ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಐಕ್ಯೂಎಸಿ ವತಿಯಿಂದ ಬ್ಲೂಮ್ಸ್ ಟ್ಯಾಕ್ಸೋನಮಿ ಬೋಧನಾ ಮಾದರಿಯ ಶಿಕ್ಷಕರ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸ್ನಾತಕೋತ್ತರ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದ ಪ್ರಾಧ್ಯಾಪಕಿ ಡಾ. ಕ್ಯಾಥ್ರಿನ್ ನಿರ್ಮಲ ಡೇವಿಡ್ ಮಾತನಾಡಿ, ಶಿಕ್ಷಣದಲ್ಲಿ ಉತ್ಸಾಹ ಹಾಗೂ ವೃತ್ತಿಪರತೆ ಎರಡೂ ಇರಬೇಕು. ಸಾಂಪ್ರದಾಯಿಕ ಬೋಧನಾ ವಿಧಾನದಿಂದ ಇಂದಿನ ಮಕ್ಕಳಲ್ಲಿ ಸಕ್ರಿಯವಾಗಿ ಕೇಳುವ ಮತ್ತು ತ್ವರಿತ ಪ್ರತಿಕ್ರಿಯೆ ನೀಡುವ ಕೌಶಲ್ಯದ ಕೊರತೆಯುಂಟಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ರೋಬೋಟಿಕ್ಸ್, ಎಜುಕೇಶನಲ್ ಆ್ಯಪ್ಸ್ ಜತೆಗೆ ಸಾಮಾಜಿಕ ಜಾಲತಾಣಗಳು ಸವಾಲಾಗಿದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳ ಗ್ರಹಿಕಾ ಶಕ್ತಿಯ ಹಂತಕ್ಕನುಗುಣವಾಗಿ ಬೋಧನೆ ಮಾಡಬೇಕು. ಬ್ಲೂಮ್ಸ್ ಟ್ಯಾಕ್ಸೋನಮಿ ವಿಧಾನದ ಮೂಲಕ ಬೋಧನಾ ಕೇಂದ್ರಿತ ತರಗತಿಗಳನ್ನು ಕಲಿಕಾ ಕೇಂದ್ರಿತವನ್ನಾಗಿ ಮಾರ್ಪಾಡು ಮಾಡಲು ಸಾಧ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಬೋಧನಾ ವ್ಯವಸ್ಥೆಯಲ್ಲಿ ಆಧುನಿಕ ಶಿಕ್ಷಣ ಮಾದರಿಗಳ ಅಳವಡಿಕೆಯ ಪ್ರಮಾಣ ಕಡಿಮೆಯಿದೆ. ಕೆಲವೊಮ್ಮೆ ಜ್ಞಾನದ ಪ್ರಸರಣ ಸರಿಯಾದ ರೀತಿಯಲ್ಲಿ ಆಗದೇ ಇದ್ದಾಗ ಶಿಕ್ಷಕರು ಮಾತ್ರವೇ ಕಲಿಕೆಯ ಕೊಡುಕೊಳ್ಳುವಿಕೆಯಲ್ಲಿ ಸಕ್ರಿಯವಾಗಿರುತ್ತಾರೆ ಆದ್ದರಿಂದ ತರಗತಿಗಳು ವಿದ್ಯಾರ್ಥಿ ಕೇಂದ್ರಿತವಾಗಿ ಬದಲಾಗುವ ಸೂಕ್ಷ್ಮತೆಯನ್ನು ಶಿಕ್ಷಕರು ಅರಿಯಬೇಕೆಂದರು.
ಬಿಬಿಎ ವಿಭಾಗದ ಡೀನ್ ಸುರೇಖಾ ಉಪಸ್ಥಿತರಿದ್ದರು. ಪದವಿ ಹಾಗೂ ಸ್ನಾತಕೋತ್ತರ ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು ಭಾಗವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ. ರಾಜೇಶ್ ಬಿ ಸ್ವಾಗತಿಸಿ, ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಶೃತಿ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ