ಹಿಜಬ್ ವಿವಾದ ಶಮನಕ್ಕೆ ಯತ್ನ: ರಾಜ್ಯಾದ್ಯಂತ ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Upayuktha
0

 


ಬೆಂಗಳೂರು: ಹಿಜಬ್ ವಿವಾದವನ್ನು ಶಮನಗೊಳಿಸುವ ಪ್ರಯತ್ನವಾಗಿ ರಾಜ್ಯ ಸರಕಾರ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಫೆ.9, 10 ಮತ್ತು 11ರಂದು ರಾಜ್ಯದ ಎಲ್ಲ ಪ್ರೌಢಶಾಲೆ ಮತ್ತು ಕಾಲೇಜುಗಳು ಮುಚ್ಚಿರುತ್ತವೆ.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಶಾಲಾ ಕಾಲೇಜುಗಳಲ್ಲಿ ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಹೈಸ್ಕೂಲ್‌ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಅವರು ತಿಳಿಸಿದ್ದಾರೆ.


ಕುಂದಾಪುರದ ಕಾಲೇಜೊಂದರಲ್ಲಿ ಕೆಲವು ದಿನಗಳ ಹಿಂದೆ ಹುಟ್ಟಿಕೊಂಡ ಹಿಜಬ್ ವಿವಾದ ಇದೀಗ ರಾಜಕೀಯ ಕುಮ್ಮಕ್ಕುಗಳಿಂದಾಗಿ ರಾಜ್ಯಾದ್ಯಂತ ಹಬ್ಬಿದೆ. ಈಗಾಗಲೇ ಸರಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಆದೇಶಿಸಿದ್ದು, ಸಮವಸ್ತ್ರಗಳನ್ನು ನಿಗದಿಪಡಿಸಿಲ್ಲದ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ವಿದ್ಯಾರ್ಥಿಗಳೂ ಶಿಸ್ತಿಗೆ ಭಂಗ ಬರದಂತಹ ಸಾದಾ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ಸೂಚಿಸಲಾಗಿತ್ತು.


ಹಿಜಬ್ ವಿವಾದ ದೇಶಾದ್ಯಂತ ಸುದ್ದಿ ಮಾಡಿದ್ದು, ಈ ಸಂಬಂಧ ರಾಜ್ಯದ ಹೈಕೋರ್ಟ್‌ನಲ್ಲಿ ಪ್ರಕರಣವೂ ದಾಖಲಾಗಿದೆ. ಇದರ ವಿಚಾರಣೆ ಪ್ರಗತಿಯಲ್ಲಿದ್ದು, ಸದ್ಯಕ್ಕೆ ಮುಂದೂಡಿಕೆಯಾಗಿದೆ.


ಕೆಲವೇ ಮಂದಿ ಬೆರಳೆಣಿಕೆಯಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಿಗೆ ಹಿಜಬ್ ಧರಿಸಿ ಬರಲಾರಂಭಿಸಿದ್ದು, ಕಾಲೇಜು ಆಡಳಿತ ಮಂಡಳಿ ಅದನ್ನು ವಿರೋಧಿಸಿದ ಬಳಿಕ ವಿವಾದ ಹುಟ್ಟಿಕೊಂಡಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಬೇಡಿಕೆ ಪ್ರತ್ಯೇಕತಾವಾದಕ್ಕೆ ಸಮನಾಗಿದ್ದು, ಶಿಕ್ಷಣ ಸಂಸ್ಥೆಗಳ ಶಿಸ್ತಿಗೆ ಭಂಗ ತರುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಕೇಸರಿ ಶಾಲುಗಳನ್ನು ಧರಿಸಿ ಕಾಲೇಜಿಗೆ ಬರಲಾರಂಭಿಸಿದ್ದು ವಿವಾದ ತೀವ್ರ ಸ್ವರೂಪಕ್ಕೆ ಬೆಳೆಯಲು ಕಾರಣವಾಯಿತು.


ಹಿಜಬ್ ವಿವಾದದ ಹಿಂದೆ ಕೆಲವು ಸಂಘಟನೆಗಳ ರಾಜಕೀಯ ಹಿತಾಸಕ್ತಿಯಿದ್ದು, ಹಲವು ಮುಸ್ಲಿಂ ಸಂಘಟನೆಗಳು ಮತ್ತು ಗಣ್ಯರೇ ಇದನ್ನು ವಿರೋಧಿಸಿದ್ದಾರೆ. ಇಸ್ಲಾಂನಲ್ಲಿ ಹಿಜಬ್ ಕಡ್ಡಾಯವಲ್ಲ. ಅದೊಂದು ಆಯ್ಕೆ ಅಷ್ಟೇ. ಧಾರ್ಮಿಕವಾಗಿ ಅದಕ್ಕೆ ನಿಷೇಧವೂ ಇಲ್ಲ, ಅನುಮೋದನೆಯೂ ಇಲ್ಲ ಎಂದು ಹಲವು ಗಣ್ಯರು ಅಭಿಪ್ರಾಯಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top