ಪ್ರಧಾನಿ ಮೋದಿಯ ಭೇಟಿ ಮುಖ್ಯಮಂತ್ರಿಗಳಿಗೇ ಸಿಗುವುದು ದುರ್ಲಭವಾಗಿರುವ ಹೊತ್ತಿನಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಪ್ರಧಾನಿ ಜತೆ ಅರ್ಧಗಂಟೆವರೆಗೆ ಕಳೆದು ಅವರಿಗೆ ಕಲಶಾಭಿಷೇಕ ಮಾಡಿಸಿ, ಕೈಗೆ ರಕ್ಷೆ ಕಟ್ಟಿ ಪಂಚ ಋತ್ವಿಜರಿಂದ ಆಶೀವರ್ದಿಸಿದ್ದಾರೆ!
ಕರಾವಳಿಯಲ್ಲಿ ಸದ್ಯ ಹಿಂದುತ್ವದ ಜತೆಗೆ ಅಭಿವೃದ್ಧಿ ಕಾರ್ಯಗಳಲ್ಲೂ ಮುಂಚೂಣಿಯಲ್ಲಿರುವ ಶಾಸಕ ಹರೀಶ್ ಪೂಂಜ ಅವರ ಈ ಮೋದಿ ಭಕ್ತಿ ಯಜ್ಞ, ಮಾಧ್ಯಮದಲ್ಲಿ ಮಾತ್ರ ಸುದ್ದಿಯಾಗದೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.
ಪ್ರಧಾನಿ ಮೋದಿಗಾಗಿ ಯಾಗ ಮಾಡುವ ಯೋಚನೆ ಹುಟ್ಟಿದ ಕುರಿತು ಮತ್ತು ಭೇಟಿಯಾದ ಕ್ಷಣಗಳನ್ನು ಪೂಂಜ ಮಾಧ್ಯಮದ ಜತೆ ಹಂಚಿಕೊಂಡಿದ್ದಾರೆ.
ಜಿತೇಂದ್ರ ಕುಂದೇಶ್ವರ ಮಂಗಳೂರು
ಯಾಗ ಮಾಡಲು ಯೋಚನೆ ಮೂಡಿದ್ದು ಹೇಗೆ?
ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ದಿಗ್ಬಂಧನಕ್ಕೊಳಗಾದ ಘಟನೆ ಬಳಿಕ ದೇಶ ರಕ್ಷಕನ ಒಳಿತಿಗಾಗಿ ನನ್ನ ಬೆಳ್ತಂಗಡಿ ಕ್ಷೇತ್ರದ ವತಿಯಿಂದ ಏನಾದರೂ ಧರ್ಮ ಕಾರ್ಯ ಮಾಡಲೇ ಬೇಕು ಎಂದು ನಿರ್ಧರಿಸಿದ್ದೆ. ನನ್ನ ಕ್ಷೇತ್ರದ ಎಲ್ಲ ೨೮ ಶಿವ ದೇವಸ್ಥಾನಗಳಲ್ಲಿ ಮೃತ್ಯುಂಜಯ ಯಾಗ ಮಾಡಿಸಲು ಸಂಕಲ್ಪ ಮಾಡಿದೆ. ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ದೊಡ್ಡ ಮಟ್ಟದಲ್ಲಿ ಯಾಗ ಮಾಡುವ ಇಚ್ಛೆಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಲ್ಲಿ ಕೇಳಿದೆ.
ಅವರು ಬಹಳ ಖುಷಿಯಿಂದ ಒಪ್ಪಿದರು, ಒಳ್ಳೆಯ ರೀತಿಯಲ್ಲಿ ವ್ಯವಸ್ಥೆಯೂ ಆಯಿತು. ಸುರತ್ಕಲ್‌ನ ವೇದಮೂರ್ತಿ ನಾಗೇಂದ್ರ ಭಾರಧ್ವಾಜ್ ನೇತೃತ್ವದಲ್ಲಿ 108 ಮಂದಿ ಋತ್ವಿಜರು 7 ಕುಂಡಗಳಲ್ಲಿ ಮಹಾಮೃತ್ಯುಂಜಯ ಯಾಗ ನಡೆಸಿದರು.
ಪ್ರಧಾನಿ ಭೇಟಿಯ ಕ್ಷಣಗಳು ಹೇಗಿದ್ದವು?
ಪ್ರಧಾನಿ ನಿವಾಸದಲ್ಲಿ ಮೋದಿಜಿಯವರಿಗೆ ನಮ್ಮ ಐವರು ಋತ್ವಿಜರು ನಾಮ- ನಕ್ಷತ್ರ ಸಹಿತ ಸಂಕಲ್ಪ ಮಾಡಿಸಿ, ಮಂತ್ರ ಪಠಣ ಪೂರ್ವಕ ೭ ಕಲಶಗಳ ಪುಣ್ಯ ಜಲ ಪ್ರೋಕ್ಷಿಸಿ, ಗಂಧ, ಕುಂಕುಮ, ಭಸ್ಮ ಸಹಿತ ತಿಲಕ ಹಾಕಿ, ಪ್ರಧಾನಿ ಕೈಯಿಂದಲೇ ಬ್ರಹ್ಮಾರ್ಪಣ ಮಾಡಿಸಿದರು.
ಧರ್ಮಸ್ಥಳದಲ್ಲಿ ಯಾಗ ನಡೆದಾಗ ಸಂಕಲ್ಪಿಸಿ ಇಡಲಾಗಿದ್ದ ರಕ್ಷೆಯನ್ನು ಪ್ರಧಾನಿಯವರ ಕೈಗೆ ಕಟ್ಟಿ ದೇವರ ರಕ್ಷೆ ಕೋರಿದೆವು*.
ಯಾಗದ ಸಂದರ್ಭ ಪ್ರಧಾನ ಕಲಶದಲ್ಲಿ ವಿಶೇಷ ರುದ್ರಾಕ್ಷಿ, ಸ್ಪಟಿಕದಲ್ಲಿ ಈಶ್ವರ ಪದಕ ಇರುವ ಚಿನ್ನದ ಹಾರ ಹಾಕಲಾಗಿತ್ತು. ಈ ಹಾರದೊಂದಿಗೆ ಮಂಗಳೂರಿನ ಮಲ್ಲಿಗೆ ಮಾಲೆ ಮತ್ತು ಮಂತ್ರಾಕ್ಷತೆಯನ್ನು ಋತ್ವಿಜರು ಮೋದಿಜಿಗೆ ಅರ್ಪಿಸಿದರು. ಧರ್ಮಸ್ಥಳ ಕ್ಷೇತ್ರದಿಂದ ಶಾಲು, ದೇವರ ಫೋಟೊ ನೀಡಿದೆವು
ಅಷ್ಟು ಹೊತ್ತು ಅವಕಾಶ ಹೇಗೆ ಸಿಕ್ಕಿತು?
ಭೇಟಿಗೆ ಹತ್ತು ನಿಮಿಷ ಸಿಕ್ಕಿತ್ತು. ನಮ್ಮ ಸಂಪ್ರದಾಯ ಮಾಡಬಹುದೇ ಎಂದು ಮೋದಿಜಿ ಅವರಲ್ಲಿ ಋತ್ವಿಜರು ಕೇಳಿದಾಗ ಖುಷಿಯಿಂದ ಒಪ್ಪಿಕೊಂಡರು.
ಮಂತ್ರ ಪಠಿಸುತ್ತಿದ್ದಾಗ ಕಣ್ಣು ಮುಚ್ಚಿ ಧ್ಯಾನಸ್ಥರಾಗಿ ಆಲಿಸಿದರು. ಪ್ರಸಾದವನ್ನು ಭಕ್ತಿ ಶ್ರದ್ಧೆಯಿಂದ ಸ್ವೀಕಾರ ಮಾಡಿದರು. ಹೀಗಾಗಿ ನಮ್ಮ ಭೇಟಿ ೨೫ ನಿಮಿಷದವರೆಗೆ ಮುಂದುವರಿಯಿತು. ನಮ್ಮೆಲ್ಲರ ಜತೆ ಖುಷಿಯಿಂದ ಪ್ರತ್ಯೇಕ ಫೋಟೊ ತೆಗೆಸಿಕೊಂಡರು. ಯಾಗದ ವಿಧಿ ವಿಧಾನಗಳ ಮತ್ತು ೨೮ ದೇವಸ್ಥಾನಗಳಲ್ಲಿ ಮೃತ್ಯುಂಜಯ ಹೋಮ ನಡೆಸಿದ ಛಾಯಾಚಿತ್ರಗಳನ್ನು ವೀಕ್ಷಿಸಿದರು.
ನೀವು ವೈಯಕ್ತಿಕವಾಗಿ ಏನು ಕೊಟ್ಟಿರಿ?
ಬೆಳ್ತಂಗಡಿ ಕ್ಷೇತ್ರದಲ್ಲಿ ಮೂರು ವರ್ಷ ಅಭಿವೃದ್ಧಿ ಕಾಮಗಾರಿಗಳ, ಸಾಧನೆ ಕಿರು ಹೊತ್ತಗೆಯನ್ನು ಪ್ರಧಾನಿಯವರ ಕೈಗೆ ಕೊಟ್ಟೆ. ಆಗ ಅವರು ಸಂತೋಷದಿಂದ ಡಾ. ವೀರೇಂದ್ರ ಹೆಗ್ಗಡೆಯವರನ್ನು ಕೇಳಿದರು, ಆರೋಗ್ಯ ವಿಚಾರಿಸಿದರು.
ನಿಮ್ಮನ್ನು ಹೇಗೆ ನೋಡಿಕೊಂಡರು?
ಮುಂಚಿತವಾಗಿಯೇ ಋತ್ವಿಜರು ಭೇಟಿಗೆ ಬರುವ ಕುರಿತು ವಿಚಾರಿಸಿಕೊಂಡಿದ್ದರು, ಹೀಗಾಗಿ ಶಾಸ್ತ್ರೋಕ್ತವಾಗಿ ತಯಾರಿಸಿದ ಉಪಾಹಾರ ಕೊಟ್ಟು ನಮಗೆ ಒಳ್ಳೆಯ ಉಪಚಾರ ಮಾಡಿದರು
ಮೋದಿಯ ಆಯುಷ್ಯ ವೃದ್ಧಿಗೆ ಮೃತ್ಯುಂಜಯ ಯಾಗ ಬೇರೆ ಕಡೆ ನಡೆದಿತ್ತೇ?
ಪ್ರಧಾನಿ ರಕ್ಷೆಗಾಗಿ ಮೃತ್ಯುಂಜಯ ಯಾಗ ಮಾಡಿಸಿದ್ದು ನಾನೇ ಮೊದಲು. ಈಗ ದೇಶಾದ್ಯಂತ ಯಾಗಗಳು ನಡೆಯುತ್ತಿದೆ.
ಪ್ರಧಾನಿ ಮೋದಿಯವರ ಭೇಟಿಗೆ ಅವಕಾಶ ಸಿಕ್ಕಿದ್ದು ಹೇಗೆ?
ಕಾರ್ಯಕ್ರಮ ರೂಪುರೇಶೆಯಿಂದ ಹಿಡಿದು ಪ್ರಧಾನಿಗೆ ಪ್ರಸಾದವನ್ನು ಮುಟ್ಟಿಸುವರೆಗೂ ರಾಷ್ಟ್ರೀಯ ನಾಯಕರಾದ ಬಿ.ಎಲ್. ಸಂತೋಷ್ ಜಿ ಮಾರ್ಗದರ್ಶನ ನೀಡಿದರು. ಹೀಗಾಗಿ ಎಲ್ಲವೂ ಸುಲಲಿತವಾಗಿ ನಡೆಯಿತು. ಸಂಘಟನೆಯಲ್ಲಿದ್ದ ಕಾರಣ ಸಂತೋಷ್ ಜಿ ಸಂಪರ್ಕ ಹಿಂದಿನಿಂದಲೂ ಇತ್ತು. ದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿದ್ದ ಸಂತೋಷ್ ಜಿ ಅವರಿಗೂ ಪ್ರಸಾದವನ್ನು ನೀಡಿದೆವು.
ಕೇಂದ್ರ ರಾಜಕೀಯಕ್ಕೆ ಹೋಗುವ ಮನಸ್ಸಿದೆಯೇ?
ಇಲ್ಲ, ಈ ಯಾಗ ನೆಚ್ಚಿನ ಪ್ರಧಾನಿ ಮೇಲಿನ ಪ್ರೀತಿ, ವಿಶ್ವಾಸ, ಭಕ್ತಿಯಿಂದಾಗಿ ಮಾಡಿಸಿದ್ದೇನೆ. ಯಾವ ರಾಜಕೀಯ ಸ್ವಾರ್ಥವೂ ಇಲ್ಲ.
1 ಲಕ್ಷ ಜಪ, ಅಶ್ವ, ಗಜ, ಗೋಪೂಜೆ
ಧರ್ಮಸ್ಥಳ ಕ್ಷೇತ್ರದಲ್ಲಿ ಜ.17ರಂದು 1 ಲಕ್ಷ ಜಪ, ನಾಲ್ಕು ವೇದಗಳ ಪಾರಾಯಣ, ಗೋಪೂಜೆ, ಅಶ್ವಪೂಜೆ, ಗಜಪೂಜೆ ಎಲ್ಲವೂ ಶಾಸ್ತ್ರೋಕ್ತವಾಗಿ ನಡೆಯಿತು. ರಾತ್ರಿ ಅಷ್ಟಾವಧಾನ ಸೇವೆ ಮಾಡಿ, ಮರುದಿನ ಬೆಳಗ್ಗೆ ಪ್ರಧಾನ ಯಜ್ಞ ಕುಂಡದಿಂದ 7 ಕುಂಡಕ್ಕೆ ಅಗ್ನಿವಿಹರಣೆ ಮಾಡಿದ ಬಳಿಕ ಪ್ರಧಾನ ಕುಂಡದಲ್ಲಿ ಪೂರ್ಣಾಹುತಿ ನಡೆದಿತ್ತು.̈
kundeshwara@gmail.com
9945666324
(ಕೃಪೆ: ವಿಶ್ವವಾಣಿ)
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ