ಡಿ. ಕುಲಾಲ್ ಮೇಕೇರಿ
ಶಾಸಕರೇ ಶಿಲಾನ್ಯಾಸ ಮಾಡಿರುವ ರಸ್ತೆ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಹೆರವನಾಡು ಗ್ರಾಮಕ್ಕೆ ಸೇರುವ ಕಾಟಕೇರಿ-ಅಪ್ಪಂಗಳ ರಸ್ತೆಯ ದುರಸ್ತಿ ಮತ್ತು ಡಾಮರೀಕರಣಕ್ಕಾಗಿ 2019ರಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯನವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಎರಡು ವರ್ಷಗಳೇ ಕಳೆದರೂ ಕೇವಲ 5 ಕಿಲೋ ಮೀಟರ್ ದೂರದ ರಸ್ತೆ ಡಾಮರೀಕರಣ ಪೂರ್ಣಗೊಂಡಿಲ್ಲ.
ಈ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕೇವಲ 3.1 ಕಿ ಮೀ ಮಾತ್ರ ಡಾಮರೀಕರಣ ಪೂರ್ಣಗೊಳಿಸಿದ್ದು, ಬಾಕಿ ಉಳಿದಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲವೆಂದು ನಿಲ್ಲಿಸಿಬಿಟ್ಟಿದ್ದಾರೆ. ಹಾಗಾದರೆ ಶಾಸಕರ ನಿಧಿಯಲ್ಲಿ ಹಣವಿಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ತುಂಡು ತುಂಡಾದ ನೀರಿನ ಪೈಪುಗಳು: ಈ ಅರ್ಧಂಬರ್ಧ ರಸ್ತೆ ಕಾಮಗಾರಿಯಿಂದಾಗಿ ಇಲ್ಲಿನ ಮನೆಗಳಿಗೆ ಸರಬರಾಜಾಗುತ್ತಿದ್ದ ನೀರಿನ ಪೈಪುಗಳು ತುಂಡಾಗಿದ್ದು, ಕೆಲವು ಮನೆಗಳಿಗೆ ಕುಡಿಯುವ ನೀರಿಲ್ಲದೆ ಪರದಾಡಬೇಕಾಗಿದೆ.
ಮನೆಗಳಿಗೆ ಧೂಳಿನ ಸಿಂಚನ: ಅಪೂರ್ಣ ರಸ್ತೆ ಕಾಮಗಾರಿಯಿಂದಾಗಿ ಇಲ್ಲಿನ ರಸ್ತೆ ಬದಿ ಇರುವ ಮನೆಗಳಿಗೆ ಮತ್ತು ಈ ರಸ್ತೆಯಲ್ಲಿ ಸಾಗುವ ಪ್ರವಾಸಿಗರಿಗೆ ಧೂಳಿನಿಂದಾಗಿ ಉಸಿರಾಡಲು ಕೂಡ ಕಷ್ಟಕರವಾಗಿದೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪಂಚಾಯಿತಿಯ ಅಧಿಕಾರಿಗಳಾಗಲಿ, ಸದಸ್ಯರಾಗಲಿ ಚಕಾರವೆತ್ತದೆ ಇರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.
ರಸ್ತೆ ಕಾಮಗಾರಿ ಆರಂಭಿಸಿ ಸುಮಾರು ಎರಡು ವರ್ಷ ಕಳೆದು ಹೋಯಿತು. ಕೇವಲ 5 ಕಿಲೋ ಮೀಟರ್ ರಸ್ತೆ ಡಾಮರೀಕರಣಗೊಳಿಸಲು ಇನ್ನು ಎಷ್ಟು ವರ್ಷ ಬೇಕು. ನಮ್ಮ ಮನೆಯ ಕುಡಿಯುವ ನೀರಿನ ಸಂಪರ್ಕ ಪೈಪುಗಳನ್ನು ರಸ್ತೆ ಕೆಲಸ ಮಾಡುವಾಗ ತುಂಡು ಮಾಡಿ ಹಾಕಿದ್ದಾರೆ. ಕುಡಿಯುವ ನೀರಿಲ್ಲದೆ ಕಷ್ಟಪಡುತ್ತಿದ್ದೇವೆ. ಆದಷ್ಟು ಬೇಗ ನೀರಿನ ವ್ಯವಸ್ಥೆ ಕಲ್ಪಿಸಲಿ.
-ಶ್ರೀನಿವಾಸ, ಪನ್ನೆ
ನಮ್ಮ ಕಷ್ಟ ಹೇಳಿಪ್ರಯೋಜನ ಇಲ್ಲ. ರಸ್ತೆಯ ಧೂಳುಗಳೆಲ್ಲ ಮನೆಯೊಳಗೆ ಬರುತ್ತಿದೆ.ನನ್ನ ಅಮ್ಮನಿಗೆ ಹುಷಾರಿಲ್ಲ. ಈ ಧೂಳಿನ ಸಮಸ್ಯೆಯಿಂದ ಅವರಿಗೆ ಉಸಿರಾಟದ ತೊಂದರೆ ಹೆಚ್ಚಾಗಿದ್ದು ಆಸ್ಪತ್ರೆಗೆ ಆಗಾಗ ಹೋಗುವಂತ ಪರಿಸ್ಥಿತಿ ಉಂಟಾಗಿದೆ. ಆದಷ್ಟು ಬೇಗ ರಸ್ತೆಕಾಮಗಾರಿಯನ್ನು ಪೂರ್ತಿಗೊಳಿಸಲಿ.
-ಮಂಜುನಾಥ, ಪನ್ನೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ