ಮೂಡಿದರೆ ಪ್ರೀತಿಯು
ಹೃದಯಾಂತರಾಳದಲಿ
ಕಾಡದೆಂದಂತಸ್ತು
ಈ ಪ್ರೇಮಲೋಕದಲಿ.
ಮನಸು ಮನಸುಗಳಲ್ಲಿ
ಮೌನದಲಿ ಹುಟ್ಟುವವು
ಕನಸಿನಂತಸ್ತುಗಳ
ಬಹುಮಹಡಿ ಸೌಧಗಳು.
ಜಾತಿ ನೀತಿಗಳೆಂಬ
ಗಡಿರೇಖೆ ಅದಕಿಲ್ಲ
ಮೇಲು ಕೀಳುಗಳೆಂಬ
ಸಂಪ್ರದಾಯವು ಇಲ್ಲ
ರೂಪ ವಿರೂಪವೆಂಬ
ಭಾವವೇ ಅಲ್ಲಿಲ್ಲ
ಭಯವೊ ಅಪಮಾನವೋ
ಪ್ರೀತಿಗದು ತಿಳಿದಿಲ್ಲ.
ಪ್ರಿಯವಾದುದನು ಕಣ್ಣು
ನೋಡಿ ಸುಖಿಯಾದಂತೆ
ಹಿತವಾದುದನು ಕಿವಿಯು
ಕೇಳಬೇಕೆನುವಂತೆ
ನಾಸಿಕವು ಪರಿಮಳವ
ನಾಲಗೆಯು ಸವಿರುಚಿಯ
ತೊಗಲು ಸುಖ ಸ್ಪರ್ಶವ
ಬಯಸಿದರೆ ತಪ್ಪೇನು.?
ಪಂಚೇಂದ್ರಿಯಕು ಹಿರಿಯ
ಮನಸು ಎಂದಾದಲ್ಲಿ
ಮನಸು ಹೇಳಿದೆ ನನಗೆ
ನಿನ್ನನ್ನು ಪ್ರೀತಿಸಲು.
ಪ್ರೀತಿ ಕುರುಡೆನ್ನುವರು
ಅಂಥ ಕುರುಡೆನಗೆ ಹಿತ
ನೀಡಿಹೆನು ನಿನಗದನು
ತ್ಯಜಿಸಿ ಕುರುಡಾಗದಿರು.
*******
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ