ಮೂಡುಬಿದಿರೆ: ಸುಭಾಷ್ ಚಂದ್ರ ಬೋಸ್ ರವರ ಜೀವನ ಮೌಲ್ಯಗಳನ್ನು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125 ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯಾರು ದೇಶಕ್ಕಾಗಿ ಬದುಕುತ್ತಾರೆ, ಯಾರು ಸಮಾಜಕ್ಕಾಗಿ ಬದುಕುತ್ತಾರೆ ಅಂಥವರನ್ನು ಜಗತ್ತು ನೆನಪಿಸಿಕೊಳ್ಳುತ್ತದೆ. ಅಂತಹವರಲ್ಲಿ ಒಬ್ಬರು ಸುಭಾಷ್ ಚಂದ್ರ ಬೋಸ್. ಅವರು ಬಿಟ್ಟು ಹೋದ ಆದರ್ಶಗಳು ಈಗಿನ ಸೈನಿಕರಲ್ಲಿ ಇದೆ ಹಾಗೂ ಈಗಿನ ಮಕ್ಕಳಿಗೆ ಸ್ವಾತಂತ್ರ ಹೋರಾಟಗಾರರ ಪರಿಚಯ ಆಗಬೇಕಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆಯನ್ನು ಹಾಗೂ ಅವರ ಜೀವನದ ಪ್ರಮುಖ ಘಟನೆಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ಸುಭಾಷ್ ಚಂದ್ರಬೋಸ್ ದೇಶವನ್ನು ಕಟ್ಟಲು ಪಟ್ಟ ಶ್ರಮದಂತೆ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮನಸ್ಸನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ದಾಮೋದರ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹರ್ಷಿತಾ ಶಿರೂರು ಸ್ವಾಗತಿಸಿ, ಮೆಲಿಸ್ಸಾ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ