|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ ಪರ್ಯಾಯ ವಿಶೇಷ: ಸಿದ್ದಿಸಾಧನೆ, ಅಪೂರ್ವ ಮಹಿಮೆಗಳ ಶ್ರೀ ಕೃಷ್ಣಾಪುರ ಮಠ ಯತಿ ಪರಂಪರೆ

ಉಡುಪಿ ಪರ್ಯಾಯ ವಿಶೇಷ: ಸಿದ್ದಿಸಾಧನೆ, ಅಪೂರ್ವ ಮಹಿಮೆಗಳ ಶ್ರೀ ಕೃಷ್ಣಾಪುರ ಮಠ ಯತಿ ಪರಂಪರೆ


ಬರಹ: ಪಿ. ಲಾತವ್ಯ ಆಚಾರ್ಯ ಉಡುಪಿ.

ಶ್ರೀಮಧ್ವಾಚಾರ್ಯರ ದಿವ್ಯ ಶಕ್ತಿಗೆ ಒಲಿದ ದ್ವಾರಕೆಯ ರುಕ್ಮಿಣೀಕರಾರ್ಚಿತ ಕಡೆಗೋಲು ಕೃಷ್ಣನ ದಿವ್ಯ ಪ್ರತಿಮೆಯನ್ನು ಶ್ರೀಮಧ್ವರು ಉಡುಪಿಯಲ್ಲಿ ಪ್ರತಿಷ್ಟಾಪಿಸಿ ಪೂಜೆಗಾಗಿ ಎಂಟು ಯತಿಗಳನ್ನು ನೇಮಿಸಿದರು. ಉತ್ತರ ಬದರಿಕಾಶ್ರಮದಲ್ಲಿ  ಶ್ರೀವೇದವ್ಯಾಸ ದೇವರು ಶ್ರೀಮಧ್ವಾಚಾರ್ಯರಿಗೆ ಕರುಣಿಸಿದ ದಿವ್ಯ ಪ್ರತಿಮೆಗಳನ್ನು ಶ್ರೀಮಧ್ವರು ತನ್ನ ಎಲ್ಲಾ ಶಿಷ್ಯರಿಗೂ ನೀಡಿ ಅನುಗ್ರಹಿಸಿದರು. ಈ ಪ್ರತಿಮೆಗಳೇ ಅಷ್ಟಮಠಗಳ ಪಟ್ಟದ ದೇವರಾಗಿ ಪೂಜೆಗೊಳ್ಳುತ್ತಿದೆ.


ಶ್ರೀಮಧ್ವರ ಪ್ರತ್ಯಕ್ಷ ಶಿಷ್ಯರು ಹಾಗೂ ಉಡುಪಿಯ ಅಷ್ಟಮಠಗಳ ಮೂಲ ಯತಿಗಳು.


ಶ್ರೀಹೃಷಿಕೇಶ ತೀರ್ಥರು,

(ಪಲಿಮಾರುಮಠ)

ಸೀತಾಲಕ್ಷಣ ಸಹಿತ ಶ್ರೀರಾಮ ದೇವರು

ಶ್ರೀಜನಾರ್ದನ ತೀರ್ಥರು,

(ಕೃಷ್ಣಾಪುರ ಮಠ)

ದ್ವಿಭುಜ ಕಾಲೀಯ ಮರ್ದನ,ನರಸಿಂಹ ದೇವರು

ಶ್ರೀವಾಮನತೀರ್ಥರು,

(ಶಿರೂರು ಮಠ)

ರುಕ್ಮಿಣಿ,ಸತ್ಯಭಾಮಾ ಸಹಿತ ವಿಠಲದೇವರು

ಶ್ರೀರಾಮತೀರ್ಥರು,

(ಕಾಣಿಯೂರು ಮಠ)

ಯೋಗಾನರಸಿಂಹ ದೇವರು

ಶ್ರೀವಿಷ್ಣುತೀರ್ಥರು,

(ಸೋದೆವಾದಿರಾಜ ಮಠ)

ಶ್ರೀಭೂವರಾಹ ದೇವರು

ಶ್ರೀಉಪೇಂದ್ರ ತೀರ್ಥರು,

(ಪುತ್ತಿಗೆ ಮಠ)

ವಿಠಲ ದೇವರು

ಶ್ರೀನರಸಿಂಹತೀರ್ಥರು,

(ಅದಮಾರು ಮಠ)

ಚತುರ್ಭುಜ ಕಾಲೀಯ ಮರ್ದನ ದೇವರು

ಶ್ರೀಅಧೋಕ್ಷಜ ತೀರ್ಥರು

(ಪೇಜಾವರ ಮಠ).

ವಿಠಲ ದೇವರು


ಶ್ರೀಕೃಷ್ಣಾಪುರ ಮಠದ ಗುರುಪರಂಪರೆ


1) ಶ್ರೀ ಜನಾರ್ದನ ತೀರ್ಥರು: ಕೃಷ್ಣಾಪುರಮಠದ ಮೂಲಯತಿಗಳು. ಶ್ರೀಮಧ್ವಾಚಾರ್ಯರು ಶ್ರೀಜನಾರ್ದನ ತೀರ್ಥರಿಗೆ ದ್ವಿಭುಜ ಕಾಲೀಯಮರ್ದನ ಕೃಷ್ಣದೇವರನ್ನು ಪಟ್ಟದ ದೇವರಾಗಿ ಕರುಣಿಸಿದರು.


ಶ್ರೀಜನಾರ್ದನತೀರ್ಥರು ಬಾಲ್ಯದಿಂದಲೂ ಶ್ರೀನರಸಿಂಹದೇವರ ಅನನ್ಯ ಉಪಾಸಕರಾದ ಕಾರಣ ಆಚಾರ್ಯರು ಇವರಿಗೆ ಶ್ರೀನರಸಿಂಹದೇವರ ಪ್ರತಿಮೆಯನ್ನೂ ಕೂಡಾ ಅನುಗ್ರಹಿಸಿದರೆಂದು ಐತಿಹ್ಯವಿದೆ. ಹೀಗಾಗಿ ಶ್ರೀ ಕೃಷ್ಣಾಪುರಮಠದಲ್ಲಿ ಪಟ್ಟದ ದೇವರಿಗೆ ಸಲ್ಲುವ ಪ್ರತಿಯೊಂದು ಪೂಜಾ, ನೈವೇದ್ಯ ಉಪಚಾರಾದಿಗಳು ಶ್ರೀನರಸಿಂಹದೇವರಿಗೂ ಸಲ್ಲಿಸುವ ಸಂಪ್ರದಾಯ ಅಂದಿನಿಂದ ಇಂದಿನವರೆಗೂ ನಡೆದು ಬರುತ್ತಿದೆ. ಶ್ರೀಜನಾರ್ದನತೀರ್ಥರು 1329ನೇ ಇಸವಿಯಲ್ಲಿ ಕಾಶೀ ಕ್ಷೇತ್ರದಲ್ಲಿ ಹರಿಪಾದ ಸೇರಿದರು.


2) ಶ್ರೀವತ್ಸಾಂಕತೀರ್ಥರು: ಶ್ರೀ ಜನಾರ್ದನತೀರ್ಥರ ಕರಕಮಲ ಸಂಜಾತರಾದ ಇವರು ಮಹಾತಪಸ್ವಿಗಳು.

ಒಮ್ಮೆಶ್ರೀವತ್ಸಾಂಕತೀರ್ಥರು ಕುಂಭಾಶಿಮಠದಲ್ಲಿ ತಂಗಿದ್ದಾಗ ಸ್ವಪ್ನ ಸೂಚನೆಯಾಯಿತು. ಅದೇನೆಂದರೆ ಕುಂಭಾಶಿಯಲ್ಲಿ ಕುಂಭಾಸುರನನ್ನು ವಧಿಸಿದ ನಂತರ ಭೀಮಸೇನ ದೇವರು ಪೂಜಿಸುತ್ತಿದ್ದ ಗೋಪಿನಾಥ ದೇವರ ಪ್ರತಿಮೆಯು ಮಠದ ಈಶಾನ್ಯ ದಿಕ್ಕಿನ ಗ್ರಾಮವೊಂದರಲ್ಲಿ ಭೂಮಿಯ ಒಳಗೆ ಹುದುಗಿದೆ. ಅದನ್ನು ಪ್ರತಿಷ್ಟಾಪಿಸಿ ಪೂಜಿಸಿ ಎಂಬ ಸೂಚನೆಯಂತೆ ಭೂಮಿಯನ್ನು ಈಗಿನ ನೇರಂಬಳ್ಳಿ ಗ್ರಾಮದ ಸ್ಥಳವೊಂದರಲ್ಲಿ ಅಂದು ಉತ್ಕನನ ನಡೆಸಿದಾಗ ದೇವರ ಪ್ರತಿಮೆ ಲಭಿಸಿತು.


ಮುಂದೆ ಅಲ್ಲೇ ಮಠವನ್ನು ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಿದರು. ನಿರಂತರ ಗೋಪಿಕೃಷ್ಣನನ್ನು ಪೂಜಿಸುತ್ತಾ 18 ವರ್ಷಗಳ ಕಾಲ ಪೀಠದಲ್ಲಿದ್ದು 1344ನೇ ಇಸವಿಯಲ್ಲಿ ಕಾರ್ತಿಕ ಶುದ್ಧ ಹುಣ್ಣಿಮೆಯಂದು ನೇರಂಬಳ್ಳಿ ಮಠದಲ್ಲೇ ವೃಂದಾವನಸ್ಥರಾದರು.


3) ಶ್ರೀವಾಗೀಶತೀರ್ಥರು: ಸದಾ ತೀರ್ಥಯಾತ್ರೆಯಲ್ಲೇ ನಿರತರಾಗಿದ್ದ ಯತಿಗಳಿಗೆ ಒಮ್ಮೆ ನೇರಂಬಳ್ಳಿಯ ಗೋಪಿನಾಥಕೃಷ್ಣ ದೇವರು ಸ್ವಪ್ನದಲ್ಲಿ ಕಾಣಿಸಿಕೊಂಡು ತನ್ನನ್ನು ನಿತ್ಯ ಆರಾಧಿಸುವಂತೆ ಕರೆ ಇತ್ತರು. ಆಕ್ಷಣವೇ ನೆರಂಬಳ್ಳಿಗೆ ಆಗಮಿಸಿ ಅನೇಕ ವರ್ಷಗಳ ಕಾಲ ಅಲ್ಲೇ ಶ್ರೀದೇವರನ್ನು ಪೂಜಿಸುತ್ತಾ ಭಕ್ತರನ್ನು ಅನುಗ್ರಹಿಸುತ್ತಾ 21 ವರ್ಷಗಳ ಕಾಲ ಪೀಠದಲ್ಲಿದ್ದು 1365ನೇ ಇಸವಿಯಲ್ಲಿ ವಿಶ್ವಾವಸು ಸಂ!ರದ ಮಾಘ ಶುದ್ಧ10 ಪರಂಧಾಮ ಸೇರಿದರು.


4) ಶ್ರೀಲೋಕೇಶತೀರ್ಥರು: ಮಹಾಪಂಡಿತರೆನಿಸಿದ್ದ ಇವರು ಶ್ರೀಮಧ್ವಾಚಾರ್ಯರ ವಿಷ್ಣುತತ್ವನಿರ್ಣಯಕ್ಕೆ ವ್ಯಾಖ್ಯಾನ ಬರೆದಿರುವರೆಂದು ಐತಿಹ್ಯವಿದೆ.ಆಯುರ್ವೇದ ಚಿಕಿತ್ಸೆಯಲ್ಲಿ ಅಪ್ರತಿಮ ರೆಂದೆನಿಸಿದ್ದ ಶ್ರೀ ಲೋಕೇಶತೀರ್ಥರು ಯಾವ ವೈದ್ಯರಿಂದಲೂ ಗುಣಪಡಿಸಲಾಗದಂತಹ ಮಹಾಮಾರಿ ಖಾಯಿಲೆಗಳಿಗೆ ಔಷಧಿ ನೀಡಿ ಗುಣಪಡಿಸಿ ಅನುಗ್ರಹಿಸುತ್ತಿದ್ದರೆಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 16 ವರ್ಷಗಳ ಕಾಲ ಪೀಠದಲ್ಲಿದ್ದ ಇವರು ನೇರಂಬಳ್ಳಿಯಲ್ಲೇ 1381ನೇ ಇಸವಿಯಲ್ಲಿ ದುರ್ಮತಿ ನಾಮ ಸಂ!ರದ ವೈಶಾಖ ಶುದ್ಧಪಂಚಮಿ ಪರಂಧಾಮಗೈದರು.


5) ಶ್ರೀಲೋಕನಾಥ ತೀರ್ಥರು: ಬಹುದೊಡ್ಡ ವಿದ್ವಾಂಸರು. ಅನೇಕರಿಗೆ ಸುಧಾದಿ ಗ್ರಂಥಗಳ ಪಾಠ ನಡೆಸಿದ ಇವರು ತಂತ್ರಸಾರೋಕ್ತ ಮಂತ್ರಗಳಲ್ಲಿ ಸಿದ್ದಿ ಸಾಧನೆಯೊಂದಿಗೆ ವಾಗ್ದೇವಿಯನ್ನು ಒಲಿಸಿಕೊಂಡಿದ್ದರು.ಒಮ್ಮೆ ಮಾಂತ್ರಿಕನೊಬ್ಬನು ಮಠಕ್ಕೆ ಬೆಂಕಿ ಹತ್ತಿಸಿದಾಗ ತಮ್ಮ ಮಂತ್ರ ಸಿದ್ದಿಯಿಂದಲೇ ಬೆಂಕಿಯನ್ನು ಆರಿಸಿ ಆ ಬೆಂಕಿಯು ತಿರುಗಿ ಮಾಂತ್ರಿಕನಿಗೇ ಸ್ಪರ್ಶವಾಗುವಂತೆ ಮಾಡಿದರು. ಕಂಗಾಲಾದ ಮಾಂತ್ರಿಕರು ತಪ್ಪಿನ ಅರಿವಾಗಿ ಶರಣಾಗತನಾದಾಗ ಆತನನ್ನು ಶ್ರೀಪಾದರು ಅನುಗ್ರಹಿಸಿದ ಕತೆ ಈ ಪರಂಪರೆಯಲ್ಲಿ ಪ್ರಚಲಿತವಿದೆ. ನೇರಂಬಳ್ಳಿಯ ಗೋಪಿ ಕೃಷನನ್ನು ಪೂಜಿಸುತ್ತಾ 1399 ನೇ ಇಸವಿ ಪ್ರಮಾಥಿ ಸಂ!!ರದ ಚೈತ್ರ ಶುದ್ಧ ಹುಣ್ಣಿಮೆಯಂದು ಪರಂಧಾಮ ಸೇರಿದರು.


6) ಲೋಕಪೂಜ್ಯತೀರ್ಥರು: ಮುಖ್ಯಪ್ರಾಣದೇವರ ಅನನ್ಯ ಉಪಾಸಕರಾಗಿದ್ದ ಯತಿಗಳ ಮಂತ್ರಸಿದ್ದಿಗೆ ಪವಾಡಗಳು ಸಂಭವಿಸುತಿತ್ತೆಂದು ತಿಳಿದು ಬರುತ್ತದೆ. ಒಮ್ಮೆ ಆಗಂತುಕನೊಬ್ಬ ಇವರನ್ನು ಕೊಲ್ಲಬೇಕೆಂದು ಮಠಕ್ಕೆ ಬಂದಾಗ ಈತನು  ಮುಖ್ಯಪ್ರಾಣದೇವರ ರೌದ್ರರೂಪದ ದರ್ಶನಕ್ಕೆ ಬೆದರಿ ಮೂರ್ಚಿತನಾದ.

ನಂತರ ಶರಣಾಗಿ ಕ್ಷಮೆಕೇಳಿ ಶ್ರೀಪಾದರಿಂದ ಅನುಗ್ರಹಿತನಾದ ಘಟನೆ ಪರಂಪರೆಯ ಪುಟಗಳಿಂದ ತಿಳಿದು ಬರುತ್ತದೆ. 21 ವರ್ಷಗಳ ಕಾಲ ಪೀಠದಲ್ಲಿದ್ದ ಶ್ರೀಪಾದರು 1420 ನೇ ಇಸವಿಯ ಶಾರ್ವರಿ ಸಂ!!ರದ ವೈಶಾಖ ಶುದ್ಧ ದ್ವಾದಶಿಯಂದು ವೃಂದಾವನ ಪ್ರವೇಶಗೈದರು.


7) ಶ್ರೀವಿದ್ಯಾಧಿರಾಜ ತೀರ್ಥರು: ಮಹಾನ್ ತಪಸ್ವಿಗಳಾಗಿದ್ದ ಇವರು ವಿಶಿಷ್ಟ ವೃತಾಚರಣೆ,

ಅನುಷ್ಟಾನದಿಂದ ಭಗವಂತನ ಸೇವೆ ಸಲ್ಲಿಸುತ್ತಿದ್ದರು. ಇವರ ವಿಶೇಷವೆಂದರೆ ಒಂದು ಪಕ್ಷ (15 ದಿನ)

ಉಪವಾಸವಿದ್ದುಕೊಂಡು ಇನ್ನೊಂದು ಪಕ್ಷದಲ್ಲಿ ಮಾತ್ರ ಭಿಕ್ಷೆ ಸ್ವೀಕರಿಸುವಂತಹ ವೃತವನ್ನು ಸನ್ಯಾಸ ಜೀವನದ ಕೊನೆಯವರೆಗೂ ಪಾಲಿಸಿಕೊಂಡು ಬಂದಿದ್ದರು. ತೀರ್ಥ ಯಾತ್ರೆಯ ಸಂದರ್ಭದಲ್ಲೂ ಕೂಡಾ ಇದೇರೀತಿಯ ಅನುಷ್ಟಾನವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದರು. 19 ವರ್ಷಗಳ ಕಾಲ ಪೀಠದಲ್ಲಿದ್ದ ಇವರು ಸಿದ್ದಾರ್ಥಿ ಸಂ!!ರದ ಪಾಲ್ಗುಣ ಶುಕ್ಲ 15 ರಂದು ಹರಿಪಾದ ಸೇರಿದರು.


8) ಶ್ರೀವಿಶ್ವಾಧಿರಾಜ ತೀರ್ಥರು: ಇವರು ಶ್ರೇಷ್ಠ ವಿದ್ವಾಂಸರು ಹಾಗೂ ಯೋಗಶಾಸ್ತ್ರ ನಿಪುಣರು.

ಇವರ ವೈಶಿಷ್ಟ್ಯವೇನೆಂದರೆ ತಮ್ಮ ಪ್ರಾಣಾಯಾಮ ಬಲದಿಂದ ಅನೇಕ ವರ್ಷಗಳ ಕಾಲ ನಿದ್ರಿಸದೆ ನಿರಂತರವಾಗಿ ಹರಿನಾಮ ಸ್ಮರಣೆಯಲ್ಲಿ ತೊಡಗಿರುತ್ತಿದ್ದರು. ದೇಶದ ಎಲ್ಲಾ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ಧಾತು ನಾಮ ಸಂ!!ರದ ಮಾರ್ಗಶಿರ ಸಪ್ತಮಿಯಂದು ಪರಂಧಾಮ ಸೇರಿದರು. 17 ವರ್ಷಗಳ ಕಾಲ ಪೀಠದಲ್ಲಿದ್ದರು.


9) ಶ್ರೀವಿಶ್ವಾಧೀಶತೀರ್ಥರು: ಪ್ರಸಿದ್ದ ಪಂಡಿತರಾಗಿದ್ದ ಯತಿಗಳು ಧನ್ವಂತರಿ ಮಂತ್ರದಲ್ಲಿ ಸಿದ್ದಿ ಪಡೆದಿದ್ದರು. ಭಕ್ತನೊಬ್ಬನಿಗೆ ಕಾಡುತ್ತಿದ್ದ ಗಲಕುಷ್ಟರೋಗವನ್ನು ತನ್ನ ಧನ್ವಂತರಿ ಸಿದ್ಧಿಯಿಂದ ಉಪಶಮನಗೊಳಿಸಿದ ಘಟನೆ ಪರಂಪರೆಯಲ್ಲಿ ದಾಖಲಾಗಿದೆ. 19 ವರ್ಷಗಳ ಕಾಲ ಪೀಠದಲ್ಲಿದ್ದ ಇವರು 1472 ನೇ ಇಸವಿಯಲ್ಲಿ ನಂದನ ಸಂ!!ರದ ವೈಶಾಖ ಶುದ್ಧ ಎರಡರಂದು ಹರಿದ್ವಾರದಲ್ಲಿ ನಿರ್ಯಾಣ ಹೊಂದಿದರು.


10) ವಿಶ್ವೇಶತೀರ್ಥರು: ಮಹಾನ್ ಹಠಯೋಗಿ. ಪ್ರತಿ ನಿತ್ಯತಪ್ಪದೆ ಹತ್ತುಸಾವಿರ ತುಳಸೀದಳದಿಂದ ಭಗವಂತನನ್ನು ಪೂಜಿಸುತ್ತಿದ್ದರು. ತಮ್ಮ ಸನ್ಯಾಸ ಜೀವನದುದ್ದಕ್ಕೂ ಪ್ರತಿದಿನ ಒಂದೇಹೊತ್ತು ಕೇವಲ ಮೂವತ್ತೆರಡು ಕಾಳುಗಳನ್ನು ಮಾತ್ರ ಭಿಕ್ಷೆಯನ್ನಾಗಿ ಸ್ವೀಕರಿಸುತ್ತಿದ್ದರು. 16ವರ್ಷಪೀಠವನ್ನು ಅಲಂಕರಿಸಿದ್ದ ಯತಿಗಳು 1490 ನೇ ಇಸವಿ ಸಾಧಾರಣ ಸಂ!!ರದ ವೈಶಾಖ ಬಹುಳ ತೃತೀಯದಂದು ರಾಮೇಶ್ವರ ಸಮೀಪದ ರಾಮಸೇತುವಿನಲ್ಲಿ ವೃಂದಾವನಸ್ಥರಾದರು.


11) ಶ್ರೀವಿಶ್ವವಂದ್ಯತೀರ್ಥರು: ಹದಿನೈದು ವರ್ಷಗಳ ಕಾಲ ಪೀಠದಲ್ಲಿದ್ದ ಶ್ರೀಪಾದರು ಆರುಭಾರೀ ನ್ಯಾಯಸುಧಾಮಂಗಲೋತ್ಸವ ನಡೆಸಿದ್ದರು.1505 ನೇ ಇಸವಿ ಕ್ರೋಧನ ಸಂ!! ರದ ಮಾಘ ಬಹುಳ ದಶಮಿಯಂದು ನಿರ್ಯಾಣ ಹೊಂದಿದರು.


12) ಶ್ರೀವಿಶ್ವರಾಜತೀರ್ಥರು: ಕಲೆಯ ಮಹಾನ್ ಆರಾಧಕರಾಗಿದ್ದ ಇವರು ಚತುಃಷಷ್ಟಿಕಲಾ ಕೋವಿದರೆಂದು ಪ್ರಸಿದ್ದರಾಗಿದ್ದರು. ಒಮ್ಮೆ ಒಂದು ಸಮಾರಂಭದಲ್ಲಿ ದೇಶದ ಪ್ರಸಿದ್ದ ನರ್ತಕನೊಬ್ಬ ತಪ್ಪು ಹೆಜ್ಜೆ ಹಾಕಿದಾಗ ತಕ್ಷಣ ಅವನ ತಪ್ಪನ್ನು ತಿಳಿಸಿ ಭರತಮುನಿಯ ನಾಟ್ಯಶಾಸ್ತ್ರದ ಹೆಜ್ಜೆಯ ಶ್ಲೋಕವನ್ನು ಅಂದು ಹೇಳಿದ್ದರು. ಆ ಶ್ಲೋಕವು ಮಠದ ಪರಂಪರೆಯ ಪುಟಗಳಲ್ಲಿ ಇಂದಿಗೂ ಇದೆ. 1523 ನೇ ಇಸವಿ ಸ್ವಭಾನು ಸಂ!!ರದ ಪುಷ್ಯ ಶುದ್ಧ 15ರಂದು ದ್ವಾರಕೆಯಲ್ಲಿ ಪರಂಧಾಮಗೈದರು.


13) ಶ್ರೀಧರಣೀತೀರ್ಥರು: ನಿರಂತರ ದೇಶದ ಸಮಗ್ರ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ತುಂಗಭದ್ರಾ ತೀರದಲ್ಲಿ 1551ನೇ ಇಸವಿಯಲ್ಲಿ ಪ್ಲವ ಸಂ!!ರದ ಜ್ಯೇಷ್ಠ ಶುದ್ಧ ಸಪ್ತಮಿಯಂದು ಪರಂಧಾಮ ಸೇರಿದರು. 18 ವರ್ಷಗಳ ಕಾಲ ಪೀಠದಲ್ಲಿದ್ದರು.


14) ಶ್ರೀಧರಾಧರತೀರ್ಥರು: ತ್ರಿಕಾಲ ಜ್ಞಾನಿಗಳಾದ ಇವರು ಸಾಕ್ಷಾತ್ ಮುಖ್ಯ ಪ್ರಾಣದೇವರ ದರ್ಶನವನ್ನು ಪಡೆಯುತ್ತಿದ್ದ ಮಹಾನ್ ಸಿದ್ದಿಸಾಧಕರು 1558ನೇ ಇಸವಿ ಯುಕ್ತಾಕ್ಷಿ ಸಂ!!ರದ ವೈಶಾಖ ಶುದ್ಧ ಒಂಬತ್ತರಂದು ನಿರ್ಯಾಣ ಹೊಂದಿದರು.


15) ಶ್ರೀಪ್ರಜ್ಞಾನಮೂರ್ತಿ ತೀರ್ಥರು: ಇವರು ಪಾಜಕ ಕ್ಷೇತ್ರದಲ್ಲಿ ಶ್ರೀಮಧ್ವರ ಸೇವೆಯಲ್ಲಿ ನಿರತರಾಗಿ ಮುಂದೆ ಮಹಾನ್ ಪಂಡಿತರೂ ತಪಸ್ವಿಗಳೂ ಆದರು. ದ್ವಾರಕಾದಿ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಶಿಷ್ಯ ಸಮುದಾಯಕ್ಕೆ ಸರ್ವಮೂಲಾದಿ ಗ್ರಂಥಗಳ ಪಾಠ ಹೇಳುತ್ತಾ 1576 ನೇ ಇಸವಿ ಧಾತು ಸಂ!!ರದ ಕಾರ್ತಿಕ ಶುದ್ಧ ಏಕಾದಶಿಯಂದು ಕಾವೇರಿ ತಟದಲ್ಲಿ ನಿರ್ಯಾಣ ಹೊಂದಿದರು.


16೧೬) ಶ್ರೀತಪೋಮೂರ್ತಿ ತೀರ್ಥರು: ಇವರು ಭಾವಿಸಮೀರವಾದಿರಾಜ ಗುರುಸಾರ್ವಭೌಮರಲ್ಲಿ ಶಾಸ್ತ್ರಾಧ್ಯಯನ ನಡೆಸಿದವರು. ಶ್ರೀ ವಾದಿರಾಜರು ಇವರಿಗೆ ಶ್ರೀ ಹಯಗ್ರೀವ ದೇವರ ಪ್ರತಿಮೆಯನ್ನು ಅನುಗ್ರಹಿಸಿದರು. ಮಹಾ ತಪಸ್ವಿಗಳೂ ಯೋಗ ಪಟುವೂ ಆಗಿದ್ದ ಶ್ರೀಪಾದರು ಮಥುರಾ ಕ್ಷೇತ್ರದ ವೃಂದಾವನದಲ್ಲಿ ವಿಕೃತ ನಾಮ ಸಂ!!ರದ ಪುಷ್ಯ ಶುದ್ಧ ಏಕಾದಶಿಯಂದು ಪರಂದಾಮಗೈದರು.


17) ಶ್ರೀಸುರೇಶ್ವರತೀರ್ಥರು: ಇವರು ಮಹಾ ಯೋಗಿಗಳು, ತ್ರಿಕಾಲಜ್ಞಾನಿ ಎಂದು ಪ್ರಸಿದ್ದರಾಗಿದ್ದರು.

ಒಮ್ಮೆ ಕೃಷ್ಣಾಚಾರ್ಯ ಎಂಬ ಪಂಡಿತನೊಬ್ಬ ಯತಿಗಳ ತಪಃಶಕ್ತಿಯನ್ನು ಪರೀಕ್ಷಿಸುವ ಉದ್ದೇಶದಿಂದ ದೊಡ್ಡ ಕುಂಬಳಕಾಯಿಯೊಳಗೆ ತೊಂಡೆಕಾಯಿಗಳನ್ನು ಗುಟ್ಟಾಗಿ ತುಂಬಿಸಿ ಕಾಣಿಕೆ ರೂಪದಿಂದ ಆರ್ಪಿಸಿದನು.

ಆಗ ಯತಿಗಳು ತಕ್ಷಣ ಅದನ್ನು ಗುರುತು ಹಿಡಿದು ಈ ಕುರಿತು ಆಶುಶ್ಲೋಕ ರಚಿಸಿ ಆನೆಯ ಕಾಲಲ್ಲಿ ಕುಂಬಳಕಾಯಿಯನ್ನು ತುಳಿಸಿ ಆತನ ಬಣ್ಣ ಬಯಲು ಮಾಡಿದರು. ಆ ಸಂದರ್ಭದಲ್ಲಿ ಕುಂಬಳ ಕಾಯಿಯೊಳಗಿಂದ ಬಂದ ದುಂಬಿಯೊಂದು ಕೃಷ್ಣಾಚಾರ್ಯನ ಉದರಕ್ಕೆ ದಾಳಿ ಮಾಡಿ ಕೊರೆಯಲು ಆರಂಭಿಸಿತು. ನೋವಿನಿಂದ ಅತ್ತ ಬೊಬ್ಬಿಡಲು ಆರಂಭಿಸಿದಾಗ ಯತಿಗಳು ಆತನಿಗೆ ತೀರ್ಥಪ್ರೋಕ್ಷಿಸಿ ಆಪತ್ತಿನಿಂದ ಪಾರು ಮಾಡಿದರು. 17 ವರ್ಷ ಪೀಠದಲ್ಲಿದ್ದ ಶ್ರೀಪಾದರು 1608 ನೇ ಇಸವಿಯಲ್ಲಿ ಕೀಲಕ ಸಂ!!ರದ ಮಾಘ ಬಹುಳ 3ರಂದು ಕೃಷ್ಣಾತೀರದಲ್ಲಿ ವಿಷ್ಣುಲೋಕ ಸೇರಿದರು.


18) ಶ್ರೀಜಗನ್ನಾಥತೀರ್ಥರು: ಜಪಪೂಜಾ ಪರಾಯಣರೂ ಮಹಾ ತಪಸ್ವಿಗಳೂ ಆಗಿ 14 ವರ್ಷ ಪೀಠದಲ್ಲಿದ್ದ ಇವರು ತೀರ್ಥಯಾತ್ರೆ ಮಾಡುತ್ತಾ ಗಯಾಕ್ಷೇತ್ರದಲ್ಲಿ 1624ನೇ ಇಸವಿ ರಕ್ತಾಕ್ಷಿ ಸಂ!!ರದ ಆಷಾಢ ಶುದ್ಧ ಪಂಚಮಿ ಪರಂಧಾಮ ಸೇರಿದರು.


19) ಸುರೇಶತೀರ್ಥರು: ವೇದಾಂತ, ತರ್ಕಶಾಸ್ತ್ತಾಧಿಗಳಲ್ಲಿ ಅಪ್ರತಿಮರು ಎಂದೆನಿಸಿದ್ದ ಇವರು ದುರ್ವಾದಿಗಳ ಖಂಡನೆ ನಡೆಸುತ್ತಾ ಪ್ರಚಂಡ ದಿಗ್ವಿಜಯದೊಂದಿಗೆ ವಿವಿಧತೀರ್ಥಕ್ಷೇತ್ರಗಳ ಪರ್ಯಟನೆ ನಡೆಸುತ್ತಾ 1640 ನೇ ಇಸವಿ ವಿಕ್ರಮ ಸಂ!!ರದ ಜ್ಯೇಷ್ಠ ಬಹುಳ ದಶಮಿಯಂದು ನಿರ್ಯಾಣ ಹೊಂದಿದರು.


20) ವಿಶ್ವಪುಂಗವತೀರ್ಥರು: ಪ್ರಸಿದ್ದ ವಿದ್ವಾಂಸರಾದ ಇವರು ಉಡುಪಿಯಲ್ಲಿ ನೂರಾರು ಶಿಷ್ಯರಿಗೆ ನಿರಂತರವಾಗಿ ಸುಧಾದಿ ಗ್ರಂಥಗಳ ಪಾಠ,ಪ್ರವಚನ ನಡೆಸುತ್ತಿದ್ದರು.18 ವರ್ಷ ಪೀಠದಲ್ಲಿದ್ದ ಇವರು ವಿಳಂಬಿ ಸಂ!!ರದ ಕಾರ್ತಿಕ ಶುದ್ಧ 13ರಲ್ಲಿ ಪರಂಧಾಮ ಸೇರಿದರು.


21) ಶ್ರೀವಿಶ್ವವಲ್ಲಭತೀರ್ಥರು: ಬಾರ್ಕೂರು ಸಮೀಪದ ಕಾರ್ಕಡವೆಂಬಲ್ಲಿ ನೂತನ ಮಠ ನಿರ್ಮಿಸಿದ್ದ ಇವರು ಸದಾ ಕಾಷ್ಠಮೌನಾದಿ ಅನೇಕ ವ್ರತಗಳನ್ನು ನಡೆಸುತ್ತಾ ಕಾವೇರಿ ತೀರದಲ್ಲಿ ಪರಿಧಾವಿ ಸಂ!!ರದ ಮಾರ್ಗಶೀರ್ಷ ಬಹುಳ 9ರಂದು ದೇಹತ್ಯಾಗಮಾಡಿದರು. 14 ವರ್ಷ ಪೂಜಾ ನಿರತರಾಗಿ ಪೀಠದಲ್ಲಿದ್ದರು.


22) ವಿಶ್ವಭೂಷಣತೀರ್ಥರು:"ದಶಾವತಾರಚರಿತ" ಎಂಬ ಮಹಾಕಾವ್ಯವನ್ನು ರಚಿಸಿರುವರು ಎಂದು ಐತಿಹ್ಯವಿದೆ. 16ವರ್ಷ ಪೀಠದಲ್ಲಿದ್ದ ಇವರು1688 ನೇ ಇಸವಿ ವಿಭವ ಸಂ!!ರದ ವೈಶಾಖ ಶುದ್ಧ7ರಲ್ಲಿ ಪರಂಧಾಮಗೈದರು.


23) ಯಾದವೇಂದ್ರ ತೀರ್ಥರು: ತರ್ಕ, ವೇದ, ವೇದಾಂತ, ವ್ಯಾಕರಣ, ಸಾಹಿತ್ಯದಲ್ಲಿ ಶ್ರೇಷ್ಠ ಪಂಡಿತರಾಗಿದ್ದರು. ಒಮ್ಮೆ ಸಂಚಾರ ನಿಮಿತ್ತ ಕೃಷ್ಣಾಪುರ ಸಮೀಪದ ಬೈಲು ಪೇಜಾವರ ಎಂಬಲ್ಲಿ ತಂಗಿದ್ದಾಗ ಸ್ವಪ್ನದಲ್ಲಿ ವಿಪ್ರನೊಬ್ಬನು ಕಾಣಿಸಿ"ಇಲ್ಲಿ ಮಠ ನಿರ್ಮಿಸಿ ಬೆಣ್ಣೆಕೃಷ್ಣನ್ನನ್ನು ಪ್ರತಿಷ್ಟಾಪಿಸಿ ನಿತ್ಯ ಆರಾಧಿಸಿ"ಎಂದು ಸೂಚಿಸಿದನು. ತಕ್ಷಣ ಕಾರ್ಯ ಪ್ರವೃತ್ತರಾಗಿ ಅಲ್ಲೇ ಮಠ ನಿರ್ಮಿಸಿ ಬೆಣ್ಣೆಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದರು. ಮುಂದೆ ದಕ್ಷಿಣಭಾರತ ತೀರ್ಥಯಾತ್ರೆಯ ಸಂದರ್ಭ ರಾಮೇಶ್ವರ ಕ್ಷೇತ್ರಕ್ಕೆ ಬಂದಾಗ ಅದೇ ಕ್ಷೇತ್ರದಲ್ಲಿ 1698ನೇ ಇಸವಿ ಬಹುಧಾನ್ಯ ಸಂ!!ರದ ಮಾಘ ಶುದ್ಧ ಪಂಚಮಿಯಂದು ಪರಂದಾಮಗೈದರು. 10 ವರ್ಷಗಳ ಕಾಲ ಪೀಠಾಧಿಪತಿಯಾಗಿದ್ದರು.


24) ಶ್ರೀಪ್ರಜ್ಞಾನಮೂರ್ತಿತೀರ್ಥರು:ಪ್ರಸಿದ್ದ ವಿದ್ವಾಸರಾಗಿದ್ದ ಇವರಿಗೆ ಇಡೀ ಮಹಾಭಾರತತಾತ್ಪರ್ಯನಿರ್ಣಯ ಬಾಯಿಪಾಠವಾಗಿತ್ತು. ನಾಲಕ್ಕು ಭಾರೀ ತತ್ವಪ್ರಕಾಶಿಕಾ ಸುಧಾದಿ ಗ್ರಂಥಗಳ ಮಂಗಲೋತ್ಸವ ಮಾಡಿದ್ದರು. 8 ವರ್ಷಗಳ ಕಾಲ ಪೀಠದಲ್ಲಿದ್ದ ಇವರು ವ್ಯಯ ಸಂ!!ರದ ವೈಶಾಖ ಶುದ್ಧ12ರಂದು ತುಂಗಾ ತೀರದಲ್ಲಿ ಹರಿಪಾದ ಸೇರಿದರು.


25) ಶ್ರೀವಿದ್ಯಾಧಿರಾಜತೀರ್ಥರು:ಚತುಃಶಾಸ್ತ್ರ ಪಂಡಿತರಾಗಿದ್ದ ಇವರು ನಿರಂತವಾಗಿ ವಾದದಲ್ಲಿ ಗೆಲ್ಲುತ್ತಿದ್ದ ಕಾರಣ "ವಾದಿಮಲ್ಲ" ಎಂದು ಬಿರುದಾಂಕಿತರಾಗಿದ್ದರು. 7 ವರ್ಷಗಳ ಕಾಲ ಪೀಠದಲ್ಲಿದ್ದ ಇವರು 1713ನೇ ಇಸವಿ ವಿಜಯ ಸಂ!!ರದ ಕಾರ್ತಿಕ ಶುದ್ಧ 5ರಂದು ಗೋದಾವರಿ ತೀರದಲ್ಲಿ ವಿಷ್ಣುಲೋಕ ಸೇರಿದರು.


26) ಶ್ರೀವಿದ್ಯಾಮೂರ್ತಿತೀರ್ಥರು:ಇವರು ಬಾಲ್ಯದಲ್ಲಿ ಸೋದೆ ಶ್ರೀವಾದಿರಾಜರ ಸನ್ನಿದಾನದಲ್ಲಿ ಸೇವೆ ಸಲ್ಲಿಸಿ ಅವರಿಂದ ಅನುಗ್ರಹಿತರಾಗಿ ಶಾಪಾನುಗ್ರಹ ಸಾಮರ್ಥ್ಯವನ್ನೂ ಪಡೆದರು.ಇವರ ಸಿದ್ದಿ ಸಾಧನೆಗೆ ಮಾರುಹೋಗಿದ್ದ ಅಂದಿನ ರಾಜಮಹಾರಾಜರುಗಳು ಇವರನ್ನು ವಿಶೇಷವಾಗಿ ಸನ್ಮಾನಿಸಿದ್ದರು. ಒಮ್ಮೆ ಶ್ರೀಪಾದರು ಬೈಲು ಪೇಜಾವರದ ತಮ್ಮ ಮಠಕ್ಕೆ ಸಾಗುತ್ತಿದ್ದಾಗ ಹಳ್ಳದಲ್ಲಿ ಮುಖಕ್ಕೆ ನೀರು ಪ್ರೋಕ್ಷಣೆ ಮಾಡಿಕೊಳ್ಳಲು ಬಗ್ಗಿದಾಗ ಹಳ್ಳದಲ್ಲಿ ಸೀತಾ ಲಕ್ಷ್ಮಣ ಸಮೇತ ಶ್ರೀ ರಾಮದೇವರ ಪ್ರತಿಮೆ ಲಭಿಸಿತು. ತಕ್ಷಣ ಆ ಜಮೀನನ್ನು ಸ್ಥಳೀಯ ಜೈನ ಮಹಿಳೆಯಿಂದ ಪಡೆದುಕೊಂಡು ಅಲ್ಲೇ ಮಠ ನಿರ್ಮಿಸಿದರು.


ಸಮೀಪದಲ್ಲೇ ಜೈನ ಸ್ತ್ರೀಯ ಒಡೆತನಕ್ಕೆ ಸಂಬಂಧಿಸಿದ ಮುಖ್ಯಪ್ರಾಣದೇವರ ಗುಡಿಯೂ ಅಲ್ಲಿತ್ತು. ಮಠ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಮುಖ್ಯಪ್ರಾಣದೇವರು ಜೈನ ಮಹಿಳೆಗೆ ಕನಸಿನಲ್ಲಿ ದರ್ಶನ ನೀಡಿ ಪ್ರಾಣದೇವರ ಪ್ರತಿಮೆಯನ್ನು ತಕ್ಷಣವೇ ಶ್ರೀಪಾದರಿಗೆ ಒಪ್ಪಿಸುವಂತೆ ಸೂಚಿಸಿದರು .ಆಕೂಡಲೇ ಜೈನ ಸ್ತ್ರೀ ಮುಖ್ಯಪ್ರಾಣ ದೇವರ ಪ್ರತಿಮೆಯೊಂದಿಗೆ ತನ್ನ ಭೂಮಿಯನ್ನು ಕೂಡಾ ಶ್ರೀಪಾದರಿಗೆ ದಾನ ಮಾಡಿ ಅನುಗ್ರಹಹಿತಳಾದಳು.


15 ವರ್ಷ ಪೀಠದಲ್ಲಿದ್ದ ಶ್ರೀಪಾದರು ಬೈಲು ಪೇಜಾವರದ ತಮ್ಮ ಮಠದಲ್ಲಿ 1728 ನೇ ಇಸವಿ  ಕೀಲಕ ಸಂ!!ರದ ಭಾದ್ರಪದ ಶು8ರಂದು ವೈಕುಂಠವಾಸಿಗಳಾದರು.


27) ಶ್ರೀವಿದ್ಯಾವಲ್ಲಭ ತೀರ್ಥರು: ಕೃಷ್ಣಾಪುರ ಮಠವನ್ನುಜೀರ್ಣೋದ್ದಾರ ಮಾಡಿಸಿ ಮಠದ ಬೇಸಾಯ ಕೃಷಿಭೂಮಿಯನ್ನೆಲ್ಲ ಅಭಿವೃದ್ದಿ ಪಡಿಸಿದರು.21 ವರ್ಷಗಳ ಕಾಲ ಪೀಠವನ್ನು ಅಲಂಕರಿಸಿ1749 ನೇ ಇಸವಿ ಶುಕ್ಲ ಸಂ!!ರದ ಮಾರ್ಗಶಿರ ಶು9ರಂದು ಬೈಲು ಪೇಜಾವರದಲ್ಲಿ ವೃಂದಾವನಸ್ಥರಾದರು.


28) ಶ್ರೀವಿದ್ಯೆಂದ್ರತೀರ್ಥರು: ಅಪ್ರತಿಮ ವಾಗ್ಮಿಗಳು ಮಹಾನ್ ಉಪಾಸಕರೂ, ಶ್ರೇಷ್ಠಜ್ಞಾನಿಗಳೂ ಆಗಿದ್ದ ಶ್ರೀಪಾದರು ಕಾಶಿಯಲ್ಲಿ ನಡೆದ ಪ್ರಸಿದ್ದ ವಿದ್ವತ್ ಸಭೆಯಲ್ಲಿ ಎಲ್ಲರನ್ನೂ ಸೋಲಿಸಿ ಸನ್ಮಾನಿತರಾಗಿ ಜಯಪತ್ರಿಕೆ ಪಡೆದಿದ್ದರು. ಸನ್ಯಾಸ ಜೀವನದ ಕೊನೆಗಾಲದಲ್ಲಿ ಸರ್ವಸ್ವವನ್ನೂ ದಾನ ಮಾಡಿ ಪ್ರಯಾಗದಲ್ಲಿ ಗಂಗೆಯನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸಿದಾಗ ಅಕಾಲವಾಗಿದ್ದರೂ ಗಂಗೆಯು ಇವರ ಪ್ರಾರ್ಥನೆಗೆ ಉಕ್ಕಿ ಹರಿದುಬಂದು ಶ್ರೀಪಾದರನ್ನು ತನ್ನ ಗರ್ಭದಲ್ಲಿ ಸೇರಿಸಿಕೊಂಡಳು. ಆ ಸಂದರ್ಭದಲ್ಲಿ ಇವರು ರಚಿಸಿದ ಗಂಗಾಪಂಚಕಸ್ತುತಿ ಬಹು ಪ್ರಸಿದ್ದ. 1768ನೇ ಇಸವಿ ಸರ್ವಧಾರಿ ಸಂ!!ರದ ಭಾದ್ರಪದ ಶುದ್ಧಪಾಡ್ಯ ಗಂಗಾತೀರ್ಥ ಪ್ರವೇಶದಿನ.


29) ಶ್ರೀವಿದ್ಯಾನಿಧಿತೀರ್ಥರು:ಮೂರುಭಾರಿ ಸಮಗ್ರ ಭಾರತದ ತೀರ್ಥಕ್ಷೇತ್ರ ಸಂದರ್ಶಿಸಿದವರು. ತಮ್ಮ ನೂರಾರು ಶಿಷ್ಯರಿಗೆ ಅಮೂಲಾಗ್ರವಾಗಿ ಸಚ್ಚಾಸ್ತ್ರವನ್ನು ಉಪದೇಶ ಮಾಡಿ ಮೂರು ಪರ್ಯಾಯ ನಡೆಸಿದವರು. ರಾಜ ಮಹಾ ರಾಜರುಗಳಿಂದ ಸನ್ಮಾನಿತರಾಗಿದ್ದರು. ದ್ವಾರಕೆಯಲ್ಲಿ ಕಪಿಲಾಷಷ್ಠಿಯೋಗ ಸಂಭವಿಸಿದಾಗ ಸ್ವರ್ಣದ್ವಾರಕೆಯನ್ನು ಪ್ರತ್ಯಕ್ಷ ಕಂಡ ಪುಣ್ಯಾತ್ಮರು. 21 ವರ್ಷಗಳ ಕಾಲ ಪೀಠದಲ್ಲಿದ್ದ ಇವರು 1789ನೇ ಇಸವಿ ಸೌಮ್ಯ ಸಂವತ್ಸರದ ಭಾದ್ರಪದ ಶುದ್ಧ ನವಮಿಯಂದು ಕೃಷ್ಣಾಪುರದಲ್ಲಿ ವಿಷ್ಣುಲೋಕ ಸೇರಿದರು.


30) ಶ್ರೀವಿದ್ಯಾಸಮುದ್ರತೀರ್ಥರು:ಇವರು ಉಡುಪಿ ಕೃಷ್ಣದೇವರಿಗೆ ಬ್ರಹ್ಮ ರಥವನ್ನು ಅರ್ಪಿಸಿದವರು. 25 ವರ್ಷಗಳ ಕಾಲ ಪೀಠದಲ್ಲಿದ್ದು ಭಾವ ಸಂ!!ರದ ಮಾಘಶುದ್ಧ ಮಧ್ವ ನವಮಿಯಂದು ಕೃಷ್ಣಾಪುರದಲ್ಲಿ ಹರಿಪಾದ ಸೇರಿದರು.


31) ಶ್ರೀವಿದ್ಯಾಪತಿತೀರ್ಥರು: ಉಡುಪಿಯ ರಥಬೀದಿಯಿಂದ 2ಮೈಲುದೂರದ ಪಾಡಿಗಾರು ಎಂಬಲ್ಲಿ ಮಠ ನಿರ್ಮಿಸಿ ಗೋಪಾಲಕೃಷ್ಣ ದೇವರನ್ನು ಪ್ರತಿಷ್ಟಾಪಿಸಿದರು. ಕಾಶಿಯ ಪಂಡಿತರನ್ನು ವಾದದಲ್ಲಿ ಗೆದ್ದ ಹಿರಿಮೆ ಇವರದು. ಪ್ರಯಾಗದಲ್ಲಿ ಮಠವನ್ನು ನಿರ್ಮಿಸಿ ಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿಸಿದರು. 7 ವರ್ಷಗಳ ಕಾಲ ಪೀಠದಲ್ಲಿದ್ದ ಇವರು1813 ಉಡುಪಿಯಲ್ಲೇ ವೃಂದಾವನಸ್ಥರಾದರು.


32) ಶ್ರೀವಿದ್ಯಾಧೀಶತೀರ್ಥರು. ಶ್ರೀಪುತ್ತಿಗೆಮಠದ ಭುವನೇಂದ್ರ ತೀರ್ಥರಲ್ಲಿ ನ್ಯಾಯ ಸುಧಾದಿ ಗ್ರಂಥಗಳ ಅಧ್ಯಯನ ಮಾಡಿ,ಕಾಶಿಯಲ್ಲಿ 12 ವರ್ಷಗಳ ಕಾಲ ನ್ಯಾಯಶಾಸ್ತ್ರವನ್ನು ಅಧ್ಯಯನ ಮಾಡಿದರು.

ಕಾಶಿಯಿಂದ ಬಂದ ಬಳಿಕ 12 ಭಾರಿ ಸುಧಾಮಂಗಳ ಮಾಡಿದರು.ಇವರು ಪೇಜಾವರಮಠದ ಶ್ರೀವಿಶ್ವರಾಜತೀರ್ಥರು, ಸೋದೆಮಠದ ಶ್ರೀವಿಶ್ವಾಧೀಶತೀರ್ಥರು, ಶಿರೂರುಮಠದ ಶ್ರೀಲಕ್ಷ್ಮೀವಲ್ಲಭ ತೀರ್ಥರುಗಳಿಗೆ ಪಾಠ ಹೇಳಿದ್ದರು. ಜಂಬುಕಂಡಿ ವಾದಿರಾಜಆಚಾರ್ಯರು, ಬಾಳೆಕುದ್ರು ವೆಂಕಟಾಚಾರ್ಯರು, ವ್ಯಾಕರಣ ಸುಬ್ಬಾರಾಯಾಚಾರ್ಯರೂ ಕೂಡಾ ಇವರ ಶಿಷ್ಯರು. ಒಮ್ಮೆ ಇವರು ತಿರುಪತಿಗೆ ಹೋದಾಗ ಶ್ರೀನಿವಾಸದೇವರ ದರ್ಶನಕ್ಕೆ ಸಮಸ್ಯೆ ಎದುರಾಯಿತು. ತಕ್ಷಣ ಶ್ರೀಪಾದರು ದರ್ಶನ ಲಭಿಸದಿದ್ದರೆ ಭಿಕ್ಷೆಯನ್ನು ಸ್ವೀಕರಿಸುವುದಿಲ್ಲ ಎಂದು ನೋವಿನಿಂದ ಗೋಪುರದ ಮುಂಭಾಗದಲ್ಲಿ ನಿಂತಿರಲು ದೇವಾಲಯದ ಪರಿವಾರವು ಸಮಸ್ತ ಬಿರುದುಬಾವಲಿ ವಾದ್ಯಘೋಷಗಳೊಂದಿಗೆ ಆಗಮಿಸಿ ಗೌರವ ಪೂರ್ವಕವಾಗಿ ಶ್ರೀಪಾದರಿಗೆ ದೇವರದರ್ಶನ ಕಲ್ಪಿಸಿದರು. ಆಶ್ಚರ್ಯವೆಂದರೆ ಶ್ರೀಪಾದರು ದರ್ಶನ ಪಡೆದು ಸಂತಸದಿಂದ ದೇವಾಲಯದ ಹೊರ ಗೋಪುರಕ್ಕೆ ಬಂದು ಹಿಂತಿರುಗಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ.


ಸನ್ನಿವೇಶ ಮತ್ತೆ ಯಥಾಸ್ಥಿತಿಗೆ ಮರಳಿತ್ತು. ಶ್ರೀಪಾದರು ಮಂತ್ರಮುಗ್ದರಾಗಿದ್ದರು. ತಿರುಪತಿಯಿಂದ ಮರಳುವಾಗ ಬೆಂಗಳೂರಿನಲ್ಲಿ 1881ನೇ ಇಸವಿ ವಿಕ್ರಮ ಸಂ!!ರದ ಜ್ಯೇಷ್ಠ ಬಹುಳ ಏಕಾದಶಿಯಂದು ವಿಷ್ಣುಲೋಕ ಸೇರಿದರು. ಇವರ ಬೃಂದಾವನವು ಬೆಂಗಳೂರಿನ ಸಿಟಿ ಮಾರ್ಕೆಟ್ ಹಿಂಭಾಗದ ಗುಂಡೋಪಂತ್ ರಸ್ತೆಯಲ್ಲಿರುವ ಕೃಷ್ಣ ಮಠದಲ್ಲಿದೆ. 66 ವರ್ಷಗಳಕಾಲ ಪೀಠಾಧಿಪತಿಯಾಗಿದ್ದರು.


33) ಶ್ರೀವಿದ್ಯಾಪೂರ್ಣತೀರ್ಥರು:ಇವರು ಜನಿಸಿದ ವಾರ್ತೆ ಕೇಳಿ ಆಗಿನ ಕೃಷ್ಣಾಪುರ ಮಠಾಧೀಶರಾಗಿದ್ದ ಶ್ರೀ ವಿದ್ಯಾಧೀಶರು ಕಾಳೀಯ ಮರ್ದನ ದೇವರ ಪೂಜೆಗಾಗಿಯೇ ಹುಟ್ಟಿ ಬಂದವರು ಎಂದು ಸಂತೋಷಪಟ್ಟು ಪ್ರತೀದಿನ ಮಠದಿಂದ ತೀರ್ಥವನ್ನು ಕಳುಹಿಸುತ್ತಿದ್ದರಂತೆ. ಪ್ರಸಿದ್ದ ವಿದ್ವಾಂಸರಲ್ಲಿ ಪಾಠ ಪ್ರವಚನ ಅಧ್ಯಯನ ನಡೆಸಿ ವೇದ, ವೇದಾಂತ ಸಕಲ ವೈದಿಕಶಾಸ್ತ್ರಗಳಲ್ಲಿ ಪ್ರಸಿದ್ದಿ ಗಳಿಸಿದರು.


ಮೂರು ಭಾರಿ ಪರ್ಯಾಯ ಪೀಠ ಅಲಂಕರಿಸಿದ್ದ ಇವರು ಪ್ರಥಮ ಪರ್ಯಾಯದಲ್ಲಿ ಕೃಷ್ಣಮಠದಲ್ಲಿ ಮಧ್ವ ಪೀಠವಿರುವ ಕೊಠಡಿ, ಸೂರ್ಯಶಾಲೆ, ಚಂದ್ರಶಾಲೆ, ಕನಕನ ಕಿಂಡಿಯ ಹೊರಗೋಪುರ, ಕೃಷ್ಣಮಠದ ಮೇಲ್ಛಾವಣಿಯ ನವೀಕರಣ ದಶಾವತಾರ ಕುಸುರಿ ಕೆತ್ತನೆಯ ಶಿಲ್ಪಗಳ ನಿರ್ಮಾಣ, ಮೂರನೆ ಪರ್ಯಾಯದಲ್ಲಿ ಅದಮಾರು ಶ್ರೀವಿಭುದಪ್ರಿಯ ಶ್ರೀಪಾದರು ಕಟ್ಟಿಸಿದ್ದ ಚೌಕಿಯ ಕಾಮಗಾರಿ ಸಂಪೂರ್ಣಗೊಳಿಸಿ, ಮೇಲ್ಭಾಗದಲ್ಲಿ ಪಾಕಶಾಲೆ ನಿರ್ಮಿಸಿ ಪ್ರಾಣದೇವರ ಸೂಚನೆಯಂತೆ ದೇವರ ಗುಡಿಯ ಪಕ್ಕದಲ್ಲೇ ದೇವರನೈವೇದ್ಯಮತ್ತು ಚೌಕಿ ಅಡುಗೆಗಾಗಿ ಬಾವಿ ನಿರ್ಮಿಸಿದರು. ಕೃಷ್ಣದೇವರಿಗೆ ಚಿನ್ನದ ಪಾಲಕಿ, ಪಾಡಿಗಾರುಮಠ, ದಂಡತೀರ್ಥಮಠ ಹಾಗೂ ಬೈಲು ಪೇಜಾವರ ಮಠವನ್ನು ಜೀರ್ಣೋದ್ದಾರಗೊಳಿಸಿದರು. 1935ನೇ ಇಸವಿ ಪಾಲ್ಗುಣ ಮಾಸ, ಕೃಷ್ಣಪಾಡ್ಯ, ಗುರುವಾರದಂದು ಕೃಷ್ಣ ಪೂಜಾ ಕೈಂಕರ್ಯವನ್ನು ಪೂರೈಸಿ ಅನ್ನಸಂತರ್ಪಣೆ ನಡೆಸಿ ವಿಶೇಷ ದಾನಾದಿಗಳನ್ನು ನಡೆಸಿ ಮಧ್ಯಾಹ್ನ 1ಗಂಟೆಗೆ ಮಠದಲ್ಲಿ ಹರಿಪಾದ ಸೇರಿದರು.


34) ಶ್ರೀವಿದ್ಯಾರತ್ನತೀರ್ಥರು:ಆಶ್ರಮ ಪೂರ್ವದಲ್ಲೇ ಸಮಗ್ರಭಾರತದ ತೀರ್ಥಕ್ಷೇತ್ರಗಳ ಸಂದರ್ಶನ ಮೂಲಭೂತ ಪಾಠಗಳನ್ನೂ ನಡೆಸಿದ್ದರು.ಕಾಶಿಯಲ್ಲಿ ಹಲವಾರು ವರ್ಷಗಳಕಾಲ ಕಠಿಣವಿದ್ಯಾಭ್ಯಾಸ.


ಆನಂತರ ಬದರೀ ಯಾತ್ರೆಯನ್ನು ಪೂರೈಸಿ ಉಡುಪಿಗೆ ಆಗಮನ.ಮೊದಲನೇ ಪರ್ಯಾಯದ ಸಂದರ್ಭದಲ್ಲಿ 2ನೇ ಮಹಾಯುದ್ದ ನಡೆಯುತ್ತಿದ್ದರೂ ಕಿಂಚಿತ್ ಲೋಪವಾಗದೆ ಬಹುವೈಭವದಿಂದ ಪರ್ಯಾಯ ನಡೆಸಿದರು.

ತಮ್ಮ ಪ್ರಥಮ ಪರ್ಯಾಯ ಕಾಲದಲ್ಲಿ "ಶ್ರೀಕೃಷ್ಣ ಪರ್ಯಾಯಪ್ರಕಾಶಿನೀ" ಎಂಬ ಧಾರ್ಮಿಕ ಮಾಸಪತ್ರಿಕೆಯನ್ನು ಆರಂಭಿಸಿ ತಮ್ಮ ಕೊನೆಕಾಲದವರೆಗೂ ಮುಂದುವರಿಸಿಕೊಂಡುಹೋದರು.ಉಡುಪಿಯ ಮಠವನ್ನು ಜೀರ್ಣೋದ್ದಾರ ಗೊಳಿಸಿ ಮಠದ ಪಡುಬದಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮಗಳಿಗಾಗಿ ಸುಂದರವಾದ ರಂಗ ಮಂದಿರ ನಿರ್ಮಿಸಿದರು.


ಇವರ ಜೀವನಚರಿತ್ರೆಯ ಕುರಿತು ಕೊರಂಗ್ರಪಾಡಿ ನಾರಾಯಣ ತಂತ್ರೀಯವರು ತುಳು ಲಾವಣಿಯನ್ನು ಕೆ.ಎಸ್. ಪದ್ಮನಾಭ ಆಚಾರ್ಯರು ಕನ್ನಡ ಲಾವಣಿಯನ್ನೂ ರಚಿಸಿರುವರು. ಶ್ರೀ ಶಿರೂರು ಮಠದ 29ನೇ ಯತಿಗಳಾದ ಶ್ರೀಲಕ್ಷ್ಮೀಮನೋಜ್ಞ ತೀರ್ಥರಿಗೂ ಪಾಠ ಹೇಳಿದ್ದ ಶ್ರೀವಿದ್ಯಾರತ್ನತೀರ್ಥರಿಗೆ ಶ್ರೀಲಕ್ಷ್ಮೀಮನೋಜ್ಞ ತೀರ್ಥರ ಮೇಲೆ ಅಪಾರ ಪ್ರೀತಿ ಗೌರವ. ಪರಸ್ಪರ ಅತ್ಯಂತ ಆಪ್ತರಾಗಿದ್ದರು. ಶ್ರೀಲಕ್ಷ್ಮೀ ಮನೋಜ್ಞತೀರ್ಥರು ಉಡುಪಿಕ್ಷೇತ್ರದಲ್ಲಿ ನಿರ್ಮಿಸಿದ ಮೊತ್ತ ಮೊದಲ ಯಾತ್ರಿಕರ ವಸತಿಗೃಹ ಶ್ರೀಕೃಷ್ಣ ಛತ್ರ ಹಾಗೂ ಸೋದೆಯಲ್ಲಿ ನಿರ್ಮಿಸಿದ ವಸತಿಗೃಹ ಎರಡೂ ಯೋಜನೆಗಳಿಗೆ ಶ್ರೀವಿದ್ಯಾರತ್ನತೀರ್ಥರೂ ಕೂಡಾ ಕೊಡುಗೆಯನ್ನು ನೀಡಿದ್ದರು. ಶ್ರೀವಿದ್ಯಾರತ್ನ ಶ್ರೀಪಾದರು 1971 ವಿರೋಧಿಕೃತ್ ಸಂ!!ರದ ಚೈತ್ರ ಕೃಷ್ಣ ಪಂಚಮಿ ಯಂದು ಪರಂದಾಮ ಸೇರಿದರು. ಉಡುಪಿ ಸಮೀಪದಲ್ಲಿ ಇವರೇ ನಿರ್ಮಿಸಿದ್ದ ರಾಮನಕಟ್ಟೆ ಮಠದಲ್ಲಿ ವೃಂದಾವನ ನಡೆಸಲಾಯಿತು.


35) ಶ್ರೀವಿದ್ಯಾಸಾಗರತೀರ್ಥರು: (ಪ್ರಸ್ತುತ ಪೀಠಾಧಿಪತಿಗಳು)

ರಮಾಪತಿ ಇವರ ಪೂರ್ವಾಶ್ರಮದ ಹೆಸರು.ತಂದೆ ಶ್ರೀಪತಿ ತಂತ್ರಿ.ತಾಯಿ ಶ್ರೀಮತಿ ಜಾನಕಿ.

ಪುತ್ತಿಗೆ ಮಠದ ಶ್ರೀಸುಜ್ಞಾನೇಂದ್ರತೀರ್ಥ ಶ್ರೀಪಾದರಿಂದ 3.9.1971ರಂದು ಸನ್ಯಾಸಾಶ್ರಮ ದೀಕ್ಷೆ.

ಆಶ್ರಮ ನಂತರ ಶ್ರೀಸೋದೆವಾದಿರಾಜ ಮಠದ ಶ್ರೀವಿಶ್ವೋತ್ತಮ ತೀರ್ಥಶ್ರೀಪಾದರಿಂದ ಮಧ್ವಸಿದ್ದಾಂತ ವೇದ,

ವೇದಾಂತಗಳ ಪಾಠ. ಶ್ರೀ ವಿಶ್ವೋತ್ತಮ ತೀರ್ಥರ ತೃತೀಯ ಪರ್ಯಾಯ ಕಾಲದಲ್ಲಿ ಶ್ರೀವಾದಿರಾಜರ ಗುರ್ವರ್ತದೀಪಿಕಾ ಸಹಿತ ಶ್ರೀಮನ್ಯಾಯಸುಧಾ ಹಾಗೂ ಚತುರ್ಥ ಪರ್ಯಾಯ ಕಾಲದಲ್ಲಿ ಯುಕ್ತಿಮಲ್ಲಿಕಾ ಮಂಗಳ ಮಹೋತ್ಸವನ್ನು ನೆರವೇರಿಸಿದರು. ವ್ಯಾಕರಣ ಶಾಸ್ತ್ರದಲ್ಲಿ ನಿಷ್ಣಾತರು.


ವಾದಿರಾಜರ ಋಜುತ್ವದಲ್ಲಿ ಅಪಾರ ದೀಕ್ಷೆ, ಶಾಸ್ತ್ರ ಸಂಪ್ರದಾಯದಲ್ಲಿ ಪೂರ್ಣನಂಬಿಕೆ, ಮಿತಭಾಷಿಗಳು, ಏಕಾಂತ ಪ್ರಿಯರು. ವೃತಾನುಷ್ಟಾನ ಜಪಪೂಜೆಯಲ್ಲಿ ವಿಶೇಷ ಅನುಸಂಧಾನ.


1974-76, 1990-92, 2006-2008 ಅವಧಿಯ ಮೂರೂ ಪರ್ಯಾಯಗಳಲ್ಲಿ ಅನೇಕ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಶಿಥಿಲವಾಗಿದ್ದ ಕೃಷ್ಣಮಠದ ವಿವಿಧ ಕಟ್ಟಡಗಳ ಕಾಮಗಾರಿ ವೃಂದಾವನ,ಗೋಶಾಲೆ ಹಾಗೂ ಸುಬ್ರಮಣ್ಯ ಗುಡಿಯ ನವೀಕರಣ, ನಿರಂತರ ಅನ್ನದಾನ, ಜ್ಞಾನ ಸತ್ರ, ಸನಾತನ ಸಂಸ್ಕೃತಿಗೆ ಪೂರಕವಾದ ಅನೇಕ ವೈವಿಧ್ಯಮಯ ತರಗತಿಗಳು ತರಬೇತಿಗಳ ಮೂಲಕ ಧಾರ್ಮಿಕ ಜಾಗೃತಿ. ಉಡುಪಿಯ ಮುಖ್ಯಪ್ರಾಣ ದೇವರಿಗೆ ವಜ್ರಕವಚ ಸಮರ್ಪಣೆ.


ಉಡುಪಿಯ ಕಡಿಯಾಳಿಯಲ್ಲಿ ಶ್ರೀಕೃಷ್ಣ ಪ್ರತಿಷ್ಟಾನದ ಮುಖಾಂತರ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು ಹೀಗೆ ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಹಾಗೂ ಈ ಪರಂಪರೆಯಿಂದ ಅಸಂಖ್ಯ ಕೊಡುಗೆಗಳು ಸಂದಿವೆ. ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಅನೇಕ ವರ್ಷಗಳ ಕಾಲ ಪಾಠ ಹೇಳಿದವರು.


ಅಧ್ಯಾತ್ಮದ ದೀಪವನ್ನು ನಿರಂತರ ಬೆಳಗಿಸುತ್ತಿರುವ ಪೂಜ್ಯ ಯತಿ ಪರಂಪರೆಗೆ ಸಾಷ್ಟಾಂಗ ಪ್ರಣಾಮಗಳು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم