|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಜಿರೆ ಎಸ್.ಡಿ.ಎಂ ಅಂಗಳದಲ್ಲಿ ಹ್ಯಾಂಡ್‌ಬಾಲ್ ಟೂರ್ನಮೆಂಟ್‌ಗೆ ಚಾಲನೆ

ಉಜಿರೆ ಎಸ್.ಡಿ.ಎಂ ಅಂಗಳದಲ್ಲಿ ಹ್ಯಾಂಡ್‌ಬಾಲ್ ಟೂರ್ನಮೆಂಟ್‌ಗೆ ಚಾಲನೆ

ಗ್ರಾಮೀಣ ಕ್ರೀಡಾಪ್ರತಿಭೆಗಳ ಜಾಗತಿಕ ಸಾಧನೆ ಆಶಾದಾಯಕ: ಎಂ.ವೈ.ಹರೀಶ್


ಉಜಿರೆ: ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಗ್ರಾಮೀಣ ಪ್ರತಿಭೆಗಳು ಪದಕ ಗಳಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಎಸ್.ಡಿ.ಎಂ.ಸಿ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎಂ.ವೈ.ಹರೀಶ್ ಹೇಳಿದರು.


ಮಂಗಳೂರು ವಿಶ್ವವಿದ್ಯಾಲಯದ 2021-22ನೇ ಸಾಲಿನ ಅಂತರ್ ಕಾಲೇಜು ಪುರುಷರ ಹ್ಯಾಂಡ್‌ಬಾಲ್ ಟೂರ್ನಮೆಂಟ್‌ಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.


ಕಳೆದ ಕೆಲ ವರ್ಷಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತೀಯರ ಸಾಧನೆ ಗಮನಾರ್ಹವಾಗಿದೆ. ಅದರಲ್ಲೂ ಗ್ರಾಮೀಣ ಕ್ರೀಡಾಪಟುಗಳು ವಿಶ್ವಮನ್ನಣೆ ಗಳಿಸಿ ಪದಕ ಜಯಿಸುತ್ತಿರುವುದು ಭವಿಷ್ಯದ ದೃಷ್ಟಿಯಲ್ಲಿ ಆಶಾದಾಯಕ ಬೆಳವಣಿಗೆಯೇ ಸರಿ. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ನಂತಹ ಟೂರ್ನಮೆಂಟ್‌ಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರುವಲ್ಲಿ ವ್ಯವಸ್ಥಿತ ತರಬೇತಿಯೊಂದಿಗೆ ರೂಢಿಸಿಕೊಂಡ ಶಿಸ್ತು ಮತ್ತು ಸಂಯಮ ನಿರ್ಣಾಯಕ ಎಂದರು.


ಕ್ರೀಡೆಯಲ್ಲಿ ಸ್ಪರ್ಧೆ ಮತ್ತು ಗೆಲುವು ಎಷ್ಟು ಪ್ರಾಮುಖ್ಯವೋ ಶಿಸ್ತು, ಸಂಯಮ ಮತ್ತು ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸುವುದಕ್ಕೂ ಅಷ್ಟೇ ಪ್ರಾತಿನಿಧ್ಯ ನೀಡಬೇಕು. ಕ್ರೀಡೆಯಿಂದ ಮಾನಸಿಕ ಸ್ವಾಸ್ಥ್ಯದ ಜೊತೆಗೆ ದೈಹಿಕ ಸ್ವಾಸ್ಥ್ಯವೂ ಸದೃಢ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ನಿರ್ಣಾಯಕ ಕೊಡುಗೆ ನೀಡಬಲ್ಲದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ವಿ. ಉದಯಚಂದ್ರ ಮಾತನಾಡಿದರು. ಕ್ರೀಡಾಪಟುಗಳು ಸೋಲು - ಗೆಲುವುಗಳ ಒತ್ತಡವನ್ನು ಸರಿಸಿ ಸಂಪೂರ್ಣ ಸಮರ್ಪಣೆಯೊಂದಿಗೆ ತೊಡಗಿಸಿಕೊಳ್ಳಬೇಕು. ವಿಜಯ, ಪರಾಜಯಗಳಿಗಿಂತ ಹೆಚ್ಚಾಗಿ ಭಾಗವಹಿಸುವಿಕೆಯ ಉತ್ಸಾಹವು ಮತ್ತಷ್ಟು ಕ್ರೀಡಾಸಾಧನೆಗೆ ಪ್ರೇರಣೆಯಾಗಬಲ್ಲದು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ.ಹರಿದಾಸ ಕೂಳೂರು, ಕರ್ನಾಟಕ ಹ್ಯಾಂಡ್‌ಬಾಲ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಮಾದಪ್ಪ ಕೆ.ಜಿ, ಉಜಿರೆ ಎಸ್.ಡಿ.ಎಂ ಕಾಲೇಜಿನ ಆಡಳಿತಾತ್ಮಕ ಕುಲಸಚಿವ ಡಾ.ಸಂಪತ್‌ ಕುಮಾರ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಮೇಶ್ ಎಚ್ ಸ್ವಾಗತಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.


ಎರಡು ದಿನಗಳ ಕಾಲ ನಡೆಯಲಿರುವ ಈ ಟೂರ್ನಮೆಂಟ್‌ನಲ್ಲಿ ಮಂಗಳೂರು, ಉಡುಪಿ, ಮಡಿಕೇರಿ, ಕಾರ್ಕಳ, ಮೂಡಬಿದರೆ ಸೇರಿದಂತೆ ರಾಜ್ಯದ ವಿವಿಧ ಕಾಲೇಜುಗಳಿಂದ 11 ತಂಡಗಳು ಭಾಗವಹಿಸಲಿವೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم