ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ 'ಭಾಷೆ ಮತ್ತು ಸಾಹಿತ್ಯ'ದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ್ ಭಟ್, "ಸಾಮಾನ್ಯ ಮನುಷ್ಯನನ್ನು ಉದಾತ್ತಗೊಳಿಸುವುದೇ ಸಾಹಿತ್ಯ". ಭಾಷೆ ಹಾಗೂ ಸಾಹಿತ್ಯದ ಮೇಲಿನ ಹಿಡಿತ ನಮ್ಮ ಸಾಧ್ಯತೆಗಳನ್ನು ವಿಸ್ತರಿಸಿ, ಜ್ಞಾನವನ್ನು ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯದ ಓದಿನಿಂದ ಜಗತ್ತಿನ ಸಾವಿರಾರು ಚಿಂತನೆಯ ಪ್ರಕ್ರಿಯೆಗಳನ್ನು ಪಡೆಯಲು ಸಾಧ್ಯ. ಇದು ನಾವು ಸದಾ ಜಗತ್ತಿನೊಂದಿಗೆ ಹಾಗೂ ಜಗತ್ತು ನಮ್ಮೊಂದಿಗೆ ಸಂವಾದ ನಡೆಸಲು ಅನುವು ಮಾಡಿಕೊಡುತ್ತದೆ ಎಂದರು. ನಮಗೆಲ್ಲರಿಗಿರುವ ಸೂರ್ಯ, ಚಂದ್ರ, ಕಾಡು, ಗಾಳಿ, ನೀರು ಒಂದೇ ಆದರೂ, ಪ್ರತಿಯೊಬ್ಬರೂ ಅದನ್ನು ಗ್ರಹಿಸುವ ರೀತಿ ಬೇರೆ ಬೇರೆಯಾಗಿರಬಹುದು. ಎಲ್ಲರ ಗ್ರಹಿಕೆಯನ್ನು ಗೌರವಿಸಿ, ಮನ್ನಿಸುವ ಮನಸ್ಥಿತಿ ನಮ್ಮದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಚ್ಚೇಂದ್ರ, ಕಾರ‍್ಯಕ್ರಮದ ಸಂಯೋಜಕಿ ಚಂದ್ರಿಕಾ ಶೆಟ್ಟಿಗಾರ್, ಆಳ್ವಾಸ್ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಇಂಗ್ಲೀಷ್ ವಿಭಾಗದ ವಿದ್ಯಾರ್ಥಿ ಸಂಯೋಜಕಿ ಸುಕೃತಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನನ್ಯ ಸ್ವಾಗತಿಸಿ ಮತ್ತು ವಂದಿಸಿದರು. ಗುಣೇಶ್ ಭಾರತೀಯ ಕಾರ‍್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ