ಮಂಗಳೂರು: ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿ ತುಳುನಾಡಿನಿಂದ ಸ್ವಾತಂತ್ರ್ಯ ಕಹಳೆಯೂದಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ಉಳ್ಳಾಲ ವೀರರಾಣಿ ಅಬ್ಬಕ್ಕನ ರಾಷ್ಟ್ರ ಪ್ರೇಮವನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ಮರಿಸುವ ಸಲುವಾಗಿ 'ನಮ್ಮ ಅಬ್ಬಕ್ಕ- 2022' ಅಮೃತ ಸ್ವಾತಂತ್ರ್ಯ ಸಂಭ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮಂಗಳೂರು ಮಹಾನಗರ ಪಾಲಿಕೆಯು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ 2022 ಫೆಬ್ರವರಿ 26 ಮತ್ತು 27 ರಂದು ಮಂಗಳೂರು ಪುರಭವನದಲ್ಲಿ ಎರಡು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಯೋಜಿಸಿದೆ.
ಮೊದಲ ದಿನ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಸಮೂಹ ದೇಶಭಕ್ತಿ ಗೀತೆಗಳ ಗಾಯನ ಹಾಗೂ ಸಾರ್ವಜನಿಕರಿಗಾಗಿ 'ಭಾರತ ಸ್ವಾತಂತ್ರ್ಯದ ಅಮೃತೋತ್ಸವ: ರಾಣಿ ಅಬ್ಬಕ್ಕನ ನೆನಹು' ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಅಲ್ಲದೆ ಇತಿಹಾಸ ತಜ್ಞರಿಂದ ವಿಚಾರ ಸಂಕಿರಣ, ಬಹು ಭಾಷಾ ಕವಿ ಗೋಷ್ಠಿ- ಕಾವ್ಯ ಗಾನ, ಅಬ್ಬಕ್ಕ ಗೀತೆ, ಸ್ವಾತಂತ್ರ್ಯಾಮೃತ ಗೀತ ನೃತ್ಯ, ಹಾಸ್ಯ ರಂಜನೆ, ಯಕ್ಷ ನೃತ್ಯ ವೈಭವ, ಸಂಗೀತ ಸೌರಭ ಇತ್ಯಾದಿ ವಿವಿಧ ಸಾಂಸ್ಕೃತಿಕ ಕಲಾಪಗಳನ್ನೂ ಏರ್ಪಡಿಸಲಾಗಿದೆ.
'ನಮ್ಮ ಅಬ್ಬಕ್ಕ' ಕಾರ್ಯಕ್ರಮಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಅವರನ್ನು ಆಹ್ವಾನಿಸಲಾಯ್ತು
ಫೆ.27 ರಂದು ಜರಗುವ ಸಮಾರೋಪ ಸಮಾರಂಭದಲ್ಲಿ ನಾಡಿನ ಈರ್ವರು ಸಾಧಕರಿಗೆ 'ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ' ಮತ್ತು 'ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯ ಗೌರವ ಪ್ರಶಸ್ತಿ' ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ರಾಜ್ಯದ ಮಂತ್ರಿಗಳು, ಜಿಲ್ಲೆಯ ಶಾಸಕರು, ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖರು ಹಾಗೂ ವಿವಿಧ ಗಣ್ಯರು ಭಾಗವಹಿಸುವರೆಂದು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಸ್ಪರ್ಧಿಗಳ ಗಮನಕ್ಕೆ:
ಸಮೂಹ ದೇಶಭಕ್ತಿ ಗೀತಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ.ಪೂ.ಕಾಲೇಜು ವಿದ್ಯಾರ್ಥಿಗಳು ಮತ್ತು ಭಾಷಣ ಸ್ಪರ್ಧೆಯಲ್ಲಿ ಆಸಕ್ತ ಸಾರ್ವಜನಿಕರು ಪತ್ರ ಮುಖೇನ ಕೆಳಗಿನ ವಿಳಾಸದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಲು ಕೋರಲಾಗಿದೆ
ವಿಳಾಸ: ಸಂಚಾಲಕರು, ಸ್ಪರ್ಧಾ ವಿಭಾಗ 'ನಮ್ಮ ಅಬ್ಬಕ್ಕ - 2022' ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ 'ವಿದ್ಯಾ' ಕದ್ರಿ ಕಂಬಳ ಬಿಜೈ ಅಂಚೆ, ಮಂಗಳೂರು - 575004
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ