||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ; ಯಾರಿಗೂ ಬೇಕಿಲ್ಲ ನೈಜ ಚಿತ್ರಣ !̈̈̈

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ; ಯಾರಿಗೂ ಬೇಕಿಲ್ಲ ನೈಜ ಚಿತ್ರಣ !̈̈̈

ಕನ್ನಡಕ್ಕಾಗಿನ ಹೋರಾಟ ಸರಿ ದಾರಿಗೆ ಬರೋದು ಯಾವಾಗ ?!

ಭಾಷಾ ಮುಖಂಡರ ಮೇಲೆ ಐಟಿ ದಾಳಿಯಾಗಬೇಕಣ್ಣ!


-ಜಿತೇಂದ್ರ ಕುಂದೇಶ್ವರ

ದೇಶದಲ್ಲಿ ಶೇ.99 ಮಂದಿ ಜನರ ಸಂಕಷ್ಟಗಳಿಗೆ ಶೇ.1 ಇರುವ ಬ್ರಾಹ್ಮಣರೇ ಕಾರಣ.. ಕೋಟಿ ಕೋಟಿ ಮಾತನಾಡುವ ಕನ್ನಡದ ದುಃಸ್ಥಿತಿಗೆ ನೂರು-ಸಾವಿರ ಲೆಕ್ಕದಲ್ಲಿರುವ ಸಂಸ್ಕೃತ ಭಾಷಿಕರೇ ಕಾರಣ!

ಹೌದು ಇದೊಂದು ದ್ವೇಷ ಸಿದ್ಧಾಂತದ ಸಿದ್ಧ ಸೂತ್ರ. ವೈರಿ ಯಾರೆಂದು ಗೊತ್ತಿದ್ದರೂ ಬೆದರು ಬೊಂಬೆಯತ್ತ ತೋರಿಸಿ ಇದೇ ವೈರಿ ಎಂದು ಬಿಂಬಿಸುವುದು. ಇದನ್ನು ಒಪ್ಪುವವರದು ಅಜ್ಞಾನವೋ/ ಷಡ್ಯಂತ್ರದಲ್ಲಿ  ಭಾಗಿಗಳೋ ತಿಳಿಯದು.


ವಾಸ್ತವ ಎಂದರೆ ಕನ್ನಡ ದಃಸ್ಥಿತಿಗೆ ಇದುವರೆಗೆ ಕರ್ನಾಟಕವನ್ನು ಆಳಿದ ಸರಕಾರಗಳೇ ಕಾರಣ. ಅವರನ್ನು ಆಯ್ಕೆ ಮಾಡಿ ಪ್ರೋತ್ಸಾಹಿಸಿದ ಜನರೇ ಕಾರಣ. ಕನ್ನಡ ಶಾಲೆಗಳನ್ನು ಹಾಳು ಕೊಂಪೆಗಳಾಗಿಸಿ, ಖಾಸಗಿ ಶಿಕ್ಷಣ ಮಾಫಿಯಾವನ್ನು ಕಳೆದ ೩೦ ವರ್ಷಗಳಲ್ಲಿ ದೈತ್ಯಾಕಾರವಾಗಿ ಬೆಳೆಸಿದ ಈ ರಾಜಕಾರಣಿಗಳು ಮತ್ತು ಅವರಿಗೆ ಸದಾ ಬೆಂಬಲ ಸೂಚಿಸುವ ಕೆಲವು ಭಾಷೆಯ ಸಂಘಟನೆಗಳು ಕನ್ನಡ ಶಾಲೆಗಳ ದುಃಸ್ಥಿತಿಗೆ ಕಾರಣ.

ಹೀಗಾಗಿ ರಾಜಕಾರಣಿಗಳನ್ನು ಬೆಂಬಲಿಸುವ ಕನ್ನಡ ಸಂಘಟನೆಗಳ ಮುಖಂಡರನ್ನೆ ಸಂಶಯಿಸುವ ಅಗತ್ಯ ಇದೆ.


ವರ್ಷದಿಂದ ವರ್ಷಕ್ಕೆ ನೂರಾರು, ಸಾವಿರರಾರು ಶಾಲೆಗಳು ಮುಚ್ಚಿವೆ. ಸಹಸ್ರಾರು ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಚಿಗಿತು, ಬಲಿತು ಹೆಮ್ಮರಗಳಾಗಿವೆ. ಅಲ್ಲೊಬ್ಬ, ಇಲ್ಲೊಬ್ಬರ ಭಗೀರಥ ಪ್ರಯತ್ನದಿಂದ ಅಲ್ಲೊಂದು ಇಲ್ಲೊಂದು ಸರಕಾರಿ ಶಾಲೆಗಳು ಆಕ್ಸಿಜನ್‌ ಪಡೆದು ಉಳಿದುಕೊಂಡಿವೆ.


ಕನ್ನಡ ಶಾಲೆಗಳನ್ನು ಸರಿಯಾಗಿ ನಡೆಸಿಕೊಂಡಿದ್ದರೆ ಇಂಥ ಪರಿಸ್ಥಿತಿ ಖಂಡಿತಾ ಬರಲು ಸಾಧ್ಯವಿಲ್ಲ. ಮಕ್ಕಳು ಕಡಿಮೆಯಾದರೆ ಶಿಕ್ಷಕರನ್ನು ಕಡಿತಗೊಳಿಸುವ ಮತ್ತೆ ಶಾಲೆಗಳನ್ನುಮುಚ್ಚುವ ನಿಯಮ ತಂದು ಶಾಲೆಗಳಿಗೆ ಮರಣಶಾಸನ ರೂಪಿಸಿದ ಈ ನಿಯಮ ಹುಟ್ಟಿದಾಗ ಈ  ಕುರಿತು ಕನ್ನಡ ಸಂಘಟನೆಗಳು, ಈಗ ಸಂಸ್ಕೃತವನ್ನು ವಿರೋಧಿಸುವ ಪ್ರಾಜ್ಞರು ಧ್ವನಿ ಎತ್ತಿದ್ದಾರೆಯೇ? ದನಿ ಎತ್ತಿದ್ದರೆ ಈಗ ಇಂಗ್ಲಿಷ್‌ ಶಾಲೆಗಳ ಮಾಲೀಕರು ಧಣಿಗಳಾಗುತ್ತಲೇ ಇರಲಿಲ್ಲ.


ಕನ್ನಡ ಹೋರಾಗಾರರ ಹೇಳುತ್ತಿರುವ ವಿಚಾರಗಳನ್ನೇ ನೋಡೋಣ.. "ದೇಶದಲ್ಲಿ ಸಂಸ್ಕೃತ ನುಡಿ ಆಡುವವರ ಸಂಖ್ಯೆ ಕೇವಲ 24,000!..


ಇಷ್ಟು ಜನರ ನುಡಿಗೆ ಹದಿನಾರು ವಿವಿ ಬೇಕಾ? 7 ಕೋಟಿ ಜನರ ಕನ್ನಡ ನುಡಿಗೆ ಒಂದೇ ವಿವಿ ಸಾಕೇ? ಸಂಸ್ಕೃತ ವಿವಿಗೆ  359 ಕೋಟಿ ಹಣ! ಕನ್ನಡಿಗರ ಏಕೈಕ ವಿವಿಗೆ ಕೊಡಲು 2 ಕೋಟಿ ಹಣ ಇಲ್ಲವೇ?

ಹೀಗೆಲ್ಲ ಹೀಗಳೆಯಲಾಗುತ್ತಿದೆ.


ಹೌದು ಸ್ವಾಮಿ ಐಸಿಯುನಲ್ಲಿ ಇರುವವರಿಗೆ ಚಿಕಿತ್ಸೆಗೆ ಖರ್ಚು ಹೆಚ್ಚು. ಅನಾರೋಗ್ಯ ಪೀಡಿತರಿಗೆ ಹೆಚ್ಚು ಆಸ್ಪತ್ರೆಗಳು ಬೇಕು.


ಹಾಗೆಂದು ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆ ನಿರ್ಮಿಸುವ ಮೂಲಕ ಜನ ಸಾಮಾನ್ಯರಿಗೆ ಏನೂ ನೀಡದೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಹೇಳಲು ಸಾಧ್ಯವೇ? ಇಂಗ್ಲಿಷ್‌ ಭಾಷೆ ಅಭಿವೃದ್ಧಿಗೆ ಹಣವೇ ಬೇಡ. ಏಕೆಂದರೆ ಇಂಗ್ಲಿಷ್‌ ಭಾಷೆಯೇ ಕೋಟಿ, ಕೋಟಿ ಸಂಪಾದನೆ ಮಾಡುತ್ತದೆ. ಕನ್ನಡ ಭಾಷೆಯೂ ಕೋಟಿ ಕೋಟಿ ಸಂಪಾದನೆ ಮಾಡಬೇಕಿತ್ತು. ಆದರೆ ಅದರ ಸಂಘ, ಸಂಸ್ಥೆಗಳಷ್ಟೇ ಒಂದಷ್ಟು ಸಂಪಾದನೆ ಮಾಡುತ್ತಿವೆ, ಭಾಷಾ ಮಾರುಕಟ್ಟೆಯಲ್ಲಿ ಕನ್ನಡಕ್ಕೆ ಇಂಗ್ಲಿಷಿನಷ್ಟು ಮೌಲ್ಯ ಇಲ್ಲ.


ಕನ್ನಡದ ಹೆಸರಿಗೆ ಸರಕಾರದಿಂದ ಎರಡು ಏಕರೆ ಜಾಗ ಸಿಗುತ್ತಿಲ್ಲ ಎಂಬ ದುಃಸ್ಥಿತಿಗೆ ತಲುಪಿದೆ ಎಂದಾದರೆ ಇದಕ್ಕೆ ನಾವೆಲ್ಲರೂ ಕಾರಣ. ಆದರೂ ಕನ್ನಡಕ್ಕೆ  ಹೆಚ್ಚು ಹೆಚ್ಚು ವಿವಿಗಳಿಂದ ಹೆಚ್ಚಿನ ಸಾಧನೆ ಆಗದು. ಜೀವ ಬಿಟ್ಟ ಕನ್ನಡ ಶಾಲೆಗಳು ಮತ್ತೆ ಉಸಿರಾಡಬೇಕು. ಹೆಚ್ಚು ಹೆಚ್ಚು ಕನ್ನಡ ಶಾಲೆಗಳು ಬೇಕು. ಹೆಚ್ಚು ಹೆಚ್ಚು ಮಂದಿ ಕನ್ನಡ ಮಾತನಾಡಬೇಕು, ಬರೆಯಬೇಕು.


ಈಗ ಪರಿಸ್ಥಿತಿ ಹೇಗಿದೆ. ಪ್ರಥಮ, ದ್ವೀತೀಯ ಭಾಷೆ ಸ್ಥಾನಕ್ಕಾಗಿ ಕನ್ನಡವು ಸಂಸ್ಕೃತದೊಂದಿಗೆ ಹೋರಾಡುವ ಸ್ಥಿತಿಗೆ ತಂದವರು ಯಾರು ಸ್ವಾಮಿ? ಸಂಸ್ಕೃತದವರಿಗೆ ಶಾಲೆ- ಕಾಲೇಜುಗಳಲ್ಲಿ ಕನಿಷ್ಠ ಆ ಸ್ಥಾನ ಸಿಕ್ಕಿದರೆ ವೆಂಟಿಲೇಟರ್‌ ಸಿಕ್ಕ ಹಾಗೆ. ಸಂಸ್ಕೃತ ಶಿಕ್ಷಕರಿಗೆ ತಮ್ಮ ಹುದ್ದೆ ಉಳಿದರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದಾರೆ.


ಈಗ ಸಂಸ್ಕೃತಕ್ಕೆ ಮಾತ್ರ ವೆಂಟಿಲೇಟರ್‌ ಕನ್ನಡಕ್ಕೂ ಬೇಕು ಎಂಬಂತೆ ಹೋರಾಟ ಮಾಡಲಾಗುತ್ತಿದೆ. ಕನ್ನಡಕ್ಕೆ ಇಂಗ್ಲಿಷಿಂದ ಅನಾರೋಗ್ಯ  ಬಂದಿದೆ ನಿಜ. ಯಾವ ರೋಗ, ಯಾವುದರಿಂದ ಬಂತು ಎಂದು ಹುಡುಕುವ ಬದಲು (ಮಾಟ ಮಂತ್ರ ಮಾಡಿಸಿದರೆ ರೋಗ ನಿವಾರಣೆಯಾಗುವುದಿಲ್ಲ ಹೇಗೋ ಹಾಗೆಯೇ.). ಮೊದಲು ರೋಗ ಹೇಗೆ ಬಂತು, ಅದನ್ನು ಹೇಗೆ ನಿವಾರಿಸಬಹುದು ಎಂಬ ಕುರಿತು ಚಿಂತಿಸಬೇಕು

.

ಕನ್ನಡಕ್ಕೆ ಅಗ್ರ ಸ್ಥಾನ ಸಿಗಬೇಕಾದರೆ ಎಲ್ಲ ವಿಷಯಗಳನ್ನು ಕಲಿಸಲು ಒಂದೇ ಒಂದು ಕನ್ನಡ ಮಾಧ್ಯಮವಾಗಿ ಬೇಕು ಎಂದು ಹೋರಾಡಬೇಕು. 


ಆದರೆ ಕನ್ನಡದ ತಾಯಿ ಸ್ಥಾನವನ್ನು ಇಂಗ್ಲಿಷ್‌ ಶಾಲೆಗಳು ಅತಿಕ್ರಮಿಸಿ ಎಲ್ಲೆಡೆ ಇಂಗ್ಲೀಷ್‌ ಮಾಧ್ಯಮವೇ ರಾರಾಜಿಸುತ್ತಿದೆ. ಅದು ಅತಿ ವೇಗವಾಗಿ ಸಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ಕನ್ನಡ ಶಾಲೆಗಳಲ್ಲಿ ಅತಿ ಬಡವ, ಕಡು, ಬಡವರ ಮಕ್ಕಳಷ್ಟೇ ಹೋಗುವ ಸ್ಥಿತಿ ಬಂದೀತು.


ಈಗ ಕೋಟಿ ಕೋಟಿ ಮಂದಿ ಕನ್ನಡ ಮಾತನಾಡುತ್ತಿದ್ದರೂ ಮಾಧ್ಯಮಗಳಲ್ಲಿ, ಸಂದರ್ಶನಗಳಲ್ಲಿ ಶೇ.90 ಇಂಗ್ಲಿಷ್‌ ಪದ ಬಳಕೆಯಾಗುತ್ತಿದೆ. ವ್ಯಾಕರಣ ಮಾತ್ರ ಕನ್ನಡದ್ದು! ಇಂಗ್ಲಿಷ್‌ ಅಲ್ಲ!


ಹೀಗಾಗಿ ಕ್ರಮೇಣ ಕನ್ನಡ ಭಾಷೆ ತನ್ನ ಈಗಿನ ಸ್ವರೂಪವನ್ನು ಕಳೆದುಕೊಂಡು ಕಂಗ್ಲಿಷ್‌ ಕನ್ನಡವಾಗುವುದರಲ್ಲಿ ಸಂಶಯ ಇಲ್ಲ. ಎಲ್ಲರ ಕನ್ನಡ ಎಂದು ವಿಚಿತ್ರ ಹೋರಾಟ ಶುರುವಾಗಿದೆ. ಹೋರಾಟದ ದಾರಿಯಲ್ಲಿ ತಾವೂ ಸ್ವಲ್ಪ #ಸಂಪಾದನೆ ಮಾಡಿಕೊಳ್ಳುವವರ  ದಾರಿ ಇರಬಹುದು. ಇವರಿಗೆ ಕನ್ನಡವನ್ನು ಕತ್ತರಿಸುವ ಬದಲು ಕನ್ನಡವನ್ನು ನುಂಗುತ್ತಿರುವ ಇಂಗ್ಲಿಷ್‌ ಪದಗಳನ್ನು ಹೊರದಬ್ಬಲು ಹೋರಾಟ ಮಾಡಬಹುದು.

 

ಪಾಪ ಅವರ ಕಾಮಾಲೆ ಕಣ್ಣಿಗೂ ಕಾಣುತ್ತಿರುವುದು ಸಂಸ್ಕೃತ ಎಂಬ ಪೆಡಂ ಭೂತ! ಸಂಸ್ಕೃತದ ಬಗೆಗಿರುವ ಪೂರ್ವಗ್ರಹ ಇವರನ್ನೆಲ್ಲ ಇಂಗ್ಲಿಷ್‌ ನುಂಗಿ ನೀರು ಕುಡಿದರೂ ಗೊತ್ತಾಗದಂತೆ ಮಾಡುತ್ತಿದೆ. ಜಿಂಕೆಗಳೆರಡು ಕೋಡುಗಳಿಂದ ತಿವಿದುಕೊಂಡು ತಿಕ್ಕಾಟ ನಡೆಸುವಾಗ ಹುಲಿ ಹಿಂಬದಿಯಿಂದ ಬಂದು ದಾಳಿ ಮಾಡಿದ್ದು ಗೊತ್ತೇ ಆಗದ ಸ್ಥಿತಿ  ಕನ್ನಡ ಮತ್ತು ಸಂಸ್ಕೃತ ಎಂದು ಹೊಡೆದಾಡಿಕೊಳ್ಳುವಾಗ ಹೆಬ್ಬಾವಿನಂತಿರುವ ಇಂಗ್ಲಿಷ್‌ ಕನ್ನಡವನ್ನು ಅರ್ಧ ನುಂಗಿರುವುದು ಯಾರಿಗೂ ಕಾಣಿಸುತ್ತಿಲ್ಲ.


ಎಲ್ಲರಿಗೂ ಈಗ ಆಕ್ರೋಶ ಇರುವುದು ಸಂಸ್ಕೃತ ಭಾರತಿ ಸಂಘಟನೆ ಕನ್ನಡ ಕಲಿಕೆ ಕಡ್ಡಾಯ ತಡೆಯಲು ಕೋರ್ಟಿಗೆ ಹೋದ ಕುರಿತು. ಅವರ ಮೂಲ ಉದ್ದೇಶ ಸಂಸ್ಕೃತ ಉಪನ್ಯಾಸಕ ಉದ್ದೆಗಳನ್ನು ಉಳಿಸಿಕೊಳ್ಳುವುದಷ್ಟೇ ಆಗಿದೆ. ಅವರಿಗೆ ಉದ್ಯೋಗ ಭದ್ರತೆ ನೀಡಿದರೆ ಖಂಡಿತಾ ಅವರು ಕೇಸ್‌ ವಾಪಸ್‌ ತೆಗೆದುಕೊಳ್ಳಬಹುದು.


ತಕ್ಷಣ ಪದವಿ ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿದರೆ ಆಲ್ಲಿ ಕನ್ನಡ ಕಲಿಕೆ ಕಷ್ಟ. ಪ್ರತ್ಯೇಕ ಶಿಕ್ಷಕರು, ಲೈಬ್ರರಿ, ಪುಸ್ತಕ ಒದಗಿಸಬೇಕು. ಕ್ರಿಯಾತ್ಮಕ ಕನ್ನಡದ ಪಠ್ಯಕ್ರಮ ಕ್ಲಿಷ್ಟಕರವಾಗಿದೆ ಎನ್ನುವುದು ಸಂಸ್ಕೃತ ಭಾರತಿ ಅವರ ವಾದ.


ಭಾಷೆಯನ್ನು ಆಯ್ಕೆಯಾಗಿ ಕಲಿಸಬೇಕು, ಕಡ್ಡಾಯಗೊಳಿಸಬಾರದು. ಭಾಷೆಯನ್ನು ಬಲವಂತವಾಗಿ ಕಲಿಸಬಾರದು. ನಾನು ಕನ್ನಡಿಗ, ಕನ್ನಡವನ್ನು ಪ್ರೀತಿಸುತ್ತೇನೆ. ಹಾಗೆಂದು ಹೊರಗಿನಿಂದ ಬಂದವರಿಗೂ ಕನ್ನಡ ಕಲಿಯುವಂತೆ ಒತ್ತಾಯಿಸುವುದು ಸರಿ ಎನ್ನಿಸುವುದಿಲ್ಲ. ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಸುವುದು ಅಷ್ಟು ಸೂಕ್ತವಲ್ಲ. ಆದ್ದರಿಂದ ಸರಕಾರದ ಆದೇಶಕ್ಕೆ ತಡೆ ನೀಡಬೇಕು' ಎಂದು ಅರ್ಜಿದಾರರು ಈ ರೀತಿ ಮನವಿ ಮಾಡಿದ್ದಾರೆ. ಇವರ ವಾದಕ್ಕೆ ನನ್ನ ಪೂರ್ಣ ಸಹಮತವಿಲ್ಲ.  


ರಾಜ್ಯ ಸರಕಾರ ಮೊದಲಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿ ಬಳಿಕ ಉನ್ನತ ಶಿಕ್ಷಣದದಲ್ಲಿ ಕನ್ನಡ ಕಡ್ಡಾಯ ಆಲೋಚನೆಯನ್ನು ಮಾಡಲಿ. ಸದ್ಯಕ್ಕೆ ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಬೇಡ.


ಈಗಿರುವ ಸಂಸ್ಕೃತ  ವಿರೋಧ ಅಭಿಯಾನ ಸ್ವರೂಪದಲ್ಲಿ ಪಡೆದಿರುವುದು ಹೇಗೆ? ಕೋಟಿ ಕೋಟಿ ಹಣ ಬಿಡುಗಡೆ ಅಂದರೆ ಅಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ ಎಂದರ್ಧ! ಆಗ ಅಲ್ಲಿ ಹೋರಾಟ, ಹೊಡೆದಾಟ, ಎಳೆದಾಟ, ಬಕೆಟ್‌, ಹೊಗಳಿಕೆ ಎಲ್ಲ ಕಡೆಯಿಂದಲೂ ಬರುತ್ತದೆ ಕಾರಣ ಒಂದಷ್ಟು #ಪ್ರಸಾದ, ಒಂದಷ್ಟು #ಆಹಾರ ಸಿಗಬಹುದು ಎಂಬ ದುರ್ ದೃಷ್ಟಿ! ಹೀಗಾಗಿ ಸಂಶೋಧನೆ ಹೆಸರಲ್ಲಿ ಆ ಹಣ ನಿಜವಾಗಿಯೂ ಬಳಕೆಯಾಗುತ್ತಿದೆಯೋ ಅಥವಾ ಬಕಾಸುರರ ಹೊಟ್ಟೆ ಸೇರುತ್ತದೆಯೋ? ವಿವಿಗಳಲ್ಲಿ ನುಂಗಣ್ಣರು ಸೇರಿ ಕೊಂಡಿರುವುದರಿಂದ ಅದಕ್ಕಾಗಿ ಇಷ್ಟೆಲ್ಲಾ ರಾದ್ಧಾಂತವೋ ಎಂಬ ಕುರಿತೂ ಚರ್ಚಿಸಬೇಕಾಗಿದೆ.


ಒಂದೆಡೆ ಸಂಸ್ಕೃತವನ್ನು  ಶೂದ್ರರಿಗೆ ಕಲಿಸದೆ ಘೋರ ಅನ್ಯಾಯ ಮಾಡಲಾಗಿದೆ  ಇದರಿಂದ ಜ್ಞಾನ ವಂಚಿಸಲಾಯಿತು ಎಂದು ಭೋರ್ಗರೆಯುವ #ಅಹಿಂದು ಹೋರಾಟಗಾರರಿಗೆ ಒಂದು ಪ್ರಶ್ನೆ. ಆಯ್ತಪ್ಪಾ ನೀವು ಹೇಳಿದ ಹಾಗೆಯೇ ವಂಚನೆ ಆಗಿದ್ರೆ ಈಗ ಸರಿ ಮಾಡುವ ಕೆಲಸ ಆಗುತ್ತಿದೆ ಅಂದುಕೊಳ್ಳುವುದರಲ್ಲೇನು ಅಡ್ಡಿ? ಅದೂ ಅಲ್ಲದೆ ಭಾರತರತ್ನ ಅಂಬೇಡ್ಕರ್‌ ಜಿ ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿ ಮಾಡಬೇಕು ಎಂದು ಬಯಸಿದ್ದರು. ಅಷ್ಟು ಮಾತ್ರಲ್ಲ ಕಾರ್ಯಾಂಗ ಆರಂಭದಲ್ಲಿ ಸರಾಗವಾಗಿ ಮುನ್ನಡೆಯಲು ಇಂಗ್ಲಿಷ್ ಭಾಷೆಯನ್ನು ಆರಂಭಿಕ 15 ವರ್ಷಗಳ ಕಾಲ ಮಾತ್ರ ಅಳವಡಿಸಿ,ಬಳಿಕ ಸಂಸ್ಕೃತ ಉಪಯೋಗಿಸಲು ಸಲಹೆ ನೀಡಿದ್ದರು.

 ಅಂಬೇಡ್ಕರ್‌ ಅವರಿಂದ ಪ್ರಭಾವಿತರಾಗಿ ವಿದೇಶಾಂಗ ಸಚಿವಾಲಯದ ಉಪಸಚಿವರಾಗಿದ್ದ ಡಾ.ನಾಸಿರುದ್ದೀನ್ ಅಹಮದ್, ಸಚಿವ ವಿಶ್ವನಾಥ ಕೇಸ್ಕರ್ ಮತ್ತು ಬಂಗಾಳದ ಸಂಸದರೂ ಸಹ ಸಂಸ್ಕೃತವನ್ನು ಅಧಿಕೃತ ಭಾಷೆಯನ್ನಾಗಿಸಲು ಬಯಸಿದ್ದರು. ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕಿರುವುದು ಇಷ್ಟೇ. ಸಂಸ್ಕೃತ ಇಡೀ ದೇಶಕ್ಕೆ, ನಮ್ಮ ಸಂಸ್ಕೃತಿಗೆ ಒಗ್ಗುತ್ತದೆ, ಹೀಗಾಗಿ ಸಂಸ್ಕೃತಕ್ಕೆ ವಿರೋಧ ಸರಿ ಅಲ್ಲ.


ಕನ್ನಡಕ್ಕಾಗಿನ ಹೋರಾಟ ದಾರಿ ಸರಿಯಾಗುವುದು ಯಾವಾಗ?

ಮಾತೆತ್ತಿದ್ದರೆ ಹಿಂದಿ ಉತ್ತರದ ಭಾಷೆ ಹೇರಿಕೆ ಆಗುತ್ತದೆ ಎಂದು ಹೇಳಿ ವಿರೋಧ, ಸಂಸ್ಕೃತ  ಬ್ರಾಹ್ಮಣರ ಭಾಷೆ ಎಂಬ ಕಾರಣಕ್ಕೆ ವಿರೋಧ, ಇಂಗ್ಲಿಷ್ ಅನ್ನ ಕೊಡುತ್ತಿದೆ, ಮಕ್ಕಳು ಇಂಗ್ಲಿಷ್‌ ಶಾಲೆ ಕಲಿಯುತ್ತಿದ್ದಾರೆ ಹೀಗಾಗಿ ವಿರೋಧವಿಲ್ಲ... !

ನಿಜ ಹೇಳಬೇಕೆಂದರೆ ಇಂಗ್ಲಿಷ್‌ ಭಾಷೆಯ ವ್ಯಾಮೋಹವು ಕನ್ನಡವನ್ನು ಒಂದು ರೀತಿ ಕೊಲ್ಲುತ್ತಿದೆ...


ಪುರಾಣ ಕತೆಯಲ್ಲಿ ಮೋಹಿನಿ ಅಂದು ರಾಕ್ಷಸರಿಗೆ ಒಯ್ಯಾರದಿಂದ ಮೋಹಕರನ್ನಾಗಿ ಮಾಡಿ ಮಾದಕತೆಯಷ್ಟೇ ಬಡಿಸಿದಂತೆ ಈಗಿನ ಹೋರಾಟವು ಇಂಗ್ಲಿಷ್‌ ಭಾಷಿಕರಿಗೆ ಅಮೃತ ತುಂಬಿ, ಕನ್ನಡದವರಿಗೆ ಕೇವಲ ವಿಷ ಉಣಬಡಿಸುತ್ತಿದೆ..


ಸಂಸ್ಕೃತ ಕಲಿತರೆ ಕನ್ನಡಕ್ಕೆ ನಷ್ಟವೇನು? ಏನೂ ಇಲ್ಲ, ಕನ್ನಡವನ್ನು ಇನ್ನಷ್ಟು ಸ್ಪಷ್ಟ ಮತ್ತು ಲಾಲಿತ್ಯವಾಗಿ ಅರ್ಥಗರ್ಭಿತವಾಗಿ ಮಾತನಾಡಬಲ್ಲ. ಇಂಗ್ಲಿಷ್‌ ಬೆಳೆದರೆ ಕನ್ನಡವನ್ನೇ ಪಕ್ಕಕ್ಕಿಷ್ಟು ಇಂಗ್ಲಿಷ್‌ ಮಾತ್ರ ಮಾತನಾಡಬಲ್ಲ. ಉರ್ದು ಕಲಿತರೆ ಕನ್ನಡಕ್ಕೇನು ಲಾಭ? ಏನೂ ಇಲ್ಲ, ಇದ್ದ ಸ್ವಲ್ಪ ಕನ್ನಡವೂ ಮರೆತೇ ಹೋಗುವ ಸ್ಥಿತಿ.


ಇಂಥ ಪರಿಸ್ಥಿತಿಯಲ್ಲಿ  ಕನ್ನಡ ಸಂಘಟನೆಗಳು ಮತ್ತು ಕನ್ನಡಿಗರು ಏನು ಮಾಡಬಹುದು? 

ಮೊದಲಿಗೆ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನಕ್ಕೆ ಗಂಭೀರ ಹೋರಾಟ ನಡೆಸಿ, ಸರಕಾರಕ್ಕೆ ಒತ್ತಡ ಹೇರಿ, ಕನಿಷ್ಠ  8ನೇ ತರಗತಿ ವರೆಗಾದರೂ ತ್ರಿಭಾಷಾಸೂತ್ರದಡಿಯಲ್ಲಿ ಕನ್ನಡ ಭಾಷೆಯಾಗಿ ಕಡ್ಡಾಯವಾಗಲಿ.


ಬ್ಯಾಂಕ್, ಮಾಲ್ ಕಾರ್ಪೊರೇಟ್‌ ಸಂಸ್ಥೆಗಳಲ್ಲಿ. ಅಪಾರ್ಟ್‌ಮೆಂಟ್‌ಗಳಲ್ಲಿ  ಕನ್ನಡೇತರರಿಗೆ ಪ್ರೀತಿಯಿಂದ ಕನ್ನಡ ಕಲಿಸಲಿ. ಖ್ಯಾತ ತಾರೆಗಳು, ಯುವ ಸಮುದಾಯದ ನೇತಾರರು ಕಂಗ್ಲಿಷ್‌ ಬದಲು ಕನ್ನಡ ಮಾತನಾಡಿಸಲು ಒತ್ತಡ ಹೇರಲಿ. ಹೋರಾಟಗಾರರು ಆದಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುವಂತಾಗಲು ಕಾರ್ಯಾಗಾರವನ್ನು ನಡೆಸಲಿ.


ರಾಜ್ಯದೊಳಗಿನ ಎಲ್ಲ ಭಾಷೆಗಳ ವಿವಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ ಮಾಡಲು ಸರಕಾರಕ್ಕೆ ಒತ್ತಡ ಹೇರಲಿ. ರಾಜ್ಯದಲ್ಲಿರುವ ಕನ್ನಡ ಬಾರದ ಅಧಿಕಾರಿಗಳು ಕಡ್ಡಾಯ ಕನ್ನಡ ಕಲಿಯುವಂತೆ ಒತ್ತಡ ಹಾಕಲಿ, ಕರ್ನಾಟಕದಲ್ಲಿ ಕನ್ನಡ ಫಲಕಗಳು ಕಡ್ಡಾಯವಾಗಲಿ, ಕನ್ನಡ ಪುಸ್ತಕಗಳಿಗೆ ಪ್ರಾತಿನಿಧ್ಯ ಸಿಗಲಿ, ಕನ್ನಡ ಬರಹಗಾರರ ಪುಸ್ತಕಗಳನ್ನು ಸರಕಾರವೇ ಆಸ್ಥೆಯಿಂದ ಪ್ರಕಟಿಸಲು ಒತ್ತಡ ಬೀರಲಿ. ಇಷ್ಟು ಮಾಡಿದರೆ ಇನ್ನಷ್ಟು ಸಲಹೆಗಳನ್ನು ನೀಡುತ್ತೇವೆ.


ಕನ್ನಡಕ್ಕೆ ಹೋರಾಟ ಮಾಡುತ್ತಿರುವ ಕನ್ನಡ ಸಂಘಟನೆಗಳನ್ನು ಲೇವಡಿ ಮಾಡುವ ಅಗತ್ಯ ಇಲ್ಲ. ಏಕೆಂದರೆ ಈಗ ಹೋರಾಡಲೇ ಬೇಕಾದ ಸ್ಥಿತಿ ಇದೆ. ಆನ್‌ ಲೈನ್‌ ಹೋರಾಟಕ್ಕೆ ಸೀಮಿತವಾಗಬಾರದು. ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವಂತಾಗಬೇಕು. ಹಾಗಾಗಬೇಕಾದರೆ ಕನ್ನಡ ಶಾಲೆಗಳು ಎಲ್ಲರನ್ನು ಸೆಳೆದುಕೊಳ್ಳುವ ಹಾಗೆ ಗುಣಮಟ್ಟ ಮತ್ತು ಮೌಲ್ಯಯುತವಾಗಿರಬೇಕು. ಸರಕಾರವೇ ಶಿಕ್ಷಣ ವಿಭಾಗವನ್ನು ಖಾಸಗಿಯಿಂದ ಮುಕ್ತಗೊಳಿಸಬೇಕು.


ಸಂಘಟನೆಯವರ ಮಕ್ಕಳು ಕೂಡಾ ಇಂಗ್ಲೀಷ್‌ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಅವರೂ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಬೇಕು..


ಆದರೆ.. ಪಾಪ ಅವರ ಮಕ್ಕಳಿಗೆ ಇಂಗ್ಲಿಷ್‌ ನಿಂದ ವಂಚಿತರನ್ನಾಗಿ ಮಾಡಬೇಕೇ ಎಂಬ ಪ್ರಶ್ನೆಯೂ ಇದೆ.

ಹೀಗಾಗಿ ಇಂಗ್ಲಿಷ್‌ ವಿರುದ್ಧ ಹೋರಾಡಲು ಸಾಧ್ಯವಾಗದೆ ಈಗಲೋ ಆಗಲೋ ಎಂಬಂತಿರುವ ಕೇವಲ ಸಂಶೋಧನಾ ವಿದ್ಯಾರ್ಥಿಗಳಷ್ಟೇ ಮಾತನಾಡಬಲ್ಲ ಸಂಸ್ಕೃತ ಭಾಷೆ ವಿರುದ್ಧ ಹೋರಾ ನಡೆಯುತ್ತಿದೆ. ಅದೂ ಟ್ರೆಂಡ್‌ ಆಗುತ್ತಿರುವುದು ಇಂಗ್ಲೀಷಲ್ಲಿ ಸೇ ನೋ ಟು ಸಂಸ್ಕ್ರಿತ್!


ಈ ನಡುವೆ ಎಲ್ಲ ರೀತಿಯ ಹೋರಾಟಗಾರರ ಸಂಪತ್ತಿನ ಕುರಿತೂ ತನಿಖೆಯಾಗಬೇಕು. ಈಗ ತೆರಿಗೆ ಪಾವತಿಸುತ್ತಿರಬಹುದು. ಆದರೆ ಅವರು ಯಾವ ರೀತಿ ಸಂಪನ್ಮೂಲ ಕ್ರೋಢೀಕರಿಸಿದರು. ಭಾಷೆಯ ಲೆಕ್ಕದಲ್ಲಿ ಎಷ್ಟು ಸಂಪತ್ತು, ಅನುದಾನ ಪಡೆದುಕೊಂಡರು ಆಸ್ತಿ ವಿವರ ಪಡೆಯಬೇಕು. ಇಲ್ಲವಾದಲ್ಲಿ ಕನಿಷ್ಠ ಐಟಿ ದಾಳಿಯಾದರೂ ನಡೆಯಬೇಕು.  ನೈಜ ಹೋರಾಟಗಾರರಿಗೆ ಬೆಂಬಲವಾಗಿ ಈ ಸಲಹೆ ನೀಡಲಾಗಿದೆ. ಈ ಹಿಂದೆ ವಿದೇಶೀ ದೇಣಿಗೆ ಪಡೆಯುತ್ತಿದ್ದ ಸ್ವಯಂ ಸೇವಾ ಸಂಸ್ಥೆಗಳ ಜನ್ಮ ಜಾಲಾಡಿದ ಹಾಗೆಯೇ ಭಾಷೆ ಹೆಸರಲ್ಲಿ, ಧರ್ಮದ ಹೆಸರಲ್ಲಿ ಸಂಪತ್ತು ಕ್ರೋಢೀಕರಣ ಮಾಡುವವರ ಮೇಲೂ ಐಟಿ ದಾಳಿಗಳಾಗಬೇಕು.

ಕೃಪೆ: ವಿಶ್ವವಾಣಿ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post