ಕಳೆದೆರಡು ವರುಷಗಳಿಂದ ನಮ್ಮ ದೈನಂದಿನ ಅವಿಭಾಜ್ಯ ವಸ್ತು ಮುಖಗವಸು ಅಥವಾ ಮಾಸ್ಕ್. ವೈರಸ್ ವಿರುದ್ಧದ ರಕ್ಷಣೆಗೆಂದೇ ಧರಿಸಲು ಆರಂಭಿಸಿದ ಮುಖಗವಸು ಇಂದು ನಮ್ಮೆಲ್ಲರ ದಿರಿಸಿನ ಭಾಗವೇ ಆಗಿದೆ. ಪ್ರಮಾಣೀಕೃತ ಮುಖಗವಸಿನ ತಯಾರಿಕೆಗೆ ಹಾಗೂ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯನ್ನೊಳಗೊಂಡಂತೆ ಬಹುತೇಕ ಸಂಘ ಸಂಸ್ಥೆಗಳು ನಿಯಮಗಳನ್ನು ರೂಪಿಸಿದ್ದರೂ ಅದರ ಬಳಕೆಯ, ಎಸೆಯುವ ವಿಷಯದ ಬಗೆಗೆ ಇನ್ನೂ ಗೊಂದಲಗಳು ಮುಂದುವರೆದಿವೆ. ಕರೆಗಂಟೆಯಾಗಿರುವುದು ಏನೆಂದರೆ, ಪ್ರತೀ ನಿಮಿಷಕ್ಕೆ ಸುಮಾರು ಮೂರು ದಶಲಕ್ಷ ಮಾಸ್ಕ್ಗಳು ವಿಶ್ವದಾದ್ಯಂತ ವರ್ಜ್ಯವಾಗಿ ಕಸವಾಗುತ್ತಿವೆ. ಅದೆಂತಹ ಕಸವೆಂದರೆ ಅಪಾಯಕಾರೀ ಬಯೋಮೆಡಿಕಲ್ ತ್ಯಾಜ್ಯಗಳು. ಇವು ಯಾವುದೊಂದಾದರೂ ರೀತಿಯ ಪ್ಲಾಸ್ಟಿಕ್ ಬಹುರೂಪಿಯಾಗಿರುವುದು ಇನ್ನೂ ವಿಶೇಷವೇ.
ಎಲ್ಲೆಡೆ ಬಳಸುವ ಅರಿವೆಗಳೆಲ್ಲವೂ ಮುಖಗವಸಾಗಲು ಯೋಗ್ಯವೇ? ಇದಕ್ಕಾಗಿಯೇ ಪ್ರಮಾಣೀಕೃತ ಸಂಸ್ಥೆಗಳ ಸ್ಟಾಂಡರ್ಡ್ ಗಳಿವೆ. ಇವು ಕನಿಷ್ಠ ಮೂರು ಪದರಗಳನ್ನು ಬಳಸುವ ಸೂಚನೆಯನ್ನು ಕೊಡುತ್ತವೆ. ಒಳಗಿನ ಹತ್ತಿಯ ಹೀರಕ ಪದರ, ಮಧ್ಯದ ಪಾಲಿಪ್ರೊಪಿಲೀನ್ ಹಾಗೂ ಹೊರಗಿನ ಪಾಲಿಎಸ್ಟರ್ ಪದರಗಳು. ಸರ್ವತ್ರ ಸೇರಿರುವ ಓ95 ಮುಖಗವಸು ಅದರದಕ್ಷತೆಗೆ ಬಹುಪ್ರಸಿದ್ಧ. 95 ಎಂಬುದು 3 ಮೈಕ್ರಾನ್ ಮತ್ತವುಗಳಿಗಿಂತ ಹಿರಿದಾದ ಸೂಕ್ಷ್ಮಾಣುಗಳ ಸೋಸುವಿಕೆಯ ದಕ್ಷತೆ. ಮಾರುಕಟ್ಟೆಯಲ್ಲಿ ದೊರಕುವ ಓ95 ಪ್ರತಿರೂಪಿಯ ಎಲ್ಲಾ ಮುಖಗವಸುಗಳು ನೈಜವಾದುದಲ್ಲ.
ನೈಜತೆಯು 'ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಆಕ್ಯುಪೇಶನಲ್ & ಹೆಲ್ತ್ ಸೇಫ್ಟಿ'ಯ ದರ್ಜೆಯಲ್ಲಿರಬೇಕು. ಕಡಿಮೆ ಗುಣಮಟ್ಟದ ಅಗ್ಗದ ಪ್ರತಿರೂಪಿಗಳು ಮುಖವನ್ನಲಂಕರಿಸಿ ಬಹುಬೇಗ ವರ್ಜ್ಯವಾಗಿ ತ್ಯಾಜ್ಯದ ವಿಲೇವಾರಿಗೆ ಸವಾಲನ್ನು ನೀಡಿವೆ. ಈ ಮುಖಗವಸುಗಳು ಸಾಮಾನ್ಯವಾದ ಹಸಿ-ಒಣ ತ್ಯಾಜ್ಯದ ವರ್ಗೀಕರಣಕ್ಕೆ ಬೀಳದೇ ಮೆಡಿಕಲ್ ತ್ಯಾಜ್ಯವೆಂಬ ತುಸು ವಿಶೇಷ ವಿಲೇವಾರಿಯ ಪರಿಧಿಗೆ ಬರುತ್ತವೆ. ಈ ವಿಲೇವಾರಿಯ ನಿಬಂಧನೆಗಳು ಪಾಲಿಸಲು ಅಷ್ಟು ಸುಲಭವಲ್ಲ.
ಹಾಗಾದರೆ ಯೋಚಿಸಿ, ಕಳೆದೆರಡು ವರುಷಗಳಲ್ಲಿ ನಾವು ಬಳಸಿದ ತರಹೇವಾರಿ ಮುಖಗವಸುಗಳು ಬಳಕೆಯನಂತರ ಎಲ್ಲಿ ಹೋದವು? ಆಸ್ಪತ್ರೆಗಳಿಂದ ವರ್ಜಿತವಾದ ಮಾಸ್ಕ್ ಗಳು ಮಾತ್ರವೇ ಮೆಡಿಕಲ್ ವೇಸ್ಟ್ ಎಂಬ ಹಣೆಪಟ್ಟಿ ಪಡೆದುಕೊಂಡರೆ, ಉಳಿದವುಗಳು ಅಕ್ಕಪಕ್ಕದ ಕಸದ ಬುಟ್ಟಿಗಳನ್ನು ಸೇರಿ ಹತ್ತರಲ್ಲಿ ಹನ್ನೊಂದಾದದಷ್ಟೇ. ಬಳಸಿ ಎಸೆಯುವ ಮಾಸ್ಕ್ ಗಳು ಜನಮೂಲಗಳ ಮೂಲಕ ಸಮುದ್ರವನ್ನು ಸೇರಿದ್ದೂ ಆಯಿತು. ನಿರ್ಜನ ಉತ್ತುಂಗ ಪ್ರದೇಶಗಳನ್ನೂ ಸೇರಿತು.
ಅಗ್ಗವಾಗಿ ದೊರೆಯುವ ಸರ್ಜಿಕಲ್ ಮಾಸ್ಕ್, ರೆಸ್ಪಿರೇಟರೀ ಓ95 ಮಾಸ್ಕ್ ಗಳ ವಿಲೇವಾರಿಯ ಪ್ರಕ್ರಿಯೆ ಹೇಗೆ?
ಬಳಸಿದ ಮಾಸ್ಕ್ ಗಳ ವಿಲೇವಾರಿಗೆ ಹಳದಿ ಚೀಲಗಳನ್ನು ಸೂಚ್ಯವಾಗಿ ಉಪಯೋಗಿಸುತ್ತಾರೆ. ಉತ್ತಮ ದರ್ಜೆಯ ಮುಖಗವಸುಗಳನ್ನು ತೊಳೆಯಬಹುದು, ಸೋಂಕು ನಿವಾರಕಗಳನ್ನು ಸಿಂಪಡಿಸಿ, ಒಣಗಿಸಿ ಮರು ಬಳಸಬಹುದು. ಸೋಂಕಿತರು ಬಳಸಿದ ಹಾಗೂ ಸರ್ಜಿಕಲ್ ಮಾಸ್ಕ್ ಗಳು ಇನ್ಸಿನರೇಶನ್‌ಗೇ ಯೋಗ್ಯ. ಅಧಿಕ ಉಷ್ಣತೆಯಲ್ಲಿ ಈ ತ್ಯಾಜ್ಯಗಳನ್ನು ಸುಟ್ಟು ಬೂದಿ ಮಾಡುತ್ತಾರೆ. ಈ ರೀತಿಯ ವಿಧಾನಕ್ಕೆ ಶಕ್ತಿಯ ಬಳಕೆ ಹೆಚ್ಚು. ಹಾಗಾಗಿ ವೆಚ್ಚವೂ ಅಧಿಕ. ಎಸೆದ ಮಾಸ್ಕ್, ಪಿ.ಪಿ.ಇ.ಗಳನ್ನು ಬಳಸಿ ಪ್ಲಾಸ್ಟಿಕ್‌ನಂತೆಯೇ ಇಟ್ಟಿಗೆಗಳನ್ನು, ಪೀಠೋಪಕರಣಗಳನ್ನು ತಯಾರಿಸಿ ಮರುಬಳಕೆಗೆ ಯೋಗ್ಯವಾಗಿಸುವ ಸಂಶೋಧನೆಗಳು ನಡೆದಿವೆ.
ಆದರೆ, ಈ ಸಂಶೋಧನೆಗಳ ಉತ್ಪನ್ನದ ಉಪಭೋಗಿಗಳು ಯಾರಾಗುವರೋ ತಿಳಿದಿಲ್ಲ. ತ್ಯಾಜ್ಯ ನಿರ್ವಹಣೆ - 2016ರ ನಿಯಮಗಳ ಪ್ರಕಾರ ಉಪಭೋಗಿಗೆ ಹೆಚ್ಚಿನ ಜವಾಬ್ದಾರಿಯಿದ್ದು, ಉತ್ಪಾದಕರು ಮರು ಬಳಕೆಯಾಗುವ ಸುಸ್ಥಿರ ಉಪಾಯಗಳನ್ನೇ ಬಳಸಬೇಕು. ಮುಂದಾದರೂ ಬಳಸಿದ ಮುಖಗವಸನ್ನು ಎಲ್ಲೆಂದರಲ್ಲಿ ಎಸೆಯುವಾಗ ಒಮ್ಮೆ ಆಲೋಚಿಸಿ.
-ವಿಶ್ವನಾಥ ಭಟ್,
ಸಹಾಯಕ ಪ್ರಾಧ್ಯಾಪಕರು,
ಸಿವಿಲ್ ಎಂಜಿನಿಯರಿಂಗ್ ವಿಭಾಗ,
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಆರ್ಫ ಟೆಕ್ನಾಲಜಿ, ಉಜಿರೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ