ಮಂಗಳೂರು: ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಪ್ರಧಾನ ಭಾಗವತ, ಬಲಿಪ ಪರಂಪರೆಯ ಸಾಂಪ್ರದಾಯಿಕ ಕೊಂಡಿ ಪ್ರಸಾದ ಬಲಿಪ ಆಯ್ಕೆಯಾಗಿದ್ದಾರೆ.
ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆಸಲ್ಲಿಸಿದ ಕಲಾವಿದರಿಗಾಗಿ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆಸಮಿತಿ 2021-22 ನೇ ಸಾಲಿಗೆ ಬಲಿಪರ ಹೆಸರನ್ನು ಸೂಚಿಸಿದೆ. ಪ್ರಶಸ್ತಿಯು ಶಾಲು, ಸ್ಮರಣಿಕೆ, ಪ್ರಶಸ್ತಿ ಫಲಕ ಮತ್ತು ಗೌರವ ನಿಧಿಯನ್ನು ಒಳಗೊಂಡಿದೆ.
ಬಲಿಪ ಪ್ರಸಾದ ಭಟ್:
ಮೂಡಬಿದಿರೆ ಸಮೀಪ ಮಾರೂರಿನ ನೂಯಿ ಮನೆಯಲ್ಲಿ ಯಕ್ಷರಂಗದ ಹಿರಿಯ ಸಾಧಕ ಬಲಿಪ ನಾರಾಯಣ ಭಾಗವತ ಮತ್ತು ವಿಜಯಲಕ್ಷ್ಮಿ ದಂಪತಿಗೆ 1976 ಏಪ್ರಿಲ್ 14 ರಂದು ಜನಿಸಿದ ಬಲಿಪ ಪ್ರಸಾದ ಭಟ್ ಅವರಿಗೆ ಭಾಗವತಿಕೆಯಲ್ಲಿ ತಂದೆಯೇ ಗುರು. ತಮ್ಮ 17ನೇ ವರ್ಷ ಪ್ರಾಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯನ್ನು ಸೇರಿದ (1994 ) ಅವರು ಕಳೆದ ಮೂರು ದಶಕಗಳಿಂದ ಭಾಗವತರಾಗಿ ಪ್ರತಿಷ್ಠಿತ ಬಲಿಪ ಪರಂಪರೆಯ ಸಾಂಪ್ರದಾಯಿಕ ಶೈಲಿಗೆ ಸಾಕ್ಷಿಯಾಗಿದ್ದಾರೆ.
ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಅಪಾರ ಸಿದ್ಧಿ ಪಡೆದ ಪ್ರಸಾದ ಬಲಿಪರು ಕಟೀಲು ಮೇಳವಲ್ಲದೆ ದೇಶ-ವಿದೇಶಗಳ ಹಲವಾರು ಯಕ್ಷಗಾನ ಪ್ರದರ್ಶನಗಳಲ್ಲಿ ತಮ್ಮ ವಿಶಿಷ್ಟ ಸ್ವರ ಗಾಂಭೀರ್ಯದಿಂದ ಜನಮನ ಗೆದ್ದಿದ್ದಾರೆ. ಅಜಾತಶತ್ರುವಾಗಿ ತಮ್ಮ ನಯ-ವಿನಯಗಳಿಂದ ಎಲ್ಲರ ಪ್ರೀತಿಪಾತ್ರರಾದ ಅವರು ಕಲಾಭಿಮಾನಿಗಳಿಂದ ಹಲವು ಮಾನ-ಸಮ್ಮಾನಗಳನ್ನು ಪಡೆದಿದ್ದಾರೆ. ಕದ್ರಿ ಶ್ರೀ, ಯಕ್ಷ ಕೀರ್ತಿ, ಯಕ್ಷ ಸಿರಿ, ಯಕ್ಷ ತರಂಗಿಣಿ ಸೇರಿದಂತೆ ವಿವಿಧ ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿರುವ ಅವರು ಪತ್ನಿ ದುರ್ಗಾದೇವಿ, ಮಕ್ಕಳಾದ ಅಪರ್ಣ ಹಾಗೂ ಅವನಿ ಅವರನ್ನೊಳಗೊಂಡ ಚೊಕ್ಕ ಸಂಸಾರ ಹೊಂದಿದ್ದಾರೆ.
ಫೆ. 18ಕ್ಕೆ ಪ್ರಶಸ್ತಿ ಪ್ರದಾನ:
ಫೆಬ್ರವರಿ 17ರಂದು ರಾತ್ರಿ ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ವತಿಯಿಂದ 'ಕೃಷ್ಣ ಕೃಷ್ಣಾ ಶ್ರೀಕೃಷ್ಣ' ಹಾಗೂ ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ 'ಶ್ರೀದೇವಿ ಮಹಾತ್ಮೆ' ಸೇವಾ ಬಯಲಾಟಗಳು ಜರಗಲಿವೆ
ಫೆಬ್ರವರಿ 18 ರಂದು ರಾತ್ರಿ ರಂಗಸ್ಥಳದಲ್ಲಿ ಜರಗುವ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಅವರ ಅಧ್ಯಕ್ಷತೆಯಲ್ಲಿ ಕಟೀಲು ಕ್ಷೇತ್ರದ ಆರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡುವರು. ಮಾಜಿ ಸಚಿವ ಬಿ. ರಮಾನಾಥ ರೈ, ಯಕ್ಷಗಾನ ವಿದ್ವಾಂಸರಾದ ಡಾ.ಎಂ ಪ್ರಭಾಕರ ಜೋಶಿ ಮತ್ತು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅತಿಥಿಗಳಾಗಿ ಭಾಗವಹಿಸುವರು ಎಂದು ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ