ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಿಸಿ ವಿವಿಧ ಬಗೆಯ ಪ್ರಯೋಗಗಳನ್ನು ನಡೆಸಲು ಪ್ರೇರಣೆ ನೀಡುವ ಉದ್ದೇಶದಿಂದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ರೂಪಿಸಿದ 'ಲ್ಯಾಬ್ ಇನ್ ಕ್ಯಾಬ್' ಯೋಜನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ಎಸ್.ಡಿ.ಎಂ ಸಂಸ್ಥೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಫೆ.10ರಂದು ಧರ್ಮಸ್ಥಳದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಯೋಜನೆಯಡಿ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಪ್ರಾಯೋಗಿಕ ಜ್ಞಾನವನ್ನು ಪ್ರಾತ್ಯಕ್ಷಿಕೆ ಮೂಲಕ ಬಿತ್ತರಿಸಲು ತಾಲೂಕಿನ ವಿವಿಧ ಹಳ್ಳಿಗಳ ಪ್ರೌಢಶಾಲೆಗಳಿಗೆ ಭೇಟಿ ನೀಡುವ ಕಾಲೇಜಿನ ವಿವಿಧ ವಿಜ್ಞಾನ ವಿಭಾಗಗಳ ಪ್ರಾಧ್ಯಾಪಕರ ತಂಡಕ್ಕೆ ಅನುಕೂಲವಾಗುವ ಪ್ರತ್ಯೇಕ ವಾಹನವನ್ನು ಇದೇ ಸಂದರ್ಭದಲ್ಲಿ ಹೆಗ್ಗಡೆ ಅವರು ಹಸ್ತಾಂತರಿಸಿದರು.
"ಪಠ್ಯಪುಸ್ತಕಗಳಲ್ಲಿರುವ ವೈಜ್ಞಾನಿಕ ಜ್ಞಾನ ಪ್ರಯೋಗಗಳ ಮೂಲಕ ಮನದಟ್ಟಾಗುತ್ತದೆ. ತರಗತಿಗಳು ಈ ಜ್ಞಾನದ ಕೇಂದ್ರಗಳು. ಪುಟ್ಟಪುಟ್ಟ ಪ್ರಯೋಗಗಳು ಪ್ರೌಢಶಾಲಾ ವಿದ್ಯಾರ್ಥಿಗಳ ವೈಜ್ಞಾನಿಕ ಪ್ರಜ್ಞೆಯನ್ನು ಗಟ್ಟಿಗೊಳಿಸುತ್ತವೆ. ಇಂಥ ಪ್ರಯೋಗಗಳನ್ನು ನಡೆಸುವ ಮಹತ್ವದ ಉದ್ದೇಶದ 'ಲ್ಯಾಬ್ ಇನ್ ಕ್ಯಾಬ್' ಯೋಜನೆ ಯಶಸ್ವಿಯಾಗಲಿ. ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಈ ಅನುಷ್ಠಾನಗೊಳ್ಳಲಿ. ಬೆಳ್ತಂಗಡಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳೆಲ್ಲರಿಗೆ ಇದರ ಪ್ರಯೋಜನ ದೊರಕಲಿ" ಎಂದು ಹೆಗ್ಗಡೆ ಅವರು ಶುಭ ಹಾರೈಸಿದರು.
"ಕಾಲೇಜಿನ 47 ಅತ್ಯುತ್ತಮ ವಿಶಿಷ್ಠ ಯೋಜನೆಗಳಲ್ಲಿ ಒಂದಾದ 'ಲ್ಯಾಬ್ ಇನ್ ಕ್ಯಾಬ್' ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಕಾಲೇಜಿನಿಂದ 'ಲ್ಯಾಬ್ ಇನ್ ಕ್ಯಾಬ್' ವಾಹನದಲ್ಲಿ ವೈಜ್ಞಾನಿಕ ಪ್ರಯೋಗಗಳಿಗೆ ಸಂಬಂಧಿಸಿದ ಅಗತ್ಯ ಪರಿಕರಗಳನ್ನು ಶಾಲೆಗಳಿಗೆ ಕೊಂಡೊಯ್ದು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರಯೋಗ ನಡೆಸಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದು ಇದರ ಮುಖ್ಯ ಉದ್ದೇಶ. 'ಲರ್ನಿಂಗ್ ಬೈ ಡುಯಿಂಗ್' ಎಂಬ ಪರಿಕಲ್ಪನೆ ಈ ಯೋಜನೆಯ ಹಿಂದಿದೆ. ಓದುವ ಕಾಲಕ್ಕೆ ಮಕ್ಕಳಿಗೆ ವಿಜ್ಞಾನದ ಬಗ್ಗೆ ಸ್ಪಷ್ಟ ಜ್ಞಾನ ದೊರಕಲಿದೆ" ಎಂದು ಈ ಯೋಜನೆಯ ಪ್ರಮುಖ ರೂವಾರಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹೇಳಿದ್ದಾರೆ.
"ಕಾಲೇಜಿನ ಪ್ರಮುಖ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಈ ಯೋಜನೆ ರೂಪುಗೊಂಡಿದೆ. ಕಾಲೇಜಿನ ವಿಜ್ಞಾನ ವಿಭಾಗಗಳು ಹಾಗೂ ತಾಲೂಕಿನ ಪ್ರೌಢಶಾಲೆಗಳ ನಡುವೆ ಶೈಕ್ಷಣಿಕ ಮತ್ತು ಪ್ರಾಯೋಗಿಕ ನಂಟು ಈ ಯೋಜನೆಯ ಮೂಲಕ ಸಾಧ್ಯವಾಗಲಿದೆ. ಮುಖ್ಯವಾಗಿ ಮೂಲವಿಜ್ಞಾನದೆಡೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ವಿಶೇಷ ಕಾಳಜಿ ಮೂಡಿಸಲಿದೆ. ಕಾಲೇಜಿನ ಎಲ್ಲಾ ವಿಜ್ಞಾನ ವಿಭಾಗಗಳ ಎಲ್ಲಾ ಪ್ರಾಧ್ಯಾಪಕರು ಈ ಯೋಜನೆಯಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಪ್ರೌಢಶಾಲೆಗಳಿಗೆ ವೇಳಾಪಟ್ಟಿಯನ್ವಯ ಭೇಟಿ ನೀಡಿ ವೈಜ್ಞಾನಿಕ ಪ್ರಯೋಗಳನ್ನು ನಡೆಸುವ ಮೂಲಕ ನಿರ್ದಿಷ್ಟ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ವಿದ್ಯಾರ್ಥಿಗಳಿಗೆ ನಿಗದಿಯಾಗಿರುವ ವೈಜ್ಞಾನಿಕ ಪಠ್ಯವನ್ನು ಆಧರಿಸಿ ಪ್ರಯೋಗಗಳನ್ನು ನಡೆಸಲಾಗುವುದು" ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎನ್.ಉದಯಚಂದ್ರ ಯೋಜನೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ವಿಜ್ಞಾನ ವಿಭಾಗದ ಡೀನ್ ಪ್ರೊ. ಎಸ್. ಎನ್. ಕಾಕತ್ಕರ್, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಪಿ. ವಿಶ್ವನಾಥ, ಲ್ಯಾಬ್ ಇನ್ ಕ್ಯಾಬ್ ಯೋಜನೆಯ ಸಂಯೋಜಕಿ ಸಂಗೀತಾ ಉಪಸ್ಥಿತರಿದ್ದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎ.ಕುಮಾರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ