|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಂತನ-ಮಂಥನ: ಉದ್ಧರೇದಾತ್ಮನಾಽಽತ್ಮಾನಂ

ಚಿಂತನ-ಮಂಥನ: ಉದ್ಧರೇದಾತ್ಮನಾಽಽತ್ಮಾನಂತನ್ನನ್ನು ತಾನೆ ಉದ್ಧರಿಸಿಕೊಳ್ಳಬೇಕು. ನಮ್ಮ ನಮ್ಮ ಉನ್ನತಿಯೋ ಅವನತಿಯೋ ಅದಕ್ಕೆ ನಾವೇ ಕಾರಣರು... ಇದು ಕೃಷ್ಣನ ಮಾತು. ಇನ್ನೊಬ್ಬರಿಂದ ನಮ್ಮ ಸಾಧನೆಗಳಿಗೆ ಪೂರಕವಾದಂಥ ವಾತಾವರಣ ಸೃಷ್ಟಿಯಾದೀತು. ಆದರೆ ಪೂರ್ಣತ್ವದೆಡೆಗೆ ನಾವೇ ಹೋಗಬೇಕು. ಅವರವರ ಸಾಧನೆಯೇ ಅವರವರ ಮಾನದಂಡ. ಇದು ಶ್ರೀಕೃಷ್ಣನ ವಾಕ್ಯ. ಬಹುಷಃ ಶ್ರೀಕೃಷ್ಣ ಈ ಮಾತನ್ನು ಕಲಿಯುಗದಲ್ಲಿ ಬದುಕಬಹುದಾದ ಬ್ರಾಹ್ಮಣರಿಗೇ ಹೇಳಿದ್ದೆಂದು ಅನಿಸುವುದಿಲ್ಲವೇ? ಯಾಕೆಂದರೆ ಪ್ರಪಂಚದಲ್ಲಿಯೇ ಅಲ್ಪ ಸಂಖ್ಯಾತರ ವರ್ಗದಲ್ಲಿ ಬ್ರಾಹ್ಮಣರೇ ಮೊದಲನೆಯವರು. ಆದರೆ ರಾಜಕಾರಣಿಗಳ ಮತ್ತು ಬುದ್ಧಿಜೀವಿಗಳೆನಿಸಿದವರ ದೃಷ್ಟಿಯಲ್ಲಿ ಬ್ರಾಹ್ಮಣರು ಎಂದರೆ ಪ್ರಪಂಚದಲ್ಲಿಯೇ ಶ್ರೀಮಂತ ವರ್ಗ. ಆದರೆ ವಾಸ್ತವದಲ್ಲಿ ಇದು ಎಷ್ಟು ಸರಿ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇವತ್ತು ಬ್ರಾಹ್ಮಣರೇನಾದರು ಆತ್ಮಗೌರವದೊಂದಿಗೆ ಬದುಕಿಕೊಂಡಿದ್ದಾರೆ ಎಂದರೆ ಅದು ಶ್ರೀಕೃಷ್ಣನ 'ಉದ್ಧರೇದಾತ್ಮ.....' ಎಂಬ ನುಡಿಯನ್ನು ತಮಗೆ ತಾವು ಅಳವಡಿಸಿಕೊಂಡದ್ದರಿಂದ.  


ಪಂಚಾಯತಿನಿಂದ ತೊಡಗಿ ಪಾರ್ಲಿಮೆಂಟಿನವರೆಗೆ ಪ್ರತಿಯೊಂದು ಚುನಾವಣೆಗೂ ಅಭ್ಯರ್ಥಿಗಳು ಅವರವರ ಚೇಲಾಗಳೊಡನೆ ಪ್ರತಿಯೊಂದು ಬ್ರಾಹ್ಮಣರ ಮನೆಗೂ ಅತಿಯಾದ ಗೌರವದೊಂದಿಗೆ ಆಶ್ವಾಸನೆಗಳ ಮೂಟೆಗಳನ್ನೇ ಹೊತ್ತು ತರುತ್ತಾರೆ. ( ಇವರ ಆಶ್ವಾಸನೆಗಳನ್ನು ನೋಡುವಾಗ ನನಗನಿಸುವುದು ನಮ್ಮೂರಲ್ಲಿ ಬೈಹುಲ್ಲಿನ ಅಥವಾ ಬೀಡಿ ಎಲೆಯ ಟ್ರಕ್ ಗಳು ರಸ್ತೆಯಲ್ಲಿ ಓಡಾಡಿದಂತೆ....  ಗಾತ್ರಕ್ಕೆ ತಕ್ಕ ಸಾಂದ್ರತೆಯೇ ಇಲ್ಲದಂತೆ) ಬ್ರಾಹ್ಮಣರ ಕಾಲಿಗೂ ಬೀಳುತ್ತಾರೆ. ಆಶೀರ್ವದಿಸಿ ಎಂದು ಬೇಡಿಕೊಳ್ಳುತ್ತಾರೆ. ಅಲ್ಲಿಗೆ ಆ ಬ್ರಾಹ್ಮಣ ಆ ರಾಜಕಾರಣಿಯ ಬುಟ್ಟಿಗೆ ಬಿದ್ದಂತೆಯೇ. (ಬ್ರಾಹ್ಮಣರಲ್ಲಿ ಒಂದು ದೌರ್ಬಲ್ಯವೆಂದರೆ ಯಾರು ಕಾಲಿಗೆ ಬಿದ್ದು ನಮಸ್ಕರಿಸುತ್ತಾನೋ ಆತನ ಸರ್ವ ದುರ್ಗುಣಗಳನ್ನೂ ಮನ್ನಿಸುವುದು.) ಹಾಗೆ ಹೋದಂಥ ಆ ಮಹಾನುಭಾವರು ಮತ್ತೆ ಎಂದೂ ಬ್ರಾಹ್ಮಣರ ಮನೆಗಿರಲಿ ಕೇರಿಗೇ ಹೋಗುವುದಿಲ್ಲ. ಶಂಕು ಸ್ಥಾಪನೆಗಳು ಅಲ್ಲಲ್ಲಿ ನೆರವೇರುತ್ತವೆಯಾದರೂ ರಸ್ತೆಗಳು ಹಿಂದಿನಂತೆಯೇ ಇರುತ್ತವೆ. ಸರಕಾರಿ ಸವಲತ್ತುಗಳು ಸಿಗುವುದಾದರೂ ಎಲ್ಲರ ಸರದಿ ಮುಗಿದ ಮೇಲೆ ಮಿಕ್ಕಿ ಉಳಿದರೆ ಮಾತ್ರ. ಅದಕ್ಕೂ ಹೋರಾಟ, ಮನವಿ... ಇತ್ಯಾದಿ. ಬಡವ ನೀ ಮಡಗಿದಾಂಗೆ ಇರು ಎನ್ನುವಂತೆ ಬ್ರಾಹ್ಮಣ ನೀನು ಯಥಾಸ್ಥಿತಿಯಲ್ಲಿಯೇ ಇರು ಎಂಬುದೇ ಸತ್ಯ ತಾನೆ.  


ನನ್ನ ಸ್ವಂತ ಅನುಭವ ಹೇಳುವುದಾದರೆ, ನನ್ನ ಪತ್ನಿಯ ಅಸೌಖ್ಯದ ಕಾಲದಲ್ಲಿ ನನಗೆ ಹಣದ ಅಡಚಣೆ ಬಹಳವೇ ಇತ್ತು. ಆವಾಗ ನನ್ನ ಹಿತೈಷಿಗಳಾದ ಕೆಲವರು ಶಾಸಕರಲ್ಲಿ ಪ್ರಸ್ತಾವಿಸಿದರೆ ಏನಾದರೊಂದು ಪರಿಹಾರ ಸಿಗಬಹುದು. ಶಾಸಕರೂ ನಮ್ಮವರೇ ಖಂಡಿತ ಸ್ಪಂದಿಸದೆ ಇರಲಾರರು ಎಂದಾಗ, ನನಗ್ಯಾಕೊ ಅನುಮಾನವೇ ಬಂತು. ಯಾಕೆಂದರೆ ನಾವು ಬ್ರಾಹ್ಮಣರು ಬಿ.ಪಿ.ಎಲ್. ಕಾರ್ಡ್ ಇದ್ದರೂ ರಾಜಕಾರಣಿಗಳ ದೃಷ್ಟಿಯಲ್ಲಿ ಅತ್ಯಂತ ಶ್ರೀಮಂತರು. ನಾನು ಅವರಿಗೆ ಹೇಳಿದೆ 'ಬೇಡ ಅದು ಕಷ್ಟ ಸಾಧ್ಯ. ಒಂದು ವೇಳೆ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ನಿಮಗೆ ಅವಮಾನ ಮಾಡಿದಂತೆ ಆಗುತ್ತದೆ. ದೇವರ ಲೆಕ್ಕಾಚಾರ ಏನಿದೆಯೊ ಹಾಗೆಯೇ ಆಗುತ್ತದೆ ' ಎಂದು. ಆದರೂ ಎಲ್ಲರ ಒತ್ತಾಯದ ಮೇರೆಗೆ ಸಂಬಂಧ ಪಟ್ಟಂಥ ಎಲ್ಲ ದಾಖಲೆಗಳನ್ನು ಒದಗಿಸಿದರೂ ಒಂದು ಚಿಕ್ಕಾಸು ಕೂಡ ಹುಟ್ಟಲಿಲ್ಲ. ಹಾಗಾದರೆ ರಾಜಕಾರಣಿಗಳ ದೃಷ್ಟಿಯಲ್ಲಿ  ನಾವು ಬ್ರಾಹ್ಮಣರು ನಾಗರಿಕ ಪ್ರಪಂಚದಲ್ಲಿರಲು ಅಥವಾ ನಾಗರಿಕರೆನಿಸಿಕೊಳ್ಳಲು ಯೋಗ್ಯರಲ್ಲದಿರಬಹುದೆಂದೆನಿಸದೆ? ಸರಕಾರವನ್ನೇ ನಂಬಿದ್ದರೆ ಗತಿ ದುರ್ಗತಿಯೇ. ಶಾಸಕರ ನಿಧಿ, ಮುಖ್ಯಮಂತ್ರಿಗಳ ನಿಧಿ ಏನಿದ್ದರೂ ಪಡಕೊಳ್ಳುವ ವಿಧಿ ನಮಗೆ ಬೇಕಲ್ಲ? ನನ್ನ ಹಿತೈಷಿಗಳು, ಬಂಧುಗಳು, ಜಾತಿ ಮತವನ್ನು ಮರೆತು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚಾಗಿ ಮಾನವೀಯತೆಗೇ ಭಾಷ್ಯ ಬರೆದಂತೆ ವರ್ತಿಸಿದ್ದಾರೆಂದರೆ... ಉದ್ಧರೇದಾತ್ಮನಾಽಽತ್ಮಾನಂ.... ಎಂಬ ವಾಕ್ಯ ನೆನಪಿಗೆ ಬರುತ್ತದೆ. ಯಾವ ಕಾಲದಲ್ಲಿ ಕೂಡ ಬ್ರಾಹ್ಮಣರನ್ನು ಯಾವ ರಾಜಕಾರಣಿಗಳು ಕೂಡ ಒಂದು ಅಂತರವಿಟ್ಟುಕೊಂಡೇ ವ್ಯವಹರಿಸುತ್ತಾರೆ. ಯಾವುದೇ ಸೂಕ್ತ ಸಲಹೆ ಸೂಚನೆಗಳಿಗೆ ಬ್ರಾಹ್ಮಣರನ್ನೇ ಬಳಸಿಕೊಂಡರೂ ಬ್ರಾಹ್ಮಣ ಬಡ ಬ್ರಾಹ್ಮಣನಾಗಿಯೇ ಇರಬೇಕೆಂಬ ಸಂಕಲ್ಪ ಮಾಡಿಕೊಂಡವರಂತೇ ಇರುತ್ತಾರೆ. ಆದರೂ ಹಲವಾರು ಬ್ರಾಹ್ಮಣ ಕುಟುಂಬಗಳು ಇಂದು ಆತ್ಮಗೌರವದೊಂದಿಗೆ ಬದಕುತ್ತಾರೆಂದರೆ ಉದ್ಧರೇದಾತ್ಮನಾಽಽತ್ಮಾನಂ... ಎಂಬ ಧ್ಯೇಯ ವಾಕ್ಯದಡಿಯಲ್ಲಿ.  


ಇದು ಸತ್ಯ ಕೂಡ. ಯಾಕೆಂದರೆ ಯಾವುದೇ ಕಷ್ಟವಿರಲಿ ಸುಖವಿರಲಿ ಅದು ಅನುಭವಿಸಿ ಮುಂದೆ ಸಾಗಬೇಕಾದರೆ ಅದು ತನಗೆ ತಾನೇ ಅಳವಡಿಸಿಕೊಳ್ಳಬೇಕಾದಂಥ ವಿಧಿ. ನೋವಾದಾಗ ಸಾಂತ್ವನ ಹೇಳುವವರು ಒಂದಷ್ಟು ದಿನ ನಮ್ಮೊಡನೆ ಇರಬಹುದು. ಆದರೆ ಶಾಶ್ವತ ತಾನೊಬ್ಬನೇ ತನ್ನೊಡನೆ ಇರುವವನು. ಹಸಿವಾದಾಗ ತಾನೇ ಉಣ್ಣ ಬೇಕು, ತಾನೇ ಜೀರ್ಣಿಸಿಕೊಳ್ಳಬೇಕು.  ತಾನೇ ಅಭ್ಯಾಸ ಮಾಡಬೇಕು, ತಾನೇ ಜ್ಞಾನ ಗಳಿಸಬೇಕು. ತಾನೇ ನಡೆಯಬೇಕು, ತಾನೇ ಗುರಿ ಸೇರಬೇಕು. ತಾನೇ ಹುಟ್ಟಬೇಕು, ತಾನೇ ಮರಣಿಸಬೇಕು. ಇಲ್ಲಿ ಯಾವುದೂ ಜತೆಯಲ್ಲಿ ಬಾರದು. ಬಂದರೂ ಒಂದು ಹಂತ ದಾಟಿದ ಮೇಲೆ ಉಪಯೋಗಕ್ಕೆ ಬಾರದು.  


ಉದ್ಧರೇದಾತ್ಮನಾಽಽತ್ಮಾನಂ ನಾಽತ್ಮಾನಮವಸಾದಯೇತ್।

ಆತ್ಮೈವಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಾ ॥


ತನ್ನಾತ್ಮ ಬಲದಿಂದ

ಭವಬಂಧದೊಳಗಿಂದ 

ತನ್ನತಾನುದ್ಧರಿಸಿ 

ಕೊಳ್ಳುತಲಿ ಇರಬೇಕು. 

ಜೀವಾತ್ಮನಿಗೆ ಎಂದು 

ಭಗವಂತನೇ ಗೆಳೆಯ 

ತನ್ನ ತಾನರಿಯದಿರೆ 

ಭಗವಂತನೇ ಹಗೆಯ..


ಎಲ್ಲಿವರೆಗೆ ಈ ದಾರಿಯಲ್ಲಿ ಬ್ರಾಹ್ಮಣರು ಸಾಗುತ್ತಾರೋ ಅಲ್ಲಿವರೆಗೆ ಬ್ರಾಹ್ಮಣ್ಯಕ್ಕೆ ಚ್ಯುತಿಬಾರದು ಅಂತೆಯೇ ಆತ್ಮಾಭಿಮಾನಕ್ಕೂ. 

***********

- ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post