ಫೆ. 13, 14: ಕಜೆಕೋಡಿ ಶ್ರೀ ಉಮಾಮಹೇಶ್ವರ ಸಪರಿವಾರ ದೇವಸ್ಥಾನ- ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ

Upayuktha
0


ಮಂಗಳೂರು: ಬಂಟ್ವಾಳ ತಾಲೂಕಿನ ಕಜೆಕೋಡಿಯ ಸುಂದರ ಪ್ರಕೃತಿ ರಮಣೀಯ ಪ್ರದೇಶದಲ್ಲಿ ನೆಲೆ ನಿಂತಿರುವ ಶ್ರೀ ಉಮಾಮಹೇಶ್ವರ ಸಪರಿವಾರ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮ. ಫೆ.13 ಮತ್ತು 14ರಂದು ಈ ಭವ್ಯ ಸಮಾರಂಭವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.


ಸಂಕಷ್ಟಗಳ ಪರಿಹರಿಸುವ, ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಭಕ್ತವತ್ಸಲ ಶ್ರೀ ಉಮಾಮಹೇಶ್ವರ  ಸಪರಿವಾರ ದೇವರು ಕ್ಷೇತ್ರ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಆದರೆ ಕಾಲನ ಪ್ರವಾಹಕ್ಕೆ ಸಿಲುಕಿ ನಾಮಾವಶೇಷವಾಗಿತ್ತು ಶ್ರೀ ಕ್ಷೇತ್ರ.


ಪ್ರಕೃತ ಕಾಲ ಗರ್ಭದೊಳಗೆ ಮರೆಯಾಗಿದ್ದ ಕಜೆಕೋಡಿ ಶಿವ ಸಾನ್ನಿಧ್ಯದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಅನುಜ್ಞಾ ಕಲಶ, ಬಾಲಾಲಯ ನಿರ್ಮಾಣ, ಅಭಿವೃದ್ಧಿ ಕಾರ್ಯಗಳು ನಡೆದಿವೆ. ನೂತನ ಆಲಯವು ವಿಶಿಷ್ಟವಾಗಿ ಮೂಡಿಬರುತ್ತಿದೆ. ಗರ್ಭಗುಡಿ, ತೀರ್ಥ ಮಂಟಪ ಕಲಾತ್ಮಕವಾದ ಕೆತ್ತನೆ, ಸುಂದರ ಕುಸರಿ ಕೆಲಸಗಳಿಂದ ಕೂಡಿದ ಬಾಗಿಲು, ಪಕ್ಕಾಸು ಇತ್ಯಾದಿಗಳ ಜೋಡಣೆ ನಡೆಯುತ್ತಿದೆ. ಗರ್ಭಗುಡಿ, ತೀರ್ಥ ಮಂಟಪದ ಮೇಲ್ಭಾಗದಲ್ಲಿ ಮರದಲ್ಲಿ ರಚಿಸಲಾದ ಸೂಕ್ಷ್ಮ ಮತ್ತು ಆಕರ್ಷಣೀಯವಾದ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ.


ದೇಗುಲದ ಸುತ್ತ ಆವರಣಗೋಡೆ, ಗರ್ಭಗುಡಿಯ ಹೊರಾಂಗಣಕ್ಕೆ ಇಂಟರ್‍ಲಾಕ್ ಅಳವಡಿಕೆ, ದೇವಸ್ಥಾನದ ಹೊರಾಂಗಣದಲ್ಲಿ ಬೀಳುವ ಮಳೆ ನೀರು ಹರಿಯಲು ಪೈಪ್ ಅಳವಡಿಕೆ, ಪುರಾತನ ಬಾವಿಯ ನವೀಕರಣ ಇತ್ಯಾದಿ ಕಾರ್ಯಗಳು ಪೂರ್ಣಗೊಂಡಿವೆ. ಇನ್ನೊಂದೆಡೆ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ಉಮಾಮಹೇಶ್ವರ ಸಪರಿವಾರ ದೇವರ ವಿಗ್ರಹ ತರಲಾಗಿದ್ದು, ಅವುಗಳಿಗೆ ಪ್ರಭಾವಳಿ ನಿರ್ಮಾಣ ಕೆಲಸ ನಡೆಯುತ್ತಿದೆ. ಇವುಗಳ ಜತೆ ಜತೆಗೆ ಫೆಬ್ರವರಿ 13, 14ರಂದು ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ.


ಯು.ಎಸ್. ಚಂದ್ರಶೇಖರ ಭಟ್, ನೆಕ್ಕಿತೆರವು ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ, ಡಾ| ರಾಮಕೃಷ್ಣ ಎಸ್., ಸನಂಗುಳಿ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ, ಶಂಕರ್ ಶೆಟ್ಟಿ, ಬೆದ್ರ್‍ಮಾರ್ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಗಿದೆ. ದೇಗುಲದ ಅಭಿವೃದ್ಧಿ ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಗಳಿಗೆ ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿಗಳ ಅಧ್ಯಕ್ಷರು, ಸರ್ವ ಸದಸ್ಯರು ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ದೇಗುಲದ ಕೆಲಸಗಳೆಲ್ಲ ಸಾಂಗವಾಗಿ ನೆರವೇರಲಿ, ಅದರಿಂದ ಊರಿನ ಅಭಿವೃದ್ಧಿಯೂ ಆಗಲಿ ಎಂಬ ನಿರ್ಮಲ ಮನದಿಂದ ಸ್ಥಳೀಯ ಭಕ್ತರೆಲ್ಲ ನಿತ್ಯ ಶ್ರಮದಾನ, ಕರಸೇವೆ, ಆರ್ಥಿಕ ನೆರವು, ಕೈಲಾದ ವಸ್ತುಗಳನ್ನು ಉದಾರವಾಗಿ ನೀಡಿ ಸಹಕರಿಸುತ್ತಿದ್ದಾರೆ.


ಕಜೆಕೋಡಿ ಪರಿಸರದ ಭಗವದ್ಭಕ್ತರ ನಿಷ್ಕಲ್ಮಶ ಮನಸ್ಸು, ಪ್ರೀತಿ, ಉದಾರ ಮನೋಭಾವ, ಒಗ್ಗೂಡಿ ಮುನ್ನಡೆಯುವ ಸ್ವಭಾವ ಈ ಸುಂದರ ಶಿವ ಸಾನ್ನಿಧ್ಯ ರೂಪುಗೊಳ್ಳುತ್ತಿರುವುದರ ಹಿಂದಿನ ಪ್ರೇರಣ ಶಕ್ತಿ ಎಂದರೆ ಅತಿಶಯವಲ್ಲ. ಕಜೆಕೋಡಿ ಶಿವ ಸಾನ್ನಿಧ್ಯ ವೃದ್ಧಿಸಲಿ, ದೇಗುಲ ರೂಪಿಸಲು ಪ್ರತ್ಯಕ್ಷ, ಪರೋಕ್ಷವಾಗಿ ದುಡಿದವರಿಗೆಲ್ಲ ಶ್ರೀ ಉಮಾಮಹೇಶ್ವರ ಸಪರಿವಾರ ದೇವರು ಸನ್ಮಂಗಳವನ್ನುಂಟುಮಾಡಲಿ. ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಯಶಸ್ವಿಯಾಗಿ ಸಂಪನ್ನಗೊಳ್ಳಲಿ ಎಂಬುದು ಸದ್ಭಕ್ತರೆಲ್ಲರ ಸದಾಶಯ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top