ರಂಗ ನೋಟ: ನಾಟಕ ವಿಮರ್ಶೆ
ಪುರುಷ ಪ್ರಧಾನ ವ್ಯವಸ್ಥೆಯ ಒಳಗೆ ನಲುಗಿರುವ ನಲಗುತ್ತಿರುವ ಹೆಣ್ಣೊಬ್ಬಳ ಪ್ರತೀಕ ಈ ಮಾಧವಿ. ತನ್ನ ಆಸೆ ಆಕಾಂಕ್ಷೆಗಳು ಪುರುಷ ಕೇಂದ್ರಿತ ವ್ಯವಸ್ಥೆಯೊಳಗೆ ತುಳಿದು ಹೋಗುತ್ತಿದ್ದರೂ ಅದನ್ನು ಪ್ರತಿಭಟಿಸಲು ಆಗದ ಹತಾಶ ಹೆಣ್ಣು ಇವಳು. ವ್ಯವಸ್ಥೆಗೆ ತಲೆಬಾಗಿ ತನ್ನದೆಲ್ಲವನ್ನೂ ಕಳೆದುಕೊಳ್ಳುವ ದುರಂತ ನಾಯಕಿ ಇವಳು.
ಹೆಣ್ಣು ತನ್ನ ಸ್ವತ್ತು ತನ್ನ ಆಜ್ಞೆಯನ್ನು ಪಾಲಿಸಬೇಕಾದವಳು, ನಾನು ಹೇಳಿದಂತೆ ನಡೆಯಬೇಕಾದವಳು ಹಾಗಿದ್ದರೆ ಆಕೆಗೆ ಶ್ರೇಯಸ್ಸು ಎಂದು ಬಿಂಬಿಸಲಾಗುತ್ತದೆ ಇಲ್ಲಿ. ಮಾಧವಿಯ ದುರಂತ ಕಥೆ ಹುಟ್ಟಿನಿಂದಲೇ ಶುರುವಾಗುತ್ತದೆ ಹೆಣ್ಣೆಂಬ ಕಾರಣಕ್ಕೆ ತಂದೆಯಿಂದಲೇ ಅನಾದಾರಕ್ಕೊಳಗಾದವಳು ಈಕೆ. ಅದೇ ಕೊರಗಿನಿಂದ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಮುಂದೆ ಯವ್ವನದಲ್ಲಿ ಹೆತ್ತ ತಂದೆಯೇ ಮಗಳೆಂಬ ಮಮಕಾರ ವಿಲ್ಲದೆ ಆಕೆಯನ್ನು ಗಾಲವನಿಗೆ ದಕ್ಷಿಣೆಯ ರೂಪದಲ್ಲಿ ನೀಡುತ್ತಾನೆ. ತಾನು ಕೊಡಲಾಗದ ವಿಶೇಷ ರೂಪಿನ ಕುದುರೆಯ ಬದಲಾಗಿ. ಇಲ್ಲಿಂದ ಆಕೆ ಮೂವರು ರಾಜರಿಗೆ ಕುದುರೆಯ ಬದಲಾಗಿ ವಿಕ್ರಯವಾಗುತ್ತಾ ಹೋಗುತ್ತಾಳೆ. ಹರ್ಯಶ್ವನಾಗಲಿ, ದಿವೋದಾಸನಾಗಲಿ, ಉಶೀನರನೆ ಆಗಲಿ ಅವಳನ್ನು ತಮ್ಮ ವಂಶೋದ್ಧಾರಕ ನನ್ನು ಹೆತ್ತು ಕೊಡಬಲ್ಲ ಯಂತ್ರದಂತೆ ಕಾಣುತ್ತಾರೆಯೇ ಹೊರತು ಗೆಳತಿ ಅಥವಾ ಮಡದಿ ಯಂತೆ ಅಲ್ಲ. ವಿಪರ್ಯಾಸವೆಂದರೆ ಬಯಸಿದಾಗ ಕನ್ಯೆಯಾಗುವ ವರ ಅವಳಿಗೆ ಶಾಪವಾಗಿಯೇ ಪರಿಣಮಿಸುತ್ತದೆ. ಹರ್ಯಶ್ವನ ಬಳಿ ಒಂದು ವರ್ಷ ಕಳೆದ ಬಳಿಕ ಅನಿವಾರ್ಯವಾಗಿ ಮಗುವನ್ನು ತೊರೆದುರೂ ಹೊಸ ಬದುಕೊಂದು ಮುಂದೆ ಬರಬಹುದು ಎಂಬ ಆಕೆಯ ಕನಸು ಹುಸಿಯಾಗಿಯೇ ಉಳಿಯುತ್ತದೆ. ಮುಂದೆ ದಿವೋದಾಸ, ಉಶೀನರನಿಗೂ ವಂಶೋದ್ದಾರಕ ನನ್ನು ಹೆತ್ತು ಕೊಟ್ಟ ಆಕೆ, ಗಾಲವನೊಂದಿಗೆ ವಿಶ್ವಾಮಿತ್ರರ ಬಳಿ ಬಂದಾಗ ಇವರಾದರೂ ನನ್ನ ಬದುಕನ್ನು ಉದ್ಧರಿಸಬಹುದು ಎಂದುಕೊಂಡವಳಿಗೆ ಆಘಾತವೇ ಕಾದಿರುತ್ತದೆ. ಸರ್ವಸಂಗ ಪರಿತ್ಯಾಗಿಗಳಾದ ಮಹರ್ಷಿಗಳು ತಮ್ಮ ಕಾಮವನ್ನು ಜಯಿಸಿದೇ ಹೋಗುತ್ತಾರೆ.
ಇದೆಲ್ಲದರ ನಂತರ ಆಕೆಗೆ ಭರವಸೆಯ ಬೆಳಕು ತೋರುವುದು ಗಾಲವನಲ್ಲಿ. ಆತ ಆಕೆಯ ಪರಿಸ್ಥಿತಿ ಕಂಡು ಸಹಾನುಭೂತಿ ತೋರಿದವನು ಅಲ್ಲವೇ? ಆದರೆ ಕನ್ಯೆಯಾದರೆ ವರಿಸಲು ಸಿದ್ಧನಿರುವ ಆತ "ನಾನು ಇದ್ದಂತೆಯೇ ಒಪ್ಪಿಕೊಳ್ಳಿ" ಎಂದು ಮಾಧವಿ ಬೇಡಿಕೆ ಇಟ್ಟಾಗ ಗುರುಪತ್ನಿ ಮಾತೃ ಸಮಾನ ಎಂದು ನುಣುಚಿಕೊಳ್ಳುತ್ತಾನೆ.
ಇಲ್ಲಿ ಆತನ ಆಷಾಡಭೂತಿತನ ಬಯಲಾಗುತ್ತದೆ. ಆತನು ಬಯಸುವುದು ಆಕೆಯ ದೇಹವನ್ನೇ ಹೊರತು ಮನಸ್ಸು ಮತ್ತು ಭಾವನೆಗಳನ್ನೆಲ್ಲ. ಎಲ್ಲವೂ ಮುಗಿದು ತಂದೆಯ ಬಳಿ ಬಂದಾಗ ತಂದೆಯಾದ ಯಯಾತಿ ಮಹಾರಾಜನಿಂದ ಆದರವೇನು ದೊರೆಯುವುದಿಲ್ಲ. ಆತನಿಗೆ ಮಗಳಿಗಿಂತಲೂ ತನ್ನ ಪ್ರತಿಷ್ಠೆಯೇ ಮುಖ್ಯವಾಗುತ್ತದೆ. ಈಕೆಯ ಸ್ವಯಂವರವನ್ನು ಏರ್ಪಡಿಸಿ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳುವ ಬಯಕೆ ಆತನಿಗೆ. ಇದುವರೆಗೆ ನಡೆದದ್ದೆಲ್ಲ ಕೆಟ್ಟ ಕನಸೆಂದು ಮರೆಯುವಂತೆ ಆತ ಹೇಳುತ್ತಾನೆ. ಆದರೆ ಇದುವರೆಗೆ ನಡೆದುದನ್ನೆಲ್ಲಾ ಅನುಭವಿಸಿದವಳು ಆಕೆಯೊಬ್ಬಳೇ ಅಲ್ಲವೇ.? ಅನುಭವಿಸಿದ್ದನ್ನು ಮರೆಯಲು ಹೇಗೆ ಸಾಧ್ಯ.?
ಹೆಣ್ಣು ಬಾಲ್ಯದಲ್ಲಿ ತಂದೆ ಯೌವ್ವನದಲ್ಲಿ ಗಂಡ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರಬೇಕು ಎಂದು ಬಯಸುತ್ತದೆ ಒಂದು ಶಾಸ್ತ್ರ. ಇದರಂತೆ ನಡೆದ ಹೆಣ್ಣು ಮಕ್ಕಳನ್ನೆಲ್ಲಾ "ಪತಿವ್ರತೆ"ಎಂದು ಆದರ್ಶ ನಾಯಕಿಯಂತೆಯೂ "ದೇವತೆ" ಎಂದು ಬಿಂಬಿಸಲಾಗುತ್ತದೆ.
ಇಂತಹ ಹೆಣ್ಣುಮಕ್ಕಳ ತ್ಯಾಗದ ಬುನಾದಿಯಲ್ಲಿ ಪುರುಷ ಅಹಂಕಾರ ವೆಂಬುದು ವಿಜೃಂಭಿಸುತ್ತದೆ. ಬಹುಶಃ ನಮ್ಮ ಪುರಾಣ ಪಾತ್ರಗಳಾದ ಸೀತೆ, ತಾರಾ, ಅಹಲ್ಯೆ, ದಮಯಂತಿ ಮುಂತಾದವರೆಲ್ಲ ಒಂದು ರೀತಿಯಲ್ಲಿ ದುರಂತ ನಾಯಕಿಯರೇ. ಅಲ್ಲದೆ ಇತಿಹಾಸವನ್ನು ಹಳೆಯ ಶಾಸ್ತ್ರ ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದ ಮೌಡ್ಯಾಚರಣೆ ಗಳನ್ನು ನೋಡಿದಾಗ ಅಲ್ಲಿ ಸಂಪ್ರದಾಯದ ಹೆಸರಿನಲ್ಲಿ ಬಲಿಯಾದವಳು ಹೆಣ್ಣು. ರಾಜ ಮಹಾರಾಜರ ಖಯಾಲಿಗೆ ಆಕ್ರಮಣಕಾರರ ಅತ್ಯಾಚಾರಕ್ಕೆ ಒಳಗಾದವಳು ಹೆಣ್ಣು.
ತನಗಾಗುತ್ತಿರುವ ಅನ್ಯಾಯವನ್ನು ಶೋಷಣೆಯನ್ನು ಪ್ರತಿಭಟಿಸದೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವ ಪ್ರತಿ ಹೆಣ್ಣಿನಲ್ಲೂ ಒಬ್ಬಳು "ಮಾಧವಿ "ಇರುತ್ತಾಳೆ. ಎಲ್ಲಿಯವರೆಗೆ ಆಕೆ ತಲೆಬಾಗಿಸಿ ಕೊಂಡು ಎಲ್ಲವನ್ನು ಸಹಿಸಿಕೊಂಡು ತನ್ನ ಆಸೆ- ಆಕಾಂಕ್ಷೆಗಳನ್ನು ಭಗ್ನಗೊಳಿಸಿ ಬಾಳ್ವೆ ಮಾಡುತ್ತಾಳೋ ಅಲ್ಲಿಯವರೆಗೆ ಆಕೆಯನ್ನು ತುಳಿಯಲಾಗುತ್ತದೆ. ಒಂದು ವೇಳೆ ಅಂಬೆಯಂತೆ ದಿಟ್ಟತನದಿಂದ ಧಿಕ್ಕರಿಸಿದರು ಅಗ್ನಿ ಪ್ರವೇಶವೇ ಆಕೆಗೆ ಗತಿಯಾಗುತ್ತದೆ.
-ರಾಜೇಶ್ವರಿ ಮಯ್ಯ ಬಲ್ಲೇರಿ, ಪುತ್ತೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ