ಮಂಗಳೂರು: ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ವತಿಯಿಂದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಜೀವಮಾನ ಸಾಧನೆಗಾಗಿ ನೀಡಲಾಗುವ 'ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯ ವಿಶೇಷ ಪ್ರಶಸ್ತಿ'ಗೆ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಹಾಗೂ 'ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ' ವಾರ್ಷಿಕ ಗೌರವಕ್ಕೆ ಹಿರಿಯ ಸಮಾಜಸೇವಕಿ ವಿಜಯಲಕ್ಷ್ಮಿ ಬಿ.ಶೆಟ್ಟಿ ಆಯ್ಕೆಯಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಆಯ್ಕೆ ಸಮಿತಿ ಸಭೆಯಲ್ಲಿ ಬೇರೆ ಬೇರೆ ಮೂಲಗಳಿಂದ ಬಂದಿದ್ದ ಸುಮಾರು 80 ಪ್ರಸ್ತಾವನೆಗಳನ್ನು ಪರಿಶೀಲಿಸಿ ಅಂತಿಮವಾಗಿ ಈ ಹೆಸರುಗಳನ್ನು ಪರಿಗಣಿಸಲಾಗಿದೆ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.
ಡಾ ಅಮೃತ ಸೋಮೇಶ್ವರ:
ಮಂಗಳೂರು ತಾಲೂಕಿನ ಕೋಟೆಕಾರು ಸಮೀಪ ಅಡ್ಕದಲ್ಲಿ ಚಿರಿಯಂಡ ಮತ್ತು ಅಮುಣಿ ದಂಪತಿಗೆ 1935 ಸಪ್ಟೆಂಬರ 27ರಂದು ಜನಿಸಿದ ಪ್ರೊ. ಅಮೃತ ಸೋಮೇಶ್ವರ ಅವರು ಹಿರಿಯ ಕವಿ, ಸಂಶೋಧಕ, ಸಾಹಿತಿ, ಯಕ್ಷಗಾನ ಪ್ರಸಂಗ ಕರ್ತೃ ಮತ್ತು ಜಾನಪದ ವಿದ್ವಾಂಸರು. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ 1993 ರಲ್ಲಿ ನಿವೃತ್ತರಾದ ಅವರು ವಿವಿಧ ಪ್ರಕಾರದ ಕೃತಿರಚನೆಗೆ ಹೆಸರಾಗಿದ್ದಾರೆ. ಎಲೆ ಗಿಳಿ, ಕೆಂಪು ನೆನಪು, ರುದ್ರಶಿಲೆ ಸಾಕ್ಷಿ, ವನಮಾಲೆ, ಭ್ರಮಣ, ಉಪ್ಪು ಗಾಳಿ, ತೀರದ ತೆರೆ, ಕೋಟಿ-ಚೆನ್ನಯ್ಯ, ನಂದಳಿಕೆ ನಂದಾದೀಪ ರಾಜರತ್ನಂ ಕವಿತೆಗಳು (ಕನ್ನಡ); ಬಾಮಕುಮಾರ ಸಂಧಿ, ತಂಬಿಲ, ರಂಗಿತ (ತುಳು ಕವನ ಸಂಕಲನ); ತುಳು ಪಾಡ್ದನ ಕತೆಗಳು, ಅಪಾರ್ಥಿನೀ, ತುಳು ಪಾಡ್ದನ ಸಂಪುಟ, ಯಕ್ಷಗಾನ ಕೃತಿ ಸಂಪುಟ ಮೊದಲಾದವು ಅವರ ಪ್ರಕಟಿತ ಕೃತಿಗಳು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರಕಾರದ ಭಾಷಾ ಸಮ್ಮಾನ್, ತುಳು ಅಕಾಡೆಮಿ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಶಿವರಾಮ ಕಾರಂತ ಬಾಲವನ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ, ಯಕ್ಷಗಾನ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ ಇತ್ಯಾದಿ ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ.
ವಿಜಯಲಕ್ಷ್ಮಿ ಬಿ.ಶೆಟ್ಟಿ:
ಶಿರ್ವಕೋಡು ವಾಸು ಎಸ್. ಶೆಟ್ಟಿ ಮತ್ತು ಸುಮತಿ ಹೆಗ್ಗಡ್ತಿ ದಂಪತಿಗೆ 1949 ಸಪ್ಟೆಂಬರ್ 6 ರಲ್ಲಿ ಜನಿಸಿದ ವಿಜಯಲಕ್ಷ್ಮಿ ಬಿ.ಶೆಟ್ಟಿ ಕಳೆದ 40 ವರ್ಷಗಳಿಂದ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡವರು. ತಮ್ಮ 18ನೇ ವಯಸ್ಸಿನಲ್ಲಿ ಮಂಗಳೂರಿನ ಖ್ಯಾತ ನ್ಯಾಯವಾದಿ ಕೆ.ಪಿ.ಬಿಂದುಸಾರ ಶೆಟ್ಟಿ ಅವರನ್ನು ವಿವಾಹವಾಗಿ ಮಂಗಳೂರಿನಲ್ಲಿ ನೆಲೆಸಿದ್ದು ದ.ಕ.ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳಲ್ಲಿ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ 18 ವರ್ಷ ಸೇವೆ ಸಲ್ಲಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಕಾರಣಕರ್ತರು. ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಸಂಘಟನೆ, ದತ್ತು ನಿಧಿ ಸ್ಥಾಪನೆ, ಕೃತಿ ರಚನೆಗಳಿಗೆ ಪ್ರೇರಕರು. ಸ್ವತ: ಲೇಖಕಿಯಾಗಿ ಇಬ್ಬನಿ, ನನ್ನ ದಾರಿ ನನ್ನ ನುಡಿ, ಕಡಲು, ಪ್ರತಿಬಿಂಬ ಮೊದಲಾದ ಕೃತಿಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅಖಿಲ ಭಾರತ ತುಳು ಒಕ್ಕೂಟ, ಕರಾವಳಿ ಲೇಖಕಿ ವಾಚಕಿಯರ ಸಂಘ, ಕಿವುಡ ಮತ್ತು ಅಂಧರ ಸೇವಾ ಸಂಘ, ಭಗಿನಿ ಸಮಾಜ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್, ನೆಹರು ಯುವ ಕೇಂದ್ರ, ಕದ್ರಿ ಬಾಲಭವನ, ಕಲ್ಕೂರ ಪ್ರತಿಷ್ಠಾನ, ಜಿಲ್ಲಾ ಕೋಮುಸೌಹಾರ್ದ ಸಮಿತಿ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ, ನವೋದಯ ಮಹಿಳಾ ಮಂಡಲ, ಕದ್ರಿ ಮಂಜುನಾಥ ಸೇವಾ ಸಮಿತಿ ಇತ್ಯಾದಿ ಸಂಘಟನೆಗಳ ಮೂಲಕ ನಿರಂತರ ಸಮಾಜ ಸೇವಾ ಕಾರ್ಯಗಳಲ್ಲಿ ವಿಜಯಲಕ್ಷ್ಮಿ ಅವರು ನಿರತರಾಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ಫೆ. 26ರಿಂದ ಮಂಗಳೂರು ಪುರಭವನದಲ್ಲಿ ಏರ್ಪಡಿಸಿರುವ 'ನಮ್ಮ ಅಬ್ಬಕ್ಕ- 2022 ಅಮೃತ ಸ್ವಾತಂತ್ರ್ಯ ಸಂಭ್ರಮ' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದಿನಾಂಕ 27ರಂದು ಆದಿತ್ಯವಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಶಾಲು, ಸ್ಮರಣಿಕೆ, ಗೌರವ ನಿಧಿ ಮತ್ತು ಸನ್ಮಾನ ಫಲಕಗಳನ್ನು ಒಳಗೊಂಡಿದೆ ಎಂದು ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ