ಬೆಂಗಳೂರು: ಬದನವಾಳು ಗಾಂಧಿ ಆಶ್ರಮ ಮತ್ತು ನಂಜನಗೂಡು ಪಟ್ಟಣದ ಉದ್ದೇಶಿತ ಕಪಿಲ ವನದ ಅಭಿವೃದ್ಧಿಗೆ ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ನಲ್ಲಿ 20 ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ನಂಜನಗೂಡು ಶಾಸಕ ಬಿ ಹರ್ಷವರ್ಧನ್ ಅವರು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಅವರು ಸಚಿವರಿಗೆ ಮನವಿ ಸಲ್ಲಿಸಿದರು. ಗಾಂಧಿ ಆಶ್ರಮ ಇರುವ ಬದನವಾಳು ಗ್ರಾಮವನ್ನು ಗುಜರಾತ್‌ನ ಸಾಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹರ್ಷವರ್ಧನ್ ಸಚಿವರಿಗೆ ವಿವರಿಸಿದರು.
ಈಗಾಗಲೇ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಖಾದಿ ನೂಲುವ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದ ಬದನವಾಳುವಿಗೆ ಮಹಾತ್ಮ ಗಾಂಧಿ ಭೇಟಿ ನೀಡಿದ್ದರು. ಆ ಕೇಂದ್ರ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಐತಿಹಾಸಿಕ ಮಹತ್ವ ಹೊಂದಿರುವ ಈ ಸ್ಥಳವನ್ನು ಮಹಾತ್ಮರ 150ನೇ ವರ್ಷಾಚರಣೆ ಅಂಗವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಅಭಿವೃದ್ಧಿಗಾಗಿ ತಾವು ರೂಪಿಸಿರುವ ಯೋಜನೆಗಳ ಪ್ರತಿಯನ್ನು ಸಹ ಸಚಿವರಿಗೆ ಸಲ್ಲಿಸಿದರು.
ದೇವಾಲಯಗಳ ನಗರ ಎಂದೇ ಪ್ರಸಿದ್ಧವಾಗಿರುವ ನಂಜನಗೂಡನ್ನು ಹಸಿರು ನಗರವನ್ನಾಗಿ ಸಹ ಮಾಡಲು ಉತ್ಸುಕರಾಗಿರುವ ಶಾಸಕರು, ಕಪಿಲ ವನವನ್ನು ಊಟಿಯ ಸಸ್ಯೋದ್ಯಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಿದ್ದಾರೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀಕಂಠೇಶ್ವರ ದೇವಸ್ಥಾನದಿಂದಾಗಿ ನಂಜನಗೂಡು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ ಎಂದು ಹರ್ಷವರ್ಧನ್ ಅವರು ತಿಳಿಸಿದರು. ಈ ಪಟ್ಟಣವು ಮೈಸೂರಿನಿಂದ ಕೇವಲ 23 ಕಿಮೀ ದೂರದಲ್ಲಿದೆ. ಪಟ್ಟಣದ ಸಮೀಪದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಯು ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ನಂಜನಗೂಡು ಐತಿಹಾಸಿಕ ಸ್ಥಳ ಮಾತ್ರವಲ್ಲ ಭೌಗೋಳಿಕವಾಗಿಯೂ ಸುಂದರವಾಗಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಎರಡೂ ಯೋಜನೆಗಳನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕರು ಎರಡೂ ಯೋಜನೆಗಳ ನೀಲನಕ್ಷೆಯ ಪ್ರತಿಗಳನ್ನು ಸಚಿವರಿಗೆ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ