ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಅನಾದಿಕಾಲದಿಂದಲೂ ಅನೇಕ ಆಚಾರ ವಿಚಾರ ಸಂಪ್ರದಾಯ ಆಚರಣೆಗೆ ವಿಶೇಷ ಪ್ರಾಶಸ್ತ್ಯ ಇದೆ. ಇಲ್ಲಿನ ಹಲವಾರು ಆಚರಣೆಯಲ್ಲಿ ಕೆಡ್ದಸವೂ ಒಂದು. ಆರಾಧಕರಾಗಿರುವ ತುಳುವರು ಪ್ರಕೃತಿ ಮಾತೆಯನ್ನು ಪೂಜೆ ಮಾಡುವ ವಿಶೇಷ ದಿನವೇ ಕೆಡ್ಡಸ.
ಪ್ರಕೃತಿಯನ್ನು ಹೆಣ್ಣಿಗೆ ಹೋಲಿಕೆ ಮಾಡಿ ಆರಾಧನೆ ಮಾಡುವ ತುಳುವರು ಮನೆ ಮಗಳಿಗೆ ಸಲ್ಲುವ ಆಚಾರ ಸಂಪ್ರದಾಯಗಳನ್ನು ವಷ೯ದಲ್ಲೊಂದು ದಿನ ಪ್ರಕೃತಿಗೂ ಸಲ್ಲಿಸುವುದು ಇಲ್ಲಿನ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯ.
ತುಳು ತಿಂಗಳಲ್ಲಿ ಪೊನ್ನಿ ತಿಂಗಳು ಅಂದರೆ, ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಆಚರಿಸಲಾಗುತ್ತದೆ. ಮೂರು ದಿನಗಳ ಕಾಲ ಆಚರಿಸುವ ಈ ದಿನಗಳಲ್ಲಿ ಭೂಮಿ ತಾಯಿ ಋತಿಮತಿಯಾಗುವಳು ಎಂಬ ನಂಬಿಕೆ ತುಳುವರದ್ದು. ಈ ದಿನಗಳಲ್ಲಿ ನೆಲ ಅಗೆಯುವುದು, ಮರ ಗಿಡಗಳನ್ನು ಕತ್ತರಿಸುವುದು ಇತ್ಯಾದಿ ಪ್ರಕೃತಿ ಹಾನಿ ಉಂಟು ಮಾಡುವ ಕೆಲಸಗಳು ನಿಷಿದ್ಧ.
ವಿಶೇಷ ಆಹಾರ ಪದ್ಧತಿ:
ಕೆಡ್ಡಸ ದಿನಗಳ ಸಂಭ್ರಮದಲ್ಲಿ ತುಳುನಾಡಿನ ಮನೆಗಳಲ್ಲಿ ಕುಚ್ಚಲಕ್ಕಿ ಹುರಿದು ಉಡಿ ಮಾಡಿ ಅದಕ್ಕೆ ಬೆಲ್ಲ, ತುಪ್ಪ, ಜೇನು ತುಪ್ಪ, ಒಣ ತೆಂಗಿನ ಕಾಯಿ ಮಿಶ್ರಣ ಮಾಡಿ ಹಂಚುವುದು ವಿಶೇಷ. ಇದನ್ನು ನನ್ಯೆರಿ ಎಂದು ಕರೆಯುತ್ತಾರೆ. ನುಗ್ಗೆಕಾಯಿ ಮತ್ತು ಬದನೆ ಪದಾರ್ಥವೂ ಈ ದಿನಗಳ ವಿಶೇಷ ಅಡುಗೆ.
ಕೆಡ್ಡಸದ ಮೊದಲ ದಿನ ಹೆಚ್ಚು ವಿಶೇಷವಲ್ಲದಿದ್ದರೂ ಪುರುಷರು ಕತ್ತಿ, ಹಾರೆ ಇತ್ಯಾದಿ ಕೃಷಿ ಸಂಬಂಧಿತ ವಸ್ತುಗಳಿಗೆ ಪ್ರಾರ್ಥಿಸಿ ಮುಂದಿನ ಮೂರು ದಿನಗಳ ಕಾಲ ಅವುಗಳ ಬಳಕೆ ನಿಷೇಧ ಮಾಡಲಾಗುತ್ತದೆ. ಎರಡನೇ ದಿನ ಭೂ ತಾಯಿಗೆ ಪೌಷ್ಟಿಕ ಆಹಾರ (ನನ್ಯೆರಿ) ನೀಡುವ ಕ್ರಮ ಇದೆ. ಮೂರನೇ ದಿನ ಭೂ ತಾಯಿಯ ಮೈಲಿಗೆಯ ಶುದ್ಧ ಆಚರಣೆಗೆ ಅಣಿಗೊಳಿಸಲು ಮನೆಯ ಹಿರಿಯ ಮಹಿಳೆ ಮುಂಜಾನೆ ಬೇಗ ಎದ್ದು ನಿತ್ಯ ಕಮ೯ಗಳನ್ನು ಪೂರೈಸಿ, ತುಳಸಿ ಕಟ್ಟೆಯ ಸುತ್ತಲೂ ಸೆಗಣಿ ಗುಡಿಸಿ ಶುಚಿ ಮಾಡಿ, ದೀಪ ಬೆಳಗಿಸಿ ನಂತರ ಒಂದು ಕಳಶದಲ್ಲಿ ನೀರು ಮತ್ತು ಬಾಳೆ ಎಲೆಯಲ್ಲಿ ಹೀಗೆ, ಕನ್ನಡಿ, ಬಾಚಣಿಗೆ, ಕುಂಕುಮ, ಕಾಡಿಗೆ ಇಟ್ಟು ಗಿಂಡಿಯಿಂದ ಭೂಮಿಗೆ ಎಣ್ಣೆ ಬಿಟ್ಟು ತುದಿ ಬಾಳೆಎಲೆಯಲ್ಲಿ ನನ್ಯೇರಿ ಇಟ್ಟು ನಮಸ್ಕರಿಸುತ್ತಾಳೆ.
ಈ ದಿನಗಳಲ್ಲಿ ಪ್ರಕೃತಿ ಮಾತೆ ಸೃಷ್ಟಿಗೆ ಅಣಿಯಾಗುತ್ತಾಳೆ. ಮರ ಗಿಡಗಳು ಹೊಸ ಚಿಗುರನ್ನು ಹೊತ್ತು ಕಂಗೊಳಿಸುತ್ತಾಳೆ. ಕೃಷಿ ಪ್ರಧಾನವಾಗಿರುವ ಈ ನಾಡಿನಲ್ಲಿ ಭೂಮಿಯ ಮೇಲಿನ ಶ್ರದ್ಧೆ ನಂಬಿಕೆಗಳು ಮುಂದಿನ ಪೀಳಿಗೆಗೂ ಪಸರಿಸಲಿ. ಪ್ರಕೃತಿ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ.
-ಸರೋಜ ಪಿ ಜೆ ನೆಲ್ಯಾಡಿ
ತೃತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ