕಡೆಯದಾಗಿ ಮಾತನಾಡಿದ್ದು 13-3-2021ರಂದು. ಪ್ರಕಾಶ ಕಂಬತ್ತಳ್ಳಿ ಅವರಿಗೆ ಈ ವಿಷಯ ಅರುಹಿದಾಗ ಅವರ ಅನಾರೋಗ್ಯ ಕುರಿತು ಹೇಳಿದರು. ಹೌಹಾರಿದೆ. ಮರಣ ಶಯ್ಯೆಯಲ್ಲಿದ್ದಾಗಲೂ ಧೃತಿಗೆಡದೆ, ಪ್ರಕಾಶನವನ್ನೇ ಧೇನಿಸುತ್ತಿದ್ದ ರಾಯರ ಪರಿ ಅರಿತು ತತ್ತರಿಸುವಂತಾಯಿತು. ತಮ್ಮ ಅನಾರೋಗ್ಯದ ಸುಳಿವೇ ನೀಡದೆ, ಅಂತಹ ವಿಷಮ ಸಂದರ್ಭದಲ್ಲೂ ಆ ಕುರಿತು ಒಂದಿನಿತೂ ಹಲುಬದೆ, ನನ್ನ ಬರೆಹ ಕುರಿತು ಮಾತನಾಡಿದ ಉದಾರಿ ಅವರು. ಮೂಲತಃ ಉಪನ್ಯಾಸಕರು. ಬೆಂಗಳೂರಿನಂತಹ ಮಹಾನಗರದಲ್ಲಿದ್ದರೂ ಸಂಕ್ಷಿಪ್ತ ವಿಳಾಸಿಗರಾಗಿದ್ದವರು. ನೆನಪಿನ ಭಿತ್ತಿಯಲ್ಲಿ # 6, ನಾಗಪ್ಪ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು ಎಂಬುದನ್ನು ಮಾಸದಂತೆ ಉಳಿಸಿ ಹೋಗಿದ್ದಾರೆ. ಪ್ರಕಾಶಕರೆಲ್ಲ ಸಭೆ ಸೇರಿ ಕಂಬನಿಯ ಕುಯಿಲಾಗಬೇಕಿದೆ; ಕಡಲಾಗಬೇಕಿದೆ.

- ಕೆ. ರಾಜಕುಮಾರ್

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top