ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 12/02/2022*
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಕರ ೨೯
ಧನಿಷ್ಠಾ ಮಹಾನಕ್ಷತ್ರ. (೨೫-೧೭)
ಮಾಘ ಮಾಸ
ಶುಕ್ಲ ಪಕ್ಷ
ಶನಿವಾರ (ಮಂದ)
ಏಕಾದಶಿ ತಿಥಿ (04-45pm )
ಮೃಗಶಿರಾ ನಕ್ಷತ್ರ (07-25am)
ವಿಷ್ಕಂಭ ಯೋಗ (೩೬-೨೭)
ಭದ್ರಾ ಕರಣ (೨೪-೩೦)
ಸೂರ್ಯೋದಯ - 06-57am
ಸೂರ್ಯಾಸ್ತ - 06-30pm
@ಸರ್ವೈಕಾದಶೀ
ರಾಹು ಕಾಲ
09:20am - 10:47am ಅಶುಭ
ಯಮಘಂಡ ಕಾಲ
01:41 - 03:09 ಅಶುಭ
ಗುಳಿಕ ಕಾಲ
06:25am - 07:52am
~~~~~~~~~~
ದಿನ ವಿಶೇಷ: ಜಯ ಏಕಾದಶಿ
ಇದೇ ಶನಿವಾರ ಫೆಬ್ರವರಿ 12 ರಂದು ಜಯ ಏಕಾದಶಿ ವ್ರತವನ್ನು ಆಚರಿಸಲಾಗುವುದು. ಜಯ ಏಕಾದಶಿ ವ್ರತವನ್ನು ಆಚರಿಸುವುದು ಹೇಗೆ..? 2022 ರ ಜಯ ಏಕಾದಶಿಯ ಶುಭ ಮುಹೂರ್ತ ಯಾವುದು..? ಜಯ ಏಕಾದಶಿಯಂದು ಯಾವ ಮಂತ್ರವನ್ನು ಪಠಿಸಬೇಕು..?
ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಜಯ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷ ಫೆಬ್ರವರಿ 12 ರ ಶನಿವಾರದಂದು ಜಯ ಏಕಾದಶಿ ವ್ರತವನ್ನು ಆಚರಿಸಲಾಗುವುದು. ಈ ಏಕಾದಶಿಯ ಮಹತ್ವವನ್ನು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ಸತ್ತ ನಂತರ ಜೀವಿಯು ತನ್ನ ಕರ್ಮಗಳ ಪ್ರಕಾರ ಅನೇಕ ಅಗೋಚರ ದೇಹಗಳಲ್ಲಿ ಹೋಗಬೇಕೆಂದು ಪುರಾಣಗಳಲ್ಲಿ ಹೇಳಲಾಗಿದೆ, ಅದನ್ನು ಭೂತ ಮತ್ತು ಪ್ರೇತ ಎಂದು ಕರೆಯಲಾಗುತ್ತದೆ. ಜಯ ಏಕಾದಶಿಯು ಮರಣಾ ನಂತರ ವ್ಯಕ್ತಿಗೆ ಮೋಕ್ಷವನ್ನು ನೀಡಿ, ಆತ್ಮಗಳ ಅಲೆದಾಟದಿಂದ ವಿಮೋಚನೆಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
೧. ಜಯ ಏಕಾದಶಿ ಕಥೆ
ಜಯ ಏಕಾದಶಿ ಕುರಿತಂತೆ ಪದ್ಮಪುರಾಣದಲ್ಲಿ ಇಂದ್ರನ ಸಭೆಯ ನರ್ತಕಿಯಾದ ಗಂಧರ್ವ ಹುಡುಗಿ ಪುಷ್ಯವತಿ ಮತ್ತು ಗಾಯಕ ಮಾಲ್ಯವಾನ ಕಥೆಯ ಉಲ್ಲೇಖವಿದೆ. ಸಭೆಯ ಮಧ್ಯದಲ್ಲಿ ಅವರಿಬ್ಬರು ನಿರ್ಲಜ್ಜವಾಗಿ ವರ್ತಿಸಿದ್ದಕ್ಕಾಗಿ ದೇವರಾಜ ಇಂದ್ರನಿಂದ ಶಾಪಗ್ರಸ್ತನಾಗಿದ್ದಳು. ಶಾಪದಿಂದಾಗಿ ಮಾಲ್ಯವಾನ ಮತ್ತು ಪುಷ್ಯವತಿ ಪಿಶಾಚಿಯಾಗಿ ಅಲೆಯಬೇಕಾಯಿತು. ಪಿಶಾಚಿಯಾದಾಗ ಅವರು ಹಿಮಾಲಯ ಪರ್ವತದ ಮರದ ಮೇಲೆ ವಾಸಿಸಲು ಸ್ಥಳವನ್ನು ಕಂಡುಕೊಂಡರು.
ಪಿಶಾಚಿಯಾಗಿ ನರಳುತ್ತಿದ್ದ ಪುಷ್ಯವತಿ ಮತ್ತು ಮಾಲ್ಯವಾನನಿಗೆ ಮಾಘ ಶುಕ್ಲ ಏಕಾದಶಿಯ ದಿನ ಏನನ್ನೂ ತಿನ್ನಲು ಸಿಗುವುದಿಲ್ಲ. ಮಾಘ ಚಳಿಯಲ್ಲಿ ಇಬ್ಬರೂ ಹಸಿವು ಬಾಯಾರಿಕೆಯಿಂದ ರಾತ್ರಿಯಿಡೀ ಜಾಗರಣೆ ಮಾಡುತ್ತಿದ್ದರು. ಹೀಗಿರುವಾಗ ಅವರಿಬ್ಬರೂ ಅರಿವಿಲ್ಲದೆ ಜಯ ಏಕಾದಶಿ ಉಪವಾಸ ಮಾಡಿದರು. ಈ ವ್ರತದ ಪ್ರಭಾವದಿಂದ ಪಿಶಾಚಿ ಜನ್ಮದಿಂದ ಮುಕ್ತಿ ಹೊಂದಿದರು. ಮತ್ತು ತಮ್ಮ ಗಂಧರ್ವ ಶರೀರವನ್ನು ಮರಳಿ ಪಡೆದರು. ಅವರ ಸೌಂದರ್ಯ ಮತ್ತು ನೋಟವು ಮೊದಲಿಗಿಂತ ಹೆಚ್ಚು ಆಕರ್ಷಕವಾಯಿತು. ಇವರಿಬ್ಬರನ್ನೂ ದೇವರಾಜ ಇಂದ್ರನು ಸ್ವರ್ಗದಲ್ಲಿ ನೋಡಿದಾಗ ಬೆರಗಾದನು. ಪಿಶಾಚಿಗಳಾಗಿದ್ದ ನೀವು ಮರಳಿ ಹೇಗೆ ಹಿಂದಿನ ರೂಪವನ್ನು ಪಡೆದುಕೊಂಡಿರಿ ಎಂದು ಕೇಳಿದನು.
ಈ ಸಂದರ್ಭದಲ್ಲಿ ಪುಷ್ಯವತಿ ಮತ್ತು ಮಾಲ್ಯವಾನ ಇಬ್ಬರು ಅಜಾಗರೂಕತೆಯಿಂದ ಜಯ ಏಕಾದಶಿಯಂದು ಉಪವಾಸ ಮಾಡಿರುವ ಬಗ್ಗೆ ಮತ್ತು ಭಗವಾನ್ ವಿಷ್ಣುವಿನ ಕೃಪೆಯಿಂದ ಮೋಕ್ಷವನ್ನು ಪಡೆದಿರುವ ಬಗ್ಗೆ ಹೇಳಿದರು. ದೇವರಾಜ ಇಂದ್ರನಿಗೆ ಬಹಳ ಸಂತೋಷವಾಯಿತು ಮತ್ತು ಇಬ್ಬರೂ ಆಶೀರ್ವದಿಸುತ್ತಾ ಭಗವಾನ್ ವಿಷ್ಣುವಿನ ಭಕ್ತರು ನನಗೆ ಗೌರವಾನ್ವಿತರು, ನೀವಿಬ್ಬರೂ ಸ್ವರ್ಗದಲ್ಲಿ ಸಂತೋಷದಿಂದ ಬದುಕಬಹುದು ಎಂದು ಭರವಸೆಯನ್ನು ನೀಡಿದನು.
೨. ಜಯ ಏಕಾದಶಿ ಮಹತ್ವ:
ಪದ್ಮ ಪುರಾಣದಲ್ಲಿ ಉಲ್ಲೇಖಿಸಿರುವ ಪ್ರಕಾರ, ಶ್ರೀಕೃಷ್ಣನು ಯಾರು ಈ ಏಕಾದಶಿಯ ಉಪವಾಸವನ್ನು ಆಚರಿಸುತ್ತಾರೋ ಅವರು ಮರಣದ ನಂತರ ಪಿಶಾಚಿಯಾಗಿ ಅಲೆದಾಡಬೇಕೆಂದಿಲ್ಲ, ಅವರ ಆತ್ಮಕ್ಕೆ ಮುಕ್ತಿ ಸಿಗುತ್ತದೆ ಎಂದು ಹೇಳಿದ್ದನು.
೩. ಜಯ ಏಕಾದಶಿ ೨೦೨೨ ಮುಹೂರ್ತ
ಜಯ ಏಕಾದಶಿ ವ್ರತವನ್ನು 2022 ರ ಫೆಬ್ರವರಿ 12 ರಂದು ಶನಿವಾರ ಆಚರಿಸಲಾಗುವುದು.
ಮಾಘ ಶುಕ್ಲ ಜಯ ಏಕಾದಶಿ ಪ್ರಾರಂಭ: 2022 ರ ಫೆಬ್ರವರಿ 11 ರಂದು ಮಧ್ಯಾಹ್ನ 1:53 ರಿಂದ
ಮಾಘ ಶುಕ್ಲ ಜಯ ಏಕಾದಶಿ ಮುಕ್ತಾಯ: 2022 ರ ಫೆಬ್ರವರಿ 12 ರಂದು ಶನಿವಾರ ಸಂಜೆ 4:28 ರವರೆಗೆ
ಏಕಾದಶಿ ಪಾರಣ ಸಮಯ: 2022 ರ ಫೆಬ್ರವರಿ 13 ರಂದು ಭಾನುವಾರ ಬೆಳಿಗ್ಗೆ 9:30 ರವರೆಗೆ.
೪. ಜಯ ಏಕಾದಶಿ ಪೂಜೆ ವಿಧಾನ
- ಏಕಾದಶಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮುಗಿಸಿ ಶುಭ್ರವಾದ ಬಟ್ಟೆ ಧರಿಸಿ ಶ್ರೀ ವಿಷ್ಣುವನ್ನು ಧ್ಯಾನಿಸಿ.
- ಅದರ ನಂತರ ಉಪವಾಸದ ಪ್ರತಿಜ್ಞೆಯನ್ನು ತೆಗೆದುಕೊಳ್ಳಿ.
- ನಂತರ ಮನೆಯ ದೇವರ ಕೋಣೆಯಲ್ಲಿ ಒಂದು ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹರಡಿ ಮತ್ತು ವಿಷ್ಣುವಿನ ವಿಗ್ರಹವನ್ನು ಪ್ರತಿಷ್ಠಾಪಿಸಿ.
- ಕಮಂಡಲದಲ್ಲಿ ಗಂಗಾಜಲವನ್ನು ತೆಗೆದುಕೊಂಡು ಅದರಲ್ಲಿ ಎಳ್ಳು, ಕುಂಕುಮ ಮತ್ತು ಅಕ್ಷತೆಯನ್ನು ಮಿಶ್ರಣ ಮಾಡಿ.
- ಈಗ ಈ ಪಾತ್ರೆಯಿಂದ ಕೆಲವು ಹನಿ ನೀರನ್ನು ತೆಗೆದುಕೊಂಡು ಸುತ್ತಲೂ ಚಿಮುಕಿಸಿ.
- ನಂತರ ಘಟ ಸ್ಥಾಪನೆಯನ್ನು ಮಾಡಿ.
- ಈಗ ವಿಷ್ಣುವಿಗೆ ಧೂಪ, ದೀಪ ತೋರಿಸಿ ಹೂವುಗಳನ್ನು ಅರ್ಪಿಸಿ.
- ಈಗ ಏಕಾದಶಿಯ ಕಥೆಯನ್ನು ಓದಿ ಅಥವಾ ಕೇಳಿ.
- ಶುದ್ಧ ತುಪ್ಪದ ದೀಪವನ್ನು ಹಚ್ಚಿ ಮತ್ತು ವಿಷ್ಣುವಿಗೆ ಆರತಿ ಮಾಡಿ.
- ಅದರ ನಂತರ, ಶ್ರೀ ಹರಿವಿಷ್ಣುವಿಗೆ ತುಳಸಿ ದಳ ಮತ್ತು ಎಳ್ಳನ್ನು ಅರ್ಪಿಸಿ.
- ವಿಷ್ಣು ಸಹಸ್ರನಾಮ ಪಠಿಸಿ.
- ಸಂಜೆ ವಿಷ್ಣುವಿನ ಪೂಜೆಯ ನಂತರ ಫಲಹಾರ ಸೇವಿಸಿ.
- ಮರುದಿನ ದ್ವಾದಶಿಯಂದು, ಅರ್ಹ ಬ್ರಾಹ್ಮಣರಿಗೆ ಅನ್ನದಾನ ಮತ್ತು ಇತರ ದಾನವನ್ನು ನೀಡಿ.
- ಇದರ ನಂತರ, ನೀವು ಆಹಾರವನ್ನು ಸೇವಿಸಿ ಮತ್ತು ಉಪವಾಸವನ್ನು ಮುರಿಯಿರಿ.
5. ಏಕಾದಶಿ ಮಂತ್ರ
- 'ಓಂ ನಮೋ ಭಗವತೇ ವಾಸುದೇವಾಯ'
- 'ಓಂ ಶ್ರೀ ವಿಷ್ಣವೇ ನಮಃ'
- 'ಓಂ ನಮೋ ನಾರಾಯಣಾಯ'
- 'ಶ್ರೀಮನ್ ನಾರಾಯಣ ನಾರಾಯಣ ಹರಿ ಹರಿ'
- ಓಂ ನಾರಾಯಣಾಯ ನಮಃ
- 'ಓಂ ಹ್ರೀಂ ಶ್ರೀಂ ಲಕ್ಷ್ಮೀವಾಸುದೇವಾಯ ನಮಃ'
- 'ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣುಃ ಪ್ರಚೋದಯಾತ್'
ಜಯ ಏಕಾದಶಿಯನ್ನು ಆಚರಿಸುವುದರಿಂದ ಮರಣಾ ನಂತರ ಆತ್ಮವು ಮೋಕ್ಷವನ್ನು ಪಡೆಯುತ್ತದೆ. ಮತ್ತು ಪಿಶಾಚಿಯಾಗಿ ಅಲೆದಾಡುವ ಅವಶ್ಯಕತೆಯಿರುವುದಿಲ್ಲ. ಆದರೆ ಜಯ ಏಕಾದಶಿ ವ್ರತವನ್ನು ಆಚರಿಸುವಾಗ ಈ ಮೇಲಿನ ಪೂಜೆ ವಿಧಿ ವಿಧಾನಗಳನ್ನು, ಮಂತ್ರಗಳನ್ನು ಪಾಲಿಸಿದರೆ ಉತ್ತಮ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ