ಅಂಬಿಕಾ ಪದವಿ ಕಾಲೇಜಿನಲ್ಲಿ ಅಭಿಜ್ಞಾನ ಸಾಹಿತ್ಯ ವೇದಿಕೆ ಉದ್ಘಾಟನೆ

Upayuktha
0

 

ಓದಿನ ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದು ವಿಷಾದನೀಯ: ಡಾ.ನರೇಂದ್ರ ರೈ ದೇರ್ಲ


ಪುತ್ತೂರು: ಆಧುನಿಕ ದಿನಗಳಲ್ಲಿ ಓದಿನ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದೇವೆ. ಹೊಸ ಹೊಸ ತಂತ್ರಜ್ಞಾನ, ಯಂತ್ರಗಳಿಗೆ ನಮ್ಮನ್ನು ನಾವು ಸಮರ್ಪಿಸಿಕೊಂಡು ಕೇವಲ ಯಂತ್ರಮಾನವರಾಗಿ ಬದುಕುತ್ತಿದ್ದೇವೆ. ಮಾನವೀಯ ಗುಣಗಳನ್ನು ಕಳೆದುಕೊಳ್ಳುತ್ತಾ ಮನುಷ್ಯರಾಗುವುದು ಹೇಗೆ ಎಂಬುದನ್ನೇ ಅರಿಯದೆ ವ್ಯವಹರಿಸುತ್ತಿರುವುದು ವಿಷಾದಕರ ವಿಚಾರ ಎಂದು ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನರೇಂದ್ರ ರೈ ದೇರ್ಲ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿರುವ ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ ಆರಂಭಿಸಲಾದ ಅಭಿಜ್ಞಾನ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.


ಹಿಂದೆ ಗುರು ಕೇಂದ್ರಿತ ಶಿಕ್ಷಣವಿದ್ದರೆ ಇಂದು ಪೋಷಕ ಕೇಂದ್ರಿತ ಶಿಕ್ಷಣ ಎಲ್ಲೆಡೆ ಪ್ರಚಲಿತದಲ್ಲಿದೆ. ಮಕ್ಕಳಿಗೆ ಯಾವ ಆಸಕ್ತಿ ಇದೆ ಎನ್ನುವುದಕ್ಕಿಂತ ಹೆತ್ತವರ ಆಸಕ್ತಿ ಏನು ಎನ್ನುವುದರ ಮೇಲೆ ಅಧ್ಯಯನದ ವಿಷಯಗಳು ನಿರ್ಣಯಿಸಲ್ಪಡುತ್ತಿವೆ. ಪರಿಣಾಮವಾಗಿ ಸಾಹಿತ್ಯದ ಓದು, ಅಭಿವ್ಯಕ್ತಿಗಳು ಮೂಲೆಗುಂಪಾಗುತ್ತಿವೆ. ಇದರ ಜತೆಗೆ ಇಂದಿನ ಮಕ್ಕಳ ಭಾಷೆ, ನಡವಳಿಕೆ, ಮಾತುಗಳು ಆತಂಕಕಾರಿಯಾಗಿ ಕಾಣಿಸಿಕೊಳ್ಳುತ್ತಿವೆ. ಸಾಹಿತ್ಯದ ಓದು ನಮ್ಮನ್ನು ಮನುಷ್ಯರನ್ನಾಗಿ ರೂಪಿಸಿಕೊಳ್ಳುವುದಕ್ಕೆ ಸಹಕಾರಿ ಎಂದು ಹೇಳಿದರು.


ಇಂದು ಮುಖಕ್ಕೆ ಮುಖ ಕೊಟ್ಟು ಮಾತಾಡುವ ಕ್ರಮವೇ ನಶಿಸುತ್ತಿದೆ. ಜತೆಗೆ ಕುಳಿತು ಉಣ್ಣುವ ಪರಂಪರೆಯನ್ನು ಮರೆಯುತ್ತಿದ್ದೇವೆ. ಇದರಿಂದಾಗಿ ಮನುಷ್ಯ ಮನುಷ್ಯರ ನಡುವೆ ಭಾವನಾತ್ಮಕ ಸಂಬಂಧಗಳೂ ಕುಸಿಯುವಂತಾಗಿವೆ. ಯಂತ್ರಗಳು ನಮ್ಮ ಸಂವೇದನೆಯನ್ನು ನಾಶಮಾಡುತ್ತಿವೆ ಎಂದರಲ್ಲದೆ ಸಾಹಿತ್ಯ ದೊಡ್ಡಮಟ್ಟದ ಔದ್ಯೋಗಿಕ ಬದುಕನ್ನು ಕಟ್ಟಿಕೊಡದಿದ್ದರೂ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದನ್ನು ಅರಿಯುವುದಕ್ಕೆ ಅತ್ಯಂತ ಅಗತ್ಯ. ಆದ್ದರಿಂದ ಸಾಹಿತ್ಯದ ಓದು ಪ್ರತಿಯೊಬ್ಬನಿಗೂ ಬೇಕು ಎಂದು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಮಾತನಾಡಿ ನಮಗಿಂದು ಬೇರೆ ಬೇರೆ ಪದವಿಗಳು ದೊರಕುತ್ತಿವೆಯಾದರೂ ಬದುಕಿನ ಮೂಲಭೂತ ವಿಚಾರಧಾರೆಗಳ ಅರಿವು ದೊರಕುತ್ತಿಲ್ಲ. ಶೈಕ್ಷಣಿಕ ಜ್ಞಾನ ಮೋಸ ಮಾಡುವ ಪ್ರವೃತ್ತಿಗೆ ಬಳಕೆಯಾಗುತ್ತಿರುವುದು ವಿಷಾದಕರ. ಸಾಹಿತ್ಯದ ಬಗೆಗೆ ಆಸಕ್ತಿಯನ್ನು ಬೆಳೆಸಿಕೊಂಡು ಓದನ್ನು ಶುರುವಿಟ್ಟುಕೊಂಡರೆ ನಂತರ ಅದೇ ನಮ್ಮನ್ನು ಕರೆದೊಯ್ಯುತ್ತದೆ. ಅದರಲ್ಲೂ ಹಳ್ಳಿಗಾಡಿನ ನಿತ್ಯ ಬದುಕೇ ಒಂದು ಸಾಹಿತ್ಯವಾಗಿ ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕರಿಸುತ್ತದೆ ಎಂದರು.


ಈ ಸಂದರ್ಭದಲ್ಲಿ ಕನ್ನಡ ವಿಭಾಗದಿಂದ ಆಯೋಜಿಸಲಾಗಿದ್ದ ವಿವಿಧ ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಕಾವ್ಯವಾಚನ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಬಿಎಸ್ಸಿ ವಿದ್ಯಾರ್ಥಿನಿ ವರೇಣ್ಯ ಪ್ರಥಮ ಸ್ಥಾನ ಪಡೆದರು. ಬಿ.ಎ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಕಾವ್ಯವಾಚನದಲ್ಲಿ ದ್ವಿತೀಯ ಸ್ಥಾನ ಹಾಗೂ ಬಿ.ಎ ವಿದ್ಯಾರ್ಥಿ ಶೇಖರ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು.


ವೇದಿಕೆಯಲ್ಲಿ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕಿ ಪುಷ್ಪಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಕೃತಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಗಿರೀಶ್ ಭಟ್ ಕೂವೆತ್ತಂಡ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಜಯಂತಿ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ವರೇಣ್ಯ ವಂದಿಸಿ, ವಿದ್ಯಾರ್ಥಿನಿ ಸಾಯಿಶ್ವೇತ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top